ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಚಿಂತನೆ

ಕೃಷಿ ಸಾಧಕರಿಗೊಂದು ಕಿವಿಮಾತು

image_
ಡಾ.ಎ.ಎಸ್.ಕುಮಾರ ಸ್ವಾಮಿ
9448943990

ಕೃಷಿಕನು ನಿತ್ಯವೂ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿರುವನು. ದುರ್ಲಭವಾಗುತ್ತಿರುವ ಕಾರ್ಮಿಕರು, ಮಳೆಯ ಏರಿಳಿತ, ಕುಸಿಯುತ್ತಿರುವ ಅಂತರ್ಜಲ, ಸದಾ ಕಣ್ಣು ಮುಚ್ಚಾಲೆಯಾಡುತ್ತಿರುವ ವಿದ್ಯುತ್, ನಾನಾ ರೀತಿಯ ಕ್ರಿಮಿ, ಕೀಟ, ರೋಗ ಹಾಗೂ ಕಾಡು ಪ್ರಾಣಿಗಳ ಉಪಟಳ, ಮೋಟಾರ್ ಸುಡುವುದು, ಕೊಳವೆಗಳು ಒಡೆಯುವುದು, ದಿನೇ ದಿನೇ ಹೆಚ್ಚುತ್ತಿರುವ ಕೃಷಿ ಪರಿಕರಗಳ ಬೆಲೆಗಳು, ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರೆಯದಿರುವುದು, ಒಂದೇ ಸಮನೆ ಹೆಚ್ಚುತ್ತಿರುವ ಜೀವನ ವೆಚ್ಚ, ಮುಂತಾದ ಅನೇಕ ಸಮಸ್ಯೆಗಳಲ್ಲಿ ಒಂದಲ್ಲಾ ಒಂದನ್ನು ನಿತ್ಯವೂ ಎದುರಿಸುತ್ತಾನೆ. ಇವುಗಳಲ್ಲಿ ಕೆಲವು ಸವಾಲುಗಳು ಬಹಳ ಗಂಭೀರವಾಗಿದ್ದು ಅವನ ಅಸ್ತಿತ್ವಕ್ಕೇ ಧಕ್ಕೆ ತರುವಂತೆ ಇರುತ್ತವೆ

ರೈತರು ಈ ಸವಾಲುಗಳನ್ನು ಎದುರಿಸಲು ಹಾಗೂ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಾರೆ. ಎಲ್ಲಾ ಬಲ್ಲ ಮೂಲಗಳಿಂದ ತಾಂತ್ರಿಕ, ಆರ್ಥಿಕ ಅಥವಾ ಇನ್ನಿತರ ಸಹಾಯ ಪಡೆಯುತ್ತಾರೆ. ಆದರೂ ಸಹ ಇಂದಿನ ವ್ಯವಸ್ಥೆಯಲ್ಲಿ ಎಲ್ಲಾ ಸವಾಲುಗಳಿಗೂ ಸಿದ್ಧ ಉತ್ತರವಿಲ್ಲ. ಅನೇಕ ಸವಾಲುಗಳಿಗೆ ಕೃಷಿಕರು ಇತರೆ ಬಲ್ಲ ಮೂಲಗಳಿಂದ ಮಾಹಿತಿ ಪಡೆಯುವುದರ ಜೊತೆಯಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಕೆಲವು ಸಾರಿ ಈ ಪರಿಹಾರಗಳು ವಿಶಿಷ್ಟ ನಾವೀನ್ಯತೆಯಿಂದ ಕೂಡಿದ ನೂತನ ಆವಿಷ್ಕಾರಗಳಾಗಿರುತ್ತವೆ. ಇತರೆ ಅನೇಕ ಜನ ರೈತರು ವಿಫಲರಾದ ಸನ್ನಿವೇಶಗಳಲ್ಲಿ ಇವರು ಸಫಲರಾಗಿ ಇತರರಿಗೆ ಮಾದರಿಯಾಗಿರುತ್ತಾರೆ

ಈ ರೀತಿಯ ಕೃಷಿಕರನ್ನು ಸಾಧಕರೆಂದು ಗುರುತಿಸಿ ಅವರಿಗೆ ಇತರೆ ರೈತರು ಸಮಾಜದಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ನೀಡುತ್ತಾರೆ. ಇವರಲ್ಲಿ ಕೆಲವರನ್ನು ಕೃಷಿ ವಿಶ್ವವಿದ್ಯಾಲಯಗಳು, ಸರ್ಕಾರಿ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸುವ ಪದ್ಧತಿಯೂ ಆಚರಣೆಯಲ್ಲಿದೆ. ಜೊತೆಯಲ್ಲಿ ಇತರೆ ರೈತರಿಗೆ ಇವರು ಅಳವಡಿಸಿರುವ ನೂತನ ತಂತ್ರಜ್ಞಾನವನ್ನು ಇವರ ಬಾಯಿಂದಲೇ ಪ್ರಚಾರ ಮಾಡಿಸಿ, ಇತರೆ ರೈತರೂ ಸಹ ಅಳವಡಿಸಿಕೊಳ್ಳಲು ಪ್ರೇರೇಪಣೆ ನೀಡಲಾಗುತ್ತದೆ. ಇವರಿಗೆ ದೊರೆಯುವ ಗೌರವವನ್ನು ಗಮನಿಸಿದ ಅನೇಕ ಜನ ರೈತರು ನೂತನ ತಂತ್ರಜ್ಞಾನವನ್ನು ತಾವೂ ಸಹ ಅಳವಡಿಸಿಕೊಂಡು ಸಾಧಕರೊಡನೆ ಗುರುತಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಾರೆ. ಆದ್ದರಿಂದ ಕೃಷಿ ತಂತ್ರಜ್ಞಾನ ವಿಸ್ತರಣೆಯ ಕಾರ್ಯಕ್ರಮಗಳಲ್ಲಿ ಇವರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ

ಈ ಪ್ರಯತ್ನದಲ್ಲಿ ಕೆಲವು ಮಿಥ್ಯಾ ಸಾಧಕರು ಸುಲಭ ಪ್ರಚಾರಕ್ಕೋಸ್ಕರ ಅವಕಾಶ ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಇಂತಹ ಕೆಲವರು ಸಭೆಗಳಲ್ಲಿ ಮಾತನಾಡುವ ಸಂದರ್ಭಗಳಲ್ಲಿ ಸತ್ಯವನ್ನು ಮರೆಮಾಚಿ, ತಮಗೆ ಗೊತ್ತಿಲ್ಲದೆಯೇ, ರೈತರನ್ನು ತಪ್ಪು ದಾರಿಗೆಳೆಯಬಹುದು. ಆದ್ದರಿಂದ ಸಾಧಕರನ್ನು ಗುರುತಿಸುವಾಗ ಕೇವಲ ಅವರ ಮಾತುಗಳನ್ನು ನಂಬದೇ ಅತ್ಯಂತ ಎಚ್ಚರಿಕೆಯಿಂದ ಅವರು ಮಾಡಿರುವ ಸಾಧನೆಯನ್ನು ಪರಿಣತರು ಪರಿಶೀಲನೆ ಮಾಡಬೇಕು. ಆ ಮಟ್ಟದ ತೋರಿಸಿಕೊಳ್ಳಬಹುದಾದ ಸಾಧನೆಯನ್ನು ಮಾಡಿರುವ ರೈತರನ್ನು ಮಾತ್ರ ಸಾಧಕರೆಂದು ಗುರುತಿಸಬೇಕೇ ಹೊರತು ತನ್ನ ಹೊಲ ಗದ್ದೆಗಳಲ್ಲಿ ಏನನ್ನೂ ಮಾಡದೇ, ಕೇವಲ ಚತುರ ಮಾತುಗಾರಿಕೆಯಿಂದ ಜನರನ್ನು ಸೆಳೆಯುವವರನ್ನು ಸಾಧಕರೆಂದು ಗುರುತಿಸಬಾರದು.

ನಮ್ಮ ರೈತ ಸಮುದಾಯವು ಕೃಷಿ ಸಾಧಕರನ್ನು ಉನ್ನತ ಸ್ಥಾನದಲ್ಲಿ ಗುರುತಿಸುವುದರಿಂದ ಇವರುಗಳು ಇತರೆ ರೈತರು ಕೇವಲ ಪ್ರಾಮಾಣಿಕ ಪ್ರಯತ್ನಗಳ ಮೂಲಕವೇ ಸಾಧನೆ ಮಾಡಲು ಪ್ರೇರೇಪಿಸುವಂತೆ ಈ ಕೆಳಗಿನ ಕೆಲವು ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು

೧.ಕೇವಲ ಪ್ರಚಾರಕ್ಕೆ, ಪ್ರದರ್ಶನಕ್ಕೆ ಸಾಧಕರಾಗ ಬಯಸುವವರನ್ನು ದೂರವಿಡಿ. ಕೇವಲ ಮಾತಿನ ಚತುರತೆ ತೋರದೆ ಕ್ಷೇತ್ರದಲ್ಲಿ ನಿಜವಾದ ಸಾಧನೆಯನ್ನು ಮಾಡಿರುವವರು ಮಾತ್ರ ಗುರುತಿಸಿಕೊಳ್ಳಲು ಪ್ರಯತ್ನಿಸಿ.

೨.ಸಾಧನೆಯು ಕೇವಲ ಅನುಕರಣೆಯಿಂದ ಆಗುವುದಲ್ಲ, ಅದಕ್ಕೆ ಯಾವ ರೀತಿಯ ಕಠಿಣ ಪರಿಶ್ರಮ ಬೇಕು ಎನ್ನುವುದನ್ನು ಇತರೆ ರೈತರಿಗೆ ತಿಳಿ ಹೇಳಿ.

೩.ನಿಮ್ಮ ಸಾಧನೆಗೆ ಇತರರಿಂದ ದೊರೆತ ಪ್ರೇರಣೆ, ಪ್ರೋತ್ಸಾಹ ಮತ್ತು ಪ್ರಚೋದನೆಗಳ ಬಗ್ಗೆ ಇತರೆ ರೈತರಿಗೆ ತಿಳಿಸಿ

೪.ನಿಮ್ಮ ಸಾಧನೆಯಲ್ಲಿ ನಿಮ್ಮ ಕುಟುಂಬದ ಸದಸ್ಯರ ಪಾಲುದಾರಿಕೆ ಮತ್ತು ಸಹಕಾರ ಎಷ್ಟರಮಟ್ಟಿಗೆ ದೊರೆತಿದೆ ಎನ್ನುವುದನ್ನು ತಿಳಿಸಿ.

೫.ನಿಮ್ಮ ಸಾಧನೆಯ ಹಾದಿಯಲ್ಲಿ ನೀವು ಎದುರಿಸಿದ ವಿಫಲತೆಗಳು ಹಾಗೂ ಎಡರು ತೊಡರುಗಳನ್ನು ವಿವರಿಸಿರಿ. ಸಾಧನೆಗೆ ಸುಲಭದ ದಾರಿಯಿಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಡಿ. ಎದುರಾಗಬಹುದಾದ ಸಮಸ್ಯೆಗಳನ್ನು ಎದುರಿಸುವ ಉಪಾಯಗಳನ್ನು ತಿಳಿಸಿ

೬.ಸಾಧನೆಯ ಹಿಂದೆ ಇರಬೇಕಾದ ಕೆಲಸದಲ್ಲಿ ತನ್ಮಯತೆ, ಕಾರ್ಮಿಕರೊಡಗೂಡಿ ದುಡಿಯುವಿಕೆ ಸಮಯ ಪರಿಪಾಲನೆ ಮುಂತಾದ ಸಾಧನೆಗೆ ಇರಬೇಕಾದ ಮನೋಭಾವಗಳ ಬಗ್ಗೆ ತಿಳಿಸಿ

೭.ಸಾಧನೆಯ ಮಟ್ಟವನ್ನು ಸದಾ ಉಳಿಸಿಕೊಳ್ಳಲು ನೀವು ಕೈಗೊಂಡಿರುವ ನಿರಂತರತೆಯ ಪ್ರಯತ್ನಗಳ ಬಗ್ಗೆ ತಿಳಿಸಿ.

೮.ನಿಮ್ಮ ಸಾಧನೆಗಳ ಬಗೆಗಿನ ಹೇಳಿಕೆಗಳಲ್ಲಿ ಸ್ಪಷ್ಟತೆ ತರಲು ಅನುಕೂಲವಾಗುವಂತೆ ನಿಮ್ಮ ಸಾಧನೆಗಳನ್ನು ಮತ್ತು ನಿಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದವರುಗಳ ಅಭಿಪ್ರಾಯಗಳನ್ನು ದಾಖಲಿಸಿ ಇತರರಿಗೆ ತಿಳಿಸಿ

೯.ನಿಮ್ಮ ಕ್ಷೇತ್ರದ ಕಾರ್ಯಗಳ ಬಗ್ಗೆ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಲೆಕ್ಕ ಪತ್ರಗಳನ್ನು ನಿರ್ವಹಿಸಿ ಹಾಗೂ ಆ ಬಗ್ಗೆ ಇತರರಿಗೆ ತಿಳಿಸಿ.

೧೦.ಕೆಲವು ಸಾಧಕರು ಮಾತಿನ ಚತುರತೆಯಲ್ಲಿಯೇ ಮೆಚ್ಚಿಸುತ್ತಾರೆಯೇ ಹೊರತು ನೋಡಲು ಏನೂ ಇರುವುದಿಲ್ಲ ಎನ್ನುವ ಅಪವಾದವನ್ನು ಹೋಗಲಾಡಿಸಲು ಕಡಿಮೆ ಮಾತಿನಲ್ಲಿಯೇ ಉತ್ತಮ ಕೆಲಸದ ನೋಟವನ್ನು ತೋರಿಸಿರಿ.

೧೧.ಕೆಲವು ವಿವಾದಾತ್ಮಕ ವಿಷಯಗಳನ್ನು ತಿಳಿಸುವಾಗ ನಿಮ್ಮಿಂದ ಸತ್ಯಕ್ಕೆ ಅಪಚಾರವಾಗದಿರಲಿ. ಸಾರ್ವಜನಿಕ ಒಪ್ಪಿಗೆ ಸಿಗುವುದು ಎನ್ನುವ ಕಾರಣಕ್ಕೆ ನಿಮ್ಮ ಅನುಭವಕ್ಕೆ ಬರದಿದ್ದರೂ ಸಹ ಕೆಲವು ಸುಳ್ಳುಗಳನ್ನು ಹೇಳುವುದು ಖಂಡನೀಯ ವಿಷಯ. ಉದಾಹರಣೆಗೆ ಒಂದೇ ಒಂದು ಕಪ್ಪು ಬಣ್ಣದ ಸ್ಥಳೀಯ ತಳಿಯ ಹಸುವಿನ ಸಗಣಿಯಿಂದ ಹತ್ತಾರು ಎಕರೆಯಲ್ಲಿ ಬೆಳೆಗೆ ಪೋಷಕಾಂಶಗಳನ್ನು ಪೂರೈಸಲಿಕ್ಕೆ ಸಾಧ್ಯವಾಯಿತು ಎನ್ನುವುದು; ನಾಟಿ ತಳಿಯ ಅಕ್ಕಿಯಿಂದ ಮಾಡಿದ ಅನ್ನದಿಂದ ಎರಡು ಪಟ್ಟು ಜನರಿಗೆ ಹೊಟ್ಟೆ ತುಂಬಿಸಬಹುದು ಎನ್ನುವುದು, ಇತ್ಯಾದಿ. ಇಂತಹ ವಿಷಯಗಳನ್ನು ಕೇಳಿಸಿಕೊಂಡ ಇತರರಿಗೆ ನಿಮ್ಮ ಬಗ್ಗೆ ತಪ್ಪು ಭಾವನೆ ಬರುವುದೇ ಹೆಚ್ಚು

೧೨.ಮಣ್ಣು ಮತ್ತು ನೀರನ್ನು ಸಂರಕ್ಷಿಸಲು ಹಾಗೂ ನೀರಿನ ಮತ್ತು ವಿದ್ಯುತ್ನ ಮಿತಬಳಕೆಗೆ ನೀವು ಕೈಗೊಂಡ ಕ್ರಮಗಳ ಬಗ್ಗೆ ಇತರರಿಗೆ ತಿಳಿಸಿ

೧೩.ಕೆಲವು ವಿಶಿಷ್ಟ ತಳಿಗಳ ಸಂರಕ್ಷಣೆಗೆ ನೀವು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ.

೧೪.ನೀವು ಮತ್ತು ನಿಮ್ಮ ಕುಟುಂಬದವರು ಯೋಜಿತ ರೀತಿಯಲ್ಲಿ ವಿವಿಧ ಉಪಕಸುಬುಗಳನ್ನು ಕೈಗೊಂಡು ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಿ ಶ್ರಮ ಪಟ್ಟು ದುಡಿಯುತ್ತಿರುವ ಬಗ್ಗೆ ತಿಳಿಸಿ

೧೫.ಕೃಷಿ ಸಾಧನೆಯು ನಿರಂತರ ಕೆಲಸ, ಅದರಲ್ಲಿ ಪರಿಪೂರ್ಣತೆಯಿಲ್ಲ, ಸಾಧನೆ ಮಾಡಿದಷ್ಟೂ ಇನ್ನೂ ಹೆಚ್ಚು ಸಾಧನೆ ಮಾಡಲು ಅವಕಾಶವಿದೆ, ಎನ್ನುವುದನ್ನು ಅರಿಯಿರಿ ಮತ್ತು ಇತರರಿಗೂ ತಿಳಿಸಿ.

೧೬.ಕೊನೆಯದಾಗಿ ನಿಮ್ಮಿಂದ ಕೃಷಿ ವ್ಯವಸ್ಥೆಗೆ ಒಳಿತಾಗಲಿ ಎಂದು ನಿಮ್ಮ ಸಾಧನೆಯನ್ನು ಗುರುತಿಸಲಾಗಿದೆ; ನಿಮ್ಮಿಂದ ಪ್ರೇರೇಪಿತರಾಗಿ ಇನ್ನೂ ಹೆಚ್ಚು ಜನ ಕೃಷಿಕರು ಉತ್ತಮ ಸಾಧನೆಗಳನ್ನು ಮಾಡಲಿ, ಬಲವಾದ ಬುನಾದಿಯ ಮೇಲೆ ತಮ್ಮ ಕೃಷಿ ವ್ಯವಸ್ಥೆಯನ್ನು ರೂಪಿಸಿಕೊಳ್ಳುವಂತಾಗಲಿ ಎನ್ನುವ ಧೃಡ ನಿರ್ಧಾರದಿಂದ ವ್ಯವಸ್ಥೆಯೊಂದಿಗೆ ಸಹಕರಿಸಿರಿ