ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಕೃಷಿಮೇಳ ೨೦೧೬

ಡಾ. ಟಿ. ಎಂ. ಸೌಮ್ಯ,
9986045712
1

ಶಿವಮೊಗ್ಗೆಯ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಕೃಷಿ ಮತ್ತು ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ೨೦೧೬, ಅಕ್ಟೋಬರ್, ೨೧ರಿಂದ ೨೪ರವರೆಗೆ ಹಮ್ಮಿಕೊಂಡಿದ್ದ ತನ್ನ ೪ನೇ ಕೃಷಿಮೇಳವು ಯಶಸ್ಸು ಕಂಡಾಗ, ಈ ಅದ್ಭುತ ಯಶಸ್ಸಿಗೆ ಹಲವಾರು ವಿಶೇಷ ಕಾರಣಗಳು ಕಾಣಸಿಗುತ್ತವೆ. ಹೌದು !!! ಹವಾಮಾನ ತಜ್ಞರ ಮಾಹಿತಿಯಂತೆ ಈ ಬಾರಿಯ ಮುಂಗಾರು ವಾರ್ಷಿಕ ಸರಾಸರಿಗಿಂತ ಹೆಚ್ಚಿರುವುದು ಎಂದು ಓದಿದ ಕಣ್ಣುಗಳು, ಕೇಳಿದ ಕಿವಿಗಳು ನಗುಮೊಗದೊಂದಿಗೆ ಮುಂಗಾರಿನ ಸ್ವಾಗತದಲ್ಲಿದ್ದಾಗ ಎದುರಾದ ತಡವಾದ ಮುಂಗಾರು, ಮತ್ತೆಲ್ಲೋ ಅತೀವೃಷ್ಠಿ ಸೃಷ್ಟಿಸುವಂತಹ ಧಾರಾಕಾರ ಮಳೆ, ಮತ್ತೆಲ್ಲೋ ’ಬರ’ವನ್ನೇ ಬರಮಾಡಿಕೊಂಡ ಅನಾವೃಷ್ಠಿ, ಸಾರ್ವಕಾಲಿಕ ನೀರಾವರಿ ಪ್ರದೇಶಗಳಲ್ಲಿ ’ನೀರೇ’ವರಿಯಾದಾಗ ಕೃಷಿಮೇಳದ ಯಶಸ್ಸು ಪ್ರಶ್ನಾತೀತವಾಗಿತ್ತು. ಇದನ್ನೆಲ್ಲ ಮೆಟ್ಟಿ ನಿಂತು ಯಶಸ್ಸು ಕಂಡದ್ದು ಶಿವಮೊಗ್ಗೆಯ ೨೦೧೬ರ ಕೃಷಿಮೇಳ.

ಈ ಬಾರಿಯ ಕೃಷಿಮೇಳದ ಘೋಷವಾಕ್ಯ ಮಣ್ಣು ಮತ್ತು ಜನಾರೋಗ್ಯಕ್ಕಾಗಿ ದ್ವಿದಳ ಧಾನ್ಯಗಳು. ಇಂದಿನ ಯಾಂತ್ರೀಕೃತ ಬೇಸಾಯ ಹಾಗೂ ವಾಣಿಜ್ಯ ಬೆಳೆಗಳ ಭರಾಟೆಯಿಂದಾಗಿ ರೈತರ ಮನದಲ್ಲಿ ಮಸುಕಾಗಿರುವ ದ್ವಿದಳ ಧಾನ್ಯಗಳ ಬೆಳೆಗಳಿಗೆ ಒತ್ತು ನೀಡುವ ಮಹತ್ತರ ಜವಾಬ್ದಾರಿಯೊಂದಿಗೆ ಆಯೋಜಿಸಲಾಗಿದ್ದ ೨೦೧೬ರ ಕೃಷಿಮೇಳದ ಉದ್ಘಾಟನೆಯನ್ನು ಮಾನ್ಯ ಕೃಷಿ ಸಚಿವರಾದ ಸನ್ಮಾನ್ಯ ಶ್ರೀ ಕೃಷ್ಣ ಭೈರೇಗೌಡರು ನೆರವೇರಿಸಿದರು. ಕೃಷಿ ವಸ್ತುಪ್ರದರ್ಶನವನ್ನು ಕಂದಾಯ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಕಾಗೋಡು ತಿಮ್ಮಪ್ಪರವರು ಉದ್ಘಾಟಿಸಿದರೆ, ಮತ್ಸ್ಯ ಪ್ರದರ್ಶನದ ಉದ್ಘಾಟನೆಯನ್ನು ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಆರ್. ಪ್ರಸನ್ನ ಕುಮಾರ್ರವರು ನೆರವೇರಿಸಿದರು. ಕೃಷಿಮೇಳದ ಉದ್ಘಾಟನಾ ಸಮಾರಂಭದ ಬಹುಮುಖ್ಯ ಅಂಶ ಸಾಧಕ ರೈತ ಮತ್ತು ರೈತ ಮಹಿಳೆಯರ ಸನ್ಮಾನ.

ಎಂದಿನಂತೆ ಈ ಸಾಲಿನಲ್ಲಿಯೂ ಸಹ ವಿಶ್ವವಿದ್ಯಾಲಯದ ವ್ಯಾಪ್ತಿಗೊಳಪಡುವ ಏಳು ಜಿಲ್ಲೆಗಳಿಂದ ಆಯ್ಕೆಯಾದ ೨೦೧೬ರ ಶ್ರೇಷ್ಠ ಕೃಷಿಕ ಮತ್ತು ಶ್ರೇಷ್ಠ ಕೃಷಿಮಹಿಳೆಯರನ್ನು ಸನ್ಮಾನಿಸಲಾಯಿತು. ಅಲ್ಲದೇ, ವಿಶೇಷ ಸಾಧನೆಗಾಗಿ ನಾಲ್ಕು ಸಾಧಕ ರೈತರ ಸನ್ಮಾನವನ್ನೂ ಸಹ ಮಂತ್ರಿಗಳು ಹಾಗೂ ಅತಿಥಿಗಳು ನೆರವೇರಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಧಾನ ಸಭೆ ಮ್ತತು ವಿಧಾನ ಪರಿಷತ್ನ ಸದಸ್ಯರುಗಳು, ವಿವಿಧ ಆಯೋಗಗಳ, ಅಭಿವೃದ್ಧಿ ನಿಗಮಗಳ, ಸ್ಥಾಯೀ ಸಮಿತಿ, ಹಾಲು ಒಕ್ಕೂಟ ಹಾಗೂ ಅಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರುಗಳು, ಜಿಲ್ಲಾ ಪಂಚಾಯತ್ನ ಉಪಾಧ್ಯಕ್ಷರು, ಕೃಷಿ ಸಂಬಂಧಿತ ಇಲಾಖೆಗಳ ಹಿರಿಯ ಅಧಿಕಾರಿಗಳು, ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಪಾಲ್ಗೊಂಡಿದ್ದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಶ್ರೀಮತಿ ಶಾರದಾ ಪೂರ್ಯಾಖನಾಯ್ಕರವರು ವಹಿಸಿಕೊಂಡಿದ್ದರು.

5

ಕೃಷಿಮೇಳದ ಮೊದಲನೆಯ ದಿನದ ಕಾರ್ಯಕ್ರಮವು ಫಲಪ್ರದವಾಗಿ ಪೂರೈಸಿದ ಬೆನ್ನಲ್ಲೆ ಕೃಷಿಮೇಳದ ಎರಡನೇ ಮತ್ತು ಮೂರನೇ ದಿನಗಳಲ್ಲಿ ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಚಾರ ಸಂಕಿರಣಗಳಲ್ಲಿ ಆಯಾ ವಿಷಯಗಳಲ್ಲಿ ಪರಿಣಿತಿ ಹೊಂದಿದ ವಿಜ್ಞಾನಿಗಳು ಹಾಗೂ ಪ್ರಗತಿಪರ ರೈತರು ವಿಷಯ ಮಂಡಿಸಿದ ನಂತರ ರೈತ ವಿಜ್ಞಾನಿಗಳ ನಡುವೆ ಸಂವಾದಕ್ಕೂ ಅವಕಾಶ ಕಲ್ಪಿಸಿದ್ದುದರಿಂದ ಹಲವಾರು ಕೃಷಿಸಂಬಂಧಿತ ಪ್ರಶ್ನೋತ್ತರಗಳಿಗೆ ವಿಚಾರ ಸಂಕಿರಣಗಳು ವೇದಿಕೆಯಾದವು. ಬಹುಮುಖ್ಯ ಅಂಶವೆಂದರೆ ಪ್ರಸ್ತುತ ಪರಿಸ್ಥಿತಿಗೆ ಸಮಯೋಚಿತವಾಗಿ ನೀರಿನ ಸಮರ್ಥ ಬಳಕೆಗಾಗಿ ಸೂಕ್ಷ್ಮ ನೀರಾವರಿ ಪದ್ಧತಿಗಳು ಹಾಗೂ ಮಣ್ಣು ಮತ್ತು ಜನಾರೋಗ್ಯಕ್ಕಾಗಿ ದ್ವಿದಳ ಧಾನ್ಯಗಳು ಎಂಬ ವಿಷಯಗಳ ಕುರಿತು ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಈ ಕುರಿತು ಪಾಲ್ಗೊಂಡ ರೈತರಿಗೆ ಮನವರಿಕೆ ಮಾಡಿದುದು. ಕೃಷಿಮೇಳದಲ್ಲಿ ರೈತರಿಗೆ ಅನುಕೂಲವಾಗುವಂತಹ ಹಲವಾರು ಹಸ್ತಪ್ರತಿಗಳು, ತಾಂತ್ರಿಕ ಕೈಪಿಡಿಗಳು ಹಾಗೂ ವಿಶ್ವವಿದ್ಯಾಲಯದ ಕೆಲವು ಉತ್ಪನ್ನಗಳನ್ನು ಬಿಡುಗಡೆಗೊಳಿಸಲಾಯಿತು. ಕೃಷಿಮೇಳದಲ್ಲಿ ರಾಜ್ಯದ ವಿವಿಧ ಕೃಷಿ ಸಂಬಂಧಿತ ವಿಶ್ವವಿದ್ಯಾಲಯಗಳ ಹಿರಿಯ ಅಧಿಕಾರಿಗಳು ಹಾಗೂ ಕುಲಪತಿಗಳು ಭಾಗವಹಿಸಿದ್ದರು.

ಕೃಷಿಮೇಳದ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ನ ಸನ್ಮಾನ್ಯ ಸಭಾಪತಿಗಳಾದ ಶ್ರೀ ಡಿ. ಹೆಚ್. ಶಂಕರಮೂರ್ತಿರವರು, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಎಂ. ಆರ್. ದಿನೇಶ್ರವರು, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಶ್ರಿ ಕೆ.ಟಿ. ಗಂಗಾಧರ್ರವರು ಹಾಗೂ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ಹೆಚ್. ಆರ್. ಬಸವರಾಜಪ್ಪನವರು ಹಾಗೂ ವಿವಿಧ ಜಿಲ್ಲೆಗಳ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರುಗಳು ಕೃಷಿ ವಸ್ತುಪ್ರದರ್ಶನದಲ್ಲಿ ಉತ್ತಮವಾಗಿ ಪ್ರದರ್ಶಿಸಲ್ಪಟ್ಟ ಮಳಿಗೆಗಳಿಗೆ ಹಾಗೂ ಪ್ರಾತ್ಯಕ್ಷಿಕೆ ತಾಕುಗಳಿಗೆ ಹಲವಾರು ವಿಭಾಗಗಳಲ್ಲಿ ಒಟ್ಟು ೩೦ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ವಿತರಿಸಿದರು. ಈ ಬಾರಿಯ ಕೃಷಿಯ ಮೇಳದ ಮುಖ್ಯ ಆಕರ್ಷಣೆ ಎನಿಸಿದ್ದು ಹನಿ ನೀರಾವರಿ ಪದ್ಧತಿಯಲ್ಲಿ ಮಾಡಿದ ಭತ್ತದ ಕೃಷಿ, ಹಲವಾರು ಬೆಳೆಗಳ ವಿವಿಧ ತಳಿಗಳನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ಪ್ರದರ್ಶಿಸಿದ್ದ ’ಸಸ್ಯಕಾಶಿ’, ವಿವಿಧ ಜಾತಿಯ ಮತ್ಸ್ಯಗಳ ಪ್ರದರ್ಶನ, ಕರ್ನಾಟಕದ ವಿವಿಧ ಕೃಷಿ ಮತ್ತು ಕೃಷಿಸಂಬಂಧಿತ ವಿಶ್ವವಿದ್ಯಾಲಯಗಳ ತಾಂತ್ರಿಕತೆಗಳ ಪ್ರದರ್ಶನ, ಕೇಂದ್ರೀಯ ಸಂಶೋಧನಾ ಸಂಸ್ಥೆಗಳ ತಾಂತ್ರಿಕತೆಗಳ ಪರಿಚಯ, ಯಾಂತ್ರೀಕೃತ ಬೇಸಾಯಕ್ಕೆ ಸಹಕಾರಿಯಾಗುವ ಯಂತ್ರಗಳ ಪರಿಚಯ, ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಮತ್ತು ಮಾರಾಟ, ವಾರ್ತಾ ಮತ್ತು ಪ್ರಚಾರ ಇಲಾಖೆಯ ಮಾಹಿತಿ ಪ್ರದರ್ಶನ, ಎಲ್ಇಡಿ ಪರದೆ ಮೂಲಕ ವಸ್ತುಪ್ರದರ್ಶನದ ಮಳಿಗೆಗಳಲ್ಲೂ ವೇದಿಕೆಯ ಕಾರ್ಯತಕ್ರಮ ವೀಕ್ಷಣೆಗೆ ಅವಕಾಶ, ಡ್ರೋನ್ ಬಳಸಿ ಕೃಷಿಮೇಳದ ಮೊದಲನೆ ದಿನವನ್ನು ಚಿತ್ರೀಕರಿಸಿದ ಚಿತ್ರಣವನ್ನು ಉಳಿದವರು ನೋಡಲು ಅವಕಾಶ. ಹೀಗೇ.......

ಈ ಬಾರಿಯ ಕೃಷಿಮೇಳದಲ್ಲಿ ಕೃಷಿ ಸಂಬಂಧಿತ ತಾಂತ್ರಿಕತೆಗಳ ಪರಿಚಯ, ಪರಿಕರಗಳು ಹಾಗೂ ಸ್ತ್ರೀ ಶಕ್ತಿ ಸಂಘಗಳಿಂದ ತಯಾರಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಸುಮಾರು ೩೦೦ ಹೈಟೆಕ್ ಮಳಿಗೆಗಳು ಹಾಗೂ ೧೦೦ ಸಾಧಾರಣ ಮಳಿಗೆಗಳಿದ್ದವು. ಕೃಷಿಮೇಳಕ್ಕೆ ಆಗಮಿಸಿದವರಿಗೆ ಭೋಜನದ ವ್ಯವಸ್ಥೆ ಕಲ್ಪಿಸಲು ಆಹಾರದ ತಿನಿಸುಗಳ ಮಳಿಗೆಗಳು ಸಹ ಇದ್ದುದರಿಂದ ಇಡೀ ದಿನ ಕೃಷಿಮೇಳ ವೀಕ್ಷಿಸಲು ಸಹಕಾರಿಯಾಯಿತು. ಬೆಳಗ್ಗೆಯಿಂದಲೇ ಪ್ರಾತ್ಯಕ್ಷಿಕೆ ತಾಕುಗಳನ್ನು ಮತ್ತು ವಸ್ತುಪ್ರದರ್ಶನ ವೀಕ್ಷಿಸಿ ದಣಿದವರು ಹಾಗೂ ಸಂಜೆಯಷ್ಟೆ ಆಗಮಿಸಿದ ಕೆಲವು ನಗರವಾಸಿಗಳು ಕೃಷಿಮೇಳದಲ್ಲಿ ಸಾಯಂಕಾಲ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮನೋಲ್ಲಾಸ ಪಡೆದುಕೊಂಡರು.

9

ಒಟ್ಟಾರೆ ಹೇಳುವುದಾದರೆ, ಹವಾಮಾನ ವೈಪರೀತ್ಯದ ಬಿಸಿ ಪ್ರತಿಯೊಬ್ಬರಿಗೂ ತಟ್ಟಿರುವುದು ಗುಪ್ತವಾಗಿ ಉಳಿದಿಲ್ಲ. ಇದರಿಂದಾಗಿ ದಶಕಗಳಿಗೊಮ್ಮೆ ಉಂಟಾಗುತ್ತಿದ್ದ ನೆರೆಬರಗಳು ಪದೇ ಪದೇ ಅನುಭವಕ್ಕೆ ಬರುತ್ತಿರುವುದು ವಿಪರ್ಯಾಸ. ಆದರೆ, ಕೃಷಿ ನಿಲ್ಲುವುದಿಲ್ಲ - ಎವೆರಿಥಿಂಗ್ ಕ್ಯಾನ್ ವೇಯ್ಟ್, ಬಟ್ ನಾಟ್ ಅಗ್ರಿಕಲ್ಚರ್. ಕೃಷಿಯಲ್ಲಿನ ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸಲು ದ್ವಿದಳ ಧಾನ್ಯದ ಬೆಳೆಗಳು ಸಹಕಾರಿಯಾಗುತ್ತವೆ. ಕಡಿಮೆ ಅವಧಿಯ, ಮಿತ ಸಂಪನ್ಮೂಲವನ್ನು ಬೇಡುವ ದ್ವಿದಳ ಧಾನ್ಯದ ಬೆಳೆಗಳು ಮಣ್ಣು ಮತ್ತು ಜನರ ಆರೋಗ್ಯವನ್ನು ಕಾಪಾಡುವುದಲ್ಲದೇ ಪರ್ಯಾಯ ಬೆಳೆ, ಬೆಳೆ ಯೋಜನೆ ಮತ್ತು ಬೆಳೆ ಪದ್ಧತಿಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿಸುವ ಧ್ಯೇಯದೊಂದಿಗೆ ಆಯೋಜಿಸಲಾಗಿದ್ದ ಕೃಷಿಮೇಳ ೨೦೧೬ರಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮಿತ ಬಳಕೆಯ ಕುರಿತು ಅರಿವು ಮೂಡಿಸಲಾಯಿತು. ಒಟ್ಟಾರೆ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದು ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಕೃಷಿಮೇಳಕ್ಕೆ ಆಗಮಿಸಿ ಇದರ ಪ್ರಯೋಜನ ಪಡೆದರು ಎಂದು ತಿಳಿಸಲು ಹರ್ಷವೆನಿಸುತ್ತದೆ.

ಈ ಒಂದು ಉತ್ತಮ ಸ್ಪಂದನೆಗೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸಿ. ವಾಸುದೇವಪ್ಪರವರು ಹಾಗೂ ಎಲ್ಲಾ ಹಿರಿಯ ಅಧಿಕಾರಿಗಳು ಹರ್ಷವ್ಯಕ್ತಪಡಿಸಿರುತ್ತಾರೆ ಎಂದು ಹೇಳಲು ಮರೆತರೆ ತಪ್ಪಾದೀತು ಎಂದು ತಿಳಿಸುತ್ತಾ ಮುಂಬರುವ ಮುಂಗಾರು ಸರ್ವರಿಗೂ ಸುಖ ನೀಡುವಂತಿರಲಿ ಎಂದು ದೇವರಲ್ಲಿ ಬೇಡುತ್ತೇನೆ.