ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ತರಕಾರಿ ಬೆಳೆದು ಬದುಕು ಕಟ್ಟಿಕೊಂಡ: ಈರಪ್ಪ ವೆಂಕಪ್ಪ ಬೋರಡ್ಡಿ

ಡಾ.ಎಂ.ಸಿ.ಮಲ್ಲಿಕಾರ್ಜುನ,
9740369327
1

ಹತ್ತನೆಯ ತರಗತಿಯವರೆಗೆ ಶಾಲೆ ಕಲಿತು, ಮುಂದೆ ಓದಲಾಗದೆ ನೌಕರಿ ಮಾಡಬೇಕೆಂಬ ಆಸೆಯಿಂದ ಪಟ್ಟಣಸೇರಿದರು. ಪಟ್ಟಣದಲ್ಲಿ ಎಸ್. ಆರ್. ಪಾಟೀಲರ ಸಕ್ಕರೆ ಕಾರ್ಖಾನೆಯ ಲ್ಯಾಬ್ನಲ್ಲಿ ಸ್ವಲ್ಪ ದಿನ ಕೆಲಸ ಮಾಡಿದರು. ಅಲ್ಲಿಯೂ ಸಲ್ಲದೆ ಬಿಜಿನೆಸ್ ಮಾಡಬೇಕೆಂಬ ಬಯಕೆಯಿಂದ ಮೊಬೈಲ್ ಅಂಗಡಿ ಮಾಡಿ ಕೈಸುಟ್ಟುಕೊಂಡರು. ನೌಕರಿ ಬಿಟ್ಟು ಬಿಸಿನೆಸ್ ಕೈಕೊಟ್ಟ ದಿನವೇ ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡಬಾರದು ಎಂದು ನಿರ್ಧಾರಕ್ಕೆ ಬಂದರು. ನಮ್ಮಲ್ಲಿರುವ ಆಸ್ತಿಗೆ ನಾವೇ ಮಾಲೀಕರು, ನಾವೇ ಹತ್ತಾರು ಜನರಿಗೆ ನೌಕರಿ ಕೊಡಬಹುದೆಂದು ವ್ಯವಸಾಯವನ್ನು ಆರಂಭಿಸಿದವರು ಶ್ರೀ ಈರಪ್ಪ ವೆಂಕಪ್ಪ ಬೋರಡ್ಡಿ. ತಮ್ಮ ಭಾಗದಲ್ಲಿ ಎಲ್ಲರೂ ಕಬ್ಬನ್ನು ಬೆಳೆದು ಸಾಕಷ್ಟು ನಷ್ಟ ಅನುಭವಿಸುತ್ತಿದ್ದರು. ಕಬ್ಬಿಗೆ ಅಗತ್ಯ ನೀರಿನ ಕೊರತೆ, ಗೊಣ್ಣೆ ಹುಳುವಿನ ಬಾಧೆ, ಕೂಲಿ ಕಾರ್ಮಿಕರ ಕೊರತೆ, ಸಕಾಲಕ್ಕೆ ಕಟಾವಾಗದೆ ತೂಕ ಕಡಿಮೆಯಾಗುವುದು, ತಡವಾಗಿ ಬಿಲ್ ಪಾವತಿ ಎಲ್ಲವೂ ಸೇರಿ ಇಲ್ಲಿ ಕಬ್ಬು ಬೆಳೆಯುವುದೇ ಒಂದು ಸವಾಲಾಗಿತ್ತು. ಇದನ್ನು ಸ್ವತಃ ಕಣ್ಣಾರೆ ಕಂಡಿದ್ದ ಇವರು ಇದಕ್ಕೆ ಪರ್ಯಾಯ ಬೆಳೆಯಾಗಿ ತರಕಾರಿಗಳನ್ನು ಬೆಳೆಯಲು ಯೋಜನೆಯೊಂದನ್ನು ರೂಪಿಸಿಕೊಂಡರು. ತರಕಾರಿ ಬೆಳೆಯಲ್ಲಿ ಯಶಸ್ಸಿನ ಹಾದಿ ತುಳಿದು ಈಗ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

3

ಈಗಾಗಲೇ ತನ್ನ ಅಣ್ಣ ಅನುಸರಿಸುತ್ತಿದ್ದ ವಿಧಾನವನ್ನೇ ಇವರು ಅನುಸರಿಸತೊಡಗಿದರು. ಕಡಿಮೆ ನೀರಿನ ಬಳಕೆಗಾಗಿ ಜಮೀನಿಗೆ ಮಲ್ಚಿಂಗ್ ಪೇಪರ್ ಹಾಕಿ ಬೆಳೆ ತೆಗೆಯಲು ನಿರ್ಧರಿಸಿದರು. ಇದರ ಜೊತೆಗೆ ಮಣ್ಣಿನ ಸಂರಕ್ಷಣೆಗೂ ಒತ್ತು ನೀಡಿದರು. ಈ ಮಲ್ಚಿಂಗ್ ವಿಧಾನದಿಂದ ಭೂಮಿಯಲ್ಲಿ ತೇವಾಂಶದ ಉಳಿಕೆ, ಮಣ್ಣಿನ ಫಲವತ್ತತೆ ಕಾಪಾಡುವಿಕೆ, ಪೋಷಕಾಂಶಗಳ ಪೂರೈಕೆ ಎಲ್ಲದಕ್ಕೂ ಅನುಕೂಲವನ್ನು ಕಂಡು ಕೊಂಡರು. ಇದರಿಂದ ತಮ್ಮ ಜಮೀನಿನಲ್ಲಿ ತರಕಾರಿ ಬೆಳೆಗಳಾದ ಹೀರೆಕಾಯಿ, ಹಾಗಲಕಾಯಿ, ಬದನೆ, ಟೊಮಾಟೊ ಬೆಳೆಗಳು ಬೆಳೆದು ಬಂಪರ್ ಫಸಲನ್ನು ಪಡೆಯತೊಡಗಿದ್ದಾರೆ.ಈಗಿರುವ ೬ ಎಕರೆ ಜಮೀನಿನಲ್ಲಿ ಮೂರು ಎಕರೆಯಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ಇದರ ಜೊತೆಗೆ ಅರ್ಧ ಎಕರೆ ಹೀರೆಕಾಯಿ, ಅರ್ಧ ಎಕರೆ ಹಾಗಲಕಾಯಿ, ಒಂದು ಎಕರೆ ಬದನೆಕಾಯಿ ಹಾಗೂ ೧೦ ಗುಂಟೆಯಲ್ಲಿ ಟೊಮಾಟೊ ಇನ್ನುಳಿದ ಜಮೀನಿನಲ್ಲಿ ಸೊಪ್ಪನ್ನು ಬೆಳೆದು ಸ್ವತಃ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ. ಅರ್ಧ ಎಕರೆಯಲ್ಲಿ ಬೆಳೆದ ಹಾಗಲ ಕಾಯಿ ಬೆಳೆಯೊಂದರಲ್ಲಿ ಒಂದು ಕೊಯ್ಲಿಗೆ ಒಂದು ಲಕ್ಷ ರೂ. ಆದಾಯ ಪಡೆದಿರುತ್ತಾರೆ.

5

ತಾವು ಬೆಳೆದ ತರಕಾರಿ ಬೆಳೆಗಳನ್ನು ಮಾರುಕಟ್ಟೆಯಲ್ಲಿ ತಾವೇ ಮಾರಾಟ ಮಾಡುವುದು ಇವರ ವಿಶೇಷ. ಇದರಿಂದಾಗಿ ನೇರವಾಗಿ ಲಾಭ ಪಡೆದುಕೊಳ್ಳಬಹುದೆಂಬುದನ್ನು ಇವರ ಅನುಭವದ ಮಾತು. ನಮ್ಮ ರೈತರು ಎಡವುತ್ತಿರುವುದು ಇಲ್ಲಿಯೇ, ನಮ್ಮ ರೈತರಲ್ಲಿ ವ್ಯಾಪಾರೀ ಮನೋಭಾವ ಎಲ್ಲಿಯವರೆಗೂ ಬರುವುದಿಲ್ಲವೋ ಅಲ್ಲಿಯವರೆಗೂ ನಾವು ಹಿಂದುಳಿದೇ ಇರುತ್ತೇವೆ ಎಂಬುದು ಇವರ ಬಲವಾದ ನಂಬಿಕೆ. ನಮ್ಮನ್ನು ನಾವು ಕಡಿಮೆಗೆ ಅಂದಾಜಿಸಿಕೊಳ್ಳಬಾರದು. ದೇಶಕ್ಕೆ ಅನ್ನ ಕೊಡುವ ಕಾಯಕದ ಅನುಮಪ ಸೇವೆಯಲ್ಲಿ ನಾವು ನಿರತರಾಗಿದ್ದೇವೆ. ಯಾವ ನೌಕರಿಗಿಂತ ನಮ್ಮ ನೌಕರಿ ಕಮ್ಮಿಯಿಲ್ಲ ಎನ್ನುವುದು ನನ್ನ ಅನುಭವ ಎಂದು ಆತ್ಮಾಭಿಮಾನದಿಂದ ಬೋರಡ್ಡಿಯವರು ಹೇಳುತ್ತಾರೆ. ಇವರ ಬಗ್ಗೆ ಮಾಹಿತಿ ಪಡೆದು ಬೆಂಗಳೂರಿನಿಂದ ಮಾರಾಟಗಾರರು ಬಂದು ಇವರ ಹೊಲದಿಂದ ತರಕಾರಿಗಳನ್ನು ಪೂರೈಕೆ ಮಾಡಲು ಕೇಳಿಕೊಂಡು ಹೋಗಿದ್ದಾರೆ. ಆದರೆ ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿಗಳಿಗೆ ಒಳ್ಳೆ ಬೇಡಿಕೆ ಬರುತ್ತಿದೆ. ಬಾಗಲಕೋಟೆ, ಮುದೋಳ, ಬೆಳಗಾವಿ ಮುಂತಾದ ನಗರಗಳಿಗೆ ಸ್ವತಃ ನಾವೇ ಮಾರುಕಟ್ಟೆಗೆ ಪೂರೈಕೆ ಮಾಡುತ್ತಿದ್ದೇವೆ ಎನ್ನುತ್ತಾರೆ.

78

ತಮ್ಮ ಹಳ್ಳಿ ಬಿಟ್ಟು ಹೋಗಿ ಯಾರದೋ ಕೈಕೆಳಗೆ ಹೇಳಿದ ಹಾಗೇ ಕೇಳಿ ಕೆಲಸ ಮಾಡುವುದರ ಬದಲು ಇಂದಿನ ನಮ್ಮ ಯುವಕರು ತಮ್ಮ ತಂದೆ ತಾಯಿಯರ ಆಸ್ತಿ ಇದ್ದಲ್ಲಿ ಸ್ವತಂತ್ರವಾಗಿ ಅವರ ಸ್ವಂತ ಜಮೀನಿನಲ್ಲಿ ಕೃಷಿ ಮಾಡಿದರೆ ಬೇರೆಯವರಿಗೆ ಉದ್ಯೋಗ ಕೊಡುವಂತಾಗುತ್ತದೆ ಎಂದು ಕಿವಿಮಾತು ಹೇಳುತ್ತಾರೆ. ಬೋರಡ್ಡಿಯವರ ಮತ್ತೊಂದು ವಿಶೇಷತೆ ಎಂದರೆ ಮಲ್ಚಿಂಗ್ ವಿಧಾನದ ಬಗ್ಗೆ ತಮ್ಮ ಊರಿನ ಸುತ್ತಮುತ್ತಲಿನ ರೈತರ ಜಮೀನುಗಳಿಗೆ ಸ್ವತಃ ತಾವೇ ಹೋಗಿ ಮಾಹಿತಿ ಕೊಟ್ಟು ಬರುತ್ತಾರೆ. ಇಂತಹ ವಿಶಿಷ್ಟ ವ್ಯಕ್ತಿತ್ವದ ಯುವ ರೈತನನ್ನು ಕಾಣಬೇಕೆಂದರೆ ಬಾಗಲಕೋಟೆ ಜಿಲ್ಲೆಯ, ಮುದೋಳ ತಾಲ್ಲೂಕಿನ ಉತ್ತೂರು ಗ್ರಾಮದ ತರಕಾರಿ ಕ್ಷೇತ್ರಕ್ಕೆ ಭೇಟಿ ಕೊಟ್ಟರೆ ತಿಳಿದೀತು.