ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಮಣ್ಣ ಮಡಿಲಲ್ಲಿ

ಸಂಪನ್ಮೂಲಗಳ ಸದ್ಬಳಕೆಗೆ ಬಹು ಬೆಳೆ

image_
ಕೆ.ಸಿ.ಶಶಿಧರ
1

ಈ ವರ್ಷವೂ ಎಲ್ಲಿ ಮಳೆ ಕೈಕೊಡುವುದೊ ಎಂಬ ಆತಂಕದಲ್ಲಿದ್ದ ಮಲೆನಾಡ ರೈತರಿಗೆ ಪುನರ್ವಸು ಕೊನೆಯ ಪಾದದ ಮಳೆ ಸ್ವಲ್ಪ ನೆಮ್ಮದಿ ತರುವಂತೆ ಸುರಿಯುತ್ತಿತ್ತು. ಮಲೆನಾಡ ಆ ಮಳೆಯ ಹನಿಗಳಿಗೆ ಕೈ ಅಡ್ಡ ಹಿಡಿದು ಪ್ರಕಾಶ್ ರಾವ್ ಅವರ ಮನೆ ಒಳಗೆ ಅಡಿ ಇಡುತ್ತಿದ್ದಂತೆ ಆತ್ಮೀಯ ಸ್ವಾಗತ, ಅವರ ಶ್ರೀಮತಿಯವರು ಸಿದ್ಧಪಡಿಸಿ ತಂದ ಬಿಸಿ ಬಿಸಿ ಕಷಾಯ ಆಹಾ!! ಮಲೆನಾಡು ಎನ್ನುವಂತೆ ಮಾಡಿತು. ಸ್ನೇಹಿತ ವಿಘ್ನೇಶ್ ಅವರು ನಮ್ಮೂರಲ್ಲಿ ಒಬ್ಬ ಪ್ರಯೋಗಶೀಲರಿದ್ದಾರೆ. ಬನ್ನಿ ನಮ್ಮೂರಿಗೆ ಅಂತ ಆಹ್ವಾನ ನೀಡಿದ್ದರಿಂದ ಸಾಗರ ತಾಲ್ಲೂಕಿನ ಮಂಚಾಲೆ ಗ್ರಾಮದ ಪ್ರಕಾಶ್ ರಾವ್ ಅವರ ಮನೆಗೆ ಬಂದಿಳಿದ ನಾವು ಹೊರಗಡೆ ಮಳೆ ಜೋರಾಗಿಯೇ ಇದ್ದುದರಿಂದ ಮನೆ ಒಳಾವರಣದಲ್ಲೆ ಪ್ರಕಾಶ್ ಅವರ ಕೃಷಿ ಚರ್ಚೆ ಆರಂಭಿಸಿದೆವು. ಇವರು ಎಸ್ಎಸ್ಎಲ್ಸಿ ನಂತರ ತಮ್ಮ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ಅಪ್ಪನೊಂದಿಗೆ ಕೃಷಿಗೆ ಇಳಿದವರು. ಹುಟ್ಟಿನಿಂದ ಕೃಷಿ ಪರಿಸರದಲ್ಲಿ ಬೆಳೆದ ಇವರಿಗೆ ಕೃಷಿ ಆಸಕ್ತಿದಾಯಕ. ಪ್ರಸ್ತುತ ಒಂದು ಎಕರೆ ಅಡಿಕೆ, ೨ ಎಕರೆ ಖುಷ್ಕಿ, ೩ ಎಕರೆ ಸೊಪ್ಪಿನ ಬೆಟ್ಟದ ನಿರ್ವಹಣೆ ಮಾಡಿಕೊಂಡಿದ್ದಾರೆ ಎಲ್ಲವೂ ಪಿತ್ರಾರ್ಜಿತ. ಇವರು ಜಮೀನು ವಿಸ್ತಾರ ಮಾಡದೆ ಇರುವ ಜಮೀನಿನಲ್ಲಿ ಬೆಳೆಗಳನ್ನೇ ವಿಸ್ತರಿಸುತ್ತಾ ಹೋಗಿದ್ದಾರೆ. ಹೀಗಾಗಿ ಇವರ ಕ್ಷೇತ್ರ ಒಂದು ಬೆಳೆ ಮ್ಯೂಸಿಯಂ ತರ ಆಗಿದೆ. ಮಣ್ಣ ಮಡಿಲಲ್ಲಿ ಇವರ ಬಗ್ಗೆ ಬರೆಯಲು ಇದೇ ಪ್ರೇರಣೆ. ಇವರು ಆದಾಯಕ್ಕೆ ಹೆಚ್ಚು ಚಿಂತಿಸದೆ, ಈ ಜಮೀನು ನನಗೆ ಆಧಾರವಾಗುವುದರ ಜೊತೆ ಪರಿಸರಕ್ಕೆ ಹಾಗೂ ಸಂಪನ್ಮೂಲ ಸದ್ಬಳಕೆಗೆ ಸಹಕಾರಿಯಾಗುವುದೇ ಎಂದು ಚಿಂತಿಸಿದ್ದೆ ಹೆಚ್ಚು. ಊಟ ಮುಗಿಸಿ ಅವರ ತೋಟಕ್ಕೆ ಭೇಟಿ ನೀಡಿದೆವು. ಒಂದು ಎಕರೆ ಅಡಿಕೆ ಬೆಳೆಯಲ್ಲಿ ಇವರು ಬೆಳೆದ ವೈವಿಧ್ಯಮಯ ಬೆಳೆಗಳು ಹಾಗೂ ಅವುಗಳನ್ನು ಯೋಜಿಸಿರುವ ರೀತಿ ನೋಡುವಂತಿದೆ. ಎರಡು ಸಾಲು ತೆಂಗು/ಅಡಿಕೆಯ ಮಧ್ಯ ಎರಡು ಸಾಲು ಬೇಲಿಯ ರೀತಿ ಐದು ಔಷಧೀಯ ಸಸ್ಯಗಳನ್ನು ಸಂಯೋಜಿಸಿದ್ದಾರೆ. ಮಧುನಾಶಿನಿ, ಸೆಲೆಷಿಯಾ, ಒಂದೆಲಗ, ಭತ್ತಮೆಣಸು, ಹಿಪ್ಪಲಿ ಇವೆಲ್ಲಕ್ಕೂ ಒಂದೇ ಡ್ರಿಪ್ ಲೈನ್ನಿಂದ ನೀರೊದಗಿಸುತ್ತಾರೆ. ಈ ಎರಡು ಔಷಧೀಯ ಸಸ್ಯಗಳ ಸಾಲಿನ ಮಧ್ಯ ಗ್ಲಿರಿಸಿಡೀಯ ಬೆಳೆದು ಅದಕ್ಕೆ ಮೆಣಸಿನ ಬಳ್ಳಿ ಹಬ್ಬಿಸಿದ್ದಾರೆ. ಇವರ ಪ್ರಕಾರ ವಿಶೇಷ ಎಂದರೆ ಇಲ್ಲಿ ಬೆಳೆದ ಬೆಳೆಗಳಾವೂ ಕೊಯ್ಲು ಮಾಡಿದ ತಕ್ಷಣ ಮಾರಬೇಕೆಂದಿಲ್ಲ. ಒಣಗಿಸಿ ಇಟ್ಟು ಅಗತ್ಯವಿದ್ದಾಗ ಮಾರಾಟ ಮಾಡಲು ಯೋಗ್ಯ. ಹಾಗೆ ಇವುಗಳಿಗೆ ಮಂಗ ಹಾಗೂ ಇತರೆ ಪ್ರಾಣಿಗಳ ಕಾಟವಿಲ್ಲ

3

ಇವುಗಳ ಜೊತೆ ಮ್ಯಾಪಿಯಾ ಎಂಬ ಔಷಧೀಯ ಸಸ್ಯವನ್ನೂ ಇಲ್ಲಿ ಬೆಳೆಸಿದ್ದಾರೆ. ಅರೆ ಇವೆಲ್ಲಾ ಬೆಳೆದಿದ್ದೀರಾ ಇದಕ್ಕೆ ಮಾರುಕಟ್ಟೆ ಇದೆಯಾ ಅಂತ ಕೇಳಿದ್ರೆ. ಸಾರ್ ಮಾರುಕಟ್ಟೆ ಗ್ಯಾರಂಟಿ ಮೇಲೆ ನನ್ನ ಬೆಳೆಗಳು. ಇದು ಸಾವಯವ ಪ್ರಮಾಣಿತ ತೋಟ, ಇವುಗಳಿಗೆ ಹೆಚ್ಚು ಬೇಡಿಕೆ ಇದೆ. ಇಲ್ಲಿ ನೋಡಿ ೩೩೦ ಅಡಿ ಬೆಡ್ ಮಾಡಿ ಒಂದೆಲಗ ಬೆಳೆದಿದ್ದೇನೆ. ನನ್ನಿಂದ ಕೊಳ್ಳುವವರು ಎಲೆ ಮತ್ತು ಕಾಂಡ ಮಾತ್ರ ಕೇಳುತ್ತಾರೆ. ಬೇರು ಕೀಳುವ ಅಗತ್ಯ ಇಲ್ಲ. ಒಮ್ಮೆ ಕಟಾವು ಮಾಡಿದರೆ ಮಡಿಗೆ ಸರಾಸರಿ ೧೫ರಿಂದ ೨೦ ಕೆ.ಜಿ ಬೆಳಿತೀನಿ. ಕೆ.ಜಿಗೆ ೫೦ ರೂ. ಬೇಸಿಗೆಯಲ್ಲಿ ಮಾತ್ರ ನೆರಳು ಪರದೆ ಹಾಕುತ್ತೇನೆ, ಆಗ ಇಳುವರಿ ಹೆಚ್ಚು.ಹಾಗೆ ಇನ್ನೊಂದು ಭಾಗದಲ್ಲಿ ಅರಿಶಿಣ-ಮ್ಯಾಪಿಯಾ-ಸೆಲೆಷಿಯಾ-ಜಾಯಿಕಾಯಿ ಪಟ್ಟಿ ಮಾಡಿದ್ದಾರೆ. ಸರ್ಪೆಂಟಿನಾದ ಬೇರಿಗೆ ಬೇಡಿಕೆ ಇದೆ. ಇದನ್ನು ಬೆಳೆದರೆ ಬೇರು ಅಗೆದು ತೆಗೆಯೋದು ಕಷ್ಟ. ಅದಕ್ಕೆ ಟೈರ್ ತಂತ್ರಜ್ಞಾನ ಬಳಸಿದ್ದೇನೆ. ೪-೬ ಟೈರ್ ಒಂದರ ಮೇಲೆ ಒಂದರಂತೆ ಜೋಡಿಸಿ ಮಣ್ಣು ತುಂಬುತ್ತಾರೆ. ಅದರಲ್ಲಿ ಗಿಡ ಬೆಳೆದು ಬೇರು ಕೊಯ್ಲು ಮಾಡಲು ಒಂದೊಂದೇ ಟೈರ್ ತೆಗೆದರಾಯಿತು. ಸುಲಭ ತಂತ್ರಜ್ಞಾನ ಅಂತಾರೆ ಪ್ರಕಾಶ್ ರಾವ್. ಕೇವಲ ಎರಡು ವರ್ಷದ ಪ್ರಯೋಗ. ತೋಟ ನೋಡಿದರೆ ಖಂಡಿತಾ ಜೈವಿಕ ಉತ್ಪನ್ನ ಹೆಚ್ಚಿರುವುದು ಗೋಚರಿಸುತ್ತದೆ. ಒಂದೆರಡು ಬೆಳೆಗಳ ಆದಾಯ ಪ್ರಾರಂಭ ಆಗಿದೆ. ಎಲ್ಲಾ ಬೆಳೆಗಳು ಆದಾಯ ನೀಡುವಾಗ ಹೆಚ್ಚಿದ ಜೈವಿಕ ಉತ್ಪನ್ನಗಳ ಮೌಲ್ಯ ನಿರ್ಧರಿಸಬಹುದು. ಆದರೆ ಈ ಮೌಲ್ಯಕ್ಕಿಂತ ಹೆಚ್ಚಾಗಿ ಇವರು ರಿಸ್ಕ್ ತೆಗೆದುಕೊಂಡು, ಸಂಪನ್ಮೂಲ ಹೂಡಿ ತಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ರೂಪಿಸಿದ ಕ್ರಿಯಾಯೋಜನೆ ನಿಜಕ್ಕೂ ಒಮ್ಮೆ ನೋಡುವಂತಿದೆ. ಇಂತಹ ಕ್ರಿಯಾಶೀಲತೆ ಬೇಡುವ ಶ್ರಮ ಹಾಗೂ ಸಂಪನ್ಮೂಲಗಳನ್ನು ಇವರು ತಮ್ಮ ತೋಟಕ್ಕೆ ಧಾರೆ ಎರೆದಿದ್ದಾರೆ. ಈ ಎಲ್ಲಾ ಬೆಳೆಗಳ ನೀರಿನ ಮೂಲ ಮಳೆಯ ಜೊತೆ ಎರಡಿಂಚು ನೀರು ಇರುವ ಬೋರ್ವೆಲ್. ಸುತ್ತ ಬೇಲಿಯನ್ನು ತೆಳುವಾದ ಜಿಂಕ್ ತಗಡಿನಿಂದ ಮಾಡಿದ್ದಾರೆ. ಇದರಿಂದ ಕಾಡುಪ್ರಾಣಿಗಳ ಕಾಟ ಬಹಳ ಕಡಿಮೆಯಾಗಿದೆಯೆಂದು ಪ್ರಕಾಶ್ ಹೇಳುತ್ತಾರೆ

5

ಮಲೆನಾಡಿನ ಅವಿಭಾಜ್ಯ ಅಂಗ ಸೊಪ್ಪಿನ ಬೆಟ್ಟ. ಇವರಿಗೆ ಲಭ್ಯ ಇರುವ ಎರಡು ಎಕರೆ ಸೊಪ್ಪಿನ ಬೆಟ್ಟವನ್ನ ಇವರು ಸೊಪ್ಪಿನ ಬೆಟ್ಟವಾಗಿಡದೆ ಇದನ್ನು ಒಂದು ಆರ್ಥಿಕ ಲಾಭ ತಂದುಕೊಡುವಂತಹ ಅರಣ್ಯವನ್ನಾಗಿ ರೂಪಿಸಿದ್ದಾರೆ. ಇದು ಒಳ್ಳೆಯ ಸೊಪ್ಪಿನ ಬೆಟ್ಟಕ್ಕೆ ಮಾದರಿಯಲ್ಲದಿದ್ದರೂ ಯೋಜಿತ ಅರಣ್ಯ ಬೆಳೆಗೆ ಮಲೆನಾಡಿಗೊಂದು ಮಾದರಿ. ಇಂದು ಬೆಟ್ಟವೇರಿದ ಕೃಷಿ, ಕಾಡು ಒತ್ತುವರಿ ಮಾಡಿ ಅಕ್ರಮ-ಸಕ್ರಮ ಮಾಡಿಕೊಂಡ ಜಮೀನು, ಇಳಿಜಾರು ಹೆಚ್ಚಿದ್ದು ಹೊಲದ ಬೆಳೆಗೆ ಸೂಕ್ತವಲ್ಲದ ಜಮೀನುಗಳಿಗೆ ಇದೊಂದು ಉತ್ತಮ ಮಾದರಿ ಆಗಬಲ್ಲದೆಂಬುದು ನನ್ನ ಅನಿಸಿಕೆ. ಇದರಿಂದ ಕಾಡಿನ ನೈಸರ್ಗಿಕ ಬಲ, ರೈತನ ಆರ್ಥಿಕತೆಯ ಒತ್ತಾಸೆ ಎರಡೂ ಈಡೇರುತ್ತದೆ. ಇದಕ್ಕೆ ವ್ಯವದಾನ ಬೇಕು. ಇವರ ಮಾದರಿಯಲ್ಲಿ ಅಲ್ಲಿದ್ದ ಸ್ಥಳೀಯ ಕೆಲವು ಮರಗಳ ಮಧ್ಯ ಧೂಪ, ಗ್ಲಿರಿಸಿಡೀಯಾ, ಅಗಾರ್, ಗೇರು, ದಾಲ್ಚಿನ್ನಿ, ಅರ್ಜುನ ಬೆಳೆಸಿದ್ದಾರೆ. ಮಧ್ಯ ಎಲ್ಲಾ ಕಾಡು ಮರಗಳಿಗೆ ಮೆಣಸಿನ ಬಳ್ಳಿ, ಸಾಲುಗಳ ಮಧ್ಯ ಮ್ಯಾಪಿಯಾ, ಸೆಲೆಷಿಯಾ, ಮಧುನಾಶಿನಿ, ಗಂಧಕ ಚೋರ ಇತ್ಯಾದಿ ಬೆಳೆಗಳನ್ನು ಸಂಯೋಜಿಸಿದ್ದಾರೆ. ಇದಕ್ಕೆ ಯಾವುದೇ ಬೇಲಿ ಇಲ್ಲ ಏಕೆಂದರೆ ಇಲ್ಲಿರುವ ಯಾವ ಬೆಳೆಯನ್ನು ಸ್ಥಳೀಯ ಪ್ರಾಣಿಗಳು ಅವಲಂಬಿಸಿರುವುದಿಲ್ಲ. ಈ ಎಲ್ಲಾ ಬೆಳೆಗಳನ್ನು ಮಳೆಯಾಶ್ರಯದಲ್ಲೇ ನಿರ್ವಹಿಸಿದ್ದಾರೆ. ಇದಕ್ಕೆ ನೀರಾವರಿ ಒದಗಿಸುವುದಿಲ್ಲ

7

ಹೀಗೆ ಇನ್ನೊಂದು ಭಾಗದಲ್ಲಿ ಅಗತ್ಯ ಇದ್ದಾಗ ಒಂದು ಎರಡು ನೀರು ಕೊಡುವ ವ್ಯವಸ್ಥೆ ಮಾಡಿ ಕಾಫಿ, ಮಿಡಿ ಮಾವು, ಮೆಣಸು, ಮ್ಯಾಪಿಯಾ, ಚಿತ್ರಮೂಲ, ವಿಷ್ಣುಕಾಂತಿ, ಕಸ್ತೂರಿ, ಅರಿಶಿಣ ಮಾದರಿ ಸಹ ಮಾಡಿದ್ದಾರೆ. ಪ್ರಕಾಶ್ ರಾವ್ ಅವರ ಈ ಎಲ್ಲ ಪ್ರಯೋಗಗಳಿಗೆ ಮೊದಲು ಹೆಗಲು ಕೊಡುವವರು ಅವರ ಶ್ರೀಮತಿಯವರು. ಇವರಿಬ್ಬರೂ ಹೊಲಮನೆಯಲ್ಲಿ ಜೊತೆ ಜೊತೆಗೆ ಶ್ರಮಿಸುತ್ತಾರೆ. ಇವರಿಬ್ಬರ ಹೆಣ್ಣು ಮಕ್ಕಳು ಮದುವೆಯಾಗಿ ಗಂಡಂದಿರ ಮನೆಯಲ್ಲಿದ್ದಾರೆ. ಅವರಿಗೂ ಒಳ್ಳೆಯ ಶಿಕ್ಷಣ ಕೊಟ್ಟು ಬೀಳ್ಕೊಟ್ಟಿದ್ದಾರೆ. ನನ್ನ ಪ್ರಯೋಗಗಳು ಪ್ರಕಾಶಮಾನವಾಗಬೇಕು ಎನ್ನುವುದು ಪ್ರಕಾಶ್ ರಾವ್ ಅವರ ಬೃಹದಾಸೆ. ಎರಡು ವರ್ಷಗಳ ಪ್ರಯೋಗದ ಫಲಗಳು ಇವರಾಸೆಯನ್ನು ಮುಂದಿನ ದಿನಗಳಲ್ಲಿ ನನಸಾಗಿಸಲಿ ಎಂದು ಆಶಿಸೋಣ. ಪ್ರಯೋಗಶೀಲರು ಇವರ ಪ್ರಯತ್ನಗಳನ್ನೊಮ್ಮೆ ನೋಡ ಬನ್ನಿ