ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ವಿಭಿನ್ನ ಚಿಂತನೆ

ಹೊಸ ಆಯಾಮಕ್ಕೆ ನಾಂದಿ

ಬಿ. ಎಮ್. ಚಿತ್ತಾಪೂರ
ವೆ“ಜ್ಞಾನಿಕ ಅಧಿಕಾರಿ ಕೃ. ವಿ. ವಿ. ರಾಯಚೂರ
9448821755

ಬದಲಾವಣೆ ನಿಸರ್ಗದತ್ತವಾದುದು. ಅಂತೆಯೇ ನಮ್ಮ ದೈನಂದಿನ ಕಾರ್ಯಚಟುವಟಿಕೆಗಳಲ್ಲೂ ವಿಭಿನ್ನ ಚಿಂತನೆಗೆ ಇಂಬು ನೀಡಬೇಕು. ಕವಿಯ/ಸಾಹಿತಿಯ ಚಿಂತನೆಯಂತೆ ಸದಾ ನಿರರ್ಗಳವಾಗಿ ನದಿಯಂತೆ ಹರಿಯುತ್ತಿರಬೇಕು. ಅಂದಾಗ ಸಮಸ್ಯೆಗಳಿಗೆ ಸುಲಭವಾದ ಪರಿಹಾರಗಳನ್ನು ಪಡೆಯಲು ಮತ್ತು ಬದುಕಿನ ಸೊಬಗು ಸವಿಯಲು ಸಾಧ್ಯ. ಅದಕ್ಕೆಂದೇ ಬಲ್ಲವರು ಹೇಳುತ್ತಾರೆ Think out of box - ವಿಷಯದ ಪರಿಧಿಯಿಂದಾಚೆ ಹೋಗಿ ಚಿಂತಿಸಿ’. ಇದು ಕೇವಲ ಪರಿಹಾರ ಮಾತ್ರವಲ್ಲ ಹೊಸ ಬದಲಾವಣೆಗೂ ಮತ್ತು ನವೀನ ಆಯಾಮಕ್ಕೂ ಎಡೆಮಾಡುವುದು. ಈ ಕಾರಣದಿಂದಾಗಿಯೇ ನಾಗರಿಕತೆಯ ಹಂತದಿಂದ ನಾವಿಂದು ಪೃಥ್ವಿಯಿಂದಾಚೆಯ ಮಂಗಳ ಲೋಕದಲ್ಲಿ ವಾಸ ಮಾಡುವ ವಿಚಾರದ ಹಂತ ತಲುಪಿದ್ದು.

ಈ ಹಿಂದೆ ಬೆಂಜೀನ್ ರಾಸಾಯನಿಕದ ರಚನೆಯನ್ನು ಅರಿಯುವಲ್ಲಿ ಸಮಸ್ಯೆಯಾದಾಗ ಜರ್ಮನಿಯ ರಸಾಯನ ಶಾಸ್ತ್ರಜ್ಞ ಅಗಸ್ಟ ಕೆಕುಲೆ ತನ್ನ ಬಾಲವನ್ನು ತಾನೇ ನುಂಗುತ್ತಿರುವ ಸಾಂಪ್ರದಾಯಿಕ ಹಾವಿನ ಚಿತ್ರದಿಂದ ಸ್ಪೂರ್ತಿಗೊಂಡು ಬೆಂಜೀನ್ನ ವರ್ತುಳ ರಚನೆಯನ್ನು ಕಲ್ಪಿಸಿದ. ಹಾಗೆಯೇ ಅರ್ಕಿಮಿಡಿಸ್ ತಾನು ಸ್ನಾನಕ್ಕೆ ತೊಟ್ಟಿಗಿಳಿದಾಗ ಹೊರಚೆಲ್ಲಿದ ನೀರಿನಿಂದ ಪ್ರಚೋದಿತನಾಗಿ ಹೈಡ್ರೋಡೈನಾಮಿಕ್ಸ್ ವಿಜ್ಞಾನಕ್ಕೆ ನಾಂದಿ ಹಾಡಿದ. ಇದಕ್ಕೆ ಕೃಷಿಯೇನೂ ಹೊರತಲ್ಲ. ಹತ್ತೊಂಬತ್ತನೂರಾ ಎಂಬತ್ತರ ದಶಕದಲ್ಲಿ ಫ್ರಾನ್ಸಿನ ದ್ರಾಕ್ಷಿ ತೋಟಗಳಲ್ಲಿ ಡೌನಿ ಮಿಲ್ಡ್ಯು (ಕೇದಗೆ) ರೋಗ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಾಗ ಬೊರ್ಡೊ ವಿಶ್ವವಿದ್ಯಾಲಯದ ಸಸ್ಯಜೀವಶಾಸ್ತ್ರ ಪ್ರಾಧ್ಯಾಪಕರಾದ ಪಿ.ಎಮ್.ಎ. ಮಿಲ್ಲಾರಡೆಟ್ ದ್ರಾಕ್ಷಿ ತೋಟಗಳ ಸರ್ವೇಕ್ಷಣೆ ಕೈಗೊಂಡಾಗ ಈ ರೋಗವು ತೋಟದ ಬದಿಗಳಲ್ಲಿ ಮತ್ತು ರಸ್ತೆ ಪಕ್ಕಗಳಲ್ಲಿ ಕಡಿಮೆಯಿರುವುದನ್ನು ಗಮನಿಸಿದರು. ಕಾರಣ ವಿಚಾರಿಸಲಾಗಿ ರೈತರು ಹೇಳಿದ್ದುದು ದಾರಿಹೋಕರಿಂದ ಹಣ್ಣನ್ನು ರಕ್ಷಿಸಲು ಬೆಳೆಗೆ ತಾಮ್ರದ ಸಲ್ಫೇಟ್ ಮತ್ತು ಸುಣ್ಣದ ನೀರಿನ ದ್ರಾವಣವನ್ನು ಸಿಂಪಡಿಸಲಾಗಿದೆಯೆಂದು. ಇದರಿಂದಾಗಿ ಹಣ್ಣುಗಳು ತಿನ್ನಲು ರುಚಿಯಾಗಿರುವುದಿಲ್ಲ. ಈ ಸಂಗತಿಯಿಂದ ಕುತೂಹಲಗೊಂಡ ಮಿಲ್ಲಾರಡೆಟ್ ಈ ವಿಷಯವಾಗಿ ಹೆಚ್ಚಿನ ಅಭ್ಯಾಸ ಮಾಡಿ ದ್ರಾವಣಕ್ಕೆ ರೋಗದ ಪ್ರತಿಕ್ರಿಯೆ ಕುರಿತು ಪ್ರಯೋಗ ಕೈಕೊಂಡ. ಈ ಹಂತದಲ್ಲಿ ಡೆವಿಡ್ ಎಂಬಾತನು ಜೊತೆ ಸಂಶೋಧಕನಾಗಿ ಕೆಲಸ ಮಾಡಿದ್ದರಿಂದ ಈ ಕ್ರಮಕ್ಕೆ ಮೊದಮೊದಲು ಮಿಲ್ಲಾರಡೆಟ್-ಡೆವಿಡ್ ಉಪಚಾರವೆಂದು ಕರೆಯಲಾಯಿತು. ನಂತರದಲ್ಲಿ ರೋಗ ನಿರ್ವಹಣೆಯಲ್ಲಿ ದ್ರಾವಣದ ಪ್ರಭಾವ ಕಂಡು ಶಿಲೀಂಧ್ರ ರೋಗಗಳಿಗೆ ಪೀಡೆನಾಶಕವಾಗಿ ಈ ಮಿಶ್ರಣವನ್ನು ವಿಶ್ವವಿದ್ಯಾಲಯದ ಹೆಸರಿನಿಂದ ಬೊರ್ಡೊ ದ್ರಾವಣವೆಂದು ಶಿಫಾರಸ್ಸು ಮಾಡಿದ್ದು ಈಗ ಇತಿಹಾಸ.