ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಮಾದರಿ ಗೇರು ತೋಟ

ಡಾ. ಲಕ್ಷ್ಮಣ್,
9480838970
1

ಗೇರು ಉಷ್ಣ ವಲಯದ ಪ್ರಮುಖ ವಾಣಿಜ್ಯ ಬೆಳೆ. ಪ್ರಪಂಚದಲ್ಲಿ ಗೇರು ಬೆಳೆಯುವ ಮುಖ್ಯ ದೇಶಗಳು ಬ್ರೆಜಿಲ್, ನೈಜೀರಿಯಾ, ವಿಯೆಟ್ನಾಂ, ತಾಂಜಿನಿಯಾ ಮತ್ತು ಮೋಜಾಂಬಿಕ್. ೧೬ನೇ ಶತಮಾನದಲ್ಲಿ ಪೋರ್ಚ್ಗೀಸರಿಂದ ಮೊದಲ ಬಾರಿಗೆ ಭಾರತದ ಪಶ್ಚಿಮ ಕರಾವಳಿಯಲ್ಲಿ ಗೇರು ಬೆಳೆಯನ್ನು ಪರಿಚಯಿಸಲಾಯಿತೆಂದು ಉಲ್ಲೇಖಗಳಿವೆ. ಗೋಡಂಬಿಯು ಭಾರತದ ವಿದೇಶಿ ವಿನಿಮಯ ಗಳಿಸಿಕೊಡುತ್ತಿರುವ ಪ್ರಮುಖ ವಾಣಿಜ್ಯ ಬೆಳೆ ಗಳಲ್ಲೊಂದು. ಇದನ್ನು ಕರಾವಳಿ, ಘಟ್ಟ ಪ್ರದೇಶ, ಕೋಲಾರ ಹಾಗೂ ಮುಂತಾದ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರೈತರು ಗೇರು ಕೃಷಿ ಮಾಡಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯು ಗೇರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ, ಪೆಡಮಲೆ ಗ್ರಾಮದವರಾದ ಹೆನ್ರಿ ಕ್ರಾಸ್ತ ಅವರು ಹೆಚ್ಚಿನ ಆಸಕ್ತಿ ತೋರಿಸಿ ಅತ್ಯುತ್ತಮ ಗೇರು ಕೃಷಿಯನ್ನು ಮಾಡುತ್ತಿದ್ದಾರೆ. ಇವರು ಏಳು ಎಕರೆ ಗುಡ್ಡಗಾಡು ಪ್ರದೇಶದಲ್ಲಿ ಕಸಿ ಮಾಡಿದ ವಿವಿಧ ಗೇರು ತಳಿಗಳನ್ನು ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಉಳ್ಳಾಲದಿಂದ ಪಡೆದು ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ನೆಡುವ ಮೂಲಕ ತಮ್ಮ ತೋಟವನ್ನು ಪ್ರಯೋಗ ಕೇಂದ್ರವನ್ನಾಗಿ ಪರಿವರ್ತಿಸಿದ್ದಾರೆ. ಕಸಿ ಮಾಡಿದ ಗೇರು ಸಸಿಗಳು ಮೂರನೇ ವರ್ಷಕ್ಕೆ ಇಳುವರಿ ನೀಡಲು ಪ್ರಾರಂಭಿಸಿ ಈಗ ಉತ್ತಮ ಇಳುವರಿಯನ್ನು ನೀಡುತ್ತಿವೆ

4

ಇವರು ಗೇರು ಕೃಷಿಗೆ ಬೇಕಾದಂತಹ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ನೀರು, ಗೊಬ್ಬರ ನೀಡಿ ಪೋಷಣೆ ಮಾಡುತ್ತಿದ್ದಾರೆ. ತಮ್ಮ ತೋಟದಲ್ಲಿಯೇ ಸಿಗುವ ಎಲೆ ಮತ್ತು ಕಚ್ಚಾ ವಸ್ತುಗಳನ್ನು ಬಳಸಿ ಉತ್ತಮ ಗೊಬ್ಬರ ಮತ್ತು ಸುಡು ಮಣ್ಣನ್ನು ತಯಾರಿಸಿ ಗಿಡಗಳಿಗೆ ನೀಡುತ್ತಿದ್ದಾರೆ. ಇದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ. ಚಳಿಗಾಲ ಹಾಗೂ ಬೇಸಿಗೆ ಕಾಲದಲ್ಲಿ ಐದು ದಿನಗಳಿಗೊಮ್ಮೆ ನೀರು ಕೊಡುತ್ತಿದ್ದಾರೆ. ಆದ ಕಾರಣ ಗಿಡಗಳು ಒಳ್ಳೆಯ ಬೆಳವಣಿಗೆ ಹೊಂದಿವೆ ಮತ್ತು ಹೂ ಬಿಟ್ಟು ಕಾಯಿ ಕಚ್ಚಿವೆ.ಗೇರು ಗಿಡಕ್ಕೆ ತಗುಲುವ ಪ್ರಮುಖ ಕೀಟಗಳಲ್ಲಿ ಟೀ ಸೊಳ್ಳೆ ಹಾಗೂ ಕಾಂಡ ಮತ್ತು ಬೇರು ಕೊರೆಯುವ ಹುಳುವಿನ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿದ್ದಾರೆ. ಟೀ ಸೊಳ್ಳೆ ಭಾದೆ ಸಂಬಂಧಿಸಿದಂತೆ ವಿಜ್ಞಾನಿಗಳ ಸಲಹೆ ಪಡೆದು ಕೀಟದ ನಿರ್ವಹಣೆ ಮಾಡಿದ್ದಾರೆ. ಇನ್ನು ಕಾಂಡ ಮತ್ತು ಬೇರು ಕೊರೆಯುವ ಹುಳುವಿನ ತಮ್ಮದೇ ಆದ ವಿಧಾನವನ್ನು ಕಂಡುಕೊಂಡಿದ್ದಾರೆ. ಕೀಟವನ್ನು ಸಂಪೂರ್ಣ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ

6

ತಮ್ಮ ಏಳು ಎಕರೆ ಗೇರು ತೋಟದಲ್ಲಿ ೨೬ ಕ್ವಿಂಟಾಲ್ ಗೇರು ಬೀಜವನ್ನು ಪಡೆದು, ಉತ್ತಮ ಇಳುವರಿ ಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗೇರು ತಳಿಗಳಾದ ಪ್ರಿಯಾಂಕ, ಉಳ್ಳಾಲ-೧, ಎನ್.ಡಿ.ಆರ್-೧, ಯು.ಎನ್-೫೦ ಮತ್ತು ಭಾಸ್ಕರ ತಳಿಗಳು ಉತ್ತಮ ಇಳುವರಿ ಹಾಗೂ ದೊಡ್ಡ ಬೀಜವನ್ನು ನೀಡುತ್ತವೆ ಎನ್ನುವುದು ಅವರ ಅಭಿಪ್ರಾಯ. ಇವರು ಗೇರು ಕೃಷಿ ಅಲ್ಲದೇ ಕರಿಮೆಣಸಿನ ಬಳ್ಳಿಗಳನ್ನು ಕೂಡ ನೆಟ್ಟಿದ್ದಾರೆ. ಪಣಿಯೂರು-೧ ತಳಿಯನ್ನು ನೆಟ್ಟು ಉತ್ತಮ ಇಳುವರಿಯನ್ನು ಪಡೆಯುತ್ತಿದ್ದಾರೆ. ೫೦೦ ಕರಿಮೆಣಸಿನ ಬಳ್ಳಿಗಳಿಂದ ೬೦೦ ಕೆ.ಜಿ ಯಷ್ಟು ಇಳುವರಿ ಪಡೆದಿದ್ದಾರೆ. ಕೊಯ್ಲು ಮಾಡಿದ ಕರಿಮೆಣಸಿನ ಕಾಯಿಗಳನ್ನು ಬೇರ್ಪಡಿಸಲು ತಮ್ಮದೇ ಆದ ಯಂತ್ರವನ್ನು ತಯಾರಿಸಿದ್ದಾರೆ. ಈ ಯಂತ್ರದಲ್ಲಿ ಕಾಳುಗಳಿಗೆ ಯಾವುದೇ ತರಹದ ಹಾನಿ ಉಂಟಾಗದೇ ಬೇರ್ಪಡಿಸಿ ಕಾಳು ಪಡೆದು ಬಿಸಿಲಿನಲ್ಲಿ ಒಣಗಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಗೇರು ಮತ್ತು ಕಾಳು ಮೆಣಸಿನ ಕೃಷಿಯಲ್ಲಿ ಇವರು ತೋರುತ್ತಿರುವ ಆಸಕ್ತಿ ಮತ್ತು ಕ್ರಿಯಾಶೀಲತೆ ಶ್ಲಾಘನೀಯ ಮತ್ತು ಬೇರೆ ರೈತರಿಗೆ ಮಾದರಿಯು ಕೂಡ

8910