ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಬಾಲವನ

ಮೂರ್ತಿ ಚಿಕ್ಕದಾದರೂ ದೊಡ್ಡ ಕೀರ್ತಿ ಹೊಂದಿರುವ ಸಾಮೆ

image_
ಶಶಿಕಲಾ ಎಸ್.ಜಿ
9945082141
1

ಮಕ್ಕಳೇ, ಈಗಾಗಲೇ ಸಿರಿಧಾನ್ಯ ಕುಟುಂಬದ ನವಣೆ, ಸಜ್ಜೆ ಮತ್ತು ಹಾರಕಗಳ ಕುರಿತು ಬಹಳಷ್ಟು ತಿಳಿದುಕೊಂಡಿರುವಿರಿ. ಕುಟುಂಬದ ಅತಿ ಕಿರಿಯ ಸದಸ್ಯನಾದ ಸಾಮೆ ಬಗ್ಗೆ ತಿಳಿದುಕೊಳ್ಳೋಣ. ಸಾಮೆಯನ್ನು ಸಾವೆ ಅಂತಲೂ ಸಹ ಕರೆಯುತ್ತಾರೆ. ಈ ಧಾನ್ಯದ ಗಾತ್ರ ಇತರೆ ಸಿರಿಧಾನ್ಯಗಳಿಗಿಂತ ಕಿರಿದಾಗಿರುವುದರಿಂದ ಆಂಗ್ಲ ಭಾಷೆಯಲ್ಲಿ ಇದನ್ನು ಲಿಟಲ್ ಮಿಲ್ಲೆಟ್ ಅಂತ ಕರೆಯುತ್ತಾರೆ

ಸಾಮೆಯ ವೈಜ್ಞಾನಿಕ ಹೆಸರು ಪ್ಯಾನಿಕ್ಯುಮ್ ಸುಮಾತ್ರಾನ್ಸ್ (Panicum sumatrance) ಇದನ್ನು ಭಾರತ, ಚೀನಾ, ಆಫ್ರಿಕಾ ಮತ್ತು ಮಲೇಷಿಯಾ ದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಈ ಬೆಳೆಯನ್ನು ಸಮುದ್ರ ಮಟ್ಟದಿಂದ ಎರಡು ಸಾವಿರ ಮೀಟರ್ ಎತ್ತರದಲ್ಲಿ ಸಹ ಬೆಳೆಯಬಹುದು. ಜವುಳು ಪ್ರದೇಶ ಮತ್ತು ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿಯೂ ಬೆಳೆಯಬಹುದಾದ ಈ ಧಾನ್ಯ ಬಹುಪ್ರಾಚೀನ ಕಿರುಧಾನ್ಯಗಳಲ್ಲೊಂದಾಗಿದೆ. ಭಾರತದಾದ್ಯಂತ ಹಾಗೂ ಕರ್ನಾಟಕದಲ್ಲಿಯೂ ಇದನ್ನು ಸಾಂಪ್ರದಾಯಿಕವಾಗಿ ಕೃಷಿಮಾಡಲಾಗುತ್ತದೆ. ೩೦ರಿಂದ ೯೦ ಸೆಂಟಿಮೀಟರ್ ಎತ್ತರ ಬೆಳೆಯುವ ಗಿಡದ ತೆನೆಗಳು ೧೪ರಿಂದ ೪೦ ಸೆಂ.ಮೀ.ಗಳಷ್ಟು ಉದ್ದವಾಗಿರುತ್ತದೆ. ಇತರೆ ಎಣ್ಣೆಕಾಳುಗಳು ಮತ್ತು ದ್ವಿದಳ ಧಾನ್ಯಗಳ ಜೊತೆ ಮಿಶ್ರಬೆಳೆಯಾಗಿ ಇದನ್ನು ಬೆಳೆಯುವುದು ಹೆಚ್ಚು.

ಭಾರತದಲ್ಲಿ ಕರ್ನಾಟಕ, ತಮಿಳುನಾಡು. ಆಂಧ್ರಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್, ಮಧ್ಯ ಪ್ರದೇಶ, ಒರಿಸ್ಸಾ ಮತ್ತು ಗುಜರಾತ್ ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿ ರಾಯಚೂರು, ಕೊಪ್ಪಳ, ತುಮಕೂರು ಮತ್ತು ಇನ್ನಿತರ ಹಲವು ಜಿಲ್ಲೆಗಳಲ್ಲಿ ಸಾಮೆಯನ್ನು ಬೆಳೆಯಲಾಗುತ್ತಿದೆ. ಯಾವುದೇ ಸಾರವಿಲ್ಲದ ಭೂಮಿಯಲ್ಲೂ ಸಾಮೆ ಬೆಳೆಯಬಲ್ಲದು. ಎಲ್ಲಾ ಹವಾಮಾನಕ್ಕೂ ಹೊಂದಿಕೊಂಡು ಬೆಳೆಯುವ, ಕೀಟ ಮತ್ತು ರೊಗ ಭಾದೆ ಇಲ್ಲದೆ ರಾಸಾಯನಿಕ ಹಾಗೂ ಕೀಟನಾಶಕ ಮುಕ್ತವಾಗಿ, ನಿಸರ್ಗಕ್ಕೆ ಹಾನಿ ಮಾಡದಂತೆ ಸಾಮೆಯನ್ನು ಬೆಳೆಯಬಹುದು.

ಸಾಮೆಯಲ್ಲಿ ಪ್ರೋಟೀನ್, ಖನಿಜಾಂಶ, ಕಾರ್ಬೋಹೈಡ್ರೇಟ್ ಮತ್ತು ಕ್ಯಾಲ್ಶಿಯಂ ಅಂಶಗಳು ಹೇರಳವಾಗಿದ್ದು, ಸಾಮೆ ತಿನ್ನುವುದರಿಂದ ಉತ್ತಮ ಅರೋಗ್ಯ ಪಡೆಯಬಹುದು. ಅಲ್ಲದೇ, ಹಲವಾರು ಆರೋಗ್ಯ ಸಮಸ್ಯೆಗಳು ಪರಿಹಾರವಾಗುವುದರಲ್ಲಿ ಸಾಮೆ ಸಹಕಾರಿ. ಹೆಣ್ಣುಮಕ್ಕಳಲ್ಲಿ ಬಂಜೆತನ ನಿವಾರಿಸಬಹುದು, ಗರ್ಭಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಗಟ್ಟಬಹುದು. ಹೊಟ್ಟೆಗೆ ಸಂಬಂಧಿಸಿದ ಎಲ್ಲ ಕಾಯಿಲೆಗಳಿಗೂ ಸಾಮೆ ರಾಮಬಾಣವಿದ್ದಂತೆ, ಬೊಜ್ಜು ಕರಗಿಸಿ ಸಣ್ಣ ಆಗಲು ಸಹ ಸಾಮೆ ಸಹಾಯ ಮಾಡುತ್ತದೆ. ಎಲ್ಲ ವಯೋಮಾನದವರು ಸಾಮೆಯನ್ನು ಆಹಾರವಾಗಿ ಬಳಸಬಹುದು.

ಸಾಮೆಯನ್ನು ಅಕ್ಕಿಯ ರೀತಿಯಲ್ಲಿ ಬಳಸಬಹುದು, ಸಾಮೆ ಅನ್ನ, ದೋಸೆ, ಇಡ್ಲಿ, ಕಿಚಡಿ, ಅಂಬಲಿ ಮಾಡಬಹುದು.