ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಕೃಷಿರಂಗ

ಉಂಡು ಸಂತಸದಿಂದಿರು

image_
ಡಾ. ವಿ. ನಾಗಭೂಷಣ,
9902204994

ದೃಶ್ಯ – ೧ : ಹಳ್ಳಿಯ ಬೀದಿ - ಡಂಗೂರ ಸಾರುವವನ ಪ್ರವೇಶ: ಕೇಳ್ರಪ್ಪೋ .... ಕೇಳ್ರೀ .... ಅಣ್ಣಂದ್ರೆ, ಅಕ್ಕಂದ್ರೆ, ಯಜಮಾನ್ರೆ, ಎಲ್ಲಾರೂ ಕೇಳ್ರಿ. ಬರಾ ಭಾನುವಾರ ಗೋವಿನಕೊಪ್ಪದಾಗೆ ಸಿದ್ರಾಮೇಶ್ವರ ಜಾತ್ರೆ ಐತೆ. ಸುತ್ತೆಲ್ಲಾ ಊರಿಂದ್ಲೂ ಜನಾ ಬರ್ತಾರೆ, ದನಾ ಬತ್ತದೆ, ಎಮ್ಮೆ, ಕುರಿ, ಆಡು, ಹೋರಿ ಭಾರೀ ಸಂಖ್ಯಾದಾಗ ಸೇರ್ತವೆ. ಜಾನುವಾರು ಪ್ರದರ್ಶನಾನೂ ಅದೆ. ನೀವೂ ಬನ್ನಿ ಮಕ್ಳು ಮರೀನೂ ಕರ್ಕಂಡು ಬನ್ನಿ. ಅಂಗ್ಡಿ ಬತ್ತದೆ, ಸರ್ಕಸ್, ದೊಂಬರಾಟ ಎಲ್ಲಾ ಐತೆ. ಹಾಂಗಂತ ಸ್ವಾಮಾರು ಅಪ್ಪಣೆ ಕೊಡಸ್ಯಾರೆ ..... ಬನ್ರಪ್ಪೊ ಬನ್ನಿ. (ಡಂಗೂರ ಸಾರುವವನ ನಿರ್ಗಮನ)(ರೈತನ ಮನೆ, ಪುಟ್ಟೇಗೌಡ ಕೆಂಚಮ್ಮನ ಪ್ರವೇಶ)

ಪುಟ್ಟೇಗೌಡ: ಕೇಳ್ದೇನೇ ಕೆಂಚಿ

ಕೆಂಚಿ: ಹೂನ್ರಿ ಜಾತ್ರೆಗೆ ಅಂತ ಡಂಗೂರ ಸಾರಿಸ್ತಾ ಅವ್ರೆ. ಮತ್ತೆ ನಮ್ಮ ಜೋಡೆತ್ತು ಒಯ್ತಿರೇನ್ರಿ.

ಪುಟ್ಟೇಗೌಡ: ಅಯ್ಯ ತಗಂಡು ಹೋದೇಯ. ಕಳೆದ ಸಲ ಸ್ವಲ್ಪದ್ರಲ್ಲೇ ಬಹುಮಾನ ತಪ್ಪೋಯ್ತು. ಈಗ ನಮ್ಮ ಎತ್ತು ಬಾಳ ಚಂದ ಆಗದೆ.

ಕೆಂಚಿ: ಹೂಂ ಮತ್ತೆ. ಈ ವರ್ಸ ಅಂತು ಹೊಲದಾಗೆ ಹಸಿಮೇವು, ರಾಗಿ ಹುಲ್ಲು, ಹಿಂಡಿ, ಹುಳ್ಳಿ ಒಡಪಲು ಅಂತ ಚೆನ್ನಾಗಿ ಆಹಾರ ಸಿಕ್ಕಿದೆ. ಅಂಗಾಗಿ ಒಳ್ಳೆ ಮೈ ತುಂಬ್ಕಂಡದೆ.

ಪುಟ್ಟೇಗೌಡ: ಹಾಂ ನೀನು ಜಾತ್ರಗೆ ಹೋಗಕ್ಕೆ ಎಲ್ಲಾ ತಯಾರು ಮಾಡು. ಹಾಗೇ ಎತ್ತುಗಳ ಗಗ್ರ, ಗೆಜ್ಜೆ, ಕೋಡು ಕಳಸ, ಬೆನ್ನಿನ ಹಾಸು ಎಲ್ಲಾ ಜೋಡ್ಸಿ ಇಡು. ನಾನು ಎತ್ತುಗಳ ಮೈ ವೈನಾಗಿ ತೊಳೆದು ಎಣ್ಣೆ ಹಚ್ಚಿ ಮಾಲೀಷ್ ಮಾಡ್ತೀನಿ. (ಪುಟ್ಟೇಗೌಡ, ಕೆಂಚಿ ಸಂಭ್ರಮದಿಂದ ಜಾತ್ರೆಗೆ ಹೋಗಲು ಸಿದ್ಧತೆ ನಡೆಸಲು ತೆರಳುವರು.)

ಹಿನ್ನಲೆಯಲ್ಲಿ: ಹೋಗೋಣ ಬಾರೋ ಜಾತುರೇಗ, ನಾವು ಹೋಗೋಣ ಬಾರೋ ಜಾತುರೇಗ, ಹೊಸ ಬಟ್ಟೆ ಉಟ್ಟುಕೊಂಡು ಬುತ್ತಿ ಊಟ ಕಟ್ಟಿಕೊಂಡು, ಎತ್ತುಗಳ ಹೊಡೆದುಕೊಂಡು ಸುತ್ತಿ ಬರೋಣಾ (ಇನ್ನೊಬ್ಬ ರೈತನ ಮನೆ - ಶಂಕರಪ್ಪ, ಕಮಲಿಯ ಪ್ರವೇಶ)

ಶಂಕರಪ್ಪ: ಏನೇ ಕಮಲಿ, ಗೊತ್ತಾಯ್ತಾ ನಿಂಗೆ

ಕಮಲಿ: ಹೇಳಿದ್ರಲ್ವಾ ಗೊತ್ತಾಗದು?

ಶಂಕ್ರಪ್ಪ: ಅದೇ ಕಣೆ ಮೂಲೆ ಮನೆ ಪುಟ್ಟೇಗೌಡ ಈ ಸಲಾನೂ ಸಿದ್ರಾಮೇಸನ ಜಾತ್ರೆಗೆ ಎತ್ತು ಒಯ್ತಾನಂತೆ. ಈ ದಪಾ ನಂಗೇ ಬಹುಮಾನ ಬರೋದು ಅಂತ ಊರು ತುಂಬಾ ಹೇಲ್ಕೊಂಡು ಓಡಾಡ್ತವ್ನೆ.

ಕಮಲಿ: ನೀವ್ಯಾಕೆ ತಲೆ ಕೆಡ್ಸಂಡೀರಿ. ನಮ್ದೂ ಸೀಮೆ ಹಸಾ ಇಲ್ವಾ. ಮೊನ್ನೆ ಅಮಾಸೆ ಮರುದಿನ ಕರ ಹಾಕೈತೆ. ಹೊತ್ತಿಗೆ ಹತ್ತು ಸೇರು ಹಾಲು ಬತ್ತಾ ಇದೆ. ಹಸಾನು ಒಳ್ಳೆ ಮೈ ಕೈ ತುಂಬ್ಕಂಡು ಚಂದಾಗದೆ. ನಾವೂ ಒಯ್ಯೋಣ ಬನ್ರಿ.

ಶಂಕ್ರಪ್ಪ: ಹೌದಲ್ಲಾ ನಾನು ಮರ್ತೇ ಬಿಟ್ಟಿದ್ದೆ ನೋಡು. ಈ ಹಸಾ ನಮ್ಗೆ ಚೆನ್ನಾಗಿ ಕೈ ಹಿಡಿದಿದೆ. ಒಂದಿನಾ ಅದ್ಕೆ ಫೀಡು ತಪ್ಸಾಕಿಲ್ಲ. ಅದ್ಕೆ ಅಂತ ಗದ್ದೇಲಿ ಮೇವೂ ಸಹ ಬೆಳೆಸಿದೀನಿ.

ಕಮಲಿ: ಮಾತು ಸಾಕು, ಹಸಾ ಮೈ ತೊಳೆದು ತಯಾರು ಮಾಡ್ರಿ. ನಾನು ಹಾಲನ್ನು ಸೊಸೈಟಿಗೆ ಹಾಕಿ ಬತ್ತೀನಿ.

ಹಿನ್ನೆಲೆಯಲ್ಲಿ: ಹೋಗೋಣ ಬಾರೋ ಜಾತುರೀಗೆ.... ದೃಶ್ಯ -೨ (ಸಿದ್ಧರಾಮೇಶ್ವರ ಜಾತ್ರೆ) (ಜಾತ್ರೆಯ ಹಿಂದಿನ ದಿನ. ವಿವಿಧೆಡೆಯಿಂದ ತರತರದ ಜಾನುವಾರುಗಳು ಗುಂಪು ಗುಂಪಾಗಿ ಬರುತ್ತಿವೆ. ಎತ್ತುಗಳು ಒಂದು ಕಡೆ, ಎಮ್ಮೆಗಳು ಇನ್ನೊಂದು ಕಡೆ, ಹಸುಗಳು ಒಂದೆಡೆ . ಕುರಿ-ಮೇಕೆಗಳು ಇನ್ನೊಂದೆಡೆ ಮರಗಳಿಗೆ, ಗಿಡಗಳಿಗೆ, ಎತ್ತಿನ ಬಂಡಿಗಳಿಗೆ ಕಟ್ಟಿ ಹಾಕಿರುತ್ತಾರೆ. ಜಾನುವಾರುಗಳು ತಮ್ಮ ತಮ್ಮೊಳಗೆ ಮಾತಾಡುತ್ತಿರುತ್ತವೆ.)

ಎತ್ತು ೧ : (ಮೈ ಮುರಿಯುತ್ತಾ) ಅಯ್ಯಪ್ಪಾ. ಮೈ ಕೈ ಎಲ್ಲಾ ನೋವು. ನಡೆದೂ ನಡೆದೂ ಸಾಕಾಗೋಯ್ತು.

ಎತ್ತು ೨ : ಹೌದಪ್ಪ. ಇಲ್ಲಿ ಬಂದ ಮೇಲೆ ಸ್ವಲ್ಪ ಹಾಯಾಯ್ತು. ನಾಳೆ ತನಕ ರೆಸ್ಟು. ನಾಳೆ ಇದೆ ಗದ್ಲ. ಯಾರ್ಯಾರ ಬೆಲೆ ಏನು ಅಂತ ಗೊತ್ತಾಗುತ್ತೆ. ಯಾರಿಗೆ ಯಾವ ಹೊಸ ಯಜಮಾನ ಸಿಗ್ತಾನೋ ತಿಳೀದು.

ಎತ್ತು ೧ : ನಿನ್ನ ಯಜಮಾನ ಮಾರಕ್ಕೆ ತಂದವ್ನಾ. ನನ್ನ ಯಜಮಾನ ಮಾರಲ್ಲ ಈ ಜೋಡೀನಾ ಅಂತಿದ್ದ.

(ಪಕ್ಕದಲ್ಲೇ ಮಂಕಾಗಿ ಕುಳಿತಿದ್ದ ಮುದಿ ಹಸು ಮಾತನಾಡತೊಡಗಿತು)

ಮುದಿ ಹಸು : ನನ್ನನ್ನಂತೂ ಮಾರಕ್ಕೆ ತಂದಿರೋದು. ಯಾವ ಕಟುಕನ ಪಾಲಾಗ್ತೇನೋ ಏನೋ.

ಇನ್ನೊಂದು(ಬರಡು) ಹಸು : ಅಯ್ಯೋ ಪಾಪ.

ಬರಡು ಹಸು : ನೀನೇನೋ ಮುದುಕಿ. ಊರು ದೂರ - ಕಾಡು ಹತ್ರ ಅಂತ ಆಗದೆ, ನಂದು ಹೇಳು. ಇನ್ನೂ ವಯಸ್ಸಿದೆ ನಾನು ಗಬ್ಬ ಆಗ್ತಾ ಇಲ್ಲ ಅಂತ ನನ್ನ ಯಜಮಾನ ಮಾರಕ್ಕೆ ತಂದವ್ನೆ. ನಮ್ಮೂರು ಡಾಕ್ಟ್ರು ಬಂದು ಬಡಕ್ಕಂಡ್ರೂ ಕೇಳ್ಳಿಲ್ಲ. ನಿನ್ನ ಹಸಕ್ಕೆ ಒಳ್ಳೆ ಮೇವು ಹಿಂಡಿ ಹಾಕು. ಖನಿಜ - ಲವಣ ಕೊರತೆ ಇರ್ಬೇಕು ಅದ್ಕೇ ಗಬ್ಬ ಕಟ್ಟಿಲ್ಲ, ಕಾಳು ಮಳ್ಕೆ ಬರ್ಸಿ ತಿನ್ನು ಅಂತ. ಕಿವಿ ಮ್ಯಾಲೆ ಹಾಕ್ಕಳ್ಳಿಲ್ಲ. ಈಗ ಮಾರಕ್ಕೆ ತಂದವ್ನೆ. ಮಹಾ ಜುಗ್ಗ. ಕರ್ಯೋ ಹಸಕ್ಕೆ ಮಾತ್ರ ಚೆನ್ನಾಗಿ ಮೇವು ಹಿಂಡಿ ಕೊಡ್ತಾನೆ. ಲಾಸಾಗ್ತಾ ಇದ್ರೂ ಗೊತ್ತಾಗಕಿಲ್ಲ ದಡ್ಡ ಮುಂಡೇದಕ್ಕೆ.

ಮುದಿಹಸು : ಜಾನುವಾರುಗಳಿಗೆ ಈಗ ಕಷ್ಟದ ಕಾಲ ಕಣವ್ವ. ಗೋವುಗಳಿಗೆ ಮೇಯಕ್ಕೆ ಜಾಗನೇ ಇಲ್ಲ. ಕಟ್ಟಿ ಸಾಕದು ಲಾಭ ಇಲ್ಲ ಅಂತ ಸಾಕದೇ ಬಿಡ್ತಾ ಅವ್ರೆ. ಪ್ಯಾಟೇಲಂತೂ ಕಾಗ್ದ, ಪ್ಲಾಸ್ಟಿಕ್ ತಿಂದು ಜೀವನ ಮಾಡ್ತಾ ಅವಂತೆ ಜಾನುವಾರುಗಳು. ಏನ್ ಕಾಲ ಬಂತಪ್ಪ.

ಬರಡು ಹಸು : ಈಗ ಕೇವಲ ಲೀಟರ್ಗಟ್ಲೇ ಹಾಲು ಕೊಡೋ ಇಂಗ್ಲೀಸ್ ಹಸಕ್ಕೆ ಮಾತ್ರ ಬೆಲೆ. ಅದೂ ಹಾಲು ಕೊಡ್ತಾ ಇದ್ರೆ.