ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಸಾವಯವ ಸರದಾರರು

ಅರುಣಕುಮಾರ್ ವಿ. ಕೆ
9449623275
1

ಸಾಲ ಬೇಡದೆ, ಅನುದಾನ ಬಯಸದೆ, ದೇಣಿಗೆ ಸ್ವೀಕರಿಸದೆ, ವೃದ್ಧಾಪ್ಯ ವೇತನಕ್ಕೆ ಹಂಬಲಿಸದೆ, ಸಹಾಯ ಧನ ನಿರೀಕ್ಷಿಸದೆ, ಠೇವಣಿ-ಬಡ್ಡಿ-ಇನ್ಷೂರೆನ್ಸ್ ಯಾವುದೂ ಇಲ್ಲದೆ ಬದುಕಬಹುದೇ? ಅದೂ ಕೇವಲ ಎರಡೆಕ್ರೆ ಹತ್ತೊಂಬತ್ತು ಗುಂಟೆಯ ಆಹಾರ ಬೆಳೆಗಳ ಕೃಷಿಯಲ್ಲಿ ಇದೆಲ್ಲ ಸಾಧ್ಯ ಎಂದು ಸಾಧಿಸಿ ತೋರಿಸಿದ್ದು ಮುಧೋಳದ ಮಾತಾ ರುಕ್ಮಿಣಿದೇವಿ ವಾತ್ಸಲ್ಯ ಧಾಮ ಆಶ್ರಮ.ಮುಧೋಳದ, ಮುಧೋಳ ಮಹಾಲಿಂಗಪುರ ರಸ್ತೆಯಲ್ಲಿ ಎರಡು ಕಿ.ಮೀ. ಕ್ರಮಿಸಿ ಎಡಕ್ಕೆ ತಿರುಗಿದರೆ ವಾತ್ಸಲ್ಯ ಧಾಮ ಆಶ್ರಮ ಕಾಣುತ್ತದೆ.

ಈ ಆಶ್ರಮಕ್ಕೆ ಹೊಂದಿಕೊಂಡಂತೆ ಅಂಗೈಯಷ್ಟಗಲದ ಕೃಷಿಭೂಮಿ, ಹಲವು ಬೆಳೆಗಳು, ತೀರಾ ವಿಶಾಲವಲ್ಲದ ಮಣ್ಣಿನ ಲೇಪನದ ಮನೆ, ಈ ಮನೆಗೆ ಹೊಂದಿಕೊಂಡಂತಿರುವ ಕೊಟ್ಟಿಗೆಯಿದ್ದು ನಾಲ್ಕು ಹಸುಗಳನ್ನು ಕಾಣಬಹುದು. ಈ ಧಾಮದ ಹಿರಿಯ ಜೀವಿಗಳಾದ ಸೇವಾನಂದ, ಮೀರಾ ಕೊಪ್ಪೀಕರ್, ನಾರಾಯಣ್, ರಮೇಶ ಇವರುಗಳು ಇರುವ ಅಲ್ಪಭೂಮಿಯಲ್ಲೆ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆದು ಜನರು ನಿಬ್ಬೆರಗಾಗುವಂತೆ ಮಾಡಿದ್ದಾರೆ.

ಇಂದು ಕೃಷಿರಂಗ ಸೋಲುತ್ತಿದೆ. ಬೀಜದಿಂದಲ್ಲ, ಗೊಬ್ಬರದಿಂದಲ್ಲ, ನೀರಿನಿಂದಲ್ಲ. ಮೂಲಸಿದ್ಧಾಂತದ ಅಂಗವಿಕಲತೆಯಿಂದ ಎಂಬುದು ಈ ನಾಲ್ವರ ಆಶಯವಾಗಿದೆ. ಸೈದ್ಧಾಂತಿಕವಾಗಿ ಗಾಂಧಿ-ವಿನೋಬಾ ಭಾವೆಯವರ ಚಿಂತನೆಗಳನ್ನು ಅಳವಡಿಸಿಕೊಂಡಿದ್ದು, ಅವರ ಚಿಂತನೆಗಳ ನೆಲೆಯಲ್ಲಿ ಕೃಷಿಯನ್ನು ಮಾಡುತ್ತಿದ್ದಾರೆ. ಇವರು ಆಶ್ರಮದ ಹಿತ್ತಲಲ್ಲಿ ಒಂದೆಕ್ರೆ, ಮುಂದೆ ಒಂದೆಕ್ರೆ ಕೃಷಿಗೆ ಮೀಸಲಿಟ್ಟಿದ್ದಾರೆ. ಇದರಲ್ಲಿ ಭತ್ತ, ಗೋಧಿ, ಸದಕ, ಗೋವಿನ ಜೋಳ, ಬಿಳಿ ಜೋಳ, ರಾಗಿ, ಶೇಂಗಾ, ಹೆಸರುಕಾಳು, ಸೋಯಾಅವರೆ, ಅಲಸಂದೆ, ಕಡಲೆ, ಉದ್ದು, ಈರುಳ್ಳಿ, ಬೆಳ್ಳುಳ್ಳಿ, ಧನಿಯಾ, ಸಾಸಿವೆ, ಅರಿಶಿನದ ಬೆಳೆಗಳೊಂದಿಗೆ ತರಕಾರಿ ಬೆಳೆಗಳಾಗಿ ಬದನೆ, ಬೆಂಡೆ, ಮೂಲಂಗಿ, ಗಜ್ಜರಿ, ಅವರೆ(ವಿವಿಧ ಪ್ರಕಾರದ್ದು) ಅಲಸಂದೆ, ಬಾಳೇಕಾಯಿ, ನುಗ್ಗೆ, ಸಿಹಿಕುಂಬಳ, ಬೂದುಗುಂಬಳ, ಹಾಗಲ, ಸೋರೆಕಾಯಿ, ಟೊಮ್ಯಾಟೋ, ಪಾಲಕ್, ರಾಜಗೀರ, ಮೆಂತ್ಯ ಇತ್ಯಾದಿಗಳನ್ನು ಬೆಳೆಯುತ್ತಿದ್ದಾರೆ. ಅಲ್ಲದೇ, ಪಪ್ಪಾಯ, ಬಾಳೆ, ದಾಳಿಂಬೆ, ಪೇರಲೆ, ರಾಮಫಲ, ಸೀತಾಫಲ, ಮಾವು, ತೆಂಗು, ಲಿಂಬೆ ಮುಂತಾದ ತೋಟಗಾರಿಕಾ ಬೆಳೆಗಳನ್ನು ಸಹ ಬೆಳೆಯುತ್ತಿದ್ದಾರೆ.

ಇವರು ಬೆಳೆಗಳ ಉಳಿಕೆಗಳು ಹಸುಗಳಿಗೆ ಆಹಾರವಾಗುವಂತೆ ನೋಡಿಕೊಳ್ಳುತ್ತಾರೆ. ಭೂಮಿಯ ಉತ್ಪಾದನಾ ಶಕ್ತಿ ಹೆಚ್ಚುವಂತೆ ಬೆಳೆಗಳ ಆಯ್ಕೆ ಇವರ ವಿಶೇಷತೆಯಾಗಿದೆ. ಇವರಲ್ಲಿ ಎತ್ತುಗಳಿಲ್ಲ, ಉಳುಮೆಗೆ ಹೊರಗಿನವರಿಂದಲೇ ಬೇಸಾಯ ಮಾಡಿಸುತ್ತಿದ್ದು, ಉಳಿದಂತೆ ಸಣ್ಣ ಪ್ರಮಾಣದ ಉಳುಮೆಗೆ ಮತ್ತು ಕಳೆ ಸವರಲು ಮಾನವ ಚಾಲಿತ ಒಂದು ಚಕ್ರದ ಸೈಕಲ್ ಯಂತ್ರವನ್ನು ಬಳಸುತ್ತಿದ್ದಾರೆ.

ಇವರಲ್ಲಿ ಗೋಬರ್ ಅನಿಲ ಸ್ಥಾವರವಿದೆ. ಹೀಗಾಗಿ ಅಡುಗೆ ಮಾಡಲು ಸಮಸ್ಯೆ ಇಲ್ಲ. ಸುತ್ತ ಬೆಳೆಸಿರುವ ಗ್ಲಿರಿಸಿಡಿಯಾ ಸೊಪ್ಪನ್ನು ಗೊಬ್ಬರಕ್ಕೆ ಬಳಸುತ್ತಿದ್ದು, ಇದರ ಟೊಂಗೆಗಳನ್ನು ಉರುವಲಾಗಿ ಸಹ ಬಳಸುತ್ತಿದ್ದಾರೆ.ಇವರ ಕೃಷಿ ಕ್ಷೇತ್ರಕ್ಕೆ ಕೃಷಿ ಇಲಾಖೆಯ ಅನೇಕ ಅಧಿಕಾರಿಗಳು ಭೇಟಿಕೊಟ್ಟಿದ್ದಾರೆ. ಇಲ್ಲಿನ ಕೃಷಿಯನ್ನು ಮೆಚ್ಚಿದ್ದಾರೆ. ಸಾವಯವ ಕೃಷಿಯಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ ಎಂಬುದು ಇವರ ಸಿದ್ಧಾಂತವಾಗಿದೆ. ಸಾವಯವ ಕೃಷಿ ಉತ್ಪನ್ನಗಳಿಗೆ ಭಾರಿ ಬೇಡಿಕೆ, ಲಾಭ ಜಾಸ್ತಿ, ಸಾವಯವ ಕೃಷಿಯಲ್ಲಿ ಖರ್ಚು ಕಡಿಮೆ, ರಾಸಾಯನಿಕ ಕೃಷಿಗಿಂತ ಸಾವಯವ ಕೃಷಿ ಹೆಚ್ಚು ಶಾಶ್ವತ ಎಂಬ ಸತ್ಯವನ್ನು ಅರಿತು ಅಳವಡಿಸಿಕೊಂಡು, ಇತರರಿಗೆ ಮಾದರಿಯಾಗಿದ್ದಾರೆ.

7

ಇಂದು ಯಾವ ಕ್ಷೇತ್ರದಲ್ಲಿ ಆತ್ಮವಿಕಾಸವಾಗಬೇಕಿತ್ತೋ ಆ ಕ್ಷೇತ್ರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ಕಾರಣ? ಕೃಷಿಕ ಎಂಬ ಪದವನ್ನು ಕೇವಲ ’ಬೆಳೆ ತೆಗೆಯುವವನು’ ಎಂಬ ಅರ್ಥಕ್ಕೆ ಸೀಮಿತಗೊಳಿಸಿರುವುದು. ಕೃಷಿ ಬೇರೆ, ಕೃಷಿ ಜೀವನ ಬೇರೆ ಎಂದು ಬೇರ್ಪಡಿಸಿರುವುದು ಎನ್ನುವ ಸೀಮಿತ ಅರ್ಥ ಕಲ್ಪಿಸಿದ್ದಾರೆ. ಆದರೆ ಜೀವನ ಪ್ರಾಕೃತಿಕ ಚೌಕಟ್ಟಿನ ನಿಲುವುಗಳಿಗೆ ಹತ್ತಿರವಾದಾಗ ಕೃಷಿಯೂ ಕೂಡ ಬದುಕಿಗೆ ತೀರಾ ಸಮೀಪವಾಗುತ್ತದೆ ಎಂದು ಸೈದ್ಧಾಂತಿಕ ನೆಲೆಯ ತತ್ವವನ್ನು ನಮ್ಮ ಮುಂದೆ ಹರಿಯಬಿಡುತ್ತಾರೆ.

ಇಂತಹ ಸಾವಯವ ಕೃಷಿ ಸಾಧಕರು ಹಾಗೂ ಆಧ್ಯಾತ್ಮಿಕ ಸಾಧಕರನ್ನೂ ನೀವು ನೋಡಬೇಕೆಂದಲ್ಲಿ ಮುಧೋಳ ತಾಲ್ಲೂಕಿನ ವಾತ್ಸಲ್ಯಧಾಮ ಆಶ್ರಮಕ್ಕೆ ಒಮ್ಮೆ ಭೇಟಿ ಕೊಡಿ.