ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಸಂಪಾದಕೀಯ

ಸುಂಕಕ್ಕೆ ಸುಂಕ ಇನ್ನಿಲ್ಲ........!!

image_
ಕೆ.ಸಿ.ಶಶಿಧರ
1

ಬಡ್ಡಿ, ಚಕ್ರಬಡ್ಡಿ ಎಂದರೆ ಏನು? ಎಂದು ವಿವರಿಸುವ ಅಗತ್ಯವಿಲ್ಲ. ಕಾರಣ ಸಾಮಾನ್ಯರೆಲ್ಲಾ ಒಂದಲ್ಲಾ ಒಂದೆಡೆ ಈ ಬಡ್ಡಿ, ಚಕ್ರಬಡ್ಡಿಗಳ ಬಲಿಪಶುಗಳಾಗಿಯೇ ಇರುತ್ತೇವೆ. ಇದುವರೆಗೆ ನಮ್ಮರಿವಿಗೆ ಬಾರದಂತೆ ಸುಂಕಕ್ಕೆ ಸುಂಕ ತೆರುತ್ತಿದ್ದೆವು ಎಂಬುದು ಜಿ.ಎಸ್.ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಯಿಂದಲೇ ತಿಳಿಯಿತೆಂದರೆ ಅಚ್ಚರಿಯಲ್ಲವೆ? ಶಾನುಭೋಗರಿಗೆ (ಲೆಕ್ಕಿಗರು/ಅಕೌಂಟೆಂಟ್) ಗೊತ್ತಿದ್ದಿರಬಹುದು, ಸಾಮಾನ್ಯರಿಗೆ ಇದರ ಅರ್ಥ ಈಗ ತಿಳಿಯುತ್ತಿದೆ. ಚಕ್ರಬಡ್ಡಿ ಒಳ್ಳೆಯದಲ್ಲ ಅನ್ನುವುದನ್ನು ನಾವು ಒಪ್ಪಿಕೊಂಡರೆ! ಖಂಡಿತ ಜಿ.ಎಸ್.ಟಿ ಒಳ್ಳೆಯ ಬೆಳವಣಿಗೆ ಎಂದೇ ಹೇಳಬೇಕು.

ಮೊದಲಿದ್ದ ಸುಂಕ ಪದ್ಧತಿಯಲ್ಲಿ, ಒಂದು ಸಾವಿರ ರೂ. ಬೆಲೆಯ ಕೀಟನಾಶಕಕ್ಕೆ ತನ್ನ ಲಾಭ ೨೦೦ ರೂ. ಸೇರಿಸಿ ತಯಾರಕ ಕೀಟನಾಶಕದ ಬೆಲೆಯನ್ನ ೧೨೦೦ ರೂ. ಎಂದು ನಿಗದಿ ಮಾಡಿ ಅದಕ್ಕೆ ೧೬% ಸುಂಕ ಸೇರಿಸಿ ೧೩೯೨ ರೂ.ಗೆ ಸಗಟು ವ್ಯಾಪಾರಿಗೆ ಮಾರುತ್ತಾನೆ. ಸಗಟು ವ್ಯಾಪಾರಿ ತನ್ನ ಖರ್ಚು ವೆಚ್ಚ ಲಾಭದ ಭಾಗವಾಗಿ ೨೭೮ ರೂ. ಸೇರಿಸಿ ಬೆಲೆಯನ್ನು ೧೩೯೨ಕ್ಕೆ ನಿಗದಿ ಮಾಡಿ ಅದಕ್ಕೆ ಶೇ.೨ರ ಸುಂಕ ಸೇರಿಸಿ ಚಿಲ್ಲರೆ ವ್ಯಾಪಾರಿಗೆ ಕೊಡುತ್ತಾನೆ. ಚಿಲ್ಲರೆ ವ್ಯಾಪಾರಿಗೆ ೧೭೦೩ ರೂ.ಗೆ ಕೀಟನಾಶಕ ಸಿಗುತ್ತದೆ. ಅವನ ಖರ್ಚು ವೆಚ್ಚ ಲಾಭ ಸೇರಿಸಿ ೨೦೪೪ ರೂ.ಬೆಲೆ ನಿಗದಿ ಮಾಡುತ್ತಾನೆ. ಗ್ರಾಹಕನಿಗೆ ಮಾರುವಾಗ ಈ ಬೆಲೆಯ ಮೇಲೆ ೫.೫ ರಷ್ಟು ಮೌಲ್ಯವರ್ಧಿತ ತೆರಿಗೆ ವಿಧಿಸಿ ೨೧೫೭ ರೂ.ಗೆ ರಶೀದಿ ನೀಡಿ ಮಾರಾಟ ಮಾಡುತ್ತಾನೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ತಯಾರಿಸಿ ಖರೀದಿಸಿದ ಕಚ್ಚಾ ವಸ್ತುವಿಗೆ ಅವನು ಸುಂಕ ಕೊಟ್ಟಿರುತ್ತಾನೆ. ಅದನ್ನು ಒಳಗೊಂಡು ೧೬% ಸುಂಕ ವಿಧಿಸುತ್ತಾನೆ. ತಯಾರಿಕ ವಿಧಿಸಿದ ಸುಂಕ ಒಳಗೊಂಡು ಸಗಟು ಮಾರಾಟಗಾರ ಪುನಃ ೨% ಸುಂಕ ವಿಧಿಸುತ್ತಾನೆ. ಹಾಗೆ ಈ ಎಲ್ಲಾ ಸುಂಕಗಳ ಮೇಲೆ ಚಿಲ್ಲರೆ ವ್ಯಾಪಾರಿ ಪುನಃ ೫.೫% ಸುಂಕ ವಿಧಿಸುತ್ತಾನೆ. (೧೬+೨+೫.೫=೨೩.೫%) ಅಬ್ಬಾ! ಸುಂಕದ ಮೇಲೆ ಸುಂಕ! ಆದರೆ ಗ್ರಾಹಕನಿಗೆ ಕೇವಲ ೫.೫ ಪ್ರತಿಶತ ಸುಂಕ ಕೊಟ್ಟೆ ಎಂದುಕೊಳ್ಳುತ್ತಿದ್ದ ಕಾರಣ ಬಿಲ್ಲಿನಲ್ಲಿ ವ್ಯಾಟ್ ೫.೫% ಎಂದು ನಮೂದಾಗಿರುತ್ತಿತ್ತು. ಈಗ ಜಿ.ಎಸ್.ಟಿ ಬಂದ ಮೇಲೆ ಬಿಲ್ಲಿನಲ್ಲಿ ೧೮% ಜಿ.ಎಸ್.ಟಿ ಎಂದು ನಮೂದಾಗಿರುವುದರಿಂದ ತೆರಿಗೆ ಹೆಚ್ಚಾಗಿದೆ ಅನ್ನಿಸುತ್ತದೆ. ಆದರೆ ವಾಸ್ತವದಲ್ಲಿ ತೆರಿಗೆ ಹೆಚ್ಚಾಗಿಲ್ಲ ಬದಲಿಗೆ ೫.೫% ಕಡಿಮೆ ಆಗಿದೆ.

ಇದನ್ನೇ ನಾವು ಜಿ.ಎಸ್.ಟಿ ವ್ಯವಸ್ಥೆಯಲ್ಲಿ ಕೊಂಡಾಗ ೧೮% ಜಿಎಸ್.ಟಿ ಇದ್ದರೂ ೧೦೦೦ ರೂ. ಬೆಲೆಯ ಕೀಟನಾಶಕ ತಯಾರಕ, ಸಗಟು ಮಾರಾಟಗಾರರ, ಚಿಲ್ಲರೆ ಮಾರಾಟಗಾರ ಎಲ್ಲಾ ಒಳಗೊಂಡು ಅಂತಿಮ ಬೆಲೆ ೧೭೨೮ ರೂ. ಇದಕ್ಕೆ ೧೮% ಜಿ.ಎಸ್.ಟಿ ಸೇರಿಸಿದರೆ ೨೦೩೯ ರೂ. ಆಗುತ್ತದೆ. ಇದು ಮೊದಲಿಗಿಂತ ೧೧೭ ರೂ. ಅಗ್ಗವಾಯಿತು. ಜೊತೆಗೆ ತಯಾರಕರಿಗೆ, ಸಗಟು ಮಾರಾಟಗಾರರಿಗೆ ಅವರ ಮೂಲ ವಸ್ತು/ ವಸ್ತುಗಳ ಮೇಲೆ ಪಾವತಿಸಿದ ಜಿ.ಎಸ್.ಟಿ ಮರು ಹೊಂದಾಣಿಕೆ/ಮರುಪಾವತಿಯಾಗುತ್ತದೆ. ಇದು ಮೊದಲ ಲಾಭವಾದರೆ, ಸ್ಪರ್ಧಾತ್ಮಕ ಪರಿಸರದಿಂದಾಗಿ ಮರು ಹೊಂದಾಣಿಕೆಯಾದ ಸುಂಕದ ಲಾಭ ಗ್ರಾಹಕರಿಗೆ ಸಿಗುವಂತಾದಾಗ ಇನ್ನು ಬೆಲೆಗಳು ಇಳಿಯಬಹುದು. ಜೊತೆಗೆ ಅಂತರರಾಜ್ಯ ಸರಕು ಸಾಗಣೆಗೆ ಕೊಡಬೇಕಾದ ಲಂಚ ಸಹ, ಸುಂಕದ ಚೆಕ್ಪೋಸ್ಟ್ ಇಲ್ಲವಾದ್ದರಿಂದ ಇಲ್ಲವಾಗಿದೆ. ಇದು ಸಹ ಉತ್ಪನ್ನದ ಬೆಲೆ ಇಳಿಯಲು ನೆರವಾಗಲಿದೆ.

ಕೃಷಿ ಕ್ಷೇತ್ರಕ್ಕೆ ಜಿ.ಎಸ್.ಟಿ ದೀರ್ಘಕಾಲೀನ ಉತ್ತಮ ಪರಿಣಾಮ ಬೀರಬಲ್ಲದು. ಇದರಿಂದ ದೇಶಕ್ಕೊಂದೆ ಮಾರುಕಟ್ಟೆ ಲಭಿಸುವುದರಿಂದ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವುದು. ಈ ಹಿಂದೆ ಅಂತರರಾಜ್ಯ ಮಾರಾಟಕ್ಕೆ ಉತ್ಪನ್ನ ಸಾಗಿಸುವಾಗ ಸುಂಕದ ಚೆಕ್ಪೋಸ್ಟ್ಗಳಲ್ಲಿ ರೈತರಿಗೆ ವಿನಾಕಾರಣ ಆಗುತ್ತಿದ್ದ ಕಿರಿಕಿರಿ ಇಲ್ಲ. ಕಾರಣ ಸುಂಕದ ಚೆಕ್ಪೋಸ್ಟ್ ಇಲ್ಲ. ರಾಮನ ಲೆಕ್ಕ, ಕೃಷ್ಣನ ಲೆಕ್ಕಕ್ಕೆ ಕಡಿವಾಣ ಬೀಳುತ್ತೆ ಎನ್ನುವುದೂ ಇದೆ. ಆದರೆ ಇದೆಲ್ಲ ಕೇವಲ ಕಾನೂನಿನಿಂದ ಆಗದೆ ತೆರಿಗೆ ರೀತಿ ಬದಲಾದಂತೆ ಕಾಳಧನ/ಲಂಚಗುಳಿತನ ಎಲ್ಲರಲ್ಲೂ ಬದಲಾಗಿ ಸ್ವಚ್ಛ ಮನಸ್ಸುಗಳ ಸಂಖ್ಯೆ ಹೆಚ್ಚಾದಂತೆ ಜಿ.ಎಸ್.ಟಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕಾಣುವುದು. ಒಂದು ದೇಶ, ಒಂದು ತೆರಿಗೆ, ಒಂದು ಮಾರುಕಟ್ಟೆ ರೈತರ ಬದುಕಲ್ಲಿ ಬದಲಾವಣೆ ತರಲಿ ಎಂದು ಆಶಿಸೋಣ.