ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಈರುಳ್ಳಿಯಲ್ಲಿ ಅಣುಜೀವಿಗಳ ಮಿಶ್ರಣ ಬಳಕೆ

ಎಸ್. ಪಿ. ಶ್ವೇತಾ
99725755112
1

ಈರುಳ್ಳಿಯು ದೇಶದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದು. ನಮ್ಮ ರಾಜ್ಯದಲ್ಲಿ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಹಾಗೂ ಬಾಗಲಕೋಟ ಜಿಲ್ಲೆಗಳಲ್ಲಿ ಇದನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಈರುಳ್ಳಿಯನ್ನು ತರಕಾರಿಯಾಗಿ, ಸಾಂಬಾರ ಪದಾರ್ಥವಾಗಿ ಹಾಗೂ ಔಷಧದ ರೂಪದಲ್ಲೂ ಬಳಸಲಾಗುತ್ತಿದೆ. ಅಧಿಕ ರಾಸಾಯನಿಕ ಗೊಬ್ಬರದ ಬಳಕೆಯಿಂದ ಖರ್ಚು ಹೆಚ್ಚಾಗುವುದಲ್ಲದೇ, ಪರಿಸರ ಮಾಲಿನ್ಯವೂ ಉಂಟಾಗುತ್ತದೆ. ಆದ್ದರಿಂದ ಇವುಗಳ ಬಳಕೆ ಕಡಿಮೆ ಮಾಡಿ, ಜೈವಿಕ ಗೊಬ್ಬರಗಳನ್ನು ಬಳಸುವುದು ಒಳಿತು. ಕೃಷಿಯಲ್ಲಿ ಈಗಾಗಲೇ ಜೈವಿಕ ಗೊಬ್ಬರಗಳಾದ ರೈಜೋಬಿಯಂ, ಅಜೋಸ್ಪಿರಿಲ್ಲಂ, ರಂಜಕ ಕರಗಿಸುವ ಬ್ಯಾಕ್ಟೀರಿಯಾ, ಮೈಕೋರೈಜ ಇತ್ಯಾದಿಗಳ ಬಳಕೆ ಹೆಚ್ಚು ಪ್ರಚಲಿತದಲ್ಲಿದೆ.

ಈ ನಿಟ್ಟಿನಲ್ಲಿ, ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕೃಷಿ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಸಂಶೋಧಕರು ವಿವಿಧ ಅಣುಜೀವಿಗಳನ್ನೊಳಗೊಂಡ ಅಣುಜೀವಿ ಮಿಶ್ರಣವನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಮಿಶ್ರಣವು ಪ್ರಮುಖವಾಗಿ ಸಾರಜನಕ ಸ್ಥಿರೀಕರಿಸುವ ಅಜೋಸ್ಪಿರಿಲ್ಲಂ, ರಂಜಕ ಹಾಗೂ ಪೊಟ್ಯಾಷ್ ಕರಗಿಸುವ ಬ್ಯಾಕ್ಟೀರಿಯಾ, ಸಸ್ಯಗಳ ಬೆಳೆ ಪ್ರಚೋದಕಗಳನ್ನು ಉತ್ಪಾದಿಸುವ ಸುಡೋಮೋನಾಸ್ ಹಾಗೂ ರೋಗಕಾರಿ ಶಿಲೀಂಧ್ರಗಳ ವಿರುದ್ಧ ಹೋರಾಡುವ ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾಗಳನ್ನೊಳಗೊಂಡಿದೆ. ಈ ಅಣುಜೀವಿಗಳು ಒಂದು ಮಿಶ್ರಣದಲ್ಲಿದ್ದಾಗ ಪರಸ್ಪರ ಅವಲಂಬಿತವಾಗಿದ್ದು, ಅವುಗಳ ಬೆಳವಣಿಗೆ ಹಾಗೂ ಚಟುವಟಿಕೆಗಳು ಹೆಚ್ಚಾಗುವುದಾಗಿ ಕಂಡುಬಂದಿದೆ. ಈ ಮಿಶ್ರಣವನ್ನು ಈರುಳ್ಳಿ ಬೀಜಕ್ಕೆ ಬೀಜೋಪಚಾರ ಮಾಡಿ ರೈತರ ಹೊಲದಲ್ಲಿ ಬಿತ್ತನೆ ಮಾಡಿದಾಗ, ಈರುಳ್ಳಿ ಬೆಳೆಯ ಇಳುವರಿಯು ಹೆಚ್ಚಾಗಿರುವುದು ಕಂಡುಬಂದಿದೆ. ಬೆಳೆಯು ರೋಗಮುಕ್ತವಾಗಿ, ಹಚ್ಚ ಹಸಿರಾಗಿ ಸಮೃದ್ದಿಯಾಗಿರುವುದೂ ಕಂಡುಬಂದಿದೆ.

ಇದರೊಂದಿಗೆ ಅಣುಜೀವಿ ಮಿಶ್ರಣದ ಬಳಕೆಯಿಂದ ಶೇ.೫೦ರಷ್ಟು ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಬಹುದಾಗಿದೆ. ಒಟ್ಟಾರೆ ಮಿಶ್ರಣದಿಂದ ಅಧಿಕ ಲಾಭ ಬರುವುದಲ್ಲದೇ, ಮಣ್ಣಿನ ಆರೋಗ್ಯ ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿರುತ್ತದೆ.

567

ಅಣು ಮಿಶ್ರಣದ ಪ್ರಮಾಣ:

ಪ್ರತಿ ಎಕರೆ ಬೀಜಕ್ಕೆ ೨೦೦ ಗ್ರಾಂ ಮಿಶ್ರಣವನ್ನು ಲೇಪನ ಮಾಡಿ ಬಿತ್ತಬೇಕು ಮತ್ತು ಬಿತ್ತನೆಯ ೬೦ ದಿನಗಳ ನಂತರ ೫ ಗ್ರಾಂನ್ನು ಪ್ರತಿ ಲೀಟರ್ ನೀರಿನಲ್ಲಿ ಜೊತೆ ಬೆರೆಸಿ ಸಿಂಪರಣೆ ಮಾಡಬೇಕು.

ಅಣುಜೀವಿ ಮಿಶ್ರಣದ ಬೆಲೆ ಕೆಜಿಗೆ ಕೇವಲ ರೂ. ೬೦=೦೦. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಲು ಹಾಗೂ ಮಣ್ಣಿನ ಆರೋಗ್ಯವನ್ನು ಕಾಪಾಡಲು ರೈತರು ಇದರ ಬಳಕೆ ಮಡುವುದು ಉತ್ತಮ. ಸಂಪರ್ಕಿಸಬೇಕಾಗಿದ್ದಲ್ಲಿ ಮುಖ್ಯಸ್ಥರು, ಕೃಷಿ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಮೊಬೈಲ್ ಸಂಖ್ಯೆ: ೯೯೭೨೭೫೫೧೧೨ ರವರಿಗೆ ಕರೆ ಮಾಡಿ.