ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಸಾವಯವ ಸರದಾರರು

ಅರುಣಕುಮಾರ್ ವಿ.ಕೆ.,
೯೪೪೯೬೨೩೨೭೫
1

ಹಸಿರು ಕ್ರಾಂತಿಯ ನಂತರದಲ್ಲಿ ಕೃಷಿ ಕ್ಷೇತ್ರದಲ್ಲಿ ಅಧಿಕ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ರಾಸಾಯನಿಕ ಒಳಸುರಿಗಳನ್ನು ಬಳಸಿದ್ದೇ ಹೆಚ್ಚು. ಸಾವಯವ ಪದ್ಧತಿ ಅನುಸರಿಸಿ ಬೇಸಾಯ ಮಾಡುತ್ತಾನೆಂದರೆ ಆದಾಯ ತಡವಾಗಿ ಬರುತ್ತದೆ ಎಂಬ ನಂಬಿಕೆ ಕೆಲವರದ್ದು. ಈಗ ಕಾಲ ಬದಲಾಗಿದೆ. ಬಹುಪಾಲು ಅಧಿಕ ರಾಸಾಯನಿಕಗಳನ್ನು ಬಳಸಿದ್ದರಿಂದಲೇ ಮಣ್ಣಿನಲ್ಲಿ ಸತ್ವವಿಲ್ಲದಿರುವುದನ್ನು ರೈತರು ಕಂಡುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೈತರು ಸಾವಯವ ಕೃಷಿ ಪದ್ಧತಿ ಅನುಸರಿಸುವುದು ಹೆಚ್ಚು ಸೂಕ್ತ ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಸಮೀಪದ ಹಳ್ಳಿಯೊಂದರ ಕೃಷಿ ಕಾರ್ಮಿಕರ ಮಗನಾಗಿ ಹುಟ್ಟಿದ ಬಿ.ಕೆ.ಆನಂದ್ರವರು ತೀರ್ಥಹಳ್ಳಿ ಸಮೀಪದ ಬುಕ್ಲಾಪುರದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇವರು ಸಣ್ಣ ಹಿಡುವಳಿಯಲ್ಲಿಯೂ ಸಾಲವಿಲ್ಲದೇ ಸಾವಯವ ಕೃಷಿ ಮಾಡುತ್ತಾ, ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡು ಇತರರಿಗೆ ಅನುಸರಣೀಯರಾಗಿದ್ದಾರೆ.

ಇವರು ಕುಟುಂಬ ನಿರ್ವಹಣೆಯ ಜೊತೆಗೆ ಸಮೀಪದಲ್ಲಿದ್ದ ಕೃಷಿ ಋಷಿ ಪುರುಷೋತ್ತಮ ರಾಯರ ಕೃಷಿ ಕ್ಷೇತ್ರಕ್ಕೆ ಪ್ರವೇಶ ಮಾಡಿದರು. ಇಲ್ಲಿ ಕಂಡುಂಡ ೩೦ ವರ್ಷದ ಅನುಭವಗಳು ಕೃಷಿ ಬದುಕಿಗೆ ಆಸರೆಯಾದವು. ರಾಯರ ಮಾರ್ಗದರ್ಶನ, ಸ್ವತಃ ಆಂದೋಲನಗಳಲ್ಲಿ ಭಾಗಿಯಾಗಿದ್ದುದು, ಕೃಷಿ ಮಾಡಲು ತಂಪೆರೆಯಿತು. ಈ ಸಂದರ್ಭದಲ್ಲಿಯೇ ಗ್ರಾಮೀಣ ಕೃಷಿ ಜ್ಞಾನವನ್ನು ಚಿಕಿತ್ಸಕ ದೃಷ್ಟಿಕೋನದಲ್ಲಿ ಅರಿತರು. ಮುಂದೆ ಇವರು ಸಾವಯವ ಕೃಷಿಯಲ್ಲಿ ನಡೆದದ್ದೇ ದಾರಿಯಾಯಿತು. ಇವರು ತುಂಗಾ ನದಿಯ ಪಕ್ಕದಲ್ಲಿರುವ ಎರಡು ಎಕರೆಯಷ್ಟು ಇರುವ ಖುಷ್ಕಿ ಭೂಮಿಯಲ್ಲಿ ಅಡಿಕೆ, ತೆಂಗು, ಭತ್ತ ಹಾಗೂ ವೈವಿಧ್ಯಮಯ ತರಕಾರಿ ಬೆಳೆಗಳನ್ನು ಬೆಳೆದು ಎಲ್ಲರ ಗಮನ ಸೆಳೆದಿದ್ದಾರೆ. ಇವರ ಜಮೀನಿನಲ್ಲಿ ಹಾಗಲ, ಬಸಳೆ, ತೊಂಡೆ, ಬೀನ್ಸ್, ಸುವರ್ಣ ಗೆಡ್ಡೆ, ಶುಂಠಿ, ಅರಿಶಿಣ ಇತರೆ ಸೊಪ್ಪು ತರಕಾರಿಗಳನ್ನು ಸೊಂಪಾಗಿ ಬೆಳೆಯುತ್ತಿದ್ದಾರೆ. ಇಲ್ಲಿ ಬೆಳೆದ ಬೆಳೆಗಳಿಗೆ ಆಕರ್ಷಕವಾದ ಮಾರುಕಟ್ಟೆಯು ಸಹ ದೊರೆತಿರುವುದು ವೈಶಿಷ್ಟ್ಯತೆಯಾಗಿದೆ.

ಬೆಳೆಗಳಿಗೆ ಪೋಷಕಾಂಶಗಳನ್ನು ನೀಡುವಾಗ ಕಾಂಪೋಸ್ಟ್ ಗೊಬ್ಬರಗಳಲ್ಲಿ ಮಜ್ಜಿಗೆ, ಜೇನುತುಪ್ಪ, ಎಳನೀರು ಬಳಕೆ ಮಾಡುತ್ತಿದ್ದಾರೆ. ಸಾವಯವ ಪದ್ಧತಿಯಲ್ಲಿಯೇ ವಿವಿಧ ರೀತಿಯ ಕೀಟ ರೋಗ ನಿಯಂತ್ರಕಗಳನ್ನು ತಯಾರಿಸಿಕೊಂಡು ಬಳಸುತ್ತಿದ್ದಾರೆ. ಆ ಮೂಲಕ ಬೆಳೆಗಳಿಗೆ ಯಾವುದೇ ಕೀಟ ರೋಗ ಬಾಧೆಯಿಲ್ಲದಂತೆ ಫಸಲನ್ನು ಪಡೆಯುವ ಮೂಲಕ, ತಾವು ಬೆಳೆದ ಎಲ್ಲಾ ಬೆಳೆಗಳಲ್ಲೂ ರುಚಿ, ತಾಜಾತನವನ್ನು ಕಾಪಾಡಿಕೊಂಡು ಬರುತ್ತಿದ್ದಾರೆ.ಕೃಷಿಯಲ್ಲಿ ಸಂಪೂರ್ಣ ಸಾವಯವ ಪದ್ಧತಿಯನ್ನು ಅನುಸರಿಸುತ್ತಿರುವುದರಿಂದ ಇವರ ಬೆಳೆಗಳಿಗೆ ಬಹು ಬೇಡಿಕೆ ಬಂದಿದೆ. ಇವರು ಬೆಳೆಯುತ್ತಿರುವ ಕ್ಷೇತ್ರಕ್ಕೆ ಬಂದು ಗ್ರಾಹಕರು ತರಕಾರಿಗಳನ್ನು ಕೊಳ್ಳುತ್ತಿದ್ದಾರೆ. ಇವರೇ ನಿಗದಿ ಮಾಡಿದ ದರಕ್ಕೆ ಈ ಸುತ್ತಮುತ್ತಲಿನ ಗ್ರಾಹಕರು ಕೊಂಡು ಕೊಳ್ಳುತ್ತಿರುವುದು ವಿಶೇಷತೆಯಾಗಿದೆ.

5

ಇಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಸ್ವತಃ ತಾವೇ ಅನುಸರಿಸಿ ಇತರೆ ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ತನ್ನೂರಿನ ಸುತ್ತಮುತ್ತಲ ಭಾಗದ ರೈತರು ಪ್ರತಿದಿನ ಭೇಟಿ ಕೊಟ್ಟು ಬೆಳೆ ಉತ್ಪಾದನೆ ಬಗ್ಗೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಕೃಷಿ ಎಂದರೆ ಬಂಡವಾಳ ಹೂಡಿಕೆ ಮಾಡುವುದು, ಸಾಲಮಾಡಿ ಕೃಷಿ ಕಾರ್ಯ ಮಾಡಬೇಕು ಎನ್ನುವುದನ್ನು ಹುಸಿಗೊಳಿಸಿದ್ದಾರೆ. ಕೃಷಿಯಲ್ಲಿ ಸಾಲವಿಲ್ಲದೇ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿರುವ ಆನಂದರವರ ಕ್ಷೇತ್ರವಾದ ತೀರ್ಥಹಳ್ಳಿ ಸಮೀಪದ ಬುಕ್ಲಾಪುರಕ್ಕೆ ಒಮ್ಮೆ ಭೇಟಿ ಕೊಟ್ಟು ನೋಡಿ.

ರೈತರ ಸಂಪರ್ಕ ವಿಳಾಸ: ಶ್ರೀ ಬಿ.ಕೆ. ಆನಂದ್, ೮೧೦೫೭೬೪೫೫೧, ಬುಕ್ಲಾಪುರ ಗ್ರಾಮ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ