ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಬರದ ಬರೆಯಲ್ಲಿ ಬಂಗಾರದ ಸೇವಂತಿಗೆ ಸಿರಿ

ಡಾ. ಪ್ರಕಾಶ್ ಕೇರೂರೆ
೯೯೭೨೭೧೪೬೪೭
1

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾಯಸಂದ್ರ ಗ್ರಾಮದ ಪ್ರಗತಿಪರ ರೈತರಾದ ಶ್ರೀಯುತ ಪಿ. ಪಾಂಡುರಂಗಪ್ಪರವರು, (೯೭೪೧೯೧೦೩೨೪) ಒಟ್ಟು ೪ ಎಕರೆಯಲ್ಲಿ ಈರುಳ್ಳಿ, ಸೂರ್ಯಕಾಂತಿ, ಗೋವಿನ ಜೋಳ, ರಾಗಿ ಬೆಳೆಗಳನ್ನು ಬೆಳೆಯುತ್ತಾರೆ. ಜಮೀನಿನ ಸುತ್ತಲು ಹೊಂಗೆ, ಬೇವು, ತೆಂಗು ಮರಗಳನ್ನು ಬೆಳೆಸಿದ್ದಾರೆ ಅದರಲ್ಲೂ, ವಿಶೇಷವಾಗಿ ತಮ್ಮ ೧೦ ಗುಂಟೆ ಜಮೀನಿನಲ್ಲಿ ೨ ಇಂಚು ಅಲ್ಪ ನೀರಾವರಿ ಸೌಲಭ್ಯದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಬಬ್ಬೂರು ಫಾರಂ ತಾಂತ್ರಿಕ ಸಹಭಾಗಿತ್ವದಲ್ಲಿ ಸೇವಂತಿಗೆಯ (ಬೆಳ್ಳಂಟು)ನ್ನು ಹನಿ ನೀರಾವರಿ ಮೂಲಕ ಬೆಳೆಯುತ್ತಿದ್ದಾರೆ

3

ಚಿತ್ರದುರ್ಗ ಜಿಲ್ಲೆಯು ಹೂವಿನ ಬೆಳೆಗೆ ಪೂರಕ ಹವಾಗುಣ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಹೊಂದಿದ್ದು ಸೇವಂತಿಗೆ ಬೆಳೆಯ ವಹಿವಾಟು ಹಬ್ಬದ ದಿನಗಳಲ್ಲಿ ರೈತರಿಗೆ ಹೆಚ್ಚಿನ ಲಾಭ ಕೊಡುವಂತ ಬೆಳೆಯಾಗಿದೆ. ಈ ಮೊದಲು ಶ್ರೀಯುತ ಪಿ. ಪಾಂಡುರಂಗಪ್ಪರವರು ಯಾವುದೇ ತಂತ್ರಜ್ಞಾನವನ್ನು ಅನುಸರಿಸದೆ ಬೆಳೆ ಬೆಳೆಯಲಾಗದೆ ನಷ್ಟವನ್ನು ಅನುಭವಿಸುತ್ತಿದ್ದರು. ನಂತರ ಕೃಷಿ ವಿಜ್ಞಾನ ಕೇಂದ್ರದ ನಿಕಟ ಸಂಬಂಧದೊಂದಿಗೆ ಪ್ರಸ್ತುತ ೨೦೧೫ನೇ ಸಾಲಿನ ನವೆಂಬರ್ ಮೊದಲನೇ ವಾರದಲ್ಲಿ ಬೆಳ್ಳಂಟು ಲೋಕಲ್ ತಳಿಯನ್ನು ೨ ಅಡಿ ಸಾಲಿನಿಂದ ಸಾಲಿಗೆ ೧ ರಿಂದ ೧.೫ ಅಡಿ ಗಿಡದಿಂದ ಗಿಡಕ್ಕೆ ಅಂತರ ಕೊಟ್ಟು ನಾಟಿ ಮಾಡಿದ್ದರು. ತಮ್ಮ ೧೦ ಗುಂಟೆ ಜಮೀನಿಗೆ ಮಣ್ಣಿಗೆ ಪರೀಕ್ಷೆಗೆ ಅನುಸಾರವಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಕೆ ಮಾಡಿ ಹಾಗೂ ಹೆಚ್ಚು ಸಾವಯವ ಗೊಬ್ಬರದ ಬಳಕೆ ಮಾಡಿದ್ದಾರೆ. ವಿಶೇಷವಾಗಿ ಇವರು ಪ್ರತಿ ಹೂವಿನ ಕಟಾವಿನ ಹಂತದಲ್ಲಿ ನೀರಿನಲ್ಲಿ ಕರಗುವ ೧೯:೧೯:೧೯ ನ್ನು ೨ ಗ್ರಾಂ ಪ್ರತಿ ಲೀ. ನೀರಿಗೆ ಸಿಂಪರಣೆ ಮಾಡುವುದರಿಂದ ಉತ್ತಮ ಇಳುವರಿ ಮತ್ತು ಹೂವಿನ ಹೊಳಪು ಬರುವುದೆಂದು, ಹಾಗೂ ಕಾಲಕಾಲಕ್ಕೆ ಗಿಡಗಳಿಗೆ ತಗಲುವ ರೋಗ ಮತ್ತು ಕೀಟವನ್ನು ನಿಯಂತ್ರಿಸಲು ತಾಂತ್ರಿಕ ಮಾಹಿತಿ ಸಹಕಾರಿಯಾಗುತ್ತದೆ ಎಂದು ತಮ್ಮ ಅಭಿಪ್ರಾಯ ವನ್ನು ತಜ್ಞರಲ್ಲಿ ಹಂಚಿಕೊಂಡಿದ್ದಾರೆ

ತಮ್ಮ ೨೦ ಗುಂಟೆ ಜಮೀನಿಗೆ ಸಸಿ ಕೊಂಡುಕೊಳ್ಳಲು ರೂ. ೬,೫೦೦/-, ಆಳುಗಳಿಗೆ ರೂ. ೮,೦೦೦/- ಗೊಬ್ಬರಕ್ಕೆ ರೂ. ೧೩,೫೦೦/-(ಒಟ್ಟು ರೂ.೨೮,೦೦೦/-) ಖರ್ಚು ತಗಲಿದೆ. ಪ್ರತಿ ವಾರಕ್ಕೆ ೩೦೦ ಮಾರಿನಂತೆ ಹೂವನ್ನು ಹಿರಿಯೂರು ಮಾರುಕಟ್ಟೆಯಲ್ಲಿ ಮಾರಿ ಸರಾಸರಿ ರೂ.೯,೯೦೦/- ಆದಾಯ ಪಡೆಯುತ್ತಿದ್ದು ಈ ಬೆಳೆಯು ೧೨ ವಾರಗಳ ತನಕ ಮಾರಾಟ ಮಾಡಿ ರೂ. ೧,೧೮,೮೦೦/- ಆದಾಯ ಪಡೆದಿದ್ದು ಒಟ್ಟು ಖರ್ಚು ತಗೆದು ರೂ. ೯೦,೮೦೦/- ಲಾಭ ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ