ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಹಸಿವನ್ನು ನೀಗಿಸುವ ಹಲಸು!

ಶ್ರೀ ಪಾಟೀಲ ರವೀಂದ್ರ ಸಂಗಣಗೌಡ
9945783906
1

ಹಣ್ಣುಗಳ ರಾಜ ಮಾವು ಎಂಬುದು ಸಾರ್ವತ್ರಿಕ. ಆದರೆ ನಿಜವಾಗಿ ಗಾತ್ರ, ವಿನ್ಯಾಸ, ಮರ, ರುಚಿ, ಅಡುಗೆ ಹೀಗೆ ಒಂದಲ್ಲ ಒಂದು ಬಳಕೆಗೆ ಸಿಗುವ ಹಲಸು ನಿಜವಾದ ಮಹಾರಾಜ. ಇತ್ತೀಚಿನ ವರ್ಷಗಳಲ್ಲಿ ಹಲಸಿನ ಹಣ್ಣಿಗೆ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತದೆ. ಹಸಿವಿನಿಂದ ತತ್ತರಿಸುತ್ತಿರುವ ಬಡದೇಶಗಳಲ್ಲಿ ಹಲಸು ಬಡವರ ಕಲ್ಪವೃಕ್ಷ. ಹಲಸಿಕಾಯಿ ತೊಳೆಯ ಖಾದ್ಯ ಉಪಾಹಾರಕ್ಕೂ ಸೈ, ಊಟಕ್ಕೂ ಸೈ. ಇದನ್ನೇ ತಿಂದು ಹೊಟ್ಟೆ ಗಟ್ಟಿ ಮಾಡಿಕೊಂಡು ದುಡಿವವರೂ ಇದ್ದಾರೆ. ಇಷ್ಟಾದರೂ, ಇಂದು ಹಲಸು ನಿರ್ಲಕ್ಷಿತ ಹಣ್ಣು. ಹಿತ್ತಲಲ್ಲಿ, ತೋಟಗಳಲ್ಲಿ ಕೊಳೆತು ನಾರಿ ಮಣ್ಣಾಗಿ ಹೋದೀತೇ ವಿನಹಃ, ಅದು ಅಂಗಳಕ್ಕೆ ಬರುವುದಿಲ್ಲ. ಹಲಸಿನ ಬೆಳೆಯನ್ನು ರೈತರು ಮುಖ್ಯಬೆಳೆಯಾಗಿ ಬೆಳೆದು ಹೆಚ್ಚು ಲಾಭಗಳಿಸಬೇಕಾದರೆ, ಸಂಬಂಧಪಟ್ಟ ಇಲಾಖೆಗಳು ಮಾಡಬೇಕಾದ ಕೆಲಸಗಳೆಂದರೆ:

  • ಹಲಸಿನಹಣ್ಣಿನ ಸಿಪ್ಪೆ ಕೆತ್ತಲು ತುಂಡು ಮಾಡಲು, ಕೊಚ್ಚಲು ಉಪಕರಣಗಳನ್ನು ಅಭಿವೃದ್ಧಿಪಡಿಸಬೇಕು.
  • ಹಲಸಿನ ಹಣ್ಣಿನ ಪಲ್ಪ್ ಮಾಡುವ ವಿಧಾನವನ್ನು ರೈತರಿಗೂ ಕಲಿಸಬೇಕು
  • ತಾಜಾ ಹಲಸಿನಹಣ್ಣಿನ ತೊಳೆಗಳನ್ನು ಹಾಳಾಗದಂತೆ ಸಾಗಾಟ ಮಾಡಿ ಮಾರಲು ಅನುಕೂಲವಾಗುವಂತೆ ಹದಿನೈದು ದಿನ ತಾಜಾ ಆಗಿಯೇ ಉಳಿಸುವಂಥ ಕನಿಷ್ಠ ಸಂಸ್ಕರಣೆ ವಿಧಾನವನ್ನು ಅಭಿವೃದ್ಧಿಗೊಳಿಸಬೇಕು.
  • ರೆಡಿ ಟು ಕುಕ್ ಪದಾರ್ಥಗಳನ್ನು ತಯಾರಿಸುವ ಕೌಶಲ್ಯವನ್ನು ಹೆಚ್ಚು ಜನರಿಗೆ ಕಲಿಸಬೇಕು.
  • ಹಲಸಿನ ಕಸಿ ವೃತ್ತಿಯಲ್ಲಿ ಹೆಚ್ಚುಹಚ್ಚು ಜನ ತೊಡಗುವಂತೆ ಪ್ರೇರೇಪಿಸಿ, ತರಬೇತಿಕೊಟ್ಟು ನಮ್ಮ ಅತ್ಯುತ್ತಮ ತಳಿಗಳನ್ನು ಉಳಿಸಿ ಬೆಳೆಸಬೇಕು.
  • ಹಲಸು ಇಳಿಜಾರಿನ ಮರಳು ಮಿಶ್ರಿತ ಜೇಡಿಮಣ್ಣಿನಲ್ಲಿ, ೬-೭.೫ ರಸಸಾರವಿರುವ ಉಷ್ಣವಲಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಹವಾಮಾನ ವೈಪರೀತ್ಯಗಳನ್ನು ಮೀರಿ ಬೆಳೆವ ಸಾಮರ್ಥ್ಯ ಹಲಸಿಗಿದೆ. ಜೂನ್ನಿಂದ ಸೆಪ್ಟೆಂಬರ್ವರೆಗೆ ಕಸಿ ಮಾಡಿದ ಸಸಿಗಳನ್ನು ಒಂದು ಚದರ ಮೀಟರ್ ಆಳದ ಗುಂಡಿಯಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿ ನೆಡಬಹುದು. ಗಿಡದಿಂದ ಗಿಡಕ್ಕೆ ೬ ಮೀ. ಅಂತರವಿರಬೆಕು. ಹೀಗೆ ನೆಟ್ಟ ಗಿಡಗಳು ೩ ವರ್ಷದ ನಂತ ಫಲ ಕೊಡಲು ಆರಂಭಿಸುತ್ತವೆ. ಒಂದೆಡೆ ಹಲಸೆಂದರೆ ಹೊಲಸೆನ್ನುವ ವರ್ಗ. ಮತ್ತೊಂದೆಡೆ ಅದರ ತೊಟ್ಟನ್ನು ಬಿಟ್ಟು ಉಳಿದೆಲ್ಲಾ ಭಾಗಗಳನ್ನು ಮೌಲ್ಯವರ್ಧಿಸುವ ಹಲಸು ಪ್ರಿಯರು. ನಮಗೆ ಹಲಸಿನ ಬಗ್ಗೆ ಪೂರ್ವಾಗ್ರಹವಿದೆ. ಅಷ್ಟೇನು ಆರೋಗ್ಯಕ್ಕೆ ಅನುಕೂಲವಿಲ್ಲದ ಕಿವಿ ಫ಼್ರೂಟ್, ರಾಂಬುಟನ್ ತಿನ್ನುವ ಯುವಜನತೆ, ಅನಗತ್ಯ ಕೀಳರಿಮೆ ಬಿಟ್ಟು ನಮ್ಮ ದೇಶದ ಹಣ್ಣನ್ನು ತಿನ್ನುವ ಹವ್ಯಾಸ ಬೆಳೆಸಿಕೊಂಡರೆ, ನಮ್ಮ ರೈತರ ಬದುಕು ಹಸನಾಗಲು ಸಹಕಾರಿಯಾಗುತ್ತದೆ

    ಹಲಸಿನಲ್ಲಿರುವ ಪೌಷ್ಟಿಕಾಂಶಗಳು

    ಅಂಶ (% ಒಣ ಆಧಾರದ ಮೇಲೆ) : ತೇವಾಂಶ- ೬.೦೯ , ಕಚ್ಚಾ ಕೊಬ್ಬು -೧.೨೭, ಬೂದಿ-೨.೭೦, ಸಸಾರಜನಕ-೧೩.೫೦ , ನಾರು-೩.೧೯, ಶರ್ಕರ-೭೯.೩೪, ಶಕ್ತಿ/ಎನರ್ಜಿ (Kcal/೧೦೦ g) -೩೮೨.೭೯, ರಸಸಾರ-೫.೭೮, ಆಮ್ಲ (as lactic acid)-೧.೧೨, ಘನ ಸಾಂಧ್ರತೆ (g/cm)-೦.೮೦.

    ಪರಿಸ್ಥಿತಿ ಬದಲಾಗುತ್ತಿದೆ...ಒಳ್ಳೆಯ ದಿನಗಳು ಬರುತ್ತಿವೆ

    ಇಂದು ಹಲಸನ್ನು ಲಾಭದಾಯಕ ಬೆಳೆಯಾಗಿ ನೋಡುವ ಕಾಲ ಬಂದಿದೆ. ಹಲಸಿನ ಹಣ್ಣು ಹಾಗೂ ಇತರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದು ಮಹಿಳೆಯರ ಆರ್ಥಿಕ ಶಕ್ತಿಯ ಮೂಲವಾಗಿದೆ. ಹಲಸಿನ ಕಾಯಿ ಹಪ್ಪಳ ಮಾಡುವಲ್ಲಿ ಮಹಿಳೆಯರು ಮಂಚೂಣಿಯಲ್ಲಿದ್ದಾರೆ. ಹಲಸಿನ ಚಿಪ್ಸ್ಗೆ ಎಲ್ಲಡೆ ಭಾರೀ ಬೇಡಿಕೆ ಬಂದಿದೆ. ಕೆ.ಜಿ ಗೆ ೧೪೦ ರಿಂದ ೧೬೦ ರೂಪಾಯಿವರೆಗೆ ಬೆಲೆ ಇದ್ದರೂ ಕೊಳ್ಳುವವರು ಹೆಚ್ಚು ಮಂದಿ ಇದ್ದಾರೆ. ಹಲಸಿನ ಕಾಯಿ ಚಿಪ್ಸ್ಗೆ ಬಳಕೆಯಾದರೆ, ಹಣ್ಣುಗಳನ್ನು ಜಾಮ್, ಹಣ್ಣಿನ ಹಪ್ಪಳ, ಕಡುಬು, ಹೋಳಿಗೆ, ಬನ್ಸ್, ಜಾಫಿ, ಪಾಯಸ ಹೀಗೆ ಹಲವು ಖಾದ್ಯಗಳ ತಯಾರಿಕೆಯಲ್ಲಿ ಬಳಸಬಹುದು ಎಂಬುದು ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ನಗರ ಹಾಗೂ ಪಟ್ಟಣ ಪ್ರದೇಶಗಳ ಜನರು ಹಲಸಿನ ಹಣ್ಣು ಮತ್ತು ಅದರ ಉತ್ಪನ್ನಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಭವಿಷ್ಯದ ದಿನಗಳಲ್ಲಿ ಹಲಸಿಗೆ ಹೆಚ್ಚಿನ ಬೇಡಿಕೆ ಬರಬಹುದು. ಜೊತೆಗೆ ಜೂಸ್, ಬೀಜದ ಪುಡಿಯಿಂದ ಬಿಸ್ಕತ್, ಕಪ್ ಕೇಕ್, ಹಪ್ಪಳ, ಚಿಪ್ಸ್, ಬೆರಟ್ಟಿ, ಉಂಡುಕ, ಬೀಜದ ಸಾಂತಾಣಿ (ಬೇಯಿಸಿ ಬಿಸಿಲಿನಲ್ಲಿ ಒಣಗಿಸಿದ) ಇವುಗಳ ಜೊತೆಯಲ್ಲಿ ಹಲಸು ವಿವಿಧ ಅವತಾರಗಳನ್ನು ತಾಳಿದೆ. ಜಾಮ್, ಹಪ್ಪಳ, ಜ್ಯೂಸ್, ಮುಳುಕ, ರೊಟ್ಟಿ, ವಡೆ, ಹೋಳಿಗೆ, ಸುಕ್ರುಂಡೆ, ಚಕ್ಕುಲಿ.... ಇನ್ನು ಅನೇಕ. ಹಲಸಿನ ಋತುವಿನಲ್ಲಿ ನಮ್ಮ ಅಡುಗೆಮನೆ ನಿಜಕ್ಕೂ ಸಂಶೋಧನಾಲಯವಾಗುತ್ತದೆ-ನಮ್ಮ ಗೃಹಿಣಿಯರು ವಿಜ್ಞಾನಿಗಳಾಗುತ್ತಾರೆ.

    13

    ಹಲಸಿನಲ್ಲಿ ಔಷಧೀಯ ಗುಣಗಳು:

    ಹಲಸಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಉದಾಹರಣೆಗೆ ನೂರು ಗ್ರಾಂ ಹಲಸಿನ ಹಣ್ಣಿನಲ್ಲಿ ೩೦೩ ಮಿ. ಗ್ರಾಂ ಪೊಟ್ಯಾಷಿಯಂ ಇದೆ. ಪೊಟ್ಯಾಷಿಯಂ ಸೇವಿಸಿದರೆ ಅದು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಕೂತೂಹಲ ವಿಚಾರದ ಬಗ್ಗೆ ಹೆಚ್ಚಿನ ವೈಜ್ಞಾನಿಕ ಅಧ್ಯಯನ ಆಗಬೇಕಿದೆ. ಇನ್ನೂ ಹಲವು ಔಷಧೀಯ ಗುಣಗಳು ಇದೆಯೆಂದು ರೈತರು ಹೇಳುತ್ತಾರಾದರೂ, ವೈಜ್ಞಾನಿಕವಾಗಿ ದೃಢೀಕರಿಸುವ ಅಗತ್ಯವಿರುತ್ತದೆ. ಇದಲ್ಲದೆ ಹಲಸಿನ ಗಿಡದ ಬೇರು, ಕಷಾಯಕ್ಕಾಗಿ ಉಪಯೋಗವಾದರೆ, ತೊಗಟೆಯ ಬಿಳಿರಸ ಅಂಟು ಔಷಧ ಗುಣ ಹೊಂದಿದೆ. ಪಿತ್ತ ಶಮನಕ್ಕೆ ಎಳೆಯ ಹಲಸಿನ ಕಾಯಿ ಉತ್ತಮ. ಹಲಸಿನ ಬೀಜಗಳ ಪಲ್ಯ ಬಲವರ್ಧಕ ಮತ್ತು ವೀರ್ಯವರ್ಧಕವೆಂದು ಹೇಳಲಾಗುತ್ತದೆ. ಹಲಸಿನ ತೊಳೆಗಳಿಗೆ ಬಾಳೆಹಣ್ಣಿನ ತಿರುಳು, ಹಸಿ ಕೊಬ್ಬರಿ ತುರಿ, ಜೇನು ತುಪ್ಪ, ಏಲಕ್ಕಿ ಸೇರಿಸಿ ಮಿಶ್ರಣ ಮಾಡಿ ಸೇವಿಸುವುದರಿಂದ ದುರ್ಬಲ ನರಗಳಿಗೆ ಬಲ ಬರುತ್ತದೆ ಎಂಬುದು ನಂಬಿಕೆ. ವಿಶ್ವದಲ್ಲೇ ಹಲಸಿನ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿ ಭಾರತವಿದೆ. ಆದರೆ ಉತ್ಪಾದನೆಯ ಪಟ್ಟಿಯಲ್ಲಿ ಹೆಸರೇ ಕಾಣದ ಹಲವು ದೇಶಗಳು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವಲ್ಲಿ ಬಹಳ ಮುಂದಿವೆ.

    ಗ್ರಾಮೀಣ ಆರ್ಥಿಕತೆಗೆ ದೊಡ್ದ ಕೊಡುಗೆ ಕೊಡುತ್ತಾ, ಸ್ಥಳೀಯವಾಗಿ ಆಹಾರ ಸುರಕ್ಷತೆ ಒದಗಿಸಬಲ್ಲ ಹಲಸನ್ನು ತರಕಾರಿಯಾಗಿ, ಹಣ್ಣಾಗಿ, ಸಂರಕ್ಷಿಸುತ್ತಾ ಆಹಾರವಸ್ತುವಾಗಿ ಬಳಸುವ ಅಭ್ಯಾಸ ಹೆಚ್ಚಬೇಕು. ವೈಜ್ಞಾನಿಕ ಸಂಸ್ಥೆಗಳು ಮತ್ತು ಸರ್ಕಾರಗಳು ಗಮನಹರಿಸಿದರೆ ಕಾಡಬೆಳೆಯಾಗಿದ್ದ ಹಲಸನ್ನು ಲಾಭದಾಯಕವಾದ ನಾಡಬೆಳೆಯಾಗಿ ಮಾಡಿಕೊಂಡು ರೈತರು ಜನರಿಗೆ ಉತ್ತಮ ಹಣ್ಣುಗಳನ್ನು ನೀಡುವ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬಹುದು.

    ಆದ್ದರಿಂದ ಹಲಸು ಕೃಷಿ ಮತ್ತು ಹಲಸಿನ ಉತ್ಪನ್ನಗಳ ಬಗ್ಗೆ ಜನರಿಗೆ ಹರಿವು ಮೂಡಿಸಲು ಹಲಸು ಹಬ್ಬವನ್ನು ಹಮ್ಮಿಕೊಳ್ಳಲಾಗುತ್ತಿರುತ್ತದೆ. ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ, ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗ ಧಾಮ, ಆತ್ಮ ಯೋಜನೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್, ದಕ್ಷಿಣ ಕನ್ನಡ ಕೃಷಿಕ್ ಸಮಾಜ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಹಲಸು ಹಬ್ಬ-೨೦೧೬ನ್ನು ಪಿಲಿಕುಳದಲ್ಲಿ ಜುಲೈ ೧೬ ಮತ್ತು ೧೭ ರಂದು ಆಯೋಜಿಸಲಾಗಿತ್ತು.