ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಔಷಧಿ ಸಸ್ಯಗಳು

ದೊಡ್ಡಪತ್ರೆ

image_
ಡಾ. ಯಶಸ್ವಿನಿ ಶರ್ಮ
9535228694
1

ವೈಜ್ಞಾನಿಕವಾಗಿ ’ಕೋಲಿಯಸ್ ಆರೋಮ್ಯಾಟಿಕಸ್’ ಅಥವಾ ’ಪ್ಲೆಕ್ಟ್ರಾಂಥಸ್ ಆಂಬಾಯ್ನಿಸ್’ ಎಂದು ಕರೆಯಲ್ಪಡುವ ಈ ಗಿಡ ’ಲಾಮಿಯೇಸೀ’ ಕುಟುಂಬವರ್ಗಕ್ಕೆ ಸೇರಿದೆ. ಇದನ್ನು ಹಿಂದಿಯಲ್ಲಿ ’ಅಜವೈನ್ ಪತ್’ ಎನ್ನುತ್ತಾರೆ. ಮಧ್ಯಮ ಗಾತ್ರದ ಈ ಗಿಡದ ಎಲೆಯನ್ನು ಹಲವಾರು ಮನೆಮದ್ದುಗಳಲ್ಲಿ ಉಪಯೋಗಿಸುತ್ತಾರೆ. ಎಲೆಯು ಮೆದುವಾಗಿ ಸ್ವಲ್ಪ ದಪ್ಪವಾಗಿದ್ದು, ಅಜವಾನದ ಪರಿಮಳವನ್ನು ಸೂಸುತ್ತದೆ. ಮಲೆನಾಡಿನಲ್ಲಿ ಇದನ್ನು ’ಸಾಂಬಾರ ಸೊಪ್ಪು’ ಎಂದು ಕರೆಯುತ್ತಾರೆ. ಎಲ್ಲರೂ ತಮ್ಮ ಔಷಧೀಯ ವನದಲ್ಲಿ ಅಥವಾ ಮನೆಯಂಗಳದಲ್ಲಿ ಬೆಳೆಸಲೇಬೇಕಾದ ಬಹು-ಉಪಯೋಗಿ ಸಸ್ಯ ’ದೊಡ್ಡ ಪತ್ರೆ’. ಔಷಧಿ ಗಿಡದ ಜೊತೆಗೆ ಇದೊಂದು ಸುಗಂಧ ಸಸ್ಯವೂ ಹೌದು. ಎಲೆಯು ’ರೋಸ್ಮೆರಿನಿಕ್ ಆಸಿಡ್’, ’ಕ್ಲೋರೋಜೆನಿಕ್ ಆಸಿಡ್’ ಮತ್ತು ’ಕೆಫಿಕ್ ಆಸಿಡ್’ ಗಳನ್ನು ಹೊಂದಿದ್ದು ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರನಾಶಕ ಗುಣಗಳನ್ನು ಹೊಂದಿದೆ. ಇದು ಹೇರಳವಾದ ಆಂಟಿ ಆಕ್ಸಿಡಂಟ್ ಗುಣಗಳನ್ನು ಕೂಡ ಹೊಂದಿದೆ. ಇದರ ಸುಗಂಧ ತೈಲದಲ್ಲಿರುವ ’ಕಾರ್ವಕ್ರಾಲ್’, ’ಥೈಮಾಲ್’ ಮತ್ತು ’ಬಿಟಾ-ಕ್ಯಾರಿಯೋಫಿಲ್ಲೀನ್’ ಅಂಶಗಳು ಸುವಾಸನೆಗೆ ಕಾರಣವಾಗಿವೆ.

  • ದೊಡ್ಡಪತ್ರೆಯನ್ನು ಮಾಂಸ ಮತ್ತು ಚಿಕನ್ ಖಾದ್ಯ ತಯಾರಿಕೆಯಲ್ಲಿ ಬಳಸುತ್ತಾರೆ. ಇದು ಸುವಾಸನೆ ಕೊಡುವುದಲ್ಲದೇ, ಮಾಂಸಾಹಾರ ಚೆನ್ನಾಗಿ ಜೀರ್ಣವಾಗಲು ಸಹಾಯಮಾಡುತ್ತದೆ.
  • ೨ರಿಂದ ೩ ಮಧ್ಯಮ ಗಾತ್ರದ ಎಲೆಯನ್ನು ಬಿಡಿಸಿ ಚೆನ್ನಾಗಿ ತೊಳೆದು ಅದನ್ನು ಉಜ್ಜಿ ತೆಗೆದ ರಸವನ್ನು ಸೇವಿಸುವುದರಿಂದ ದೀರ್ಘಕಾಲದ ಅಲರ್ಜಿ ನಿವಾರಣೆಯಾಗುತ್ತದೆ.
  • ಇದು ಪಿತ್ತನಾಶಕವಾಗಿದ್ದು, ಇದರ ಎಲೆ ಅಥವಾ ಎಲೆಯ ರಸವನ್ನು ಸೇವಿಸುವುದರಿಂದ ಪಿತ್ತ, ವಾಂತಿ ಇಲ್ಲವೇ ಪಿತ್ತದಿಂದ ಮೈಮೇಲೆ ಬರುವ ಗಂಧೆ, ಕೆಂಪುಗುಳ್ಳೆಗಳು ಹಾಗೂ ತುರಿಕೆ ಶಮನವಾಗುತ್ತದೆ.
  • ಮಕ್ಕಳಿಗೆ ಕಫ ಇಲ್ಲವೇ ಶೀತ ಆದಲ್ಲಿ, ಮೂಗು ಸೋರುತ್ತಿದ್ದರೆ ಅರ್ಧ ಚಮಚ ಜೇನುತುಪ್ಪದ ಜೊತೆ ೪ ಹನಿ ದೊಡ್ಡಪತ್ರೆ ರಸವನ್ನು ನೀಡಿದರೆ ಕಫ ಕಡಿಮೆಯಾಗುತ್ತದೆ.
  • ನೆಗಡಿ, ಕೆಮ್ಮು, ಗಂಟಲುನೋವು, ಅಜೀರ್ಣ ಇತ್ಯಾದಿಗಳಿಗೆ ದೊಡ್ಡಪತ್ರೆ ಮನೆಮದ್ದಾಗಿದ್ದು, ಅತೀಶೀಘ್ರದಲ್ಲಿ ಪರಿಣಾಮ ನೀಡುತ್ತದೆ.
  • ಒಂದು ಇಲ್ಲವೇ ಎರಡು ಎಲೆಯನ್ನು ಅಗೆದು ತಿನ್ನುವುದರಿಂದ ಗಂಟಲು ನೋವು ಅಥವಾ ಟಾನ್ಸಿಲ್ ಗ್ರಂಥಿಗಳ ಊತ ಕಡಿಮೆಯಗುತ್ತದೆ.
  • ಪ್ರತಿದಿನ ಇದರ ಎಲೆಯ ಸೇವನೆಯಿಂದ ಮೂತ್ರಕೋಶದ ಕಲ್ಲು ಕರಗುವುದರಿಂದ ಇದನ್ನು ’ಪಾಷಾಣ ಭೇದಿ’ ಎಂತಲೂ ಕರೆಯುತ್ತಾರೆ.
  • ಇದನ್ನು ಅಡುಗೆಯಲ್ಲಿಯೂ ಕೂಡ ಉಪಯೋಗಿಸುತ್ತಾರೆ. ಎಲೆಯಿಂದ ಬಜ್ಜಿ, ಮಜ್ಜಿಗೆ ಹುಳಿ, ಗೊಜ್ಜು, ಕೋಸಂಬರಿ ಇತ್ಯಾದಿ ತಯಾರಿಸುತ್ತಾರೆ. ಇದು ಸುವಾಸನೆಯುಕ್ತವಾಗಿ, ಸ್ವಾದಿಷ್ಟಕರವಾಗಿರುವುದಲ್ಲದೇ ವಿವಿಧ ಪೋಷಕಾಂಶಗಳನ್ನು ಮತ್ತು ನಾರಿನಂಶವನ್ನು ಕೂಡ ಹೊಂದಿರುತ್ತದೆ.
  • ಭಾರತದಲ್ಲಿ ಉಗಮಗೊಂಡ ಈ ಸಸ್ಯ ಉಷ್ಣವಲಯದ ಎಲ್ಲ ಪ್ರದೇಶಗಳಲ್ಲಿ ಬೆಳೆಯುತ್ತದೆ. ತೇವಾಂಶ ಹೆಚ್ಚಿರುವ ಆರ್ದ್ರ ವಾತಾವರಣ ಹಾಗೂ ಸ್ವಲ್ಪ ನೆರಳಿರುವ ಕಡೆ ಚೆನ್ನಾಗಿ ಬೆಳೆಯುತ್ತದೆ. ನೀರು ಬಸಿದು ಹೋಗುವ ಮರಳು ಮಿಶ್ರಿತ ಕೆಂಪು ಮಣ್ಣು ಇದಕ್ಕೆ ಬಹಳ ಸೂಕ್ತ. ನೀರು ನಿಲ್ಲುವ ಕಪ್ಪು ಮಣ್ಣು, ಬಹಳ ಬಿಸಿಲಿರುವ ಒಣಪ್ರದೇಶ ಇದಕ್ಕೆ ಸೂಕ್ತವಲ್ಲ.ಕಾಂಡದ ತುಂಡುಗಳಿಂದ ಇದನ್ನು ಸುಲಭವಾಗಿ ವಂಶಾಭಿವೃದ್ಧಿ ಮಾಡಬಹುದು. ಮೊದಲು ಇದನ್ನು ಪ್ಯಾಕೆಟ್ಗಳಲ್ಲಿ ಬೆಳೆಸಿ, ಬೇರು ಬಿಟ್ಟ ಸಸಿಗಳನ್ನು ಭೂಮಿಯಲ್ಲಿ ೩೦ x ೩೦ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬಹುದು. ನಾಲ್ಕರಿಂದ ಐದು ತಿಂಗಳಿಗೆ ಎಲೆಯು ಕೊಯ್ಲಿಗೆ ಬರುತ್ತದೆ. ೧೦ರಿಂದ ೧೫ ಸೆಂ.ಮೀ. ಕಾಂಡವನ್ನು ಭೂಮಿಯಲ್ಲಿ ಬಿಟ್ಟು ಗಿಡವನ್ನು ಹರಿತವಾದ ಕತ್ತರಿ ಇಲ್ಲವೇ ಕುರ್ಪಿಯಿಂದ ಕಟಾವು ಮಾಡಬೇಕು. ನಂತರ ಮೂರು ತಿಂಗಳಿಗೊಮ್ಮೆ ಕೊಯ್ಲು ಮಾಡಬಹುದು. ತಾಜಾ ಎಲೆಯನ್ನು ಭಟ್ಟಿ ಇಳಿಸಿ ಸುಗಂಧ ತೈಲವನ್ನು ತೆಗೆಯುತ್ತಾರೆ.