ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ನಾಟಿಪಶುವೈದ್ಯ

ಮೂಗು ಹುಣ್ಣು/ಪಿನಾಸಿ/ಮೂಗುರಿ: ರಾಸುಗಳಿಗೆ ಕಿರಿಕಿರಿ

image_
ಡಾ. ರವಿಕುಮಾರ್, ಪಿ
9008598832
1

ಕೆಲವೊಮ್ಮೆ ರಾಸುಗಳು ಉಸಿರಾಡುವಾಗ ಸರ್-ಭರ್ ಎಂದು ಭಾರೀ ಶಬ್ದ ಹೊರಡಿಸುವುದನ್ನು ಗಮನಿಸಿರಬಹುದು. ರಾಸುಗಳನ್ನು ಯಾವುದೇ ಕೆಲಸಕ್ಕೆ ಕಟ್ಟದೆ ವಿಶ್ರಾಂತಿಯಲ್ಲಿದ್ದಾಗಲೂ ಸಹಾ ಏದುಸಿರು ಬಿಡುತ್ತಾ ಕಷ್ಟಪಟ್ಟು ಉಸಿರೆಳೆದುಕೊಳ್ಳುತ್ತಿದ್ದರೆ ಅಂತಹಾ ರಾಸುಗಳು ಮೂಗುರಿಯಿಂದ ಬಳಲುತ್ತಿರುವ ಸಾಧ್ಯತೆಗಳು ಹೆಚ್ಚು. ಸಿಸ್ಟೋಸೋಮಾ ಗುಂಪಿಗೆ ಸೇರಿದ ಒಂದು ರೀತಿಯ ಜಂತುಹುಳುಗಳು ಮೂಗಿನ ಒಳಭಾಗದಲ್ಲಿ ಚಿಕ್ಕಚಿಕ್ಕ ಗಡ್ಡೆಗಳನ್ನುಂಟು ಮಾಡುತ್ತವೆ. ಈ ರೋಗ ಮಾರಣಾಂತಿಕವಲ್ಲದೇ ಹೋದರೂ ಮೂಗಿನ ಹೊರಳೆಯನ್ನು ಆಕ್ರಮಿಸುವ ಗಡ್ಡೆಗಳಿಂದಾಗಿ ರಾಸುಗಳಿಗೆ ಉಸಿರಾಡಲು ತೀವ್ರ ತೊಂದರೆಯಾಗುತ್ತದೆ. ಹಾಗೆಂದೇ ಉಸಿರಾಡುವಾಗ ರಾಸುಗಳು ಸರ್-ಭರ್ ಎಂದು ಶಬ್ದ ಹೊರಡಿಸುತ್ತವೆ. ಕೆಲವು ವೇಳೆ ಗಡ್ಡೆಗಳು ಒಡೆದು ಮೂಗಿನಿಂದ ರಕ್ತ ಸುರಿಯಲೂ ಬಹುದು. ರಾಸುಗಳ ಉತ್ಪಾದಕತೆ ಕುಂಠಿತವಾಗುತ್ತದೆ ಹಾಗೂ ಈ ರೋಗ ಸುಲಭವಾಗಿ ವಾಸಿಯಾಗದೇ ರೈತರಿಗೆ ಭಾರೀ ಕಿರಿಕಿರಿ ನಿಡುತ್ತದೆ. ಮೂಗಿನ ಹೊರಳೆಗಳ ಒಳಭಾಗದಲ್ಲಿ ಹೂಕೋಸಿನ ಗಡ್ಡೆಗಳ ಮಾದರಿಯ ಚಿಕ್ಕ ಚಿಕ್ಕ ಗಡ್ಡೆಗಳಾಗಿ ಅವು ಮೂಗಿನ ದ್ವಾರವನ್ನು ಬಹುತೇಕ ಮುಚ್ಚಿಬಿಡುವುದರಿಂದ ರಾಸುಗಳ ಉಸಿರಾಟಕ್ಕೆ ತುಂಬಾ ತೊಂದರೆಯಾಗುತ್ತದೆ. ಮೇಲೆ ತಿಳಿಸಿದ ಯಾವುದೇ ಗುಣಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ನುರಿತ ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಿಸಬೇಕು.

ಸಾಮಾನ್ಯವಾಗಿ ಕೆಲವು ರೀತಿಯ ಜಂತುನಾಶಕಗಳ ಜೊತೆಗೆ ಆಂಥಿಯೋಮಲೀನ್ ಇಂಜೆಕ್ಷನ್ ನೀಡುವುದರ ಮೂಲಕ ಈ ರೋಗವನ್ನು ಉಪಶಮನ ಮಾಡುತ್ತಾರೆ. ಮೈಲುತುತ್ತದ ಚೂರುಗಳನ್ನು ಮೂಗಿನ ಹೊರಳೆಯೊಳಗೆ ಸೇರಿಸಿ ಬೆರಳಿನಿಂದ ಗಸಗಸ ತಿಕ್ಕುವುದು ಕೆಲವು ಕಡೆ ಚಾಲ್ತಿಯಲ್ಲಿರುವ ಪದ್ಧತಿ. ಇದರಿಂದ ಗಡ್ಡೆಗಳು ಒಡೆದು ಒಕ್ತ ಸೋರುತ್ತದಾದರೂ ರಾಸುಗಳ ಉಸಿರಾಟ ಸ್ವಲ್ಪ ಸುಗಮವಾಗುತ್ತದೆ. ಸಾಧ್ಯವಾದರೆ ಈ ಕೆಳಕಂಡ ಮನೆಮದ್ದನ್ನು ಮೂಗುರಿ ನಿಯಂತ್ರಿಸಲು ಪ್ರಯೋಗಿಸಬಹುದು

4

ಮನೆಮದ್ದು: ತಲಾ ಅರ್ಧ ಲೋಟದಷ್ಟು ದಾಳಿಂಬೆ ಹೂವಿನ ರಸ, ತುಳಸೀ ಸೊಪ್ಪಿನ ರಸ, ಗುಗ್ಗುಳು ಸೊಪ್ಪಿನ ರಸ ಹಾಗೂ ಕಾಮಕಸ್ತೂರಿ ಸೊಪ್ಪಿನ ರಸವನ್ನು ಒಂದು ಪಾತ್ರೆಯಲ್ಲಿ ಬೆರೆಸಿಕೊಳ್ಳಿ. ಇದಕ್ಕೆ ಎರಡು ಬೆಳ್ಳುಳ್ಳಿ ಗಡ್ಡೆ ಹಾಗೂ ಎರಡು ಚಮಚ ಪಚ್ಚಕರ್ಪೂರ ಅರೆದು ಸೇರಿಸಿರಿ. ಹೀಗೆ ತಯಾರಿಸಿದ ಔಷಧಿಯನ್ನು ಹದ್ದಿನ ಪುಕ್ಕದ ಗರಿಯಲ್ಲಿ ಅದ್ದಿಕೊಂಡು ಹುಣ್ಣಾಗಿರುವ ಮೂಗಿನ ಹೊರಳೆಯೊಳಕ್ಕೆ ದಿನಕ್ಕೆರಡು ಬಾರಿಯಂತೆ ೧೫ ದಿನಗಳ ಕಾಲ ಲೇಪಿಸಬೇಕು. ಪಶುವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸುವುದರ ಜೊತೆಗೆ ಬೆಲ್ಲೊಡಾನಾ ೧೦ ಮ ಗುಳಿಗೆಗಳನ್ನು ದಿನಕ್ಕೆ ೧೦ರಂತೆ ೪ ದಿನಗಳ ಕಾಲ ನೀಡುವುದರಿಂದಲೂ ಉತ್ತಮ ಫಲಿತಾಂಶ ಲಭ್ಯ.