ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಬೀಜ ಪ್ರಪಂಚ

ಈರುಳ್ಳಿ

image_
ಡಾ. ಕೆ. ಎಸ್. ಶೇಷಗಿರಿ
9741769213
1

ಈರುಳ್ಳಿ ಭಾರತದಲ್ಲಿ ಬೆಳೆಯುವ ಪ್ರಮುಖ ವಾಣಿಜ್ಯ ತರಕಾರಿ ಬೆಳೆಯಾಗಿದ್ದು ಇದನ್ನು ಬೆಳವಣಿಗೆಯ ಎಲ್ಲಾ ಹಂತಗಳಲ್ಲಿಯೂ ಬಳಸಬಹುದು. ತರಕಾರಿ, ಸಾಂಬಾರು ಪದಾರ್ಥ ಮತ್ತು ಔಷಧೀಯ ಉಪಯೊಗ ಹೊಂದಿರುವ ಈ ಬೆಳೆ ಮನೆಮಂದಿಗೆಲ್ಲಾ ಪರಿಚಿತ. ವೈಜ್ಞಾನಿಕವಾಗಿ ’ಆಲಿಯಮ್ ಸೀಪ’ ಎಂದು ಕರೆಯುವ ಈರುಳ್ಳಿ ’ಅಮರಿಲ್ಲಿಡೇಸಿಯೆ’ ಕುಟುಂಬಕ್ಕೆ ಸೇರಿದೆ. ಪ್ರತಿ ೧೦೦ ಗ್ರಾಂ ಈರುಳ್ಳಿಯ ಸೇವನೆಯಿಂದ ೪೦ಕ್ಯಾಲೊರಿ ಶಕ್ತಿ, ೯ಗ್ರಾಂ ಶರ್ಕರಪಿಷ್ಟ, ೧.೭ಗ್ರಾಂ ನಾರು, ೪.೨ಗ್ರಾಂ ಸಕ್ಕರೆ, ೧೪೬ಮಿ.ಗ್ರಾಂ ಪೊಟ್ಯಾಸಿಯಮ್ ದೊರೆಯುತ್ತದೆ. ದಿನ ನಿತ್ಯದ ಆಹಾರದಲ್ಲಿ ಈರುಳ್ಳಿ ಸೇವನೆಯಿಂದ ಹಲವಾರು ಆರೊಗ್ಯ ಲಾಭಗಳಿವೆ. ಇದು ’ಸಿ’ ಜೀವಸತ್ವದ ಉತ್ತಮ ಮೂಲವಾಗಿದ್ದು, ಇದರಲ್ಲಿರುವ ಗಂಧಕದ ಅಂಶ ಪರ್ಕಿನ್ಸನ್ ಕಾಯಿಲೆ ಮತ್ತು ಹೃದಯಾಘಾತವನ್ನು ಕಡಿಮೆ ಮಾಡುತ್ತದೆ. ಇದು ಆರೋಗ್ಯವಂತ ಹೃದಯಕ್ಕೆ ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ. ಇದು ನೈಸರ್ಗಿಕವಾಗಿ ರಕ್ತವನ್ನು ತೆಳುಗೊಳಿಸುವ ಗುಣ ಹೊಂದಿದೆ. ಈರುಳ್ಳಿ ಅಂಗಾಂಶಗಳ ಉರಿಯೂತವನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ಅಲರ್ಜಿ ಕಡಿಮೆ ಮಾಡುತ್ತದೆ. ಇದರಲ್ಲಿರುವ ’ಕ್ವರ್ಸಿಟಿನ್’ ಅಂಶ ಕ್ಯಾನ್ಸರ್ ನಿರೋಧಕತೆ ಹೊಂದಿದೆ. ಇದರಲ್ಲಿ ಹೆಚ್ಚಾಗಿರುವ ನಾರಿನಂಶ ಆಹಾರದ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ.

ಈರುಳ್ಳಿ ಒಂದು ಏಕ ವಾರ್ಷಿಕ ಗೆಡ್ಡೆ ನೀಡುವ ಬೆಳೆಯಾಗಿದ್ದು ಬೀಜಗಳನ್ನು ಉತ್ಪಾದಿಸಲು ಎರಡು ವರ್ಷಕಾಲ ಬೇಕು. ಸುಮಾರು ಒಂದು ಮೀಟರ್ ಎತ್ತರಕ್ಕೆ ಬೆಳೆಯುವ ಈರುಳ್ಳಿ ಅಂಟಿನಿಂದ ಕೂಡಿದ ಕೊಳವೆಯಾಕಾರದ ದಟ್ಟಹಸಿರು ಎಲೆಗಳನ್ನು ಹೊಂದಿರುತ್ತದೆ. ಹೂದಂಟು ಗಟ್ಟಿಯಾಗಿದ್ದು ಬಿಳಿಬಣ್ಣದ ದ್ವಿಲಿಂಗ ಪುಷ್ಪಗಳನ್ನು ಹೊಂದಿರುತ್ತದೆ. ನಾಟಿನಂತರ ಬೀಜಗಳು ಬಲಿಯಲು ೨೦-೨೪ ತಿಂಗಳ ಅವಧಿ ಬೇಕು. ಈರುಳ್ಳಿಯನ್ನು ಬೀಜದಿಂದ ಹಾಗೂ ಗೆಡ್ಡೆಗಳ ಬಿತ್ತನೆಯಿಂದ ಕೃಷಿ ಮಾಡಬಹುದು. ಬಿತ್ತನೆ ಬೀಜವನ್ನು ಪಾದರಸಯುಕ್ತ ವಸ್ತುವಿನಿಂದ (ಕ್ಯಾಪ್ಟಾನ್-೨.೦ ಗ್ರಾಂ/ ಪ್ರತಿ ಕಿ.ಗ್ರಾಂ ಬೀಜಕ್ಕೆ) ಉಪಚರಿಸಿ ಬಿತ್ತನೆ ಮಾಡಬೇಕು. ಪ್ರತಿ ಎಕರೆ ಪ್ರದೇಶಕ್ಕೆ ೮-೧೦ ಕಿ.ಗ್ರಾಂ ಬಿತ್ತನೆ ಬೀಜ ಬೇಕಾಗುತ್ತದೆ. ಗೆಡ್ಡೆ ನಾಟಿ ಮಾಡುವುದಾದರೆ ಎಕರೆಗೆ ಸುಮಾರು ೩೫೦ ಕಿ.ಗ್ರಾಂ ಬಿತ್ತನೆ ಗೆಡ್ಡೆಗಳು ಅಗತ್ಯ. ಉಪಚರಿಸಿದ ಬೀಜಗಳನ್ನು ಒಂದು ಅಡಿ (೩೦ಸೆಂ.ಮೀ.) ಸಾಲಿನಲ್ಲಿ ಕೂರಿಗೆ ಬಿತ್ತನೆ ಮಾಡಬಹುದು. ಗೆಡ್ಡೆ ನಾಟಿ ಮಾಡುವಾಗ ಅರ್ಧ ಅಡಿ (೧೫ಸೆಂ.ಮೀ.) ಅಂತರದ ಬೋದುಗಳಲ್ಲಿ ನಾಲ್ಕು ಅಂಗುಲ(೧೦ ಸೆಂ.ಮೀ.) ಅಂತರದಲ್ಲಿ ನಾಟಿ ಮಾಡುವುದು ಸೂಕ್ತ.