ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಬೀಜ ಪ್ರಪಂಚ

ಟೊಮ್ಯಾಟೊ

image_
ಡಾ. ಕೆ. ಎಸ್. ಶೇಷಗಿರಿ
9741769213
1

ನಾವು ದಿನನಿತ್ಯ ಆಹಾರದಲ್ಲಿ ಬಳಸುವ ಜನಪ್ರಿಯ ತರಕಾರಿ ಟೊಮ್ಯಾಟೋ, ವಿಶ್ವಕ್ಕೆ ಮಧ್ಯ ಅಮೆರಿಕದ ಮಾಯನ್ಸ್ರ ಕೊಡುಗೆಯಾಗಿದೆ. ಎಲ್ಲಾ ಕಾಲದಲ್ಲಿಯೂ ಬೆಳೆಯಬಹುದಾದ ಸೊಲನೇಸಿಯೆ ಕುಟುಂಬಕ್ಕೆ ಸೇರಿದ ಈ ತರಕಾರಿಯ ವೈಜ್ಞಾನಿಕ ನಾಮ ಲೈಕೋಪರ್ಸಿಕಾನ್ ಎಸ್ಕ್ಯುಲೆಂಟಮ್. ಹೆಚ್ಚಿನ ತಳಿಗಳು ಕೆಂಪು ಬಣ್ಣದ ಹಣ್ಣುಗಳನ್ನು ನೀಡಿದರೂ, ಹಳದಿ, ಕಿತ್ತಳೆ, ನೇರಳೆ, ಹಸಿರು, ಬಿಳಿಬಣ್ಣದ ತಳಿಗಳು ಲಭ್ಯವಿವೆ. ಚೆರ್ರಿ ಟೊಮ್ಯಾಟೋ ಎಂದು ಕರೆಯಲಾಗುವ, ಚಿಕ್ಕ ಗಾತ್ರದ ದುಂಡಾದ ಹಣ್ಣುಗಳನ್ನು ಬಿಡುವ ಇನ್ನೊಂದು ಪ್ರಭೇದ ಲೈಕೋಪರ್ಸಿಕಾನ್ ಎಸ್ಕ್ಯುಲೆಂಟಮ್ ವೆರೈಟಿ. ಸೆಲಾಸಿಪಾರ್ಮೆ ಎಂಬುದಾಗಿದೆ. ನೂರು ಗ್ರಾಂ ಟೊಮ್ಯಾಟೊ ಹಣ್ಣಿನ ಸೇವನೆಯಿಂದ ೧೮ ಕ್ಯಾಲೊರಿ ಶಕ್ತಿ, ೩.೯ ಗ್ರಾಂ ಶರ್ಕರಪಿಷ್ಟ, ೦.೯ ಗ್ರಾಂ ಸಸಾರಜನಕ, ೦.೨ ಗ್ರಾಂ ಕೊಬ್ಬು, ೧.೨ ಗ್ರಾಂ ನಾರು, ೦.೫೯೪ ಮಿ.ಗ್ರಾಂ ನಿಯಾಸಿನ್, ೧೩ ಮಿ.ಗ್ರಾಂ ’ಸಿ’ ಜೀವಸತ್ವ, ೦.೫೪ ಮಿ.ಗ್ರಾಂ ’ಇ’ ಜೀವಸತ್ವ, ೮೩೩ ಇ.ಯು. ’ಎ’ ಜೀವಸತ್ವ, ೨೩೭ ಮಿ.ಗ್ರಾಂ ಪೊಟಾಸಿಯಮ್ ಹಾಗೂ ಹೇರಳ ಪ್ರಮಾಣದ ಬೀಟಾ ಕೆರೋಟಿನ್ ಮತ್ತು ಲೈಕೋಪಿನ್ ಅಂಶಗಳು ದೊರೆಯತ್ತದೆ. ಟೊಮ್ಯಾಟೋ ಹಲವಾರು ಔಷಧೀಯ ಗುಣ ಹೊಂದಿದ್ದು, ಇದು ಉತ್ಕರ್ಷಣ ನಿರೋಧಕವಾಗಿ, ಕ್ಯಾನ್ಸರ್ನಿಂದ ರಕ್ಷಣೆ ಕೊಡುವುದಲ್ಲದೇ ’ಎ’ ಮತ್ತು ’ಸಿ’ ಜೀವಸತ್ವದ ಪ್ರಮುಖ ಮೂಲವಾಗಿದೆ. ಇದಲ್ಲದೇ ಟೊಮ್ಯಾಟೋ ಪೊಟಾಷಿಯಮ್ನ ಉತ್ತಮ ಮೂಲವಾಗಿದ್ದು ಮಾನವ ದೇಹದ ಹೃದಯ ಬಡಿತ ಮತ್ತು ರಕ್ತದೊತ್ತಡ ನಿಯಂತ್ರಿಸುತ್ತದೆ.

ಟೊಮ್ಯಾಟೋ ಸುಮಾರು ಮೂರು ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ದ್ವಿದಳ ಸಸ್ಯವಾಗಿದ್ದು, ಮೃದುವಾದ ರೋಮಭರಿತ, ಕವಲುಗಳಿಂದ ಕೂಡಿದ ಕಾಂಡವನ್ನು ಹೊಂದಿದೆ. ಕಾಂಡದ ತುದಿಭಾಗದಲ್ಲಿ ಹೂವು, ಹಣ್ಣುಗಳು ಬಿಡುತ್ತವೆ. ಬೆಳೆಯ ಅವಧಿ ಬಿತ್ತನೆಯಿಂದ ತಳಿಗೆ ಅನುಗುಣವಾಗಿ ೧೦೦ ರಿಂದ ೧೫೦ ದಿನಗಳು. ಟೊಮ್ಯಾಟೋವನ್ನು ಸಂಸ್ಕರಿಸಿದ ಬೀಜಗಳನ್ನು ಉಪಯೋಗಿಸಿ ಕೃಷಿ ಮಾಡುತ್ತಾರೆ. ಬೀಜಕ್ಕಾಗಿ ಮೊದಲ ೨-೩ ಕೊಯ್ಲಿನ ಗುಣಮಟ್ಟದ ಹಣ್ಣುಗಳನ್ನು ಬಳಸಬೇಕು. ಸಂಕರಣ ತಳಿಯಾದರೆ ಒಂದು ಎಕರೆಗೆ ೩೦-೪೦ ಗ್ರಾಂ ಹಾಗೂ ಇತರೆ ತಳಿಗಳಗೆ ೮೦-೧೦೦ ಗ್ರಾಂ ಬಿತ್ತನೆ ಬೀಜ ಬೇಕು. ಒಂದು ಕಿ.ಗ್ರಾಂ ಬಿತ್ತನೆ ಬೀಜಗಳನ್ನು ೫೦ ಗ್ರಾಂ ಟ್ರೈಕೋಡರ್ಮಾ ಸಬ್ಟಿಲಿಸ್ನಿಂದ ಬಿತ್ತುವ ಒಂದು ದಿನ ಮೊದಲು ಉಪಚರಿಸಬೇಕು. ನಂತರ ಬಿತ್ತುವ ಮುನ್ನ ಪುನಃ ಬೀಜಗಳನ್ನು ಅಜೋಸ್ಪೈರಿಲಮ್ ಜೀವಾಣುವಿನ (೪೦ ಗ್ರಾಂ/ಪ್ರತಿ ಕಿ.ಗ್ರಾಂ ಬೀಜಕ್ಕೆ) ಲೇಪನ ಮಾಡಿ ಬಿತ್ತನೆಗೆ ಬಳಸಬೇಕು. ಸಂಸ್ಕರಿಸಿದ ಬೀಜಗಳನ್ನು ಏರು ಸಸಿಮಡಿಯಲ್ಲಿ ೧೦ ಸೆಂ.ಮೀ. ಸಾಲಿನಲ್ಲಿ ಅಥವಾ ಸಂಕರಣ ತಳಿಯಾದಲ್ಲಿ ಪ್ರೊ ಟ್ರೇಗಳಲ್ಲಿ ಬಿತ್ತನೆ ಮಾಡಬೇಕು. ಬೇಸಿಗೆಯಲ್ಲಿ ಸಸಿಮಡಿಗಳಿಗೆ ನೆರಳು ಒದಗಿಸಬೇಕಾಗುತ್ತದೆ ಹಾಗೂ ನೈಲಾನ್ ಪರದೆಯನ್ನು ಸಸಿಮಡಿಯ ಸುತ್ತಲೂ ಕಟ್ಟುವುದರಿಂದ ರೋಗ ಪ್ರಸಾರ ಮಾಡುವ ಕೀಟಗಳ ಹಾವಳಿಯಿಂದ ರಕ್ಷಿಸಬಹುದು. ಸಸಿಗಳು ಸುಮಾರು ೩-೪ ವಾರಗಳಲ್ಲಿ ೧೩-೧೫ ಸೆಂ.ಮೀ. ಎತ್ತರಕ್ಕೆ ಬೆಳೆದು ನಾಟಿಗೆ ಸಿದ್ಧವಾಗುತ್ತವೆ.