ನೇಗಿಲ ಮಿಡಿತ  ಸಂಪುಟ ೨ ಸಂಚಿಕೆ ೧೨

ಮೌಲ್ಯವರ್ಧನೆ

ಹಲಸಿನ ಬೀಜದ ಚಕ್ಕುಲಿ !

ಡಾ. ಅಕ್ಕಮಹಾದೇವಿ ಡಿ. ಅಗಸಿಮನಿ
9448933679
1

ಹಸಿದು ಹಲಸು: ಉಂಡು ಮಾವು ಎಂಬ ಗಾದೆಯಿಂದಲೇ ಹಲಸಿನ ಪ್ರಾಮುಖ್ಯತೆ ತಿಳಿಯುತ್ತದೆ. ಹಲಸಿನ ಹಣ್ಣಿನಲ್ಲಿ ಅನೇಕ ಜೀವಸತ್ವಗಳು, ಶರ್ಕರ ಪಿಷ್ಟಗಳು, ಖನಿಜಗಳು, ನಾರಿನಾಂಶ ಹಾಗೂ ಲಘು ಪೋಷಕಾಂಶಗಳು ಇದ್ದು, ಆರೋಗ್ಯಕ್ಕೆ ತುಂಬಾ ಹಿತಕರ. ಅಲ್ಲದೇ ತೊಳೆ ತಿಂದು ಬಿಸಾಡುವ ಬೀಜದಲ್ಲಿಯೂ ಕೂಡ ಈ ಪೋಷಕಾಂಶಗಳ ಲಭ್ಯತೆ ಕಾಣಬಹುದು.

ಹಲಸಿನ ವಿಶೇಷತೆ ಎಂದರೆ ವಿವಿಧ ಹಂತಗಳಲ್ಲಿ ಈ ಹಣ್ಣಿನ ಎಲ್ಲಾ ಭಾಗಗಳನ್ನು ಉಪಯೋಗಿಸಬಹುದು. ಎಳೆ ಕಾಯಿ ಇರುವಾಗ ಇಡೀ ಕಾಯಿಯನ್ನು ಪಲ್ಯಮಾಡಲು, ಸ್ವಲ್ಪ ಬಲಿತ ನಂತರ ಸಾಂಬಾರು, ಮಜ್ಜಿಗೆ ಹುಳಿ, ಬೀಜ ಬಲಿತ ನಂತರ ತೊಳೆಯಿಂದ ವಿವಿಧ ಖಾದ್ಯಗಳು. ಈ ರೀತಿಯಾಗಿ ಮನೆಬಳಕೆಗೆ ಉಪಯುಕ್ತವಾಗಿರುವ ಹತ್ತು ಹಲವು ತಿನಿಸು ಮತ್ತು ಖಾದ್ಯಗಳನ್ನು ಹಲಸಿನಿಂದ ತಯಾರಿಸಲಾಗುತ್ತಿದೆ.

ಹಲಸಿನ ಬೀಜದ ಚಕ್ಕುಲಿ ಬೇಕಾದ ಸಾಮಗ್ರಿಗಳು :

ಹಲಸಿನ ಬೀಜದ ಪೇಸ್ಟ್ - ೧ ಲೋಟ, ಅಕ್ಕಿ ಹಿಟ್ಟು - ೧ ಲೋಟ, ಪುಟಾಣಿ (ಹುರಿಗಡಲೆ)ಹಿಟ್ಟು - ೧ ಲೋಟ, ಅಜ್ವಾನ - ೧ ಟೀ ಚಮಚ, ಎಳ್ಳು - ೧ ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕೆಂಪು ಖಾರದ ಪುಡಿ - ೨ ಟೀ ಚಮಚ, ಬೆಣ್ಣೆ - ಅರ್ಧ ಟೀ ಚಮಚ ಅಥವಾ ಕಾಯಿಸಿದ ಎಣ್ಣೆ -೧ ಟೀ ಚಮಚ

ಮಾಡುವ ವಿಧಾನ:

ಹಲಸಿನ ಬೀಜದ ಪೇಸ್ಟಿಗೆ ಅಕ್ಕಿ ಹಿಟ್ಟು ಹಾಗೂ ಪುಟಾಣಿ ಹಿಟ್ಟು(ಹುರಿಗಡಲೆ ಹಿಟ್ಟು) ಹಾಕಿ ಚೆನ್ನಾಗಿ ಮಿಶ್ರಣಮಾಡಿಕೊಳ್ಳಬೇಕು. ನಂತರ ಎಳ್ಳು, ಅಜ್ವಾನ, ಉಪ್ಪು, ಕೆಂಪು ಖಾರದ ಪುಡಿ ಹಾಗೂ ಬೆಣ್ಣೆ ಹಾಕಿ ಚೆನ್ನಾಗಿ ಮಿಶ್ರಣಮಾಡಿಕೊಳ್ಳಬೇಕು ನಂತರ ಬಿಸಿ ನೀರನ್ನು ಹಾಕಿ ಚೆನ್ನಾಗಿ ನಾದಬೇಕು. ನಾದಿದ ಹಿಟ್ಟನ್ನು ಚಕ್ಕುಲಿ ಮಾಡುವ ಒತ್ತಾಳ/ಸಾಧನಕ್ಕೆ ಹಾಕಿ ಚಕ್ಕುಲಿ ಮಾಡಿ, ಚೆನ್ನಾಗಿ ಬಿಸಿಯಾದ ಎಣ್ಣೆಯಲ್ಲಿ ಮಂದ ಉರಿಯಿಟ್ಟು ಕರಿಯಬೇಕು. ನಂತರ ಚಕ್ಕುಲಿ ತಿನ್ನಲು ಸಿದ್ದವಾಗುತ್ತದೆ.