ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಚಿಂತನೆ

ಹವಾಮಾನ ಬದಲಾಗುತ್ತಿದೆ: ಅಂತೆಯೇ ಕೃಷಿ ಮತ್ತು ಆಹಾರಾಭ್ಯಾಸಗಳೂ ಸಹ ಬದಲಾಗಬೇಕಿದೆ

image_
ಕುಮಾರಸ್ವಾಮಿ ಎ. ಎಸ್.
ಕೃಷಿ ವಿಜ್ಞಾನಿ
9448943990

ಜಾಗತಿಕ ತಾಪಮಾನ ಏರಿಕೆಯು ಇನ್ನು ಬೆದರಿಕೆಯ ಗುಮ್ಮವಾಗಿ ಉಳಿದಿಲ್ಲ; ಆಧುನಿಕ ಜೀವನ ಶೈಲಿಯ ದುಷ್ಪರಿಣಾಮಗಳನ್ನು ಈಗಾಗಲೇ ಎಲ್ಲರೂ ಅನುಭವಿಸುವಂತಾಗಿದೆಯಷ್ಟೇ ಅಲ್ಲ, ಮುಂದೆ ವಾತಾವರಣದ ಏರುಪೇರಿನಿಂದ ಏನೇನು ಅನಿರೀಕ್ಷಿತ ಅನಾಹುತಗಳಾಗಬಹುದು ಎನ್ನುವ ದುಗುಡವೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯವರು ೨೦೧೬ ನೇ ವರ್ಷದ ವಿಶ್ವ ಆಹಾರ ದಿನಾಚರಣೆಗೆ ಘೋಷವಾಕ್ಯವನ್ನಾಗಿ ’ಹವಾಮಾನ ಬದಲಾಗುತ್ತಿದೆ ಅಂತೆಯೇ ಕೃಷಿ ಮತ್ತು ಆಹಾರಾಭ್ಯಾಸಗಳೂ ಸಹ ಬದಲಾಗಬೇಕು’ ಎಂದು ಆರಿಸಿರುವುದು ಅತಿ ಸಮಂಜಸ

ವಿಶ್ವದಲ್ಲಿ ಆಹಾರಕ್ಕೋಸ್ಕರ ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡುವ ಸುಮಾರು ೩೦೦ ವಿವಿಧ ರೀತಿಯ ಬೆಳೆಗಳಿದ್ದರೂ ಸಹ ಇತ್ತೀಚಿನ ವರ್ಷಗಳಲ್ಲಿ ಕೆಲವೇ ಬೆಳೆಗಳ ಕೃಷಿಯಲ್ಲಿ ಆದ ಅಗಾಧ ತಾಂತ್ರಿಕ ಬೆಳವಣಿಗೆಗಳಿಂದಾಗಿ, ಅವುಗಳ ಉತ್ಪಾದನೆಯು ಅಧಿಕಗೊಂಡು ಪ್ರಸ್ತುತ ವಿಶ್ವದ ಪ್ರತಿಶತ ೮೫ರಷ್ಟು ಜನಸಂಖ್ಯೆಯು ಆಹಾರ ಸುರಕ್ಷತೆಗೋಸ್ಕರ ಕೇವಲ ಭತ್ತ, ಗೋಧಿ ಮತ್ತು ಮುಸುಕಿನ ಜೋಳದ ಬೆಳೆಗಳನ್ನು ಅವಲಂಬಿಸಿರುವುದು ಸತ್ಯ. ಇವುಗಳಲ್ಲಿ ಅಕ್ಕಿ ಮತ್ತು ಗೋಧಿ ನೇರ ಆಹಾರವಾಗಿ ಬಳಕೆಯಾದರೆ, ಮುಸುಕಿನ ಜೋಳವು ಹೆಚ್ಚಾಗಿ ಪಶು ಆಹಾರವಾಗಿ ಬಳಕೆಯಾಗಿ ಆ ಮೂಲಕ ಮಾನವನ ಆಹಾರ ಸರಪಳಿಯನ್ನು ಸೇರುತ್ತದೆ. ಜಗತ್ತಿನ ಆಹಾರ ಸುರಕ್ಷತಾ ವ್ಯವಸ್ಥೆಯು ಈ ಮೂರು ಪ್ರಮುಖ ಬೆಳೆಗಳ ಮೇಲೆಯೇ ಅತಿಯಾಗಿ ಅವಲಂಬಿಸಿರುವುದು ಅತ್ಯಂತ ಆತಂಕಕಾರೀ ವಿಷಯ.

ವಿಜ್ಞಾನಿಗಳು ಭವಿಷ್ಯದ ಬಗ್ಗೆ ಅರ್ಥೈಸಿಕೊಳ್ಳುತ್ತಿರುವಂತೆ ವಾತಾವರಣದ ತಾಪಮಾನ ಏರಿಕೆಯಿಂದ ಆಗಬಹುದಾದ ಅತಿ ದೊಡ್ಡ ದುಷ್ಪರಿಣಾಮವೆಂದರೆ, ಭತ್ತ ಮತ್ತು ಗೋಧಿ ಬೆಳೆಗಳ ಇಳುವರಿ ಕಡಿಮೆಯಾಗುವುದು. ಜೊತೆಯಲ್ಲಿ ವಾರ್ಷಿಕ ಮಳೆಯ ಪ್ರಮಾಣ ಮತ್ತು ವಿವಿಧ ಹಂಗಾಮುಗಳಲ್ಲಾಗುವ ಮಳೆಯ ಹಂಚಿಕೆ ಯಾರೂ ನಿರೀಕ್ಷಿಸಲಾಗದ ರೀತಿಯಲ್ಲಿ ಏರುಪೇರು ಆಗಬಹುದೆನ್ನುವ ಸಂಶಯವಿದೆ. ಈಗಾಗಲೇ ಅದರ ಅನುಭವವಾಗುತ್ತಿದೆ. ಇದರಿಂದ ಒಂದು ವಿಶಿಷ್ಟ ರೀತಿಯಲ್ಲಿ ವಿಕಸನಗೊಂಡಿರುವ ನಮ್ಮ ಕೃಷಿ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗುವ ಸಂಭವವಿರುತ್ತದೆ. ಅತಿ ವೇಗದಲ್ಲಿ ಆಗಬಹುದಾದ ಈ ಬದಲಾವಣೆಗಳಿಗೆ ನಮ್ಮ ಕೃಷಿ ವ್ಯವಸ್ಥೆಯು ಹೊಂದಿಕೊಳ್ಳಲು ಕೆಲವು ವರ್ಷಗಳ ಸಮಯ ಹಿಡಿಯುತ್ತದೆ. ಆದರೆ, ಆಹಾರ ಸುರಕ್ಷತೆಯಂತಹ ಸೂಕ್ಷ್ಮ ವಿಷಯದಲ್ಲಿ ಈ ಸಮಯದಲ್ಲಿ ಆಗಬಹುದಾದ ದುರಂತಗಳನ್ನು ತಡೆದುಕೊಳ್ಳುವ ಶಕ್ತಿ ನಮ್ಮ ವ್ಯವಸ್ಥೆಗೆ ಇದೆಯೇ? ಎನ್ನುವ ಪ್ರಶ್ನೆ ಸಹಜ

ತಡವಾದರೂ ಸರಿ, ಈಗಲಾದರೂ ಎಚ್ಚೆತ್ತುಕೊಂಡು ಕೇವಲ ಒಂದೆರಡು ಬೆಳೆಗಳ ಮೇಲೆ ಅವಲಂಬಿತವಾಗಿರುವ ನಮ್ಮ ಆಹಾರ ಸುರಕ್ಷತಾ ವ್ಯವಸ್ಥೆಯು, ಸ್ಥಳೀಯವಾಗಿ ಅಧಿಕ ತಾಪಮಾನದಲ್ಲಿಯೂ ಸಹ ಬೆಳೆಯಬಹುದಾದ ಬಹುಬೆಳೆಗಳ ಆಧಾರದ ಮೇಲೆ ನಿಲ್ಲುವಂತೆ ಮಾಡಬೇಕಾಗಿದೆ. ನಮ್ಮ ಆಹಾರ ಪದ್ಧತಿಯಲ್ಲಿಯೂ ಸಹ ಅದಕ್ಕೆ ತಕ್ಕಂತೆ ಹಲವು ಬದಲಾವಣೆಗಳನ್ನು ಮಾಡಬೇಕಿದೆ

೧. ಸ್ಥಳೀಯವಾಗಿ ಇಳುವರಿಯಲ್ಲಿ ಸ್ಥಿರತೆಯನ್ನು ತೋರಿಸುವ ಬೆಳೆಗಳು: ರಾಗಿ, ಜೋಳ, ಸಜ್ಜೆ, ನವಣೆ ಮುಂತಾದ ಕಿರು (ಸಿರಿ) ಧಾನ್ಯದ ಬೆಳೆಗಳು ಹಾಗೂ ಹುರುಳಿ, ಅವರೆ, ಅಲಸಂದೆ ಉದ್ದು, ಹೆಸರು ಮುಂತಾದ ಬೇಳೆಕಾಳು ಬೆಳೆಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ವೈದ್ಯಕೀಯ ಮತ್ತು ಆಹಾರ ವಲಯಗಳಲ್ಲಿ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ ಹಾಗೂ ಸಣ್ಣ ಪ್ರಮಾಣದಲ್ಲಿ ಬೆಳೆದಾಗ ಕೆಲವು ನಿರ್ದಿಷ್ಟ ಮಾರುಕಟ್ಟೆಗಳಲ್ಲಿ ಉತ್ತೇಜನಕಾರೀ ಬೆಲೆಯ ಭರವಸೆಯೂ ಇದೆ. ಆದರೆ, ದೊಡ್ಡ ಪ್ರಮಾಣದಲ್ಲಿ ಇವುಗಳ ಉತ್ಪಾದನೆಯನ್ನು ಉತ್ತೇಜಿಸುವಂತಹ ವ್ಯವಸ್ಥೆಗಳು ಇನ್ನೂ ಬರಬೇಕಿದೆ. ಪ್ರಮುಖವಾಗಿ, ಈ ಬೆಳೆಗಳನ್ನು ಬೆಳೆಸಲು ಅಗತ್ಯ ಬೀಜಗಳನ್ನೂ ಇತರೆ ಪರಿಕರಗಳನ್ನೂ ಮುಂಗಡವಾಗಿ ನೀಡಿ, ಮೊದಲೇ ನಿಗದಿಪಡಿಸಿದ ಕೊಳ್ಳುವ ಬೆಲೆಗೆ ರೈತರಿಂದ ಕೊಂಡುಕೊಂಡು ಪಡಿತರ ವ್ಯವಸ್ಥೆಯಲ್ಲಿ ಸಾರ್ವಜನಿಕರ ಬಳಕೆಗೆ ಹಂಚುವ ಏರ್ಪಾಡು ಆಗಬೇಕು. ಇದಕ್ಕಾಗಿ ಸಿರಿಧಾನ್ಯಗಳ ಮಂಡಳಿಯ ರಚನೆಯ ಬಗ್ಗೆಯೂ ಸರ್ಕಾರವು ಆಲೋಚಿಸಬಹುದು

೨. ಆಕರ್ಷಕ ಬೆಲೆಗಳು ಬೇಕು: ಸಹಜವಾಗಿ ಈ ಧಾನ್ಯ ಹಾಗೂ ಬೇಳೆಕಾಳು ಬೆಳೆಗಳ ಎಕರೆವಾರು ಇಳುವರಿಯು ಕಡಿಮೆ ಇರುವುದರಿಂದ ರೈತರಿಗೆ ಈ ಬೆಳೆಗಳು ಲಾಭದಾಯಕವಾಗಬೇಕಾದರೆ, ಸಿರಿ ಧಾನ್ಯದ ಬೆಲೆಗಳು ಭತ್ತದ ಬೆಲೆಗಿಂತ ಕನಿಷ್ಠ ಎರಡು ಪಟ್ಟು ಹಾಗೂ ಬೇಳೆಕಾಳಿನ ಬೆಲೆಗಳು ಭತ್ತದ ಬೆಲೆಗಿಂತ ಕನಿಷ್ಠ ಮೂರು ಪಟ್ಟು ಅಧಿಕವಿರಬೇಕು

೩. ಅಧಿಕ ಉಷ್ಣಾಂಶದ ವಾತಾವರಣದಲ್ಲಿ, ಕಡಿಮೆ ಮಳೆಯಲ್ಲಿಯೂ ಸಹ ಸಫಲವಾಗಿ ಬೆಳೆಯಬಹುದಾದ ಈ ಬೆಳೆಗಳು ಭವಿಷ್ಯದ ತಾಪಮಾನ ಏರಿಕೆಯ ಸವಾಲಿಗೆ ಉತ್ತರವಾಗಬಲ್ಲ ಸಾಮರ್ಥ್ಯವನ್ನು ಹೊಂದಿರುವುದರಿಂದ ಇವುಗಳಲ್ಲಿ ಸೂಕ್ತ ತಳಿ ಅಭಿವೃದ್ಧಿ ಮಾಡಿ, ನಮ್ಮ ಕೃಷಿ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಇವುಗಳನ್ನು ಉಳಿಸಿಕೊಳ್ಳುವ ಜಾಣ್ಮೆಯನ್ನು ತೋರಬೇಕಾಗಿದೆ. ಪಡಿತರ ವಿತರಣೆಯಲ್ಲಿ ಈ ಆಹಾರ ಧಾನ್ಯಗಳನ್ನು ಹೆಚ್ಚು ಬಳಸಿ, ಕ್ರಮೇಣ ಅಕ್ಕಿ ಮತ್ತು ಗೋಧಿಯ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನಗಳಾಗಬೇಕು

೪. ಅತಿ ಮುಖ್ಯವಾಗಿ, ತಿನ್ನಲು ಸಿದ್ಧವಿರುವ ಸಂಸ್ಕರಿತ ಆಹಾರದ ಉತ್ಪಾದನೆಯಲ್ಲಿ ಈ ಧಾನ್ಯಗಳ ಪ್ರಮಾಣವನ್ನು ಹೆಚ್ಚು ಮಾಡುವ ಪ್ರಮಾಣಿಕ ಪ್ರಯತ್ನಗಳಾಗಬೇಕು. ಈ ಧಾನ್ಯಗಳನ್ನು ಬಳಸಿ ಸ್ಥಳೀಯವಾಗಿ ತಯಾರಿಸುವ ಅನೇಕ ರುಚಿಯಾದ ಮತ್ತು ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ನಗರ ಪ್ರದೇಶದ ಕೊಳ್ಳುಗರಿಗೆ ಆಕರ್ಷಕವಾಗಿ ಮುಟ್ಟಿಸುವ ಪ್ರಯತ್ನಗಳಾಗಬೇಕು. ಉತ್ತಮ ಆರೋಗ್ಯಕ್ಕೆ ರಹದಾರಿಯಾಗಿರುವ ಈ ಆಹಾರಗಳಿಗೆ ಸರಿಯಾದ ರೀತಿಯಲ್ಲಿ ಪ್ರಯತ್ನಿಸಿದರೆ, ಅಂತರ್ರಾಷ್ಟ್ರೀಯ ಮಾರುಕಟ್ಟೆಯನ್ನು ಪಡೆಯುವುದು ಸುಲಭ ಸಾಧ್ಯ.

೫. ಆಹಾರ ಪದ್ಧತಿಗಳಲ್ಲಿ ಮಾಂಸಾಹಾರ ಪ್ರಮುಖವಾಗಿದ್ದರೆ, ಮಾಂಸಾಹಾರದ ಉತ್ಪಾದನೆಗೆ ನೇರ ಬಳಕೆಗಿಂತ ೪ ರಿಂದ ೫ ಪಟ್ಟು ಹೆಚ್ಚು ಧಾನ್ಯಗಳ ಬಳಕೆಯಾಗುತ್ತದೆ. ಇದರಿಂದ ಕೃಷಿ ವ್ಯವಸ್ಥೆಯ ಮೇಲೆ ಹಾಗೂ ಆ ಮೂಲಕ ಪರಿಸರದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಮಾಂಸಾಹಾರದ ಸೇವನೆಯನ್ನು ಸಂಪೂರ್ಣವಾಗಿ ವರ್ಜಿಸದಿದ್ದರೂ, ಕನಿಷ್ಠಗೊಳಿಸಿ, ಪ್ರಮುಖವಾಗಿ ಸಸ್ಯಾಹಾರದ ಮೇಲೆ ಅವಲಂಬಿಸುವುದರಿಂದ ಜಾಗತಿಕ ತಾಪಮಾನದ ಏರಿಕೆಯನ್ನು ಕಡಿಮೆ ಮಾಡಬಹುದು. ಆಹಾರದಲ್ಲಿ ಹಣ್ಣು ತರಕಾರಿಗಳ ಅಧಿಕ ಸೇವನೆಯಿಂದ ಆಹಾರ ಧಾನ್ಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು

೬. ಸಂಸ್ಕರಿತ ಆಹಾರವು ಅನೇಕ ರೀತಿಯ ಅನುಕೂಲಗಳನ್ನು ಕೊಡುವುದಾದರೂ ಸಹ, ಸಂಸ್ಕರಣೆಗೆ, ಸಾಗಾಣಿಕೆಗೆ, ಮತ್ತು ಶೀತಲ ಗೃಹಗಳಲ್ಲಿ ಸಂಗ್ರಹಕ್ಕೆ ಅಧಿಕ ಪ್ರಮಾಣದ ಶಕ್ತಿಯ ಅವಶ್ಯಕತೆ ಇದೆ. ಸಾಧ್ಯವಾದಷ್ಟೂ ಹೆಚ್ಚಿನ ಪ್ರಮಾಣದಲ್ಲಿ ತಾಜಾ ತಯಾರಿಸಿದ ಆಹಾರದ ಬಳಕೆಯಿಂದಲೂ ಸಹ ಜಾಗತಿಕ ತಾಪಮಾನ ಏರಿಕೆಗೆ ಕಡಿವಾಣ ಹಾಕಬಹುದು.

ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟಲು ನಮ್ಮ ಕೃಷಿ ವ್ಯವಸ್ಥೆಯಲ್ಲಿಯೂ ಸಹ ಕೆಳ ಹೇಳಿದ ಅನೇಕ ಬದಲಾವಣೆಗಳನ್ನು ತರಬೇಕು

೧. ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡ್ ಅನ್ನು ಆದಷ್ಟೂ ಹೆಚ್ಚು ಸಾವಯವ ವಸ್ತುಗಳ ರೂಪಕ್ಕೆ ಪರಿವರ್ತಿಸಿ, ಮಣ್ಣಿನಲ್ಲಿ ಸಾವಯವ ಇಂಗಾಲದ ರೂಪದಲ್ಲಿ ಬಂಧಿಸಿಡಬೇಕು (ಇಂಗಾಲದ ಸೀಕ್ವೆಸ್ಟ್ರೇಶನ್). ಇದಕ್ಕೆ ಸಾವಯವ ಜೀವ ತೂಕದ (ಬಯೋಮಾಸ್) ಉತ್ಪಾದನೆಯು ಅಧಿಕವಾಗಬೇಕಲ್ಲದೇ, ಅದನ್ನು ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಧಿಸಿಡಲು ಸಹಕಾರಿಯಾಗುವ ಸಾರಜನಕ ಪೋಷಕಾಂಶವನ್ನು ಹೆಚ್ಚು ಹೆಚ್ಚಾಗಿ, ಸಾವಯವ ರೂಪದಲ್ಲಿ ಒದಗಿಸಬೇಕು. ಈ ಉದ್ದೇಶಕ್ಕೆ, ಬೆಳೆ ಯೋಜನೆಗಳಲ್ಲಿ ಬೇಳೆಕಾಳು ಬೆಳೆಗಳಿಗೆ ಹಾಗೂ ಹಸಿರು ಎಲೆ ಗೊಬ್ಬರದ ಬೆಳೆಗಳಿಗೆ ಪ್ರಮುಖ ಸ್ಥಾನವನ್ನು ನೀಡಿ, ಅವುಗಳಿಗೆ ಸಾರಜನಕದ ಕೊರತೆಯಾಗದಂತೆ ನೋಡಿಕೊಳ್ಳಬೇಕು

೨. ಕ್ಷೇತ್ರದಲ್ಲಿಯೇ ಉಪ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಹಾಗೂ ಸಾಕಷ್ಟು ಸಾವಯವ ಗೊಬ್ಬರಗಳನ್ನು ಉತ್ಪಾದಿಸಲು ಸಮಗ್ರ ಕೃಷಿ ಪದ್ಧತಿಯ ಅಳವಡಿಕೆ ಮಾಡಿಕೊಳ್ಳಬೇಕು.

೩. ಯಾವುದೇ ಕೃಷಿ ತ್ಯಾಜ್ಯವನ್ನು ಯಾವ ಕಾರಣಕ್ಕೂ ಬೆಂಕಿಯಿಟ್ಟು ಸುಡಬಾರದು. ಎಲ್ಲಾ ರೀತಿಯ ತ್ಯಾಜ್ಯಗಳನ್ನೂ ಅವುಗಳಿಗೆ ಸರಿಹೊಂದುವ ವಿಧಾನಗಳಲ್ಲಿ ಕಾಂಪೋಸ್ಟ್ ಮಾಡಿ ಕೃಷಿಯಲ್ಲಿ ಬಳಸಬೇಕು. ಒಂದೆಡೆ ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗಿ ದೊರೆಯುವ ನಗರ ತ್ಯಾಜ್ಯಗಳ ಬಳಕೆಗೆ ಹೆಚ್ಚಿನ ಮಹತ್ವ ಕೊಡಬೇಕು

೪. ಸಾವಯವ ಗೊಬ್ಬರಗಳನ್ನು ಈಗ ಸಾಮಾನ್ಯವಾಗಿ ಅನುಸರಿಸುತ್ತಿರುವ ಪದ್ಧತಿಯಂತೆ ಮಣ್ಣಿನ ಮೇಲೆ ಚೆಲ್ಲದೇ, ಸಾಲುಗಳಲ್ಲಿ ಮಣ್ಣಿನೊಳಕ್ಕೆ ಸೇರಿಸಿ ಮುಚ್ಚಬೇಕು

೫. ಕೃಷಿಯಲ್ಲಿ ಈಗ ನೀರು ಮತ್ತು ವಿದ್ಯುತ್ ಅನ್ನು ಮನಸೋ ಇಚ್ಛೆ ಬಳಸಲಾಗುತ್ತಿದೆ. ಈಗಾಗಲೇ ಇವುಗಳ ಕೊರತೆ ಎದ್ದು ಕಾಣುತ್ತಿದೆ; ಭವಿಷ್ಯದಲ್ಲಿ ಇನ್ನೂ ಹೆಚ್ಚು ದುರ್ಲಭವಾಗಲಿವೆ ಎಂದು ಹೇಳಲಾಗುತ್ತಿದೆ. ಈಗಿನಿಂದಲೇ, ಅತಿ ಕಡಿಮೆ ನೀರನ್ನೂ, ವಿದ್ಯುತ್ಅನ್ನೂ ಸಮರ್ಪಕವಾಗಿ ಬಳಸಿ ಕೃಷಿ ಉತ್ಪಾದನೆ ಮಾಡುವುದನ್ನು ರೂಢಿಸಿಕೊಳ್ಳಬೇಕು

ಈ ರೀತಿ ಕೃಷಿ ವ್ಯವಸ್ಥೆಯಲ್ಲಿ ಮತ್ತು ಆಹಾರ ಅಭ್ಯಾಸಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಭವಿಷ್ಯದ ಆಪತ್ತುಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ದೃಷ್ಟಿಯಿಂದ ಅವಶ್ಯಕ. ಇದೊಂದು ಬಹಳ ದೀರ್ಘವಾಗಿ ಮತ್ತು ಆಳವಾಗಿ ಚರ್ಚಿಸಬೇಕಾದ ವಿಷಯ, ಇಲ್ಲಿ ಕೇವಲ ಕೆಲವೇ ಪ್ರಮುಖ ಅಂಶಗಳ ಬಗ್ಗೆ ಸೂಚ್ಯವಾಗಿ ಹೇಳಲಾಗಿದೆ