ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಮಣ್ಣ ಮಡಿಲಲ್ಲಿ

ಇದು ಬರಗಾಲವೆ?

image_
ಸಂಪಾದಕರು
12

ನೀರು ಸಮೃದ್ಧಿಯಿಂದ ಕೊರತೆಯೆಡೆಗೆ ಸಾಗಿದಂತೆ ನೀರು ನಿರ್ವಹಣೆ ಕಲಿತು ಕೃಷಿ ಮಾಡುತ್ತಿರುವ ರೈತ ಎಚ್. ಆರ್. ಚಂದ್ರೇಗೌಡರು. ೧೯೮೦ರ ದಶಕದಲ್ಲಿ ಕೃಷಿ ವೃತ್ತಿ ಪ್ರಾರಂಭಿಸಿದ ಚಂದ್ರೇಗೌಡರು ೧೯೮೨ರಲ್ಲಿ ಬಾವಿಯೊಂದನ್ನು ತೋಡಿಸಿ ತರಕಾರಿ ಕೃಷಿಯನ್ನು ೧೦ ಎಕರೆ ಪ್ರದೇಶದಲ್ಲಿ ಪ್ರಾರಂಭಿಸಿದರು. ಅಂದರೆ ಯಥೇಚ್ಛ ನೀರು, ಅದನ್ನ ಉಪಯೋಗಿಸಿ ಅವರ ಬೆಳೆಯದ ತರಕಾರಿಗಳೇ ಇಲ್ಲ ಎನ್ನುವಂತೆ ಎಲ್ಲಾ ಬೆಳೆಗಳನ್ನು ಬೆಳೆದ ಅನುಭವಿಗಳು. ತರಕಾರಿ ಮಧ್ಯ ತೆಂಗು, ಅಡಿಕೆ ಮಾಡಿ ಅವು ಬೆಳೆದಂತೆ ತರಕಾರಿ ಬೆಳೆಯುವುದನ್ನು ಕಡಿಮೆ ಮಾಡಿದರು. ಸಾವಿರದ ಒಂಭೈನೂರ ತೊಂಭತ್ತರ ಹೊತ್ತಿಗೆ ಸುತ್ತ ಬೋರ್ವೆಲ್ ಬಂದು ತಮ್ಮ ಬಾವಿ ನೀರು ಕಾಣಿಸದಾದಾಗ ಇವರೂ ಬೋರ್ವೆಲ್ಗೆ ಶರಣಾದರು. ಮೂರು ಬೋರ್ವೆಲ್ ಪ್ರತಿ ಬೋರ್ವೆಲ್ನಲ್ಲೂ ೨ ಇಂಚು ನೀರು ಆಗಲೂ ಸಹ ಅವರಿಗೆ ಬೇಕಾದಷ್ಟು ನೀರಿತ್ತು. ಕ್ರಮೇಣ ನೀರು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂತು. ಕಡಿಮೆ ಆದಂತೆ ನೀರಾವರಿ ತಂತ್ರಜ್ಞಾನಗಳ ಸುಧಾರಣೆ ಮಾಡುತ್ತಲೇ ಬಂದರು, ಹನಿ ನೀರಾವರಿ ಅಳವಡಿಸಿದರು. ಆದರೆ ಈಗ ಎರಡು ಬೋರ್ ಒಣಗಿವೆ. ಒಂದರಲ್ಲಿ ಒಂದೂವರೆ ಇಂಚು ನೀರಿದೆ. ೧೫ ಎಕರೆ ತೋಟದಲ್ಲಿ ೩೦೦೦ ಅಡಿಕೆ, ೨೫೦ ತೆಂಗು, ೮೦೦ ಮೆಣಸು, ೪೦೦೦ ಕಾಫಿ ತೋಟದ ಸುತ್ತಲೂ ಅವಕ್ಯಾಡೊ, ಬ್ರೆಡ್ಫ್ರೂಟ್, ಲಿಚಿ, ಹಲಸು, ಪೇರಲ, ಸಪೋಟ, ಸೀತಾಫಲ ಹೀಗೆ ವೈವಿಧ್ಯಮಯ ಹಣ್ಣಿನ ಗಿಡಗಳಿಗೆ ನೀರುಣಿಸುತ್ತಿದ್ದಾರೆ. ಅಬ್ಬಾ ! ೧೫ ಎಕರೆ ೧ಳಿ ಇಂಚು ನೀರು. ನೀರಿನ ಕೊರತೆಯಿಂದ ಗಿಡ ಬಾಡಿದಂತಾಗಿ ಇಳುವರಿ ಕಡಿಮೆ ಆಗಿರಬೇಕೆಂದು ಅನಿಸಬಹುದು. ಆದರೆ ಇಲ್ಲಿ ಅದ್ಯಾವುದರ ಲಕ್ಷಣಗಳಿಲ್ಲವೇ ಇಲ್ಲ. ಇದು ಬರಗಾಲವೆ? ಎಂದು ಆಶ್ಚರ್ಯದಿಂದ ನೋಡುವಂತ ತೋಟ. ನೀರು ಕಡಿಮೆ ಇದೆ ಎಂದು ಕೊರಗುವವರು ಇಲ್ಲಿ ಭೇಟಿ ನೀಡಬಹುದು. ಇವರ ತೋಟದಲ್ಲಿ ಎಲ್ಲೂ ನೀರು ಮೇಲೆ ಕಾಣಿಸದು. ಹನಿ ನೀರಾವರಿ ಅದರಲ್ಲೂ ಪ್ಲಾಸ್ಟಿಕ್ ಹೊದಿಕೆ ಕೆಳಗೆ ಅಥವಾ ಚಾಪೆ ಹೊದಿಕೆ ಕೆಳಗೆ ಸಾಗಿದೆ. ಇಬ್ಬನಿಯನ್ನು ಬಿಡದೆ ಸಂಗ್ರಹಿಸುವ ತಂತ್ರಜ್ಞಾನ. ಹೀಗೆ ನೀರು ಮಿತ ಬಳಕೆಗೆ ಲಭ್ಯ ಎಲ್ಲ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ೩೦೦೦ ಅಡಿಕೆಯಿಂದ ೪೫೦ ಕ್ವಿಂಟಾಲ್ ಹಸಿ ಅಡಿಕೆ, ೪೦೦೦ ಕಾಫಿಯಿಂದ ೪ ಟನ್ ಸಿದ್ಧ ಕಾಫಿ ಬೀಜ, ೨೫೦ ತೆಂಗಿನಿಂದ ೪೦-೪೨ ಸಾವಿರ ಕಾಯಿ, ೮೦೦ ಮೆಣಸು ಬಳ್ಳಿಯಿಂದ ೩ ಟನ್ ಮೆಣಸು. ಇಳುವರಿ ಪಡೆದ ಇವರ ತೋಟ ನೋಡಿದರೆ ಇದು ಬರಗಾಲವೇ? ಇವರ ಬರಗಾಲದ ವರ್ಷದ ಸಾಧನೆ ಎಂತವರಿಗೂ ಅಚ್ಚರಿ ಎನ್ನಿಸದಿರದು. ಇವರು ಇಂತಹ ಸಾಧಕ ರೆಂದೇ ಗುರುತಿಸಿ ರಾಜ್ಯ ಸರ್ಕಾರ ಇವರಿಗೆ ೨೦೦೪ರಲ್ಲೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.

45

ಇವರ ಭೇಟಿ ವಿಳಾಸ: ಎಚ್. ಆರ್. ಚಂದ್ರೇಗೌಡ, ೯೪೪೮೬೬೫೫೮೯, ಶ್ರೀ ರುದ್ರ ಫಾರಂ, ಲಕ್ಷ್ಮಿಪುರ, ಲಕ್ಯಾ ಕ್ರಾಸ್, ಲಕ್ಯಾ ಪೋಸ್ಟ್ ಮಂಗಳೂರು ತಾಲ್ಲೂಕು