ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ನಾಟಿಪಶುವೈದ್ಯ

ನಾಟಿಪಶುವೈದ್ಯ: ಉಳುಮೆ ರಾಸುಗಳ ಹೆಗಲು ಬಾವು ಹತೋಟಿ

image_
ಡಾ. ರವಿಕುಮಾರ್, ಪಿ
9008598832

ಯಾಂತ್ರೀಕೃತ ಬೇಸಾಯವನ್ನು ಅವಲಂಬಿಸಿದ್ದರೂ, ಕೃಷಿಯಲ್ಲಿನ ಕೆಲವು ವಿಶೇಷ ಕೆಲಸಗಳಿಗೆ ಜಾನುವಾರುಗಳ ಬಳಕೆ ಅನಿವಾರ್ಯ ಮತ್ತು ಮಿತವ್ಯಯ ಕೂಡ. ಹೀಗೆ ರೈತರ ಪಾಲಿಗೆ ವರದಾನವಾಗಿ ಅವರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ರಾಸುಗಳು ಆಗಿಂದಾಗ್ಯೆ ಹೆಗಲು ಬಾವಿಗೆ ತುತ್ತಾಗುವುದು ಸಾಮಾನ್ಯ. ಅಂತಹ ರಾಸುಗಳ ಹೆಗಲು ಊದಿಕೊಂಡು ನೋವಿನಿಂದ ಕೂಡಿರಬಹುದು. ಕೆಲವೊಮ್ಮೆ ಗಾಯಗಳೂ ಆಗಿ ಜಾನುವಾರುಗಳು ತೀವ್ರ ವೇದನೆ ಅನುಭವಿಸಬಹುದು. ಆಡು ಭಾಷೆಯಲ್ಲಿ ಹೆಗಲು ಬೇನೆ, ಹೆಗಲು ಬಾವು, ಬಟ್ಟ ಹೆಗಲು, ಹೆಗಲೂತ ಹೀಗೇ ಇನ್ನೂ ಅನೇಕ ಹೆಸರುಗಳಿಂದ ಕರೆಯಲ್ಪಡುವ ಈ ರೋಗ ರೈತರಿಗೆ ಚಿರಪರಿಚಿತ.

ಹೆಗಲುಬಾವಿಗೆ ಸಾಮಾನ್ಯ ಕಾರಣಗಳು:

3

ಎತ್ತುಗಳ ಎತ್ತರದಲ್ಲಿ ಅಸಮಾನತೆಯಿದ್ದಾಗ ನೊಗ ಏರುಪೇರಾಗುವುದರಿಂದ ಒಂದು ರಾಸಿನ ಮೇಲೆ ತೀವ್ರ ಒತ್ತಡವುಂಟಾದಾಗ ಅಡಿಕೆ ಮುಂತಾದ ತೋಟಗಳಲ್ಲಿ ಮರಗಳ ನಡುವಿನ ಅಂತರ ಕಡಿಮೆಯಿದ್ದಾಗ ರಾಸುಗಳನ್ನು ಉಳುಮೆ ಮತ್ತಿತರ ಕೆಲಸಗಳಿಗೆ ಬಳಸಿದಾಗ ಕೆಲವೊಮ್ಮೆ ಜಾನುವಾರುಗಳನ್ನು ಎಡಬಿಡದ ದುಡಿಮೆಗೆ ಈಡು ಮಾಡಿದಾಗ ಹೆಗಲು ಬಾವು ಬರುವುದು. ಒಟ್ಟಿನಲ್ಲಿ ಹೆಗಲುಬಾವಿಗೆ ನಮ್ಮ ನಿರ್ಲಕ್ಷ್ಯವೇ ಪ್ರಮುಖ ಕಾರಣ. ನಮಗಾಗಿ ದುಡಿಯುವ, ಜಾನುವಾರುಗಳನ್ನು ಅವುಗಳಿಗೆ ತೊಂದರೆಯಾಗದ ರೀತಿ ಕೆಲಸಕ್ಕೆ ಬಳಸಿಕೊಂಡರೆ ಈ ಸಮಸ್ಯೆಯನ್ನು ಬಹುಪಾಲು ನಿವಾರಿಸಬಹುದು.

ಹೆಗಲು ಬಾವಿನ ಲಕ್ಷಣಗಳು:

ಆರಂಭದಲ್ಲಿ ಒರಟೊರಟಾಗಿ ಕಾಣುವ ಹೆಗಲಿನಲ್ಲಿ ಇದ್ದಕ್ಕಿದ್ದಂತೆ ಊತ ಕಾಣಿಸಿಕೊಂಡು ಜಾನುವಾರುಗಳು ನೋವಿನಿಂದ ನರಳುತ್ತವೆ. ಕೆಲವೊಮ್ಮೆ ಕೆಲವೇ ಗಂಟೆಗಳ ಅವಧಿಯಲ್ಲಿ ಹೆಗಲಿನ ಊತ ತೀವ್ರಗೊಂಡು ರೈತನ ಗಾಬರಿಗೆ ಕಾರಣವಾಗುತ್ತದೆ. ಹೆಗಲು ಬಾವಿನ ಸಾಮಾನ್ಯ ಲಕ್ಷಣಗಳು ಕಾಣಿಸಿದ ನಂತರವೂ ರಾಸುಗಳಿಗೆ ವಿಶ್ರಾಂತಿ ನೀಡದಿದ್ದಲ್ಲಿ ಹೆಗಲು ಗಾಯಬಿದ್ದು ರಾಸುಗಳು ನಿತ್ರಾಣಗೊಳ್ಳುವುವು. ಒಮ್ಮೆ ಗಾಯ ಅಥವಾ ಕುಳಿ ಬಿದ್ದರೆ ಅಂತಹಾ ರಾಸುಗಳಲ್ಲಿ ಹೆಗಲು ಬಾವು ವಾಸಿಯಾಗುವುದು ಕಷ್ಟ. ಗಾಯದಿಂದ ರಕ್ತ, ಕೀವು ಸುರಿಯಬಹುದು ಹಾಗೂ ಗಾಯದ ಮೇಲೆ ಹಿಪ್ಪೆ ಕೂತು ಹುಳುಗಳೂ ಆಗಬಹುದು.

7

ಹೆಗಲು ಬಾವು ಬಾರದಂತೆ ಏನು ಮಾಡಬೇಕು?

ಮೊದಲೇ ತಿಳಿಸಿದಂತೆ ನಮ್ಮ ನಿರ್ಲಕ್ಷ್ಯವೇ ರಾಸುಗಳ ಹೆಗಲುರಿಗೆ ಪ್ರಮುಖ ಕಾರಣವಾದ್ದರಿಂದ ರೈತರು ತಮ್ಮ ಉಳುಮೆ ರಾಸುಗಳ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕು. ಅವುಗಳನ್ನು ಪ್ರೀತಿಯಿಂದ, ಮಾನವೀಯ ಮೌಲ್ಯಗಳಿಂದ, ಪ್ರಾಣಿ ಕಲ್ಯಾಣದ ಅಂಶಗಳಿಗೆ ಒತ್ತುಕೊಟ್ಟು ಸಾಕಬೇಕು. ಅವುಗಳಿಗೆ ನೀಡುವ ಕೆಲಸ ಹೊರೆಯಾಗದಂತೆ ನೋಡಿಕೊಳ್ಳಬೇಕು. ಕೆಲಸದ ಮಧ್ಯೆ ಸಾಕಷ್ಟು ವಿಶ್ರಾಂತಿ ನೀಡಬೇಕು. ಎತ್ತಿನ ಜೋಡಿಯಲ್ಲಿ ಸಮತೋಲನ ಕಾಪಾಡಬೇಕು. ತೋಟಗಳಲ್ಲಿ, ಪಾತಳಿಗಳಲ್ಲಿ, ಗದ್ದೆಗಳಲ್ಲಿ ಕೆಲಸ ಮಾಡಿಸುವಾಗ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಒಂದೊಮ್ಮೆ ಹೆಗಲು ಬಾವಿನ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ರಾಸುಗಳಿಗೆ ವಿಶ್ರಾಂತಿ ನೀಡಿ ಸೂಕ್ತ ರೀತಿಯಲ್ಲಿ ಉಪಚರಿಸಬೇಕು. ಬಾವು/ಗಾಯ ವಾಸಿಯಾಗುವವರೆಗೆ ಯಾವುದೇ ಕಾರಣಕ್ಕೂ ರಾಸುಗಳನ್ನು ಕೆಲಸಕ್ಕೆ ಬಳಸಬಾರದು.

ಮನೆಮದ್ದುಗಳು:

  • ಒಂದು ಪಟ್ಟೆ ಲೋಳೆಸರಕ್ಕೆ ೨-೩ ಗ್ರಾಂನಷ್ಟು ಸುಣ್ಣ ಬೆರೆಸಿ ಕಲ್ಲಿನ ಮೇಲೆ ಚೆನ್ನಾಗಿ ಅರೆದು ತಯಾರಿಸಿದ ಲೇಪವನ್ನು ದಿನಕ್ಕೆರಡು ಬಾರಿಯಂತೆ ಹೆಗಲಿಗೆ ಲೇಪಿಸುತ್ತಾ ಬರಬೇಕು. ಗಾಯವಿಲ್ಲದೆ ಹೆಗಲು ಬರೀ ಊದಿದ್ದ ಪಕ್ಷದಲ್ಲಿ ಇದು ಹೆಚ್ಚು ಪರಿಣಮಕಾರಿ. ಬಾವು ಸಂಪೂರ್ಣವಾಗಿ ವಾಸಿಯಾಗುವವರೆಗೂ ಪ್ರತಿನಿತ್ಯ ಹೊಸದಾಗಿ ಲೇಪ ತಯಾರಿಸಿ ಹೆಗಲಿಗೆ ಹಚ್ಚಬಹುದು.
  • ನೂರು ಗ್ರಾಂ ಹಸುವಿನ ತುಪ್ಪಕ್ಕೆ ಒಂದು ಚಮಚ ಅರಿಷಿಣ ಸೇರಿಸಿ ಚೆನ್ನಾಗಿ ಕಲೆಸಿ ರಾಸುಗಳ ಹೆಗಲಿಗೆ ದಿನಕ್ಕೆರಡು ಬಾರಿಯಂತೆ ಬಾವು ವಾಸಿಯಾಗುವವರೆಗೂ ಹಚ್ಚಬಹುದು
  • ದೇವದಾರು ಗಿಡದ ಎಲೆಗಳನ್ನು ಅರೆದು ತಯಾರಿಸಿದ ಲೇಪವನ್ನು ಒಂದೇ ದಿನ ಎರಡು ಬಾರಿ ಹೆಗಲಿಗೆ ಹಚ್ಚುವುದರಿಂದಲೂ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
  • ಬೆಚ್ಚನೆಯ ನೀರಿನಲ್ಲಿ ಒಂದು ಹಿಡಿ ಸಾಸಿವೆ ಅರೆದು ಹೆಗಲು ಬಾವಿಗೆ ಲೇಪಿಸುವುದು ಸಹಾ ಉಪಯುಕ್ತ.
  • ಗ್ರಂಥಋಣ: ಬೈಫ್ ಸಂಸ್ಥೆಯ ಪ್ರಕಟಣೆ: ಮೂಲಿಕಾ ಪಶುವೈದ್ಯ