ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೪

ಕೃಷಿಕರ ಸಂಘಟನೆ ಹಾಗೂ ಕೃಷಿ ತೂಗಿಸಿದ ಜಯಪ್ಪಗೌಡ

image_
ಸಂಪಾದಕರು
1

ಜಯಪ್ಪಗೌಡರು ಶಿರಾಳಕೊಪ್ಪದ ನನ್ನ ಸ್ನೇಹಿತರ ಮದುವೆ ಮನೆಯಲ್ಲಿ ಭೇಟಿ ಆದರು. ಅಲ್ಲಿ ಅವರೊಡಗಿನ ಚರ್ಚೆ ಅವರ ತೋಟಕ್ಕೆ ಕರೆದೊಯ್ಯಿತು. ಮೂಲ ಕೃಷಿ ಕುಟುಂಬದ ಜಯಪ್ಪಗೌಡರದು ೧೫ ಎಕರೆ ತೋಟ. ಮಾವು, ಅಡಿಕೆ. ಕೋಕೊ, ಬಾಳೆ, ನಿಂಬೆ, ಜೋಳ, ಭತ್ತ ಬೆಳೆಯುತ್ತಾ ಬಂದಿದ್ದಾರೆ. ಮೂರು ಬೋರ್ವೆಲ್ ಇವೆ. ಇವರ ಅಡಿಕೆ ತೋಟಕ್ಕೆ ಕಾಲಿಟ್ಟಾಗ ಅಲ್ಲಿ ನೀರಿನ ಕೊರತೆಗಿಂತ ನೀರಿನ ಗುಣಮಟ್ಟದ ಕೊರತೆ ಹಾಗೂ ಹೆಚ್ಚು ನೀರಿನ ಪರಿಣಾಮಗಳೇ ಕಾಣತೊಡಗಿದಾಗ ಕೇಳಿದ್ದಕ್ಕೆ. ಹೌದು ಸಾರ್ ಇತ್ತೀಚೆಗೆ ನಾನು ತೋಟದ ಕಡೆ ಗಮನ ಕಡಿಮೆಯಾಗಿದೆ. ಈಗ ಇದನ್ನು ಮಕ್ಕಳು ನೋಡಿಕೊಳ್ಳುತ್ತಿದ್ದಾರೆ ಮತ್ತೆ ಸುಧಾರಿಸುತ್ತಿದೆ. ನಾನು ರೈತ ಸಂಘದಲ್ಲಿ ಸಕ್ರಿಯನಾದ ಮೇಲೆ ತೋಟದ ಕಡೆ ಬರುವುದೇ ಕಷ್ಟವಾಗಿದೆ. ಆದರೆ ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಖುಷಿಯಿದೆ

ಜಯಪ್ಪಗೌಡರ ವಿಶೇಷ ಅಂದರೆ ೧೫ ವರ್ಷದಿಂದ ಭತ್ತವನ್ನು ಬೀಜಕ್ಕಾಗಿ ಬೆಳಿತಾರೆ. ಕರ್ನಾಟಕ ಬೀಜ ನಿಗಮಕ್ಕೆ ಬೀಜ ಒದಗಿಸುತ್ತಾರೆ. ಆಹಾರ ಧಾನ್ಯಗಳಿಗೆ ಇವರು ನೀಡುತ್ತಿರುವ ಪ್ರಾಮುಖ್ಯತೆ ಇದರಿಂದ ತಿಳಿಯುತ್ತದೆ. ಅದಕ್ಕೆ ಇವರಿಗೆ ನಾನೊಂದು ಪ್ರಶ್ನೆ ಕೇಳಿದೆ. ಕೃಷಿ ಲಾಭ ಅಲ್ಲ ಅಂತಾರೆ ಅದರಲ್ಲೂ ಭತ್ತದ ಕೃಷಿ ಲಾಭವೆ? ಅಂದಿದಕ್ಕೆ ಅವರು ಕೊಟ್ಟ ಹೋಲಿಕೆ ಚೆನ್ನಾಗಿತ್ತು. ಅಲ್ಲಾ ಸಾರ್ ನಾ ಹೂಡಿದ ಬಂಡವಾಳ ೩-೪ ತಿಂಗಳಲ್ಲಿ ಎಲ್ಲಿ ಡಬ್ಬಲ್ ಆಗುತ್ತೆ ಹೇಳಿ. ಭತ್ತದ ಬೆಳೆಯಲ್ಲಿ ಡಬ್ಬಲ್ ಆಗುತ್ತೆ. ಅಂದ್ರೆ ಅದ್ಯಾಗೆ ಲಾಸ್ ಆಗುತ್ತೆ ನೀವೇ ಹೇಳಿ. ನೀವು ಕೆಲಸಕ್ಕೆ ಹೋಗ್ತೀರಿ. ಅಷ್ಟೆ ಗಂಟೆಗಳು ನಾವೂ ಕೆಲಸ ಮಾಡಿದ್ರೆ ಲಾಸ್ ಇಲ್ಲ. ಎಲ್ಲಾ ಉಸ್ತುವಾರಿಯಲ್ಲೆ ಆಗಬೇಕು ಅಂದ್ರೆ ಲಾಸ್ ಅಷ್ಟೆ ಅಂದ್ರು. ನಮ್ಮ ತಂಡ ಇವರ ತೋಟದಲ್ಲಿ ನೀರಿನ ಗುಣಮಟ್ಟದಿಂದಾಗುತ್ತಿರುವ ಸಮಸ್ಯೆ ತೋರಿಸಿ, ನೀರನ್ನು ಪರೀಕ್ಷಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿತು.

ಜಯಪ್ಪಗೌಡರ ಮಗ ಶಿವಕುಮಾರ್, ತೋಟಗಾರಿಕೆ ಪದವೀಧರರು:

5

ನಾವು ನಮ್ಮ ತಾತನ ಕಾಲದಿಂದ ಕೃಷಿ ಮಾಡುತ್ತಾ ಬಂದಿದ್ದೇವೆ. ನಮ್ಮ ತಂದೆಯವರು ಅದನ್ನೇ ಮುಂದುವರಿಸಿಕೊಂಡು ಬಂದಿರುತ್ತಾರೆ. ನಾವು ಕೃಷಿಯಲ್ಲಿನ ಆದಾಯವನ್ನು ನೆಚ್ಚಿಕೊಂಡು ಬಂದಿರುವ ಕುಟುಂಬ. ನಾವು ೬ ಎಕರೆಯಲ್ಲಿ ಅಡಿಕೆ ಬೆಳೆದಿದ್ದೇವೆ. ಆದರೆ ನಡುವಲ್ಲಿ ಕೋಕೊ ಬೆಳೆದಿದ್ದೇವೆ. ಅಡಿಕೆಯನ್ನು ನಾವೇ ಸಂಸ್ಕರಣೆ ಮಾಡಿ ಮಾರುಕಟ್ಟೆಗೆ ಕಳುಹಿಸುತ್ತೇವೆ. ಅದರಿಂದ ಮಾರುಕಟ್ಟೆಯಲ್ಲಿ ಆಗುವ ದರ ಏರಿಕೆಯಲ್ಲಿನ ಲಾಭ ನೇರವಾಗಿ ನಮಗೆ ಸಿಗುವುದರಿಂದ ಉಪಯೋಗವಾಗುತ್ತಿದೆ. ಇನ್ನು ೨ ಎಕರೆ ಮಾವು ಬೆಳೆದಿದ್ದೇವೆ. ಅದರಲ್ಲಿ ಇಳುವರಿ ಚೆನ್ನಾಗಿದ್ದು, ಅದನ್ನು ಗುತ್ತಿಗೆ ಕೊಟ್ಟು ಬಿಟ್ಟಿದ್ದೇವೆ. ೨ ಎಕರೆ ಜೋಳವನ್ನು ಬೆಳೆದಿದ್ದೇವೆ. ನನಗೂ ಕೃಷಿಯಲ್ಲಿ ಆಸಕ್ತಿ ಇದ್ದುದರಿಂದ ತೋಟಗಾರಿಕೆ ಪದವಿ ಆಯ್ಕೆ ಮಾಡಿಕೊಂಡು, ಅದರಲ್ಲಿ ಕಲಿತ ವಿಷಯವನ್ನು ನಮ್ಮ ತೋಟದಲ್ಲಿ ಅಳವಡಿಸಿಕೊಂಡು ಈಗ ನಮ್ಮ ತಂದೆಗೆ ಕೃಷಿಯಲ್ಲಿ ಸಹಾಯವಾಗುತ್ತಿರುವೆ

ಕೃಷಿ ಹಾಗೂ ಕೃಷಿ ಸಂಘಟನೆ ಎರಡನ್ನೂ ತೂಗಿಸಿಕೊಂಡು ಹೋಗುವ ಜಯಪ್ಪಗೌಡರು ಎರಡನ್ನೂ ನಿಭಾಯಿಸುವುದಕ್ಕೊಂದು ಮಾದರಿ