ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಕೃಷಿರಂಗ

ಮನೆ ಬೆಳಗಿದ ಮಗಳು

ಡಾ. ಶಿವಕುಮಾರ ಕ. ರಡ್ಡೇರ
9900115524
ಡಾ. ಕೆ.ಸಿ.ವೀರಣ್ಣ
9448557668

ಕುಸುಮ : ಅವಾಗ್ಲೇ ನೂರ್ರುಪಾಯಿ ಕೊಟ್ಟಿದ್ನಲ್ಲ .... ಸಾಲ ಇಸ್ಕೊಂಡು ಕೊಟ್ಟಿದ್ದು ... ನನ್ನತ್ರ ದುಡ್ಡಿಲ್ಲ. (ಭವ್ಯಾ ಒಳಗಡೆ ಓಡುವಳು)

ಮಾಧವ : ನೀನು ಕೊಟ್ಟಿದ್ದು ಔಷಧಿಗೆ ಖರ್ಚಾಯ್ತಲ್ಲ

ಡಾಕ್ಟರು : ಈ ಟಾನಿಕ್ಕಿನ (ಬಾಟಲಿ ತಿರುಗಿಸಿ ನೋಡಿ) ೪೫ ರೂಪಾಯಿ ಅಷ್ಟೇ ...

ಅಜ್ಜಿ : ಲೇ ಕುಸ್ಮಾ ... ನಿಂಗಿನ್ನೂ ಗೊತ್ತಾಗ್ಲಿಲ್ವೇನೇ ... ಈ ಮನೆಹಾಳ ದುಡ್ಡನ್ನ ಎಂಡದಂಗಡಿಗೆ ಸುರ್ದು ಬಂದಿದಾನೆ. ಇವ್ನ ಕೈಗೆ ದುಡ್ ಕೊಡುಕ್ಕೆ ನಿಂಗೆ ಗ್ಯಾನ ನೆಟ್ಗಿರಬೇಕಿತ್ತು. (ಕುಸುಮ ಅಳ ತೊಡಗುವಳು. ಅಜ್ಜಿ ಮತ್ತು ಮಾಧವ ಪರಸ್ಪರ ದೂಷಣೆಯಲ್ಲಿ ತೊಡಗುವರು. ಡಾಕ್ಟರು ಚಿಂತಾಕ್ರಾಂತರಾಗಿ ನಿಲ್ಲುವರು. ಇದರ ನಡುವೆ ಭವ್ಯಾ ಟಾನಿಕ್ಕಿನ ಬಾಟಲಿಯನ್ನು ಎತ್ತಿಕೊಂಡು ಹೊರಗೋಡುವಳು.)

ಡಾಕ್ಟರು : ಅರೇ ... ಈ ಮಗು ಎಲ್ಲಿಗೆ ಓಡ್ತು?

ಕುಸುಮ : (ಹೊರಗೆ ಇಣುಕಿ ನೋಡಿ) ಸೈಕಲ್ ಹತ್ಕೊಂಡು ಎಲ್ಲಿಗೋ ಹೋಗಿ ಬಿಟ್ಟಳ್ಳಲ್ಲ. (ಎಲ್ಲರೂ ಒಬ್ಬರನ್ನೊಬ್ಬರು ನೋಡುತ್ತಾ ನಿಂತಿದ್ದರೆ ಡಾಕ್ಟರ್ ಕಿಟ್ಬ್ಯಾಗಿನಿಂದ ಎರಡು ಇಂಜೆಕ್ಷನ್ಗಳನ್ನು ತೆಗೆದು ಹಸುವಿಗೆ ನೀಡುವರು)

ಡಾಕ್ಟರು : (ಜೇಬಿನಿಂದ ದುಡ್ಡು ತೆಗೆದು ಕುಸುಮಳಿಗೆ ಕೊಡುತ್ತಾ) ನೀವೇ ಬೇಗ ಹೋಗೆ ಕ್ಯಾಲ್ಸಿಯಂ ಇಂಜೆಕ್ಷನ್ ತಗೊಂಬನ್ನಿ (ಕುಸುಮ ಅವರಿಗೆ ಕೈ ಮುಗಿದು ಹೊರಡಲನುವಾದಾಗ ಭವ್ಯಾ ಧಾವಿಸಿ ಬಂದು ಒಂದು ಬಾಟಲಿಯನ್ನು ಡಾಕ್ಟರ್ ಕೈಗೆ ಇಡುವಳು.)

ಡಾಕ್ಟರ್ : ಅರೇ, ನೀನೇ ತಂದು ಬಿಟ್ಯಾ ... ವೆರಿಗುಡ್ ... ವೆರಿಗುಡ್.

ಮಾಧವ : ನಿಂಗೆ ದುಡ್ಡು ಎಲ್ಲಿಂದ ಬಂತು?

ಡಾಕ್ಟರು : ಅದೆಲ್ಲಾ ವಿಚಾರಣೆ ಆಮೇಲೆ ನಡೀಲಿ. ಈಗ ಮೊದಲು ಹಸೂಗೆ ಇಂಜೆಕ್ಷನ್ ಕೊಡೋಣ ...

(ಕ್ಯಾಲ್ಸಿಯಂ ಬಾಟಲಿಯನ್ನು ಬಿಸಿ ನೀರಿನಲ್ಲಿ ಮುಳುಗಿಸಿ, ಅದಕ್ಕೆ ಡ್ರಿಪ್ಸೆಟ್ ಅಳವಡಿಸುವರು. ಹಸುವಿನ ಕುತ್ತಿಗೆಯ ರಕ್ತನಾಳಕ್ಕೆ ಡ್ರಿಪ್ ಹಾಕುವರು. ಬಾಟಲಿಯನ್ನು ತಲೆ ಕೆಳಗಾಗಿ ಹಿಡಿದಿರಬೇಕು. ಬಾಟಲಿ ಹಿಡಿದ ಕೈಯನ್ನು ಮೇಲಕ್ಕೆ ಎತ್ತಿ ಹಿಡಿದಿರಬೇಕು. ಡ್ರಿಪ್ ಪ್ರಾರಂಭಿಸಿದ ತುಸು ಹೊತ್ತಿನಲ್ಲೇ ಹಸುವಿನ ಪರಿಸ್ಥಿತಿ ಸುಧಾರಿಸುತ್ತಿರುವುದನ್ನು ಪಾತ್ರಧಾರಿಗಳು ಉದ್ಗಾರ ಮತು ಮುಖಭಾವದಿಂದ ವ್ಯಕ್ತಪಡಿಸಿದರು)

ಭವ್ಯಾ : ಅಮ್ಮಾ ... ನೋಡಮ್ಮಾ ... ಕಣ್ಣು ನೋಡಮ್ಮಾ ... ಅವಾಗ ನಿದ್ರೆ ಬಂದಂಗೆ ಮುಚ್ಕಂಡಿತ್ತಲ್ಲ, ಈಗ ಪಿಳಿಪಿಳಿ ಮಾಡ್ತಿದೆ.

ಅಜ್ಜಿ : ಜೊಳ್ಳಂತ ಗಂಜಳ ಉಯ್ದ್ಲು!

ಕುಸುಮ : ಕಿವಿ ಆಡಿಸ್ತಾ ಇದಾಳೆ ... ಹಂಗೆ ತಲೆ ಎತ್ತಕ್ಕೂ ನೋಡ್ತಿದಾಳೆ

ಡಾಕ್ಟರು : ತಲೆ ಎತ್ತಕ್ಕೆ ಬಿಡಬೇಡಿ ಒತ್ತಿ ಹಿಡ್ಕೊಳ್ಳಿ ... ಡ್ರಿಪ್ ಪೂರ್ತಿ ಮುಗೀಬೇಕು. ಮಧ್ಯದಲ್ಲಿ ಸಡನ್ನಾಗಿ ಎದ್ದುಬಿಟ್ರೆ ಮತ್ತೊಂದು ಸಲ ಸೂಜಿ ಚುಚ್ಚಬೇಕಾಗುತ್ತೆ.

ಅಜ್ಜಿ : ಬ್ಯಾಡ ಬ್ಯಾಡ ಇನ್ನೊಂದ್ಸಲ ಚುಚ್ಚಿದ್ರೆ ಅವಾಗ ಆರ್ದಂಗೆ ಇನ್ನೊಂದ್ಸಲ ರಕ್ತ ಚುಳ್ಳಂತ ಆರುತ್ತೆ. ಬ್ಯಾಡ ....ಮಾಧವ : ನೀನು ಸುಮ್ನಿರಮ್ಮಾ ... ಡಾಕ್ಟ್ರೀಗೆ ಗೊತ್ತಿಲ್ವಾ ... ಏನು ಮಾಡಬೇಕು ಅಂತ.

ಅಜ್ಜಿ : ಔದಪ್ಪಾ ಏನ್ಮಾಡಬೇಕೂಂತ ಡಾಕ್ಟ್ರಿಗೆ ಗೊತ್ತು. ಅದ್ರೆ ಏನು ಮಾಡಬಾರ್ದು ಅಂತ ನಿಂಗಿನ್ನೂ ಗೊತ್ತಿಲ್ವಲ್ಲಾ ಇಷ್ಟ್ ವಯಸ್ಸಾದ್ರೂ.

ಕುಸುಮ : ನೀವಿಬ್ರೂ ಸುಮ್ನಿರಿ ... ಸಾರ್.... ಇಂಜೆಕ್ಷನ್ ಮುಗೀತಾ ಬಂತು.

ಡಾಕ್ಟರು : ಹೌದು ಹಸೂನೂ ಪೂರ್ತಿ ಚೇತರಿಸಿಕೊಂಡ ಹಾಗೆ ಕಾಣ್ತಿದೆ.

ಕುಸುಮ : (ಕೈ ಮುಗಿದು) ನಾನು ಆಸೇನೇ ಬಿಟ್ಟಿದ್ದೆ ಡಾಕ್ಟ್ರೇ ... ನಮ್ ಹಸೂ ಜೀವ ಉಳಿಸಿಕೊಟ್ರಿ......

ಡಾಕ್ಟರು : ಜೀವ ಉಳಿಸಿದ್ದು ನಾನಲ್ಲ..... ನಿಮ್ಮ ಮಗಳು ... ಸಣ್ಣ ಹುಡುಗಿಯಾದ್ರೂ ಎಷ್ಟು ಚುರುಕಾಗಿದ್ದಾಳೆ. ಎಷ್ಟು ಬೇಗ ಹೋಗಿ ಇಂಜೆಕ್ಷನ್ ತಗೊಂಡು ಬಂದ್ಲು.

ಅಜ್ಜಿ : ಔದೂ .... ನಿನ್ನತ್ರ ದುಡ್ಡೆಲ್ಲಿಂದ ಬಂತು ಅದ್ನ ಮದ್ಲು ಹೇಳೇ ಭವ್ಯಾ .....

ಮಾಧವ : ಹೇಳೇ .... ದುಡ್ಡ ಎಲ್ಲಿಂದ ಬಂತು? ಸ್ಕೂಲಲ್ಲೇನಾದ್ರೂ ಕದ್ದು ಗಿದ್ದು ಮಾಡಿದ್ರೆ ನಿನ್ನ ಚಮ್ಡಾ ಸುಲ್ದು ಬಿಡ್ತೀನಿ.

ಡಾಕ್ಟರು : ಛೇ ... ಈ ಮಗು ಅಂಥಾ ಕೆಲಸ ಮಾಡೋ ಹಂಗೆ ಕಾಣುತ್ತಾ ನಿಮ್ಗೆ !

ಭವ್ಯ : ನಾನೇನೂ ಕದ್ದಿಲ್ಲ. ನನ್ನತ್ರ ದುಡ್ಡು ಇತ್ತು. ಅದರಲ್ಲಿ ತಗಂಬಂದೆ.

ಮಾಧವ : ಅದೇ ... ನಿನ್ನತ್ರ ದುಡ್ಡ ಹೆಂಗ್ ಬಂತು?

ಭವ್ಯ : ಹೊಸ ಸ್ಕೂಲ್ ಬ್ಯಾಗ್ ತಗೋ ಅಂತ ಮಾವ ಅವತ್ತು ದುಡ್ಡ ಕೊಟ್ಟಿದ್ರು. ಅದರಲ್ಲಿ ತಗಂಬಂದೆ.

ಕುಸುಮ: ಸುಮ್ಸುಮ್ನೆ ಅವಳಿಗೆ ಏನೇನೋ ಅಂದ್ರಲ್ಲ ನೀವು.

ಅಜ್ಜಿ : ತಾನು ಕಳ್ಳ ಪರರನ್ನ ನಂಬ ಅಂದ್ರೆ ಇದೇಯಾ ಮತ್ತೆ ! (ಮಾಧವನ್ನು ಕುರಿತು) ನೋಡೋ ... ನೋಡಿ ಕಲ್ತುಕೊಳ್ಳೋ ... ಇಷ್ಟ ಚಿಕ್ಕ ಉಡುಗಿಗೆ ಇರೋ ಬುದ್ಧಿ ನಿಂಗೆ ಇಲ್ಲದೆ ಹೋಯ್ತಲ್ಲ.... ಜಾಣೆ .... ನಮ್ಮಮ್ಮ .... ಜಾಣೆ ಕಣೆ ನೀನು. (ಅಜ್ಜಿ ಭವ್ಯಾಳನ್ನು ಬಾಚಿ ತಬ್ಬಿ ಮುದ್ದಿಸುವಳು.)

<<<<<<<<< ಮುಕ್ತಾಯ >>>>>>>>>