ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಸಂರಕ್ಷಿತ ಕೃಷಿಯಲ್ಲಿ ಸೇವಂತಿಗೆ

ಜೀವನ್. ಯು
9845015768
1

ಇತ್ತೀಚಿಗೆ ಸರ್ಕಾರದ ಅನೇಕ ಯೋಜನೆಗಳು ಲಭ್ಯವಿದ್ದು, ಸಂರಕ್ಷಿತ ಬೇಸಾಯ ಕ್ಷೇತ್ರಗಳ ತಾಂತ್ರಿಕ ಮಾಹಿತಿಯ ಅನುಕೂಲತೆಯಿಂದ ವಿವಿಧ ಬೆಳೆಗಳನ್ನು ಅಳವಡಿಸಿಕೊಂಡು ರೈತರು ಸಂರಕ್ಷಿತ ಬೇಸಾಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಸಂರಕ್ಷಿತ ಕೃಷಿಯಲ್ಲಿ (ಪಾಲಿಹೌಸಿನಲ್ಲಿ) ಸೇವಂತಿಗೆ ಹೂವಿನ ಕೃಷಿ ಮಾಡುವುದರಿಂದ ಉತ್ತಮ ಗುಣಮಟ್ಟವುಳ್ಳ ಹೂವುಗಳು ಹಾಗೂ ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ, ಹಿರಿಯೂರಿನ ಪಾಲಿಹೌಸಿನಲ್ಲಿ ಸೇವಂತಿಗೆ ಬೆಳೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲಾಗಿದೆ. ಪಾಲಿಹೌಸಿನಲ್ಲಿ ಸಸ್ಯಗಳಿಗೆ ಮಳೆಯಿಂದ ರಕ್ಷಣೆಯಿದ್ದು, ಮದ್ಯ ಒಣ ವಲಯದ (ವಲಯ ೪) ಮಣ್ಣಿನ ಫಲವತ್ತತೆ ಕಡಿಮೆ ಇರುವುದರಿಂದ ಸೇವಂತಿಗೆ ಬೆಳೆ ಈ ಮಣ್ಣಿಗೆ ಸೂಕ್ತವಾಗಿದ್ದು, ಇದು ಕಡಿಮೆ ನೀರು ಬಯಸುವ ಬೆಳೆಯಾಗಿದೆ.

ಪಾಲಿಹೌಸ್ನ ಅಳತೆ ೧೦೦೦ ಚ.ಮೀ. ಇದರಲ್ಲಿ ೧ ಮೀ. ಅಳತೆಯ ಅಗಲ ಹಾಗೂ ೧೬ ಮೀ. ಉದ್ದದ ಏರು ಮಡಿಗಳನ್ನು ತಯಾರಿಸಿ ಅದಕ್ಕೆ ಸುಮಾರು ೨ ಟನ್ ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಮಡಿಗೆ ಹಾಕಿ ನಾಟಿಗೆ ಮೊದಲು ಪ್ರತಿ ೫ ಕೆ.ಜಿ ಸಾರಜನಕ, ರಂಜಕ ಹಾಗೂ ಪೊಟ್ಯಾಶ್ ಮಿಶ್ರಣವನ್ನು ಹಾಕಿ, ಇದಾದ ಮೇಲೆ ಏರು ಮಡಿಗಳನ್ನು ಹೈಡ್ರೊಜನ್ ಪೆರಾಕ್ಸೈಡ್ (ಬೆಳ್ಳಿಯುಕ್ತ) ಪ್ರತಿ ಲೀಟರ್ ಗೆ ೧೦ ಮಿ.ಲೀ. ನಂತೆ ಬೆರೆಸಿ ಸಿಂಪರಣೆ ಮಾಡಲಾಗಿತ್ತು. ನಂತರ ೬೦x೪೫ ಸೆ.ಮೀ. ಅಳತೆಯಂತೆ ಜಿಗ್-ಜ್ಯಾಗ್ ಆಕಾರದಲ್ಲಿ ಸೇವಂತಿಗೆ ಸಸಿಗಳನ್ನು ನಾಟಿ ಮಾಡಲಾಗಿತ್ತು. ನಂತರ ಡ್ರಿಪ್ಗಳನ್ನು ಎಳೆದು ಅಳತೆಗೆ ತಕ್ಕಂತೆ ಮಾರಿಗೋಲ್ಡ್ ಅನ್ನುವ ತಳಿಯನ್ನು ೨೦೧೬ರ ಅಕ್ಟೋಬರ್, ಮೊದಲನೇ ಪಾಕ್ಷಿಕದಲ್ಲಿ ನಾಟಿ ಮಾಡಲಾಯಿತು. ಈ ತಳಿಯ ಹೂವುಗಳು ಹೆಚ್ಚು ದಿನಗಳವರೆಗೂ (ಸುಮಾರು ೮-೧೦ ದಿನಗಳು) ಬಾಡದಂತೆ ಇರುವುದರಿಂದ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇದೆ. ಸುಮಾರು ೨,೨೦೦ ಗಿಡಗಳನ್ನು ನಾಟಿ ಮಾಡಿದ ನಂತರ ಹನಿ ನೀರಾವರಿಯಲ್ಲಿ ಪ್ರತಿ ಮಡಿಗೆ ೨ ಲೀಟರ್ ದಿನ ಬಿಟ್ಟು ದಿನ ನೀರುಣಿಸಲಾಯಿತು. ನಾಟಿ ಮಾಡಿದ ೧೫ ದಿನಗಳ ನಂತರ ತುದಿಯನ್ನು ಚಿವುಟಿ. ಇದಾದ ೨೦-೨೫ ದಿನಗಳ ಬಳಿಕ ಸಸಿಯ ಗಾತ್ರಕ್ಕೆ ಅನುಗುಣವಾಗಿ ಮತ್ತೆ ತುದಿಯನ್ನು ಚಿವುಟಲಾಯಿತು. ಇದು ಬೆಳೆ ನಿರ್ವಹಣೆಯಲ್ಲಿ ನೆನಪಿನಲ್ಲಿಡಬೇಕಾದ ಬಹು ಮುಖ್ಯ ಅಂಶವಾಗಿದೆ. ಸಸಿ ನಾಟಿಮಾಡಿದ ೭೦-೮೦ ದಿವಸದ ನಂತರ ಹೂವುಗಳು ಕೊಯ್ಲಿಗೆ ಬರುತ್ತದೆ. ಈ ಸಮಯದಲ್ಲಿ ಬಯೋ-೨೦ (೨.೫ ಮಿ.ಲೀ.)/ಲೀಟರ್ +೦೦:೦೦:೫೦ ೨ ಗ್ರಾಂ/ ಲೀಟರ್ನಂತೆ ಪ್ರತಿ ವಾರವೂ ಸಿಂಪರಣೆ ಮಾಡಲಾಯಿತು. ಇದರಿಂದ ಹೂವಿನ ಗಾತ್ರ, ತೂಕ ಹಾಗೂ ನೋಡಲು ಸಹ ಸುಂದರವಾಗಿತ್ತು

ಈಗ ಬೆಳೆ ಕೊಯ್ಲಿಗೆ ಬಂದಿದ್ದು ಕೆ.ಜಿಗೆ ರೂ. ೧೦೦ ರಂತೆ ಮಾರುಕಟ್ಟೆಯಲ್ಲಿ ದರ ಸಿಕ್ಕಿದ್ದು ಬಹಳ ಸಂತೋಷವಾಗಿದೆ. ಇದಲ್ಲದೆ ಬೆಳೆ ಇನ್ನೂ ೮-೧೦ ತಿಂಗಳುಗಳ ವರೆಗೆ ಇಳುವರಿ ಕೊಡುವುದರಿಂದ, ಈ ಬೆಳೆಯನ್ನು ರೈತರು ಅಳವಡಿಸಿಕೊಂಡು ಬೆಳೆದಿದ್ದೆ ಆದರೆ ಅಧಿಕ ಲಾಭ ಕಾಣುವುದಲ್ಲದೆ ಮಾಡಿದ ಪ್ರತಿ ರೂಪಾಯಿ ಖರ್ಚಿಗೆ ಹೆಚ್ಚಿನ ನಿವ್ವಳ ಲಾಭ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ

ಸಸ್ಯ ಸಂರಕ್ಷಣೆ : ಥ್ರಿಪ್ಸ್ ಹಾಗೂ ನುಸಿ ನಿರ್ವಹಣೆಗೆ ೧ ಮಿಲಿ ಪ್ರತಿ ಲೀಟರ್ನಂತೆ ಹೊಂಗೆ ಎಣ್ಣೆ ಅಥವಾ ಬೇವಿನ ಎಣ್ಣೆ ಸಿಂಪರಣೆ ಮಾಡುವುದರೊಂದಿಗೆ, ಇಮಿಡಾಕ್ಲೊಪ್ರಿಡ್ ೦.೫ ಮಿಲಿ ಪ್ರತಿ ಲೀಟರ್ಗೆ ಬೆರೆಸಿಕೊಂಡು ಸಿಂಪರಣೆ ಮಾಡಲಾಗಿತ್ತು.ಶಿಲೀಂಧ್ರ ರೋಗಕ್ಕೆ ಥಯೋಮೀಥೈಲ್ ಸಲ್ಫೈಟ್ (ರೋಕೋ) ೨ ಗ್ರಾಂ/ಲೀಟರ್ಗೆ ಬೆರೆಸಿಕೊಂಡು ಬುಡಕ್ಕೆ ಹಾಕಿ ಶಿಲೀಂಧ್ರ ರೋಗಗಳನ್ನು ನಿರ್ವಹಿಸಲಾಯಿತು