ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಕೋಲಾಟವೆಂಬ ಕೋಲಾಹಲ

ವೇಣುಗೋಪಾಲ್ ಹೆಚ್.ಎಂ
7026096412
1

ಕೋಲಾಟಗಳು: ಆಂಗ್ಲ ಭಾಷೆಯಲ್ಲಿ ಡ್ರಾಗನ್ ಫ್ಲೈ ಅಥವಾ ಡ್ಯಾಮ್ಸಲ್ ಫ್ಲೈ ಎಂದು ಕರೆಸಿಕೊಳ್ಳುವ ಇವು ಪ್ರತಿನಿತ್ಯವೂ ನಮ್ಮೆಲ್ಲರ ಕಣ್ಣಿಗೆ ಕಾಣಿಸಿಕೊಳ್ಳುವ ಸುಂದರ ಹಾಗೂ ವೈಶಿಷ್ಟ್ಯ ಕೀಟಗಳು. ನಾವೆಲ್ಲರೂ ಬಾಲ್ಯದಲ್ಲಿ ಈ ಮಳೆ ಹುಳುಗಳಿಗೆ ದಾರ ಕಟ್ಟಿ ಏರೋಪ್ಲೇನ್ ಎಂದು ಆಡಿರುವ ನೆನಪುಂಟು. ವೈಜ್ಞಾನಿಕವಾಗಿ ಇವು ಆರು ಕಾಲುಗಳುಳ್ಳ ಕೀಟಗಳ ಗುಂಪಿನ ಓಡೋನೇಟ ಎಂಬ ಆರ್ಡರ್ಗೆ ಸೇರಿರುತ್ತವೆ. ಕೋಲಾಟಗಳು ತಮ್ಮ ಮೊಟ್ಟೆಯನ್ನು ನೀರಿನಂಶ ಇರುವ ಪ್ರದೇಶದಲ್ಲಿ ಕೆರೆ, ಹೊಲ, ಗದ್ದೆಗಳಲ್ಲಿ ಹೆಚ್ಚಾಗಿ ನೀರಿನಲ್ಲಿರುವ ಗಿಡಗಳಲ್ಲಿ ಇಡುತ್ತವೆ. ಮೊಟ್ಟೆ ಒಡೆದು ಆಚೆ ಬರುವ ಮರಿ ಹುಳುವನ್ನು ನಾವು ಜಲಕನ್ಯೆ ಎಂದು ಕರೆಯುತ್ತೇವೆ. ಏಕೆಂದರೆ ತಮ್ಮ ಬಾಲ್ಯ ಅಥವಾ ಮರಿ ಹುಳುವಿನ ಅವಧಿಯನ್ನು ಸಂಪೂರ್ಣವಾಗಿ ನೀರಿನಲ್ಲಿ ಕಳೆಯುತ್ತವೆ. ಹಲವು ದಿನಗಳ ನಂತರ ಅವು ಮೈಮೇಲಿನ ಪೊರೆ ಬಿಡುತ್ತವೆ. ನಂತರ ಬರುವ ಪ್ರೌಢಕೀಟಗಳು ನೀರಿನಿಂದ ಹೊರಬರುತ್ತವೆ, ತಮ್ಮ ಮುಂದಿನ ಜೀವನವನ್ನು ಗಾಳಿಯಲ್ಲಿ ಹಾರಾಡುತ್ತ, ಬೇರೆ ಹುಳುಗಳ ಮೇಲೆ ಅವಲಂಬಿಸಿ ಬೆಳೆಯುತ್ತವೆ

ಕೃಷಿಯಲ್ಲಿ ಕೋಲಾಟಗಳ ಪ್ರಾಮುಖ್ಯತೆ

ಕೋಲಾಟಗಳನ್ನು ನಾವು ಕೀಟ ಭಕ್ಷಕವೆಂದು ಕರೆಯಬಹುದು, ಏಕೆಂದರೆ ಅವು ಸಸ್ಯಗಳಿಗೆ ಹಾನಿ, ತೊಂದರೆ ಉಂಟು ಮಾಡುವಂತಹ ಕೀಟಗಳು ಅಂದರೆ, ಸಸ್ಯ ಹೇನು, ಜಿಗಿಹುಳು, ಥ್ರಿಪ್ಸ್, ಎಲೆ ತಿನ್ನುವ ಹುಳು, ಎಲೆ ಮಡಚುವ ಚಿಟ್ಟೆಗಳು, ಕಾಂಡ ಕೊರೆಯುವ ಚಿಟ್ಟೆಗಳು, ರಂಗೋಲಿ ಹುಳುಗಳು ಹಾಗೂ ಭತ್ತದ ಗದ್ದೆಗಳಲ್ಲಿ ಇರುವ ಅನೇಕ ಹಾನಿಕರ ಕೀಟಗಳನ್ನು, ಚಿಟ್ಟೆಗಳನ್ನು ತಿಂದು ಕೀಟದ ಹಾವಳಿ ತಪ್ಪಿಸುತ್ತದೆ.ತಮ್ಮ ಅಪರೂಪದ ಈ ಶಕ್ತಿಗೆ ಕಾರಣವಾದವುಗಳು ತಮ್ಮ ವೇಗದ ಹಾರಾಟ, ಸೂಕ್ಷ್ಮ ಕಣ್ಣುಗಳು ಹಾಗೂ ತಮ್ಮ ಬುಟ್ಟಿಯಾಕಾರದ ಕಾಲುಗಳು. ಕೋಲಾಟಗಳಿಗೆ ಕಾಲುಗಳು ವಿಶಿಷ್ಟವಾಗಿ ಜೋಡಣೆಯಾಗಿರುತ್ತವೆ. ಅವು ಕೀಟಗಳನ್ನು ಕಂಡ ತಕ್ಷಣ, ಛಂಗನೆ ಹಾರಿ ತಮ್ಮ ಬುಟ್ಟಿಯಾಕಾರದ ಕಾಲಿನೊಳಗೆ ಸೇರಿಸಿಕೊಳ್ಳುತ್ತವೆ. ನಂತರ ತಮ್ಮ ಗಟ್ಟಿಯಾದ ಹಲ್ಲುಗಳಿಂದ (ಮ್ಯಾಂಡಿಬಲ್ಸ್) ಕಚ್ಚಿ ತಿನ್ನುತ್ತವೆ.

ಹೀಗೆ ಮರಿಗಹುಳುಗಳೂ ಸಹ ನೀರಿನಲ್ಲಿ ಅನೇಕ ಜಲಚರಗಳಾದ ಕಪ್ಪೆಗಳ ಮರಿಗಳು, ಮೀನುಗಳು ಹಾಗೂ ಅತೀ ಮುಖ್ಯವಾಗಿ ಸೊಳ್ಳೆಯ ಮರಿಗಳನ್ನು ಹಾಗೂ ಮೊಟ್ಟೆಗಳನ್ನು ತಿಂದು ನೀರು ಹಾಗೂ ನಮ್ಮ ಸುತ್ತಲಿನ ಪರಿಸರವನ್ನು ಶುದ್ಧಿ ಮಾಡುತ್ತವೆ. ಮರಿ ಹುಳುಗಳು ತಮ್ಮ ಎಲುಬಿನಂತಹ ನಾಲಿಗೆಯನ್ನು ಹೊರಹಾಕಿ ನೀರಿನಲ್ಲಿರುವ ಅನೇಕ ಹುಳುಗಳನ್ನು ಸೇವಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತವೆ.ಈ ರೀತಿಯಾಗಿ ಕೋಲಾಟಗಳು ಕೀಟಬಾಧೆ, ನೀರು ಶುದ್ಧೀಕರಣ, ಸೊಳ್ಳೆ ನಿಯಂತ್ರಣ ಹೀಗೆ ಅನೇಕ ರೀತಿ ಸಹಾಯ ಮಾಡುವುದಲ್ಲದೆ ನೋಡುವವರ ಕಣ್ಣಿಗೆ ಆನಂದ ಹಾಗೂ ಮುದವನ್ನುಂಟು ಮಾಡುತ್ತವೆ. ಈ ಕೋಲಾಟಗಳು ಅಥವಾ ಏರೋಪ್ಲೇನ್ ಹುಳುಗಳು ನಮ್ಮ ಪರಿಸರದಲ್ಲಿ ಜೀವಿಗಳ ಸಂಖ್ಯೆಯ ಸಮತೋಲನವನ್ನು ನೈಸರ್ಗಿಕವಾಗಿ ಕಾಪಾಡುತ್ತಿವೆ. ಇಂತಹ ಜೀವಿಗಳು ಮನುಷ್ಯರ ಏಳಿಗೆಗೆ ಶ್ರಮಿಸುತ್ತಿದ್ದಾವೆ ಎಂದರೆ ತಪ್ಪಾಗಲಾರದು.