ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ದಾರಿದೀಪ

ನಿವೃತ್ತ ಶಿಕ್ಷಕನ ಕೃಷಿ ಕಾಯಕ

ಶ್ರೀಮತಿ ಗೀತಾ ಎಸ್. ತಾಮಗಾಳೆ,
9448552745
1

ಕೃಷಿಯಲ್ಲಿನ ಹಲವು ಸಮಸ್ಯೆಗಳಿಂದಾಗಿ ಬೇಸತ್ತು ಬೇರೆ ಕ್ಷೇತ್ರಗಳಲ್ಲಿ ಬದುಕು ಕಟ್ಟಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿರುವವರ ಮಧ್ಯ ಸರ್ಕಾರಿ ನೌಕರಿಯ ನಿವೃತ್ತಿಯ ನಂತರ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ೭೦ರ ಇಳಿ ವಯಸ್ಸಿನ ಶಿಕ್ಷಕ ಗೋಪಾಲಾಚಾರ್ ಬಡಿಗೇರ ತುಸು ಭಿನ್ನವಾಗಿದ್ದಾರೆ. ಮಿಶ್ರ ಬೆಳೆ ಪದ್ಧತಿ ಅನುಸರಿಸಿದರೆ ಉತ್ತಮ ಆದಾಯ ಪಡೆಯಬಹುದು ಎಂಬುದಕ್ಕೆ ಒಂದು ಉತ್ತಮ ನಿದರ್ಶನವಾಗಿದ್ದಾರೆ.ಗೋಪಾಲಾಚಾರ್ ಬಡಿಗೇರ ಶಿಕ್ಷಣ ಇಲಾಖೆಯಲ್ಲಿದ್ದವರಾದರೂ ಕೃಷಿಯತ್ತ ಆಸಕ್ತಿಯನ್ನು ಹೊಂದಿದ್ದರು. ನಿವೃತ್ತಿಯ ನಂತರ ಈಗ ಪೂರ್ಣಪ್ರಮಾಣದ ಕೃಷಿಕರಾಗಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಗೆಜ್ಜೆಹಳ್ಳಿ ಗ್ರಾಮ ಗೋಪಾಲಾಚಾರ್ ಬಡಿಗೇರರವರ ಕಾರ್ಯಕ್ಷೇತ್ರ. ಸರ್ಕಾರಿ ನೌಕರಿ ಇದ್ದುದರಿಂದ ವರ್ಗವಾಗಿ ಹೋದೆಡೆಯಲ್ಲೆಲ್ಲ ಕೃಷಿ ಬದಲಾವಣೆಯನ್ನು ಗಮನಿಸುತ್ತಿದ್ದರು. ನಿವೃತ್ತಿಯ ನಂತರ ಗೆಜ್ಜೆಹಳ್ಳಿಯಲ್ಲಿ ಮೂರು ಎಕರೆ ಜಮೀನು ಖರೀದಿಸಿ ಅಡಿಕೆ, ಮಾವು, ಹಲಸು, ರಕ್ತಚಂದನ, ತೇಗ (ಸಾಗುವಾನಿ), ಗಾಳಿಗಿಡ, ಅಕೇಶಿಯಾ, ತೆಂಗಿನ ಜೊತೆಗೆ ಉಪಯುಕ್ತ ಔಷಧಿ ಸಸ್ಯಗಳನ್ನು ಬೆಳೆಸಿದ್ದಾರೆ. ದಾಲ್ಚಿನ್ನಿ ಗಿಡಗಳಿಂದ ಚಕ್ಕಿ, ಮೊಗ್ಗು, ಪಲಾವ್ ಎಲೆಗಳನ್ನು ಸಾಂಬಾರ್ ಪದಾರ್ಥಗಳಾಗಿ ಬೆಳೆಯುತ್ತಿದ್ದು, ಅಪಾರ ಆದಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೂಲತಃ ಇದೇ ತಾಲೂಕಿನ ಹಿರೇಬಾಸೂರಿನವರಾಗಿದ್ದರೂ, ೨೦೦೫ ರಲ್ಲಿ ಗೆಜ್ಜೆಹಳ್ಳಿಯಲ್ಲಿ ಜಮೀನು ಖರೀದಿಸಿದ್ದರಿಂದ ಇಲ್ಲಿಯೇ ನೆಲೆಸಿದ್ದಾರೆ. ಜಮೀನು ಖರೀದಿಸಿದಾಗ ಖರೀದಿಸಿದ ಬಂಜರು ಭೂಮಿ ನೋಡಿ ಕೆಲವರು ಆಶ್ಚರ್ಯಪಟ್ಟಿದ್ದುಂಟು. ಆದರೆ ಸತತ ೨ ೩ ವರ್ಷಗಳ ಕಾಲ ಶ್ರಮವಹಿಸಿ ಬಂಜರು ಭೂಮಿಯಂತಿದ್ದ ಜಮೀನಿನಲ್ಲಿ ಅರಿಶಿಣ, ಕಾಳುಮೆಣಸು, ಏಲಕ್ಕಿ, ಲವಂಗ, ದಾಲ್ಚಿನ್ನಿ, ಜಾಯಿಕಾಯಿ, ಹಲಸು, ಪೇರಲದ ಜೊತೆಗೆ ನಶಿಸುತ್ತಿರುವ ಔಷಧಿ ಸಸ್ಯಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಲಾವಂಚ, ಮಸ್ಕತ್, ಸುರಗಿ, ರಾಮಪತ್ರಿ, ಕೆಂಪು ದೇವದಾರಿ, ಸರ್ಪಗಂಧಿ, ಅಗ್ನಿಮಂತಿ, ಶಿಲೇಶಿಯಾ, ಏಕನಾಯಕ, ನಾಗಸಂಪಿಗೆ, ಆಪೋಡೋಟೀಸ, ಕೆಂಪು ನೇರಳೆ, ಅಬುಲಾಂಗ, ನವಣೆ, ವಾಟೆಹುಳಿ, ಜಾವುಣಿಗ, ಸಾಲುದೂಪ, ಮಾಳಂಜಿ ಮಾವು, ಕರಿದೂಪ, ಗೊರೆಗದ್ದೆ ಬಕ್ಕೇಹಲಸು, ಮುರುಗಲ, ಜೊತೆಗೆ ವಾಣಿಜ್ಯ ಬೆಳೆಗಳಾದ ರಕ್ತ ಚಂದನ, ಏಲಕ್ಕಿ, ಗೋಡಂಬಿ, ಹಿಪ್ಪಲಿ ಮೆಣಸು, ಜಾಯಿಕಾಯಿ ಹಾಗೂ ಹೂವಿನ ಗಿಡಗಳಾದ ಪಾರಿಜಾತ, ಸಂಪಿಗೆ, ನಾಗ ಸಂಪಿಗೆ, ಬಣ್ಣ - ಬಣ್ಣದ ದಾಸವಾಳಗಳು, ಮಲ್ಲಿಗೆ, ಮಂದಾರ ಪುಷ್ಪ ಹೀಗೆ ಅನೇಕ ಸಸಿಗಳನ್ನು ಬೆಳೆಸಿದ್ದಾರೆ.

ಜಮೀನಿನ ಸುತ್ತ ೫೦೦ ಸಾಗುವಾನಿ, ೧೦೦ ಗಾಳಿ, ೧೫೦ ತೆಂಗಿನ ಗಿಡ, ೧೨೬ ದಾಲ್ಚಿನ್ನಿಗಿಡ, ೧೨೦ ಮಾವಿನ ಗಿಡ, ೬೪ ಕರಿಬೇವಿನ ಗಿಡಗಳನ್ನು ಬೆಳೆದಿದ್ದಾರೆ. ಆರು ವರ್ಷಗಳ ಹಿಂದೆ ನಾಟಿ ಮಾಡಿದ ದಾಲ್ಚಿನ್ನಿ ಗಿಡಗಳು ಉತ್ತಮ ಆದಾಯ ನೀಡುತ್ತಿವೆ. ನಾಟಿ ಮಾಡಿದ ೪ನೇ ವರ್ಷದಿಂದ ದಾಲ್ಚಿನ್ನಿ ಮೊಗ್ಗು, ಬಲಿತ ಎಲೆ, ಚಕ್ಕೆ ಮಾರಾಟ ಮಾಡುತ್ತಿದ್ದು ಇವರ ಪ್ರಕಾರ ದಾಲ್ಚಿನ್ನಿ ಕೃಷಿ ಒಂದು ಲಾಭದಾಯಕ ಕೃಷಿಯಾಗಿದೆ. ಪ್ರಾರಂಭಿಕ ಹಂತದಲ್ಲಿ ಒಂದು ಗಿಡದಿಂದ ಪಡೆಯಲಾಗುತ್ತಿದ್ದ ೨ ರಿಂದ ೩ ಕೆ ಜಿ ದಾಲ್ಚಿನ್ನಿಯ ಮಾರಾಟದಿಂದಲೂ ಇಂದಿನವರೆಗೂ ಶಿರಸಿಯ ಕದಂಬ ಸಂಸ್ಥೆ ಹಾಗೂ ಸ್ಥಳೀಯ ವ್ಯಾಪಾರಸ್ಥರೊಂದಿಗೆ ಒಪ್ಪಂದ. ಕಳೆದ ವರ್ಷ ಸುಮಾರು ೪೦ ಸಾವಿರ ರೂಪಾಯಿಗಳ ಆದಾಯ ಪಡೆದಿದ್ದು ಈ ಸಾರಿ ೮೦ ಸಾವಿರ ಆದಾಯದ ಆಶಯವಿದೆ. ರೈತರು ದಾಲ್ಚಿನ್ನಿ ಕೃಷಿ ಮಾಡಿದರೆ ಉತ್ತಮ ಲಾಭ ಪಡೆಯಬಹುದು ಎನ್ನುವ ಇವರು ಈ ಬಗ್ಗೆ ರೈತರಿಗೆ ಮಾಹಿತಿ ನೀಡಲು ತಾವು ಸಿದ್ದ ಎನ್ನುತಾರೆ. ಇವರು ಒಂದು ಕೆಜಿ ದಾಲ್ಚಿನ್ನಿ ಮೊಗ್ಗಿಗೆ ೮೦೦ ರೂ. ಎಲೆಗೆ ೬೦ ರೂ. ಚಕ್ಕೆಗೆ ೬೦೦ ರೂ. ಬೆಲೆಯಿದೆ. ಕರಿಬೇವನ್ನು ಕಿಲೋಗೆ ೩೦ ರೂ.ನಂತೆ ಮಾರುತ್ತಿದ್ದು ಅರ್ಧ ಎಕರೆ ಶುಂಠಿಯಿಂದ ೧ ಲಕ್ಷ ಲಾಭ ಪಡೆದಿದ್ದಾರೆ. ಮಾವಿನ ಬೆಳೆಯಿಂದ ೪೦ ಸಾವಿರ, ಆರು ವರ್ಷದ ಹಿಂದೆ ನೆಟ್ಟ ೧೬೦ ಗಾಳಿ ಮರದ ಮಾರಾಟದಿಂದ ೬೦ ಸಾವಿರ ಆದಾಯ ಪಡೆದಿದ್ದಾರೆ. ಜಮೀನಿನ ಸುತ್ತ ಇರುವ ೧೦ ವರ್ಷದ ಸಾಗವಾನಿ ಗಿಡಗಳು ಇನ್ನು ಐದಾರು ವರ್ಷದಲ್ಲಿ ಕಟಾವಿಗೆ ಬರಲಿವೆ.

5

ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಕೃಷಿಯಲ್ಲಿ ಹೊಸತನ್ನು ಸಾಧಿಸಲು ಮಂಡ್ಯದಿಂದ ತಂದು ನೆಟ್ಟ ಹೊಸ ತಳಿಯ ತೆಂಗಿನ ಸಸಿಗಳು ಫಸಲು ನೀಡುತ್ತಿವೆ. ಇದರೊಂದಿಗೆ ಕರಿಬೇವು, ನಿಂಬೆಹಣ್ಣಿನ ಗಿಡಗಳೂ ಸಮೃದ್ಧವಾಗಿ ಬೆಳೆದಿವೆ. ಇದೆಲ್ಲದರ ನಡುವೆ ಅರ್ಧ ಎಕರೆಯಲ್ಲಿ ಶುಂಠಿ ಬೆಳೆಯಲಾಗಿದ್ದು ಲಾಭ ತರುವ ವಾಣಿಜ್ಯ ಬೆಳೆಯಾಗಿ ಕೈ ಸೇರುತ್ತಿದೆ. ಮೂರು ಎಕರೆ ಕೃಷಿ ಭೂಮಿಗೆ ಕೊಳವೆ ಬಾವಿ ಕೊರೆಸಲಾಗಿದ್ದು, ಒಂದೂವರೆ ಇಂಚು ನೀರು ದೊರೆಯುತ್ತಿದೆ. ಅಲ್ಪ ನೀರನ್ನೇ ಬಳಸಿಕೊಂಡಿರುವ ಬಡಿಗೇರ, ಎಲ್ಲ ಗಿಡಗಳಿಗೆ ಹಂತ - ಹಂತವಾಗಿ ಸರದಿಯಂತೆ ಹನಿ ನೀರಾವರಿ ಮೂಲಕ ನೀರುಣಿಸುತ್ತಿದ್ದಾರೆ. ಶುಂಠಿಗೆ ತುಂತುರು ನೀರಾವರಿ ಪದ್ಧತಿ ಅಳವಡಿಸಿದ್ದು ಹಸಿರು ಕಳೆ ಕಟ್ಟಿದಂತಿದೆ. ಕೃಷಿ ಪ್ರಾರಂಭಿಸಿದ ಆರಂಭದ ದಿನಗಳಲ್ಲಿ ಗಿಡಗಳಿಗೆ ನೀರುಣಿಸಲು ಅಪ್ಪಟ ದೇಶಿ ಶೈಲಿಯಲ್ಲಿ ಹನಿ ನೀರಾವರಿ ಪ್ರಾರಂಭಿಸಿದರು. ಯಾವುದೇ ಬ್ಯಾಂಕ್ ಸಾಲ, ಇಲಾಖೆ ಸೌಲಭ್ಯದ ಮೊರೆ ಹೋಗದೆ ಅಲ್ಪ ಹಣದಲ್ಲಿ ಮಣ್ಣಿನ ಕೊಡಗಳನ್ನು ಕೊಂಡು ತಂದು ಅವುಗಳಿಗೆ ಸಣ್ಣ ರಂಧ್ರ ಕೊರೆದು ಗಿಡಗಳ ಬುಡದಲ್ಲಿಟ್ಟು ಪ್ರತಿದಿನ ಮುಂಜಾನೆ, ಸಂಜೆ ಕೊಡಗಳಿಗೆ ನೀರು ತುಂಬಿಸುತ್ತಿದ್ದರು. ನೀರು ರಂಧ್ರಗಳ ಮುಖಾಂತರ ಹನಿ ಹನಿಯಾಗಿ ತೊಟ್ಟಿಕ್ಕುವಂತೆ ಮಾಡಿದ್ದರಿಂದ ಸಸ್ಯಗಳ ಬುಡದಲ್ಲಿ ಸದಾ ತೇವಾಂಶ ಇದ್ದು ಗಿಡಗಳು ಸೊಂಪಾಗಿ ಬೆಳೆಯಲು ಅನುಕೂಲವಾಯಿತು. ಬಡಿಗೇರ ದಂಪತಿಗಳು ಮೂರು ಎಕರೆ ಕೃಷಿ ಭೂಮಿಯನ್ನು ಹೂವು - ಹಣ್ಣುಗಳಿಂದ ನಂದನ ವನವನ್ನಾಗಿ ಪರಿವರ್ತಿಸಿದ್ದಾರೆ. ಕೃಷಿ ಪ್ರಾರಂಭಿಸಿದ ಆರಂಭದಲ್ಲಿ ಆದಾಯ ಕಡಿಮೆ ಎಂಬ ದೂರದೃಷ್ಟಿಯಿಂದ ಮನೆಯಲ್ಲಿ ಸಣ್ಣ ಹಿಟ್ಟಿನ ಗಿರಣಿ ಸ್ಥಾಪಿಸಿದ್ದು. ಗ್ರಾಮದವರೆಲ್ಲರಿಗೂ ವಿರಾಮದ ವೇಳೆಯಲ್ಲಿ ಅಕ್ಕಿ, ಜೋಳ, ಗೋದಿ, ಮುಂತಾದವುಗಳನ್ನು ಹಿಟ್ಟು ಮಾಡಿಕೊಡುತ್ತಾರೆ. ಎಲ್ಲ ಕೆಲಸ ಕಾರ್ಯಗಳಲ್ಲಿ ಪತ್ನಿ ಚಂದ್ರಕಾಂತಮ್ಮ ಕೈಜೋಡಿಸಿರುವುದು ವಿಶೇಷ. ಗೋಪಾಲಾಚಾರ್ ಬಡಿಗೇರ ಅವರ ಕೃಷಿ ಸಾಧನೆ ಗಮನಿಸಿ, ಕೃಷಿ ಇಲಾಖೆಯು ರೈತ ದಿನಾಚರಣೆಯಂದು ಸನ್ಮಾನಿಸಿ ಗೌರವಿಸಿದೆ. ಆಸಕ್ತ ರೈತರಿಗೆ ದಾಲ್ಚಿನ್ನಿ ಕೃಷಿ ಕುರಿತು ಮಾಹಿತಿ ನೀಡಲು ಸಿದ್ದವಿರುವ ಇವರನ್ನು ಸಂಪರ್ಕಿಸಲು ೯೪೮೧೬೮೩೦೫೦ / ೭೦೨೬೦೫೭೧೪೪ ದೂರವಾಣಿಗೆ ಕರೆ ಮಾಡಬಹುದು. ಈ ವರ್ಷದ ಕೃಷಿಮೇಳದಲ್ಲಿ ತಮ್ಮ ಕೃಷಿ ಆವಿಷ್ಕಾರಗಳನ್ನು ಸಹ ಹಂಚಿಕೊಂಡಿದ್ದಾರೆ. ವೃತ್ತಿಯಿಂದ ನಿವೃತ್ತಿ ಹೊಂದಿದ್ದರೂ ಕೃಷಿಯಿಂದ ನಿವೃತ್ತಿ ಹೊಂದದ ಇವರು ಅನುಕರಣೀಯರು.