ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಸಂಪಾದಕೀಯ

ಕಾಡಿಗೆ ಬೆಂಕಿ ಇಟ್ಟವರಾರು?

image_
ಡಾ. ಕೆ ಸಿ ಶಶಿಧರ

ಬೇಸಿಗೆ ಬಂತೆಂದರೆ ಪ್ರಪಂಚದಾದ್ಯಂತ ಕಾಡ್ಗಿಚ್ಚು ಸುದ್ದಿ ಮಾಡುತ್ತದೆ. ಕಾಡ್ಗಿಚ್ಚು ಒಂದು ಪ್ರಕೃತಿ ವಿಕೋಪ ಇದರ ನಿರ್ವಹಣೆ ಸಹ ಅತ್ಯಂತ ಕಷ್ಟಕರ. ಕಾಡಿಗೆ ಬೆಂಕಿ ಬಿತ್ತೆಂದರೆ ಲಕ್ಷಾಂತರ ಸಸ್ಯ, ಪ್ರಾಣಿ ಸಂಕುಲಗಳೇ ಹೇಳ ಹೆಸರಿಲ್ಲದಂತೆ ಅಳಿಸಿ ಹೋಗುವ ಸಾಧ್ಯತೆ. ಹಾಗಿದ್ದರೆ ಕಾಡಿಗೆ ಬೆಂಕಿ ಹಚ್ಚುವವರಾರು. ಕಾಡು ತನ್ನ ತಾನೆ ಹತ್ತಿ ಉರಿಯುವುದೆ? ಹಾಂ! ದಟ್ಟ ಅರಣ್ಯ, ಬಿರು ಬೇಸಿಗೆ, ಬೀಸುವ ಗಾಳಿ ಹೊಡೆತಕ್ಕೆ ಮರಗಳು ಒಂದಕ್ಕೊಂದು ತಿಕ್ಕಿ ಅಥವಾ ಪ್ರಾಣಿಗಳ ಓಟಕ್ಕೆ ಸಿಕ್ಕ ಕಲ್ಲುಗಳು ಒಂದಕ್ಕೊಂದು ಉಜ್ಜಿ ಬೆಂಕಿ ಕಿಡಿ ಹತ್ತಿ ಕಾಡ್ಗಿಚ್ಚಿಗೆ ಕಾರಣವಾಗಬಹುದು. ಆದರೆ ಇಂತಹ ಕಾರಣಗಳಿಂದ ಬೆಂಕಿ ಹತ್ತಿ ಉರಿಯುವುದು ವಿರಳವೆ. ಈಗಂತೂ ಇಲ್ಲವೇ ಇಲ್ಲ ಎನ್ನಬಹುದಾದಷ್ಟಿವೆ. ಕಾರಣ ಅಂತ ದಟ್ಟಣೆ ಹಾಗೂ ಪ್ರಾಣಿ ಸಂಕುಲ ನಮ್ಮಲ್ಲಿ ಇಲ್ಲ. ಮನುಷ್ಯರ ತಪ್ಪುಗಳಿಂದ ಹತ್ತಿಯುರಿವುದೇ ಜಾಸ್ತಿ. ಇತ್ತೀಚೆಗಂತೂ ನಮ್ಮ ಬದುಕಿಗೆ ನಾವೇ ಬೆಂಕಿ ಇಡುತ್ತಿದ್ದೇವೆ. ಅದರಿಂದಲೇ ಕಾಡು ಹತ್ತಿ ಉರಿದು ನಾಡೇ ಸಂಕಷ್ಟಕ್ಕೆ ಸಿಲುಕುತ್ತಿದೆ.

ಕಾಡಿನ ಪಕ್ಕ ಇರುವ ಹೊಲಗದ್ದೆಗಳಲ್ಲಿ ಹಚ್ಚಿದ ಬೆಂಕಿ, ಕಾಡಿನ ಅಂಚಿನಲ್ಲಿ ಇರುವ ವಸತಿಗಳಿಂದ ಹರಡುವ ಬೆಂಕಿ ಇವು ನಮ್ಮ ಅಜಾಗರೂಕತೆಯಿಂದ ಬೆಂಕಿ ಹತ್ತಲು ಕಾರಣ. ಈ ಎಲ್ಲಾ ಕಾರಣಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ. ಈ ಬಗ್ಗೆ ಜಾಗೃತಿ ಸಹ ಮೂಡಿಸಲಾಗುತ್ತಿದೆ.ಆದರೆ ಇತ್ತೀಚೆಗೆ ಮೋಜಿಗಾಗಿ ಬೆಂಕಿ, ದುರಾಸೆಗಾಗಿ ಬೆಂಕಿ, ಅಕ್ರಮ ಸಕ್ರಮಕ್ಕಾಗಿ ಬೆಂಕಿ ಇತ್ಯಾದಿ ಕಾರಣಗಳು ಅಘೋಷಿತವಾಗಿ ಸೇರಿವೆ. ಇವುಗಳನ್ನ ಮೆಟ್ಟಿ ಕಾಡು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಮೋಜಿಗಾಗಿ ಬೆಂಕಿ, ದುರಾಸೆಗಾಗಿ ಬೆಂಕಿ, ಅಕ್ರಮ ಸಕ್ರಮಕ್ಕಾಗಿ ಬೆಂಕಿ ಪ್ರವಾಸಿಗರು ಕಾಡಂಚಲಿ, ಒಳಗೆ ಮೋಜಿಗಾಗಿ ಕುಡಿಕುಣಿದು ಕುಪ್ಪಳಿಸುವ ಬರದಲಿ ಅವರು ಹಚ್ಚಿದ ಬೀಡಿ, ಸಿಗರೇಟು, ಕ್ಯಾಂಪ್ ಫೈರ್, ಕುಕಿಂಗ್ ಫೈರ್ಗಳಿಂದ ಅಳಿದುಳಿದ ಬೆಂಕಿ ನಾಡಿನ ಅಸ್ತಿತ್ವವನ್ನೇ ಅಲುಗಾಡಿಸುವಂತಹ ಜ್ವಾಲೆಗಳಿಗೆ ಕಾರಣವಾಗುತ್ತಿದೆ. ನೆಲದ ಆಸೆಗಾಗಿಯೇ ಬೆಂಕಿ ಇಡುವವರ ತಂಡಗಳೂ ಇವೆ. ಇವುಗಳಿಗೆ ಹೊಸ ಸೇರ್ಪಡೆ ಅಕ್ರಮ ಸಕ್ರಮಕ್ಕಾಗಿ ಬೆಂಕಿ. ಕಾಡನ್ನ ಅತಿಕ್ರಮಿಸಿ ಜಮೀನು ಮಾಡಿದರೆ ಅದು ಸಕ್ರಮ ಮಾಡುತ್ತಾರೆ. ನನಗೆ ಜಮೀನು ಸಿಗುತ್ತೆ ಅನ್ನುವ ವಾತಾವರಣ. ಆದ್ದರಿಂದ ಕಾಡಂಚಿನಲ್ಲಿ ಜಮೀನು ಅಕ್ರಮವಾಗಿ ತಮ್ಮದಾಗಿಸಿಕೊಳ್ಳಲು ಬೆಂಕಿ ಹಚ್ಚಿ ಹೊತ್ತಿ ಉರಿದ ನಂತರ ಆ ಮರಗಳ ಸುಟ್ಟ ಸಮಾಧಿಯ ಮೇಲೆ ನೇಗಿಲು ಹರಿಸಿ ನೆಲ ನನ್ನದೆಂದು ಅರ್ಜಿ ಗುಜರಾಯಿಸುವವರು ಇಂದು ಹೆಚ್ಚಾಗಿದ್ದಾರೆ. ಅವರ ಸಣ್ಣಾಸೆಗೆ ನಷ್ಟದ ವ್ಯಾಪ್ತಿ ಎಷ್ಟಾದರೇನು ಅವರು ಚಿಂತಿಸರು.

ನಮ್ಮ ತಪ್ಪು ನೀತಿ, ನಾನಷ್ಟೆ ಸುಖವಾಗಿದ್ದರೆ ಸಾಕು ನಾಡಿನ ಚಿಂತೆ ನನಗೇಕೆ ಎನ್ನುವ ಮನಸ್ಥಿತಿ, ನಾಳೆ ನಮ್ಮ ಕಾಲ್ಕೆಳಗೆ ಬೆಂಕಿ ಹತ್ತಿ ಉರಿಯಲು ಕಾರಣವಾಗುತ್ತದೆ ಅನ್ನುವುದನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ. ಜಾಗತಿಕ ತಾಪಮಾನಕ್ಕೆ ಹಲವು ಕಾರಣಗಳ ಪಟ್ಟಿ ಮಾಡುವ ನಾವು ನೈಸರ್ಗಿಕ ಸಂಪನ್ಮೂಲಗಳ ನಾಶ ಮಾಡುವುದೇ ಮುಖ್ಯ ಕಾರಣ, ಜನಸಂಖ್ಯೆಯ ಒತ್ತಡವೇ ಮುಖ್ಯ ಕಾರಣ, ಜಗತ್ತು ಬಿಸಿಯಾದರೇನು ನಾನು ತಣ್ಣಗಿರಬೇಕೆಂಬುದೇ ಕಾರಣ ಅನ್ನುವುದನ್ನ ಅರಿಯುತ್ತಿಲ್ಲ. ಅಕ್ರಮಗಳು, ಅರಿವಿನ ಕೊರತೆ, ಅಕ್ರಮ ಸಕ್ರಮಗಳಂತಹ ಅನೀತಿಗಳು ನಮ್ಮಿಂದ ದೂರವಾಗದ ಹೊರತು ಕಾಡಿನ ಬೆಂಕಿ ತಣ್ಣಗಾಗದು.