ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಮಿಡಿತ-ತುಡಿತ

image_
ರಘು ಸಂವೇದನ್
9902191549

ಹೆಚ್. ಎನ್. ಮಧುಸೂದನ್ ಅವರು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ೨೦೧೭ ರ ಉದ್ಘಾಟನೆಗೆ ಆಗಮಿಸಿ ಭಾಷಣ ಆರಂಭಿಸಿದಾಗ ನನಗೆ ಇಲ್ಲಿ ಬರುತ್ತಿದ್ದಂತೆ ಸಂತಸ ಕೊಟ್ಟ ವಿಚಾರಗಳಲ್ಲಿ ಒಂದು ಎಂದರೆ ನನಗೆ ಕುಲಪತಿಗಳಾದ ಡಾ. ಸಿ. ವಾಸುದೇವಪ್ಪನವರು ನೇಗಿಲ ಮಿಡಿತ ಪತ್ರಿಕೆ ನೀಡಿದರು. ಪುಟ ತೆಗೆದಂತೆ ತಂತ್ರಜ್ಞಾನ ಹೇಗೆ ಜನಬಳಕೆಯಾಗುತ್ತೆ ಅನ್ನುವುದನ್ನು ನೀಡಿದ್ದಾರೆ. PSಐಗಿ - ಕೃಷಿ, ಎತ್ತಣಿಂದೆತ್ತ ಸಂಬಂಧ ಅನ್ನುವುದನ್ನು ಪರಿಚಯಿಸಿದ್ದಾರೆ. ಇದು ನನಗೆ ತುಂಬಾ ಸಂತಸ ನೀಡಿತು. ಈ ಕೃಷಿ ಪತ್ರಿಕೆಗೆ ನನ್ನ ಅಭಿನಂದನೆಗಳು ಎಂದು ನುಡಿದರು.

--ಹೆಚ್. ಎನ್. ಮಧುಸೂದನ್, ಮಾಜಿ ನಿರ್ದೇಶಕರು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, (ISRO) ಬೆಂಗಳೂರು


ನೇಗಿಲ ಮಿಡಿತ (ಸಂಪುಟ-೩, ಸಂಚಿಕೆ-೩) ನನ್ನ ನಾಡಿ ಮಿಡಿತ ಹಿಡಿದಿತ್ತು. ಲೇಖನಗಳ ವೈವಿಧ್ಯತೆ ವಿಶೇಷವಾಗಿತ್ತು. ಎಂದಿನಂತೆ ಛಾಯಾಚಿತ್ರಗಳು ಅಪೂರ್ವವಾಗಿದ್ದವು. ವೈಯಕ್ತಿಕವಾಗಿ ಇಷ್ಟಪಡುವ ಸೀಬೇಹಣ್ಣಿನ ಕುರಿತ ಲೇಖನ ಮೆಚ್ಚುಗೆಯಾಯ್ತು. ಕಳೆದ ಹಲವು ವರ್ಷಗಳಿಂದ ನಾನು ಬಳಸುತ್ತಿರುವ ಮಡಿಕೆ ಬೆಲ್ಲದ ಬಗೆಗಿನ ಬರಹ ಮಾಹಿತಿ ಪೂರ್ಣವಾಗಿತ್ತು. ಆದರೆ, ಫೋನಾಯಿಸಿದರೆ ಬೆಲ್ಲವೆಲ್ಲ ಖಾಲಿ, ಸಾಗರದಂತಹ ಸಾಗರದಲ್ಲಿ! ತೆಂಗಿನಲ್ಲಿ ಕಾಣಿಸಿಕೊಂಡ ಸ್ಲಗ್ ಮರಿಹುಳುವಿನ ಬಗ್ಗೆ ತಿಳಿಸಿದ್ದು ಉಪಯುಕ್ತವಾಗಿತ್ತು. ಎಲ್ಲಕ್ಕಿಂತ ಚೆಂದ, ಒಣದ್ರಾಕ್ಷಿ ತಯಾರಿಕೆಯ ಲೇಖನ. ಸೋಲಾರ್ ಮತ್ತು ಉಪಗ್ರಹ ಕುರಿತಾದ ಮಾಹಿತಿಗಳು ನಮಗೆಲ್ಲರಿಗೂ ಅಗತ್ಯವಿರುವಂಥವು. ಮಲೆನಾಡಿನ ಕಿರು ಹಣ್ಣುಗಳ ಬಗ್ಗೆ ಸಮಗ್ರ ಬರಹಗಳುಳ್ಳ ಸಂಚಿಕೆ ಮಾಡಿರೆಂದು ಕೋರಿಕೆ. ಒಳ ಪುಟಗಳಲ್ಲಿ ಎಂದಿರುವ ಬಾಕ್ಸ್ನ್ನು ಚಿಕ್ಕದಾಗಿಸಿ. ಈ ಸಂಚಿಕೆಯಲ್ಲಿರುವ ತರಕಾರಿ, ಹಣ್ಣು, ಬೇಳೆಕಾಳು, ತೋಟದ ಬೆಳೆ, ಕೀಟ-ರೋಗ ನಿರ್ವಹಣೆ, ಕೊಯ್ಲೋತ್ತರ ಮೌಲ್ಯವರ್ಧನೆ, ಉನ್ನತ ವಿಜ್ಞಾನ ಹೀಗೆ ಹಲವಾರು ವಿಷಯಗಳ ಕುರಿತ ಮಾಹಿತಿ ಸಂಶೋಧಕರಿಗೆ, ರೈತರಿಗೆ, ವಿದ್ಯಾರ್ಥಿಗಳಿಗೆ, ನಾಗರೀಕರಿಗೆ ಎಲ್ಲರಿಗೆ ಉಪಯುಕ್ತವಾಗುವುದರಲ್ಲಿ ಸಂದೇಹವಿಲ್ಲ. ಯುಗಾದಿ ಹಬ್ಬದ ಪ್ರಾಮುಖ್ಯತೆ ಬಗ್ಗೆ ತಿಳಿಸಿದ ಸಂಪಾದಕೀಯ ಚೆನ್ನಾಗಿತ್ತು. ನಮ್ಮೆಲ್ಲರ ಹೆಮ್ಮೆಯ ನೇಗಿಲ ಮಿಡಿತದ ಕುಟುಂಬಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಷಯಗಳು.

--ಡಾ. ದೇವರಾಜ ಟ.ಎನ್. ಹಿರಿಯ ವಿಜ್ಞಾನಿಗಳು ಮುಖ್ಯಸ್ಥರು, ಐಸಿಎಆರ್-ತರಳಬಾಳು ಕೆವಿಕೆ, ದಾವಣಗೆರೆ


ನೇಗಿಲ ಮಿಡಿತ ಪತ್ರಿಕೆ ನೋಡಿ ತುಂಬಾ ಸಂತೋಷವಾಯಿತು ಮತ್ತು ಆಶ್ಚರ್ಯ ಕೂಡ ಆಯಿತು. ವಿಶ್ವವಿದ್ಯಾಲಯದಿಂದ ರೈತರಿಗೆ ಇಷ್ಟು ಕಡಿಮೆ ದರದಲ್ಲಿ ರೈತರ ಮನೆ ಬಾಗಿಲಿಗೆ ಕೃಷಿ ವಿಷಯವನ್ನು ತಲುಪಿಸುತ್ತಿರುವುದು ಕೃಷಿ ವಿಸ್ತರಣಾ ಕೆಲಸದಲ್ಲಿ ವಿಶ್ವವಿದ್ಯಾಲಯಕ್ಕೆ ಇರುವ ಕಾಳಜಿ ತೋರಿಸುತ್ತದೆ. ಪ್ರತಿ ಪುಟವು ಬಹುವರ್ಣದಲ್ಲಿ, ಫೋಟೋ ಒಳಗೊಂಡ ಲೇಖನಗಳು ಮತ್ತು ಬಹುಮುಖ್ಯವಾದ ಲೇಖನಗಳು ಪ್ರಕಟಗೊಳ್ಳುತ್ತಿರುವುದು ಬೇರೆ ಎಲ್ಲಾ ಕೃಷಿ ಪತ್ರಿಕೆಗೆ ಹೋಲಿಸಿದರೆ ತುಂಬಾ ಉತ್ತಮವಾಗಿದೆ. ಈ ಪತ್ರಿಕೆಗೆ ಚಂದಾದಾರನಾಗಿರುವುದಕ್ಕೆ ತುಂಬಾ ಸಂತೋಷವುಂಟು ಮಾಡಿದೆ. ಇದೇ ರೀತಿ ಇನ್ನು ಹಲವು ಕೃಷಿ ವಿಷಯಗಳ ಮಾಹಿತಿ ಪತ್ರಿಕೆಯ ಮೂಲಕ ಹೊರ ಬರಲಿ ಎಂದು ಆಶಿಸುತ್ತೇನೆ.

--ಹೆಚ್. ಜೆ. ರವೀಂದ್ರ, ಕೊಪ್ಪ


ಕಳೆದ ಸಂಚಿಕೆಯ ದೊಣ್ಣೆ ಮೆಣಸಿನ ಹಣ್ಣು ಕೊಳೆ ರೋಗದ ಲೇಖನ ತುಂಬಾ ಉಪಯುಕ್ತ ಮಾಹಿತಿ ಒಳಗೊಂಡ ಲೇಖನವಾಗಿತ್ತು. ನಾನು ನೇಗಿಲ ಮಿಡಿತ ಪತ್ರಿಕೆಯನ್ನು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರಕ್ಕೆ ಬಂದಾಗ ನೋಡಿದೆ. ಇದು ರೈತರಿಗೆ ತುಂಬಾ ಉಪಯುಕ್ತವಾದ ಪತ್ರಿಕೆ. ನಾವು ನಮ್ಮ ಜಮೀನಿನಲ್ಲಿ ತರಕಾರಿ ಬೆಳೆ ಬೆಳೆಯುತ್ತೇವೆ. ಹಾಗಾಗಿ ನಮ್ಮ ಮಾಹಿತಿಗಾಗಿ ನೇಗಿಲ ಮಿಡಿತ ಪತ್ರಿಕೆಗೆ ಚಂದಾದಾರನಾಗುತ್ತಿದ್ದೇನೆ. ತರಕಾರಿ ಬೆಳೆಗಳು ಕುರಿತು ಹೆಚ್ಚಿನ ಮಾಹಿತಿ ಒದಗಿಸಿದರೆ ನಮ್ಮಂತ ಸಣ್ಣ ರೈತರಿಗೆ ಅನುಕೂಲವಾಗುವುದು.

--ಮಹೇಶ್, ಕೆ. ಹೆಚ್.ಕಡೂರು