ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಆಪ್ ಲೋಕ

ಸ್ಕೈಮೆಟ್ ಹವಾಮಾನ ಕಿರುತಂತ್ರಾಂಶ (Skymet weather app)

image_
ಪ್ರದೀಪ್ ಕುಮಾರ್
9538125130
1

ಸ್ಕೈಮೆಟ್ ಒಂದು ಖಾಸಗಿ ಸಂಸ್ಥೆಯಾಗಿದ್ದು, ಹವಾಮಾನ ಮುನ್ಸೂಚನೆ ಮಾಹಿತಿಯನ್ನು ನೀಡುತ್ತದೆ. ಈ ಸಂಸ್ಥೆಯನ್ನು ಜತಿನ್ ಸಿಂಗ್ರವರು ೨೦೦೩ ರಲ್ಲಿ ಸ್ಥಾಪಿಸಿದರು. ಸಂಸ್ಥೆಯ ಪ್ರಧಾನ ಕಛೇರಿಯು ಭಾರತದ ಉತ್ತರ ಪ್ರದೇಶ ರಾಜ್ಯದ ನೋಯ್ಡಾ ನಗರದಲ್ಲಿದೆ. ಸ್ಕೈಮೆಟ್ವು ಹವಾಮಾನ ಮಾಹಿತಿ ಸೇವೆಯನ್ನು ಭಾರತದ ಹಲವಾರು ಮಾಧ್ಯಮ ಸಂಸ್ಥೆಗಳಿಗೆ ನೀಡುತ್ತಿದೆ. ಅವುಗಳಲ್ಲಿ ಕೆಲವು ಹೆಸರಿಸುವುದಾದರೆ ಜೀ ನ್ಯೂಸ್, ಆಜ್ ಟಾಕ್, ಸಹರ ಸಮಯ್, ಟೈಮ್ಸ್ ನೌವ್, ಎ.ಬಿ.ಪಿ., ದಿ ಹಿಂದು ಇತ್ಯಾದಿ. ಅಲ್ಲದೆ ಈ ಸಂಸ್ಥೆಯು ಹವಾಮಾನ ಮಾಹಿತಿ ಸೇವೆಯನ್ನು ಭಾರತದ ಪ್ರಮುಖ ವಿಮೆ ಸಂಸ್ಥೆಗಳಿಗೆ, ಕೃಷಿ ವಲಯಗಳಿಗೆ ನೀಡುತ್ತದೆ. ಈ ಸಂಸ್ಥೆಯು ಸೌರ ಮತ್ತು ಗಾಳಿಯ ಮುನ್ಸೂಚನೆಯನ್ನು ವಿವಿಧ ನವೀಕರಿಸಬಹುದಾದ ಶಕ್ತಿಯ ಸಂಸ್ಥೆಗಳಿಗೆ ನೀಡುತ್ತಿದೆ. ಈ ಸಂಸ್ಥೆಯು ಕೆಲವು ಸರ್ಕಾರೇತರ ಸಂಸ್ಥೆಗಳ (ಎನ್.ಜಿ.ಓ) ಜೊತೆಗೆ ಕೆಲಸ ಮಾಡುವ ಮೂಲಕ ದೇಶದ ಹಲವು ರಾಜ್ಯಗಳಲ್ಲಿನ ದೂರ ದೂರದ ಹಳ್ಳಿಗಳಲ್ಲಿನ ರೈತರ ಸ್ಥಿತಿ ಗತಿಯನ್ನು ಸುಧಾರಿಸಲು ಶ್ರಮಿಸುತ್ತಿದೆ. ಅಲ್ಲದೆ ಈ ಸಂಸ್ಥೆಯು ಸಮುದ್ರದ ಹವಾಮಾನ ಮುನ್ಸೂಚನೆಯನ್ನು ಹಲವು ಸಂಸ್ಥೆಗಳಿಗೆ ನೀಡುತ್ತಿದೆ

ಸ್ಕೈಮೆಟ್ ಸಂಸ್ಥೆಯ ಸ್ಕೈಮೆಟ್ ಹವಾಮಾನ ಕಿರುತಂತ್ರಾಂಶವನ್ನು ಬಿಡುಗಡೆ ಮಾಡಿದ್ದು, ಆಂಡ್ರಾಯ್ಡ್ ಸ್ಮಾರ್ಟ್ಫೋನ್ವುಳ್ಳವರು ಪ್ಲೇಸ್ಟೋರ್ನಿಂದ ಪಡೆದುಕೊಂಡು ಉಪಯೋಗಿಸಬಹುದು. ಸ್ಕೈಮೆಟ್ ಸಂಸ್ಥೆಯ ದೇಶದ ನಾನಾ ಕಡೆಗಳಲ್ಲಿರುವ ಹವಾಮಾನ ವಾತಾವರಣಶಾಸ್ತ್ರ ಘಟಕಗಳಿಂದ ಮಾಹಿತಿಯನ್ನು ಸಂಗ್ರಹಿಸಿ, ಆ ಮಾಹಿತಿಯನ್ನು ಪರಿಷ್ಕರಿಸಿದ ನಂತರ ನಿಖರವಾದ ಹವಾಮಾನ ಮುನ್ಸೂಚನೆ ಮಾಹಿತಿಯನ್ನು ನೀಡುತ್ತದೆ. ಅಲ್ಲದೆ ೧೨ ಕ್ಕೂ ಹೆಚ್ಚು ಉಪಗ್ರಹಗಳಿಂದ ಹವಾಮಾನಕ್ಕೆ ಸಂಬಂಧಿತ ಛಾಯಾಚಿತ್ರಗಳನ್ನು ಸಂಗ್ರಹಿಸುತ್ತದೆ. ಅಲ್ಲದೆ ಈ ಸಂಸ್ಥೆಯ ವಾತಾವರಣಶಾಸ್ತ್ರಕ್ಕೆ ಸಂಬಂಧಿಸಿದ ಪರಿಣಿತರು ನಿರಂತರವಾಗಿ ಹವಾಮಾನದ ಏರುಪೇರುಗಳನ್ನು ಗಮನಿಸುತ್ತಿರುತ್ತಾರೆ.ಸ್ಕೈಮೆಟ್ ಹವಾಮಾನ ಆಪ್ಅನ್ನು ಪ್ಲೇಸ್ಟೋರ್ನಿಂದ ಪಡೆದ ನಂತರ ಮೊದಲ ಬಾರಿಗೆ ಉಪಯೋಗಿಸಲು ಅನುಕೂಲವಾದಂತಹ ಭಾಷೆಯನ್ನು ಬಳಕೆದಾರರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಆಪ್ವು ಬಳಕೆದಾರರ ಪ್ರಸ್ಥುತ ಸ್ಥಳವನ್ನು ಪತ್ತೆಹಚ್ಚಲು ಆಜ್ಞಾಪಿಸಲು ಕೇಳುತ್ತದೆ. ಬಳಕೆದಾರರು ಇರುವ (ನಿಂತಿರುವ) ಸ್ಥಳದ ಹವಾಮಾನ ಮಾಹಿತಿಯು ಪ್ರತಿನಿತ್ಯ ಬೇಕಾಗಿದ್ದಲ್ಲಿ ಸ್ಥಳವನ್ನು ಪತ್ತೆಹಚ್ಚಲು ಒಪ್ಪಿಗೆ ನೀಡಿ ಅ ಸ್ಥಳದ ಹವಾಮಾನದ ಮಾಹಿತಿಯನ್ನು ಪಡೆಯಬಹುದು. ಒಂದು ವೇಳೆ ಬಳಕೆದಾರರು ಬೇರೆ ಸ್ಥಳದ ಹವಾಮಾನ ಸ್ಥಿತಿಯನ್ನು ತಿಳಿಯಲು ಮೊಬೈಲ್ನ ಪರದೆಯ ಮೇಲ್ಭಾಗದಲ್ಲಿ ಕಂಡುಬರುವ ಹುಡುಕು ಗುಂಡಿಯನ್ನು ಒತ್ತಿ ತಮಗೆ ಬೇಕಾದ ಸ್ಥಳವನ್ನು ಬೆರಳಚ್ಚು ಮಾಡಿ ಅ ಸ್ಥಳದ ಹವಾಮಾನವನ್ನು ತಿಳಿಯಬಹುದು. ಈ ಆಪ್ವು ಉಷ್ಟಾಂಶ(ತಾಪ)ವನ್ನು ಡಿಗ್ರಿ ಸೆಲ್ಸಿಯಸ್ ಅಥವಾ ಡಿಗ್ರಿ ಫ್ಯಾರನ್ಹೀಟ್ನಲ್ಲಿ, ತೇವಾಂಶ ಮಾಹಿತಿಯನ್ನು ಶೇಕಡವಾರು, ಗಾಳಿಯ ವೇಗವನ್ನು ಕಿಲೋ ಮೀಟರ್ / ಗಂಟೆ ಪ್ರಮಾಣದಲ್ಲಿ ತಿಳಿಸುತ್ತದೆ. ಅಲ್ಲದೆ ಮಳೆ ಬರುವ ಸಾಧ್ಯತೆ ಇದ್ದಲ್ಲಿ ತಿಳಿಸುತ್ತದೆ. ಈ ಆಫ್ವು ಮುಂದಿನ ೭ ದಿನಗಳ ಹವಾಮಾನ ಮುನ್ಸೂಚನೆಯನ್ನು ನೀಡುತ್ತದೆ. ದಿನದ ೩ ಗಂಟೆಗಳ ಅಂತರದಲ್ಲಿ ಹವಾಮಾನ ಬದಲಾವಣೆಯನ್ನು ತಿಳಿಸುತ್ತದೆ. ಅಂದರೆ ದಿನದ ಬೆಳಿಗ್ಗೆ ೬ ಗಂಟೆಗೆ, ಬೆಳಿಗ್ಗೆ ೯ ಗಂಟೆಗೆ, ಮಧ್ಯಾಹ್ನ ೧೨ ಗಂಟೆಗೆ, ಮಧ್ಯಾಹ್ನ ೩ ಗಂಟೆಗೆ, ಸಂಜೆ ೬ ಗಂಟೆಗೆ, ರಾತ್ರಿ ೯ ಗಂಟೆಗೆ, ಮಧ್ಯರಾತ್ರಿ ೧೨ ಗಂಟೆಗೆ ಮತ್ತು ಮಧ್ಯರಾತ್ರಿ ೩ ಗಂಟೆಗೆ ಹವಾಮಾನದ ಸ್ಥಿತಿಗತಿಯನ್ನು ತಿಳಿಸುತ್ತದೆ. ಇದಲ್ಲದೆ ಈ ಆಪ್ವು ಹವಾಮಾನ, ಆರೋಗ್ಯ ಮತ್ತು ಆಹಾರ, ಕೃಷಿ, ಭೂಮಿ ಮತ್ತು ಪರಿಸರ, ಜೀವನ ಶೈಲಿ ಮತ್ತು ಕ್ರೀಡೆಗೆ ಸಂಬಂಧಿತ ಇತ್ತೀಚಿನ ಸುದ್ಧಿಗಳನ್ನು ವಾರ್ತೆ ಗುಂಡಿಯನ್ನು ಒತ್ತುವ ಮೂಲಕ ಸುಲಭವಾಗಿ ಮಾಹಿತಿಯನ್ನು ಪಡೆಯಲು ಅನುವು ಮಾಡಿಕೊಟ್ಟಿದೆ