ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಕಲ್ಲು ಹೊತ್ತೋಯ್ದವರು ಯಾರು......??

ಸಂಜಯ್, ಡಿ.ಜೆ
9164000504
1

ಆ ಪ್ರದೇಶದ ರೈತರು ಕೇವಲ ಮಳೆಗಾಲದ ಬೆಳೆಗೆ ಮಾತ್ರ ನಿಲ್ಲುತ್ತಿದ್ದವರು ಇದೀಗ ಚಳಿಗಾಲದ ಬೆಳೆಯನ್ನ ಕೂಡ ಬೆಳೀತಾ ಇದಾರೆ. ಮೇವು ಸಿಗೊಲ್ಲ ಅಂತ ಹೈನುಗಾರಿಕೆ ಬಿಟ್ಟಿದ್ದವರು ಈಗ ನಾಲ್ಕಾರು ಹಸು ಸಾಕ್ತಾ ಇದಾರೆ. ಕೃಷಿ ಹೊಂಡದಲ್ಲಿ ಮೀನುಗಾರಿಕೆ, ಅರಣ್ಯ ಕೃಷಿ ಇವರಿಗೆ ಈಗ ತುಂಬಾ ಸುಲಭ. ಇದು ಇಲ್ಲೇ ಶಿವಮೊಗ್ಗ ನಗರದ ಹೊರಗೆ ಬಂದ್ರೆ ಸಿಗೊ ಸೋಮಿನಕೊಪ್ಪ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಬರೋ ರೈತರ ಕಥೆ.ಒಮ್ಮೆ ನಮ್ಮ ಕಾಲೇಜಿನ ಬೇಸಾಯಶಾಸ್ತ್ರಜ್ಞರಾದ ಡಾ.ಹೆಚ್.ಕೆ.ವೀರಣ್ಣ ಅವ್ರು ನಮ್ಮನ್ನೆಲ್ಲ ಅಲ್ಲಿಗೆ ಭೇಟಿ ಮಾಡ್ಸಿದ್ರು. ನಮ್ಮ ಜೊತೆ ಆ ಪ್ರದೇಶದ ಜಲಾನಯನ ಯೋಜನೆಯಲ್ಲಿ ಕೆಲಸ ಮಾಡಿದ್ದಂತಹ ಒಬ್ಬ ಕೃಷಿ ಅಧಿಕಾರಿ ಕೂಡ ಅಲ್ಲಿಯ ಅಭಿವೃದ್ಧಿ ಕಾರ್ಯಕ್ರಮ ಗಳನ್ನು ನಮಗೆ ವಿವರಿಸೋದಕ್ಕೆ ಅಂತ ಬಂದಿದ್ರು. ಒಂದು ಜಲಾನಯನ ಯೋಜನೆ ಅಂದ್ರೆ ಒಂದು ಪ್ರದೇಶವನ್ನು ಆಯ್ದು ಅಲ್ಲಿ ಬೀಳುವ ಮಳೆ ನೀರು, ಮಣ್ಣು ಸಂರಕ್ಷಣೆ ಮಾಡುತ್ತಾ, ಕೃಷಿ, ಅರಣ್ಯ ಕೃಷಿ, ಮೀನುಗಾರಿಕೆ, ಹೈನುಗಾರಿಕೆ ಇತ್ಯಾದಿಗಳಿಗೆ ಒತ್ತು ನೀಡುವುದು. ಮಣ್ಣು ಮತ್ತು ನೀರು ಕೊಚ್ಚಣೆ ತಡೆಯಲು ಅಡ್ಡಲಾಗಿ ಕಟ್ಟೆಗಳು, ನೀರು ಸಂಗ್ರಹಿಸಿ ಸಣ್ಣ ಸಣ್ಣ ಗೋಕಟ್ಟೆ, ಕೃಷಿ ಹೊಂಡಗಳ ನಿರ್ಮಾಣ, ಇತ್ಯಾದಿ ಈ ಯೋಜನೆಗಳು ಒಳಗೊಂಡಿರುತ್ತವೆ. ಈ ಯೋಜನೆಗಳಲ್ಲಿ ಆ ವ್ಯಾಪ್ತಿಯ ಗ್ರಾಮ ಪಂಚಾಯತಿ, ಗ್ರಾಮಸ್ಥರೆಲ್ಲರು ಕೂಡ ಭಾಗವಹಿಸಿರುತ್ತಾರೆ.

3

ಮುಂದೆ ನಾವು ನೋಡಿದ ಹಾಗೆ ಕೆಲವು ಅಡ್ಡಲಾಗಿ ಕಟ್ಟಿದ ಕಟ್ಟೆ ಒಡೆದಿದ್ದವು. ಈ ಬಗ್ಗೆ ಅಧಿಕಾರಿಗಳನ್ನ ವಿಚಾರಿಸಿದಾಗ ಅವರು ಹೇಳಿದ್ದು- ಅದಾ, ನೋಡಿ ನಮ್ಮ ಈ ಯೋಜನೆಗಳು ೨-೩ ವರ್ಷದ ಅವಧಿಯಲ್ಲಿ ಮುಕ್ತಾಯವಾಗುತ್ತವೆ. ಆ ಅವಧಿಯವರೆಗೆ ಈ ಎಲ್ಲದರ ಸುವ್ಯವಸ್ಥೆಯನ್ನು ಕಾಪಾಡಿರುತ್ತೇವೆ. ಯೋಜನೆಯ ಅವಧಿ ಮುಗಿದ ನಂತರ ಈ ವ್ಯವಸ್ಥೆಯ ಸುರಕ್ಷತೆಯ ಜವಾಬ್ದಾರಿ ರೈತರ ಮೇಲಿರುತ್ತದೆ. ಕೆಲವರು ಇದನ್ನು ಅರ್ಥ ಮಾಡಿಕೊಳ್ಳದೆ ತಮಗೆ ಬೇಕಾದಾಗ ಇಲ್ಲಿಯ ಕಲ್ಲುಗಳನ್ನ, ಚಪ್ಪಡಿಗಳನ್ನ ತೆಗೆದುಕೊಂಡು ಹೋಗ್ತಾರೆ. ಇದರಿಂದ ವ್ಯವಸ್ಥೆ ಹಾಳಾಗಿ ಎಲ್ಲರೂ ತೊಂದರೆ ಅನುಭವಿಸುತ್ತಾರೆ ಅಂದ್ರು. ನೋಡಿ, ನಾವೆಲ್ಲರೂ ಸಹಜವಾಗಿ ಯಾವುದೇ ತಪ್ಪು ನಡೆದಾಗ ಅಥವಾ ಅವ್ಯವಸ್ಥೆ ಕಂಡಾಗ ಇಲಾಖೆಗಳತ್ತ ಅಥವಾ ಅಧಿಕಾರಿಗಳತ್ತ ಬೆರಳು ಮಾಡುವುದು ಸಹಜ. ಇದೊಂದೇ ಅಲ್ಲ, ಹೀಗೆ ಹಲವಾರು ಯೋಜನೆಗಳು, ವ್ಯವಸ್ಥೆಗಳನ್ನು ನಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಮಾಡಿಕೊಳ್ಳುತ್ತೇವೆ.

5

ಸರ್ಕಾರ ಅಥವಾ ಇನ್ನಾವುದೇ ಇಲಾಖೆಗಳ ಮೇಲೆ ಎಷ್ಟು ಜವಾಬ್ದಾರಿ ಇರುತ್ತದೆಯೋ ಅಷ್ಟೇ ಜವಾಬ್ದಾರಿ ನಮ್ಮ ಮೇಲೆಯೂ ಇರುತ್ತದೆ. ಈ ಜವಾಬ್ದಾರಿಗಳನ್ನ ಅರಿತು ನಮ್ಮ ವ್ಯವಸ್ಥೆಗಳನ್ನ ನಾವೇ ಕಾಪಾಡಿಕೊಳ್ಳೋಣ ಅನ್ನೋದು ನನ್ನ ವೈಯಕ್ತಿಕ ಆಶಯ.