ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಮನೆಯೇ ಗ್ರಂಥಾಲಯ ಹೊಲವೇ ಪ್ರಯೋಗಾಲಯ

ಡಾ. ರೇಣುಕ ಎಸ್. ಸಾಲುಂಕೆ,
9900484680
1

ಸುಮಾರು ೧೫ ವರ್ಷಗಳಿಂದ ತಮ್ಮದೇ ಆದ ಶೈಲಿಯಲ್ಲಿ ಆಡಂಬರವಿಲ್ಲದ ಬದುಕಿನೊಂದಿಗೆ ಕೃಷಿಗೆ ಶರಣಾದ ಶ್ರೀಯುತ ಬಸನಗೌಡ ವೆಂಕನಗೌಡ ಪೋಲಿಸ್ಪಾಟೀಲ ಇವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದವರು. ಇವರ ಶಿಕ್ಷಣ ಮೆಕಾನಿಕಲ್ ಇಂಜನಿಯರಿಂಗ್. ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವ ಹಾಗೆ ಇವರು ಭೂಮಿತಾಯಿ ಆಶೀರ್ವಾದದಿಂದ ಕೃಷಿಯ ಅಭಿರುಚಿಯನ್ನು ಬೆಳೆಸಿಕೊಂಡು ಕೃಷಿಯೇ ಜೀವಾಳ ಎಂದು ನಂಬಿದರು. ಕಬ್ಬು ಇವರ ಮೂಲ ಬೆಳೆ, ಇವರು ಸ್ವತಃ ಹೊಲದಲ್ಲಿ ಬೆಳೆಗಳೊಂದಿಗೆ ಮಾತನಾಡುತ್ತಾ ಅವುಗಳ ಪಾಲನೆ ಪೋಷಣೆಯಲ್ಲಿ ಸಮಯ ಕಳೆಯುತ್ತಿರುವ ಒಬ್ಬ ರೈತಯೋಗಿ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೆ ಮೇಲು ಎನ್ನುವ ನಾಣ್ಣುಡಿಯಂತೆ, ಮಣ್ಣಿನ ಫಲವತ್ತತೆ, ಒಂದೇ ಬೆಳೆ ಬೆಳೆಯುವುದರಿಂದ ಹಾಳಾಗುವುದು ಎಂದು ಅರಿತು ಇವರ ಬೆಳೆಯ ಪರಿವರ್ತನೆ ಮಾಡಿ ಇನ್ನಿತರ ಬೆಳೆಗಳಾದ ಬದನೆ, ಉಳ್ಳಾಗಡ್ಡೆ, ಟೊಮ್ಯಾಟೋ ಮುಂತಾದ ಬೆಳೆಗಳನ್ನು ಬೆಳೆಯಲು ತಮ್ಮ ಹೊಲವನ್ನು ತಯಾರಿಸಿಕೊಂಡು ಬಹು ಬೆಳೆಯ ಒಡೆಯರಾದರು. ಅಷ್ಟೇ ಅಲ್ಲದೇ ಅವುಗಳ ರಕ್ಷಣೆಗೆ ಬೇಕಾದ ಪೂರಕ ಅಂಶಗಳನ್ನು ಗಮನಿಸುತ್ತಾ ತಮ್ಮ ಕೃಷಿ ಸಾಮ್ರಾಜ್ಯದಲ್ಲಿ ತೊಡಗಿದರು. ಬೇಸಾಯದಲ್ಲಿ ತೃಪ್ತಿ ಕಂಡ ಇವರು ಹೊಸ ತಂತ್ರಜ್ಞಾನಗಳನ್ನು ಇಣುಕಿ ನೋಡುತ್ತಾ ಅದರ ಕಡೆ ಗಮನ ಹರಿಸಿದರು. ರೋಗದಿಂದ ಬೆಳೆಯ ರಕ್ಷಣೆಗೆ ಪ್ಲಾಸ್ಟಿಕ್ ಹೊದಿಕೆ (ಮಲ್ಚಿಂಗ್) ಹಾಗೂ ಸೋಲಾರ್ ಟ್ಯಾಪ್ ಪದ್ಧತಿ ಅಳವಡಿಸಿಕೊಂಡು ಕೇವಲ ಆರು ತಿಂಗಳಲ್ಲಿ ಹೆಚ್ಚಿನ ಫಸಲನ್ನು ತರಕಾರಿ ಬೆಳೆಗಳಿಂದ ಪಡೆದಿರುವ ಇವರು ರೈತ ವಿಜ್ಞಾನಿಯೇ ಸರಿ.

3

ಕಬ್ಬು ಬೆಳೆಯುವ ನಾಡಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಇವರು ತಮ್ಮ ಹೊಲವನ್ನೇ ಪ್ರಯೋಗಾಲಯವೆಂದು ಅಂತರ ಬೆಳೆಗಳಾದ ಕಬ್ಬು, ಗೊವಿನಜೋಳ (Sತಿeeಣ ಛಿoಡಿಟಿ) ಮತ್ತು ಕಡಲೆಯನ್ನು ಸಮೃದ್ಧವಾಗಿ ಬೆಳೆಯುತ್ತಿದ್ದಾರೆ. ಅದೇ ರೀತಿ ಚೆಂಡು ಹೂ, ಜವೇಗೋದಿ, ಉದ್ದು, ತೊಗರಿಯನ್ನು ತಮ್ಮ ಮನೆಯ ಉಪಯೋಗಕ್ಕೆಂದು ಬೆಳೆಯುತ್ತಿರುವುದು ಶ್ಲಾಘನೀಯ. ಹೀಗೆ ತಮ್ಮ ಜೀವನವನ್ನು ಕೃಷಿಗಾಗಿ ಮುಡುಪಿಟ್ಟು ಇನ್ನಿತರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಆತ್ಮಹತ್ಯೆಗೆ ಶರಣಾಗಬೇಕೆಂದು ಯೋಚಿಸುವ ಜೀವಗಳಿಗೆ ಸಾಂತ್ವನ ಹೇಳುತ್ತಾ ಬದುಕಿನ ಮೌಲ್ಯಗಳನ್ನು ತಿಳಿಸಿ ಕೃಷಿಯಲ್ಲಿ ಭರವಸೆ ನೀಡುತ್ತಿರುವ ಸಾಧಕರಿವರು. ಕೃಷಿಗೆ ಮಿಡಿದ ಹೃದಯ, ಬಸನಗೌಡ ವೆಂಕನಗೌಡ ಪೋಲಿಸ್ಪಾಟೀಲ ಅವರು ಕೂಲಿ ಕಾರ್ಮಿಕರೇ ದೇವರೆಂದು ನಂಬಿದ್ದು ಅವರ ಸುಖ ದುಃಖಗಳಿಗೆ ಸ್ಪಂದಿಸುತ್ತಾ, ಅವರ ಮಕ್ಕಳ ವಿದ್ಯಾರ್ಜನೆಗೆ ಸಹಾಯಹಸ್ತ ನೀಡುತ್ತಿರುವ ಕರ್ಮಯೋಗಿ ಇವರು.

5

ಒಗ್ಗಟ್ಟಿನಲ್ಲಿ ಬಲವಿದೆ ಎಂದು ನಂಬಿರುವ ಇವರು ಸಮಾನ ಮನಸ್ಸಿನ ಯುವಶಕ್ತಿಯ ನಾಯಕರಾಗಿ ಕೃಷಿಗೆ ಸಂಬಂಧಿಸಿದ ವಿಷಯಗಳ ಚರ್ಚೆ ಮಾಡುತ್ತಾ ಮುನ್ನುಗ್ಗುತ್ತಿರುವ ಯುವ ಚೇತನ. ಎರಡರಿಂದ ಮೂರು ಸಾವಿರ ಕೃಷಿಗೆ ಸಂಬಂಧಿಸಿದ ಪುಸ್ತಕಗಳು ಮತ್ತು ೧೫೦ ಸಿಡಿಗಳನ್ನು ಸಂಗ್ರಹಿಸಿ ತಮ್ಮ ಮನೆಯನ್ನೇ ಕೃಷಿ ಗ್ರಂಥಾಲಯ ಮಾಡಿಕೊಂಡಿದ್ದಾರೆ. ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಗುವ ರೈತರ ಸಾಧನೆ ಶೋಧನೆ ಹಾಗೂ ಕೃಷಿಗೆ ಸಂಬಂಧಿಸಿದ ಲೇಖನಗಳನ್ನು ಸಂಗ್ರಹಿಸಿ, ಲೆಡ್ಜರಗಳಲ್ಲಿ ಅಚ್ಚುಕಟ್ಟಾಗಿ ಅಂಟಿಸಿ ಪತ್ರಿಕೆ ಗಳನುಸಾರವಾಗಿ ಬೇರೆ ಬೇರೆ ಲೆಡ್ಜರಗಳನ್ನು ತಯಾರಿಸಿರುವುದು ಅವರ ಶಿಸ್ತಿನ ವ್ಯಕ್ತಿತ್ವವನ್ನು ಬಿಂಬಿಸುತ್ತಿದೆ. ಇಲ್ಲಿಯವರೆಗೆ ೧೮೦ ಕೃಷಿ ಪಂಡಿತರ ಅಲ್ಬಂ ಮಾಡಿದ್ದಾರೆ. ಅಲ್ಲದೇ ಶ್ರೇಷ್ಠ ಕೃಷಿಕ ಹಾಗೂ ಕೃಷಿ ಮಹಿಳೆಯರ ವಿವರವನ್ನು ಸಂಗ್ರಹಿಸಿದ್ದಾರೆ.

7

ಸೋಮವಾರದಿಂದ ಶುಕ್ರವಾರದವರೆಗೆ ದೂರದರ್ಶನ ಚಂದನದಲ್ಲಿ ಬಿತ್ತರಗೊಳ್ಳುವ ರೈತರ ಹಾಗೂ ವಿಜ್ಞಾನಿಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಇದಲ್ಲದೆ, ಈ ಟಿ ವಿ ನ್ಯೂಸ್ನಲ್ಲಿ ಬರುವ ಅನ್ನದಾತ ಮತ್ತು ಮರಾಠಿ ಶ್ಯಾಮ್ ಚಾನೆಲ್ ವಾಹಿನಿಯಲ್ಲಿ ಬಿತ್ತರಗೊಳ್ಳುವ ಕೃಷಿ ನಿರತ ವಿಷಯಗಳನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಇನ್ನೂ ಬೆಳೆವಾರು ರೈತರ ಹಾಗೂ ವಿಜ್ಞಾನಿಗಳ ಮಾಹಿತಿಯನ್ನು ಹೊಂದಿರುವ ಇವರು ಪ್ರಗತಿಪರ ರೈತರ ಸದುಪಯೋಗ ಪಡೆಯಲು ಅನುವಾಗುವಂತ ಗುಂಪಿನ ರಚನೆ ಹಾಗೂ ವಾಟ್ಸಪ್ ಗ್ರೂಪ್ನ ಚಿಜmiಟಿ ಆಗಿದ್ದಾರೆ. ದೇಶ ಸುತ್ತಿ ನೋಡು ಕೋಶ ಓದಿ ತಿಳಿ ಅನ್ನುವ ಹಾಗೆ ತಾವು ಸಂಗ್ರಹಿಸಿದ ಕೃಷಿ ಪುಸ್ತಕ ಲೇಖನಗಳ ಜ್ಞಾನದಿಂದ ತೃಪ್ತರಾಗದೇ ಹಲವಾರು ರೈತರ ಹೊಲಗಳನ್ನೂ ಭೇಟಿ ಮಾಡಿ ಸ್ವತಃ ಅನುಭವಗಳನ್ನು ಹಂಚಿಕೊಳ್ಳುತ್ತ್ನಾ ಇನ್ನಿತರ ರೈತರ ಹೊಲದಲ್ಲಿ ಅನುಸರಿಸುವ ಹೊಸ ತಂತ್ರಜ್ಞಾನ, ಹೊಸ ತಳಿಗಳು ಹಾಗೂ ಅವರ ಸಮಗ್ರ ಪದ್ಧತಿಗಳ ಬಗ್ಗೆ ಮಂಥನ ಮಾಡುತ್ತಿರುವ ಶ್ರಮಜೀವಿ ಇವರು. ಕರ್ನಾಟಕದಲ್ಲಿ ಲಭ್ಯವಿರುವ ಹಾಗೂ ವಿಜ್ಞಾನಿಗಳ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ ತಿಳಿಯಬಹುದು.

ಕೃಷಿತೋ ರಕ್ಷತಿ ರಕ್ಷಿತಃ ಅನ್ನುವ ಹಾಗೇ ಕೃಷಿ ಸಲಕರಣೆ, ಯಂತ್ರೋಪರಣಗಳು, ಬೀಜ, ಸಸಿಗಳು, ಗೊಬ್ಬರ ಹಾಗೂ ಇನ್ನಿತರ ಕೃಷಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಲಭ್ಯವಿರುವ ಸ್ಥಳಗಳು, ಹಾಗೂ ವ್ಯಕ್ತಿಗಳ ಸಂಪೂರ್ಣ ವಿಳಾಸದ ಚೀಟಿಗಳ ಸಂಗ್ರಹಣೆ ಮಾಡಿದ್ದಾರೆ. ಹೀಗೆ ಹಲವಾರು ಕೃಷಿಗೆ ಸಂಬಂಧಿಸಿದ ವಿಷಯಗಳ ಕೇಂದ್ರ ಬಿಂದು ವಾಗಿರುವ ಇವರು ಬಹುಮುಖ ವ್ಯಕ್ತಿತ್ವದ ಗಣಿಯಾಗಿದ್ದಾರೆ.