ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಸಂಪಾದಕೀಯ

ಮೂರನೇ ಹೆಜ್ಜೆಗೆ ಮುನ್ನುಡಿ

image_
ಕೆ.ಸಿ,ಶಶಿಧರ

ಪ್ರಿಯ ಓದುಗರೇ,

ನೇಗಿಲ ಮಿಡಿತದ ಎರಡನೇ ಸಂಪುಟದ ಕೊನೆ ಸಂಚಿಕೆ ನಿಮ್ಮ ಕೈಗಿಡುವ ಮೂಲಕ ಮೂರನೇ ಸಂಪುಟಕ್ಕೆ ಮುನ್ನುಡಿ ಬರೆಯುತ್ತಿದ್ದೇನೆ. ಇನ್ನೂ ಹೆಚ್ಚಿನ ಹೊಸತನವನ್ನು ಮೂರನೇ ಸಂಪುಟದಲ್ಲಿ ಅಳವಡಿಸುವ ಕುರಿತು ಚಿಂತಿಸುತ್ತಿದ್ದೇವೆ. ಆದ್ದರಿಂದ ನಿಮ್ಮ ನೇಗಿಲ ಮಿಡಿತ ಹೇಗಿರಬೇಕು? ಏನಾದರೂ ಬದಲಾವಣೆ ಬೇಕೆ? ಇತ್ಯಾದಿ ಕುರಿತ ನಿಮ್ಮ ಅನಿಸಿಕೆಗಳು ನಮಗೆ ಬೇಕು. ಆದ್ದರಿಂದ ಈ ಸಂಚಿಕೆ ತಲುಪಿದ ತಕ್ಷಣ ನಿಮ್ಮ ಅನಿಸಿಕೆ ಬರೆದು ನಿಮ್ಮ ಭಾವಚಿತ್ರದೊಂದಿಗೆ ಕಳಿಸಿಕೊಡಿ ಎಂದು ತಮ್ಮಲ್ಲಿ ವಿನಂತಿಸುವೆ.

ಮೂರನೇ ಸಂಪುಟದಿಂದ ಅಂತರ್ಜಾಲ ಆವೃತ್ತಿ ಪ್ರಕಟವಾಗಲಿದೆ. ಇದುವರೆಗೆ ಪಿಡಿಎಫ್ ಪುಸ್ತಕ ರೂಪದಲ್ಲಿ ಪತ್ರಿಕೆ ಅಂತರ್ಜಾಲದಲ್ಲಿ ಲಭ್ಯವಿತ್ತು. ಆದರೆ ಇದನ್ನು ಅಂತರ್ಜಾಲ ಆವೃತ್ತಿಯಾಗಿ ಪ್ರಕಟಿಸಲು ಇಚ್ಛಿಸಿದ್ದೇವೆ.ನಿಮ್ಮ ಮೊಬೈಲ್ನಲ್ಲಿ ಕಿರು ತಂತ್ರಾಂಶ ಸಹಾಯದಿಂದ ಓದುವಂತೆ ನೇಗಿಲ ಮಿಡಿತ ಸಿದ್ಧಪಡಿಸುವ ಕಾರ್ಯಕ್ಕೆ ಸಹ ಚಾಲನೆ ನೀಡಲಾಗಿದ್ದು ಮೂರನೇ ಸಂಪುಟದ ಅವಧಿಯಲ್ಲಿ ಇದನ್ನು ಕಾರ್ಯರೂಪ ಗೊಳಿಸಲಾಗುವುದು.

ಡಿಸೆಂಬರ್, ರೈತ ಮಹಿಳೆ ಮತ್ತು ರೈತ ದಿನಗಳನ್ನು ಆಚರಿಸುವ ತಿಂಗಳು, ಅಂದ್ರೆ ರೈತರಿಗೆ ಧನ್ಯವಾದ/ಥ್ಯಾಂಕ್ಸ್ ಹೇಳುವ ತಿಂಗಳು. ರೈತರಿಗೆ ಥ್ಯಾಂಕ್ಸ್ ಹೇಳಲು ಒಂದು ಉತ್ತಮ ವಿಧಾನ ಎಂದರೆ ರೈತರ ಹೆಸರಲ್ಲಿ ನೇಗಿಲ ಮಿಡಿತ ಚಂದಾ ಮಾಡಿಸಿ. ನಿಮ್ಮ ಹೆಸರಲ್ಲಿ ಥ್ಯಾಂಕ್ಸ್ ಸಂದೇಶದೊಂದಿಗೆ ನೀವು ನೋಂದಾಯಿಸಿದ ರೈತರಿಗೆ ಪತ್ರಿಕೆ ತಲುಪಿಸಲಾಗುವುದು. ಈ ವಿಶೇಷ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ವಿನಂತಿಸಲಾಗಿದೆ.

ಹೊಸ ವಿನ್ಯಾಸ, ಹೊಸತನ, ಹೊಸ ಅಂಕಣಗಳೊಂದಿಗೆ ಮೂರನೇ ಸಂಪುಟ ಪ್ರಾರಂಭವಾಗಲಿದೆ. ನಿಮ್ಮ ಸಲಹೆಗಳನ್ನು ಸ್ವಾಗತಿಸುತ್ತೇನೆ.