ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ದಾರಿದೀಪ

ಸಮಗ್ರ ಕೃಷಿಯ ತೋಟ - ಸಮೃದ್ಧಿಯ ನೋಟ

ಕು|| ಸ್ಮಿತ ಜಿ. ಬಿ
೯೬೧೧೭೨೬೦೦೧
1

ಭೂಮಿತಾಯಿಯನ್ನು ನಂಬಿ ದುಡಿದರೆ ರೈತನಿಗೆ ಯಾವುದೇ ಕಾರಣಕ್ಕೂ ನಷ್ಟವಿಲ್ಲ ಎಂದು ವಿವರಣೆ ಕೊಡಲಾರಂಭಿಸಿದ ಪ್ರಗತಿಪರ ಕೃಷಿಕ ಶ್ರೀಯುತ ಮಲ್ಲಿಕಾರ್ಜುನ್ ಹಲವಾರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕೇವಲ ಹೆಸರಿಗೆ ಕೃಷಿ ಮಾಡುವ ರೈತರನ್ನು ರೈತರೇ ಅಲ್ಲ ಎಂಬ ತೀರ್ಮಾನಕ್ಕೆ ಬರುವ ಇವರಿಗೆ ಚಿಕ್ಕಂದಿನಿಂದಲೇ ಕೃಷಿ ಮತ್ತು ಗಿಡಗಳ ಬಗ್ಗೆ ಹೆಚ್ಚು ಆಸಕ್ತಿ. ಯಾವಾಗಲೂ ಕೃಷಿಯಲ್ಲಿ ವಿಭಿನ್ನ ಚಿಂತನೆ ಮಾಡುವ ಇವರು ಹುಟ್ಟಿದ್ದು ಶಿವಮೊಗ್ಗ ತಾಲ್ಲೂಕಿನ ಯಲವಟ್ಟಿ ಗ್ರಾಮ, ಓದಿದ್ದು ಹತ್ತನೇ ತರಗತಿ, ಜಮೀನು ತಂದೆ ಕಡೆಯಿಂದ ಬಂದ ೫ ಎಕರೆ ಭೂಮಿ, ಅದೂ ಒಣಬೇಸಾಯ. ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಮಹದಾಸೆ ಇಟ್ಟುಕೊಂಡು ಹೊರಟ ಇವರಿಗೆ ಸಹಾಯ ಮಾಡಿದ್ದು, ವೈಜ್ಞಾನಿಕ ಕೃಷಿ ಪದ್ಧತಿ

ಮೊದಲು ೫ ಎಕರೆ ಭೂಮಿಯಲ್ಲಿ ಅಡಿಕೆಯನ್ನು ಮಾತ್ರ ಪ್ರಮುಖ ಬೆಳೆಯಾಗಿ ಬೆಳೆಯುತ್ತಿದ್ದ ಇವರು ಕೇವಲ ಏಕಬೆಳೆ ಬೆಳೆಯುವುದರಿಂದ ಕೃಷಿಯಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು, ಅಡಿಕೆಯಲ್ಲಿ ಅಂತರ ಬೆಳೆ ಮತ್ತು ಮಿಶ್ರ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದರು. ಇಂದು ಅವರ ತೋಟದಲ್ಲಿ ಅಡಿಕೆ ಬೆಳೆಯ ಜೊತೆಗೆ ವಿವಿಧ ರೀತಿಯ ಬೆಳೆಗಳಾದ ಬಾಳೆ, ಕೋಕೋ, ನಿಂಬೆ, ಜಾಯಿಕಾಯಿ, ಏಲಕ್ಕಿ, ತೆಂಗು, ಪೇರಲ, ಚಕ್ಕೆ, ಲವಂಗ, ಗಂಧಮೆಣಸು (ಆಲ್ಸ್ಪೈಸಸ್), ಮನೆ ಮದ್ದಿಗೆ ವಿವಿಧ ಗಿಡಮೂಲಿಕೆಗಳಾದ ಬೆಳ್ಳುಳ್ಳಿ ಬಳ್ಳಿ, ಮಧುನಾಶಿನಿ, ಇನ್ಸುಲಿನ್, ಬಿಲ್ವಪತ್ರೆ ಇತ್ಯಾದಿ ಹಾಗೂ ವಿವಿಧ ಅರಣ್ಯ ಮರಗಳು... ಹೀಗೆ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಒಂದರ್ಥದಲ್ಲಿ ಇವರ ತೋಟವನ್ನು ಸರ್ವ ವೃಕ್ಷಗಳ ಆಗರ ಎಂದು ಕರೆಯುವುದರಲ್ಲಿ ತಪ್ಪೇನಿಲ್ಲ. ಕೃಷಿ ಕೆಲಸಕ್ಕೆ ಇವರ ಧರ್ಮಪತ್ನಿಯವರೂ ಕೂಡ ಕೈಜೋಡಿಸುತ್ತಿದ್ದಾರೆ. ಮಳೆನೀರು ಕೊಯ್ಲು ತಂತ್ರಜ್ಞಾನವನ್ನು ಅಳವಡಿಸಿ ಕೊಂಡಿರುವ ಇವರು ಬೆಳೆಗಳಿಗೆ ಅಗತ್ಯಕ್ಕೆ ತಕ್ಕಂತೆ ನೀರನ್ನು ಒದಗಿಸುತ್ತ ಉತ್ತಮ ಇಳುವರಿಯನ್ನು ಪಡೆಯುತ್ತಿರುವುದು ಇವರ ವಿಶೇಷ. ಅಲ್ಲದೆ ತಮ್ಮ ಜಮೀನಿನಲ್ಲಿ ದೊರೆಯುವ ಅಡಿಕೆ, ಕೋಕೋ ಹಾಗೂ ಇನ್ನಿತರೆ ತ್ಯಾಜ್ಯಗಳನ್ನು ಬಳಸಿ ಸಾವಯವ ಗೊಬ್ಬರವನ್ನು ತಯಾರು ಮಾಡಿ ಜಮೀನಿಗೆ ಬಳಸುವ ಇವರು ಸಾವಯವ ಕೃಷಿ ಹಾಗೂ ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತು ಕೊಡುತ್ತಿರುವುದು ಪರಿಸರದ ಬಗ್ಗೆ ಇವರಿಗಿರುವ ವಿಶೇಷ ಕಾಳಜಿ ಯನ್ನು ತೋರಿಸುತ್ತದೆ

4

ಅಡಿಕೆ ಇವರಿಗೆ ವಿಶೇಷ ಮನ್ನಣೆ ಕೊಟ್ಟ ಕ್ಷೇತ್ರ. ಒಂದು ಎಕರೆ ಅಡಿಕೆಯಿಂದ ವರ್ಷಕ್ಕೆ ೩ ಲಕ್ಷಕ್ಕೂ ಮೇಲ್ಪಟ್ಟು ಹಣ ಸಂಪಾದನೆ ಆಗುತ್ತಿದ್ದು, ಇದರ ಜೊತೆಗೆ ಅಂತರ ಬೆಳೆಯಿಂದ ರೂ.೩೦,೦೦೦/- ಮತ್ತು ಕೋಕೋ ಬೆಳೆಯಿಂದ ರೂ.೫೦,೦೦೦/- ಕ್ಕಿಂತಲೂ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ. ಇವರ ಸಾಧನೆಯನ್ನು ಗಮನಿಸಿದ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ’ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದಲ್ಲದೆ ರಾಜ್ಯ ಸರ್ಕಾರದಿಂದ ’ಕೃಷಿ ಪಂಡಿತ’ ಪ್ರಶಂಸೆಯೂ ಲಭಿಸಿದೆ. ಇವರಿಗೆ ಕೃಷಿ ಅಲ್ಲದೆ ಕೃಷಿಗೆ ಪೂರಕವಾದ ಉಪ ಉದ್ದಿಮೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳ ಬೇಕೆನ್ನುವ ಹಂಬಲ. ಇದಕ್ಕೆ ಬೆಂಬಲವೆಂಬಂತೆ ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡ ಜೇನು ಸಾಕಾಣಿಕೆ ತರಬೇತಿಯು ಸಹಕಾರ ನೀಡಿತು. ತರಬೇತಿಯ ನಂತರ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದವತಿಯಿಂದ ಜೇನು ಪೆಟ್ಟಿಗೆಯನ್ನು ರೈತರಿಗೆ ನೀಡುವುದರ ಜೊತೆಗೆ ಜೇನು ಕುಟುಂಬವನ್ನು ನೀಡಿತು. ಇದರ ಉಪಯೋಗ ವನ್ನು ಬಳಸಿಕೊಂಡ ಮಲ್ಲಿಕಾರ್ಜುನ್ ವೈಜ್ಞಾನಿಕ ವಾಗಿ ಜೇನು ಸಾಕಣೆಯನ್ನು ಪ್ರಾರಂಭಿಸ ತೊಡಗಿದರು. ಕೇರಳ ರಾಜ್ಯ ಜೇನು ಸಾಕಾಣಿಕೆ ದಾರರನ್ನು ಸಂಪರ್ಕಿಸಿ ನಸುರು (ಮುಜೆಂಟಿ) ಜೇನನ್ನು ಸಾಕಲು ಪ್ರಾರಂಭಿಸಿದ್ದಾರೆ. ವಿವಿಧ ರೀತಿಯ ಗೂಡುಗಳನ್ನು ವಿನ್ಯಾಸಗೊಳಿಸಿ ನಸುರು ಜೇನನ್ನು ಕೂಡಿ ಯಶಸ್ವಿಯಾಗಿ ಸಾಕಾಣಿಕೆ ಮಾಡುತ್ತಿದ್ದಾರೆ. ಜೇನು ನೊಣಗಳೊಂದಿಗೆ ಪ್ರೀತಿ ವಿಶ್ವಾಸ ಗಳಿಸಿ, ಅವುಗಳ ಬೇಕು ಬೇಡಗಳನ್ನು, ಅವುಗಳ ಸ್ವಭಾವವನ್ನು ಅರಿತುಕೊಂಡು, ಜೇನು ತುಪ್ಪವನ್ನು ಸಂಗ್ರಹಿಸುತ್ತಾ, ವರ್ಷಕ್ಕೆ ರೂ.೧.೦೦ ಲಕ್ಷಕ್ಕೂ ಹೆಚ್ಚು ಆದಾಯ ಪಡೆಯುತ್ತಿದ್ದಾರೆ. ಸ್ಥಳೀಯ ವಸ್ತುಗಳನ್ನೇ ಬಳಸಿ ಜೇನು ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಇಂದು ಅವರು ಸುಮಾರು ೧೫ಕ್ಕೂ ಹೆಚ್ಚು ತುಡುವೆ ಜೇನಿನ ಕುಟುಂಬವನ್ನು ಇಟ್ಟುಕೊಂಡು, ಜೇನು ಸಾಕಾಣಿಕೆಯಲ್ಲಿ ಆಸಕ್ತಿಯುಳ್ಳ ಅಕ್ಕ-ಪಕ್ಕದ ರೈತಮಿತ್ರರಿಗೆ ನೆರವಾಗಿದ್ದಾರೆ

6

ಮಾರುಕಟ್ಟೆಯ ಬಗ್ಗೆ ಹೆಚ್ಚಿನ ಜ್ಞಾನ ಹೊಂದಿರುವ ಇವರು ಸ್ವತಃ ತಾವೇ ಅಡಿಕೆ ಮತ್ತು ಕೋಕೋ ಸಂಸ್ಕರಣೆಯನ್ನು ಖುದ್ದಾಗಿ ತಮ್ಮ ಜಮೀನಿನಲ್ಲೇ ಮಾಡಿ ಯಾವುದೇ ದಲ್ಲಾಳಿ / ಮಧ್ಯವರ್ತಿಗಳ ಸಂಪರ್ಕ ಇಲ್ಲದೆ ತಾವೇ ನೇರವಾಗಿ ಶಿವಮೊಗ್ಗದ ಮ್ಯಾಮ್ಕೋಸ್ ಮುಖಾಂತರ ಮಾರಾಟ ಮಾಡುತ್ತಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಆಕಾಶವಾಣಿ ಹೀಗೆ ಹಲವಾರು ಸಂಸ್ಥೆಗಳು ಏರ್ಪಡಿಸುವ ರೈತರ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿ ಯನ್ನು ತಿಳಿದುಕೊಳ್ಳುವುದರ ಜೊತೆಗೆ ತಮ್ಮ ಅನುಭವಗಳನ್ನು ಇತರ ರೈತರೊಂದಿಗೆ ಹಂಚಿಕೊಂಡು ರೈತ ಸಮುದಾಯಕ್ಕೆ ಸಹಕಾರಿ ಯಾಗಿದ್ದಾರೆ. ಇವರು ತಾನು ಹೇಳಿದಂತೆ ಮಾಡಿತೋರಿಸುವ ಅಪ್ಪಟ ರೈತರಾಗಿದ್ದು, ಇಂದು ಇವರ ತೋಟ ಕೃಷಿಯಲ್ಲಿ ಆಸಕ್ತಿಯುಳ್ಳ ಹಲವಾರು ಯುವ ರೈತರಿಗೆ ಮಾದರಿಯಾಗಿದೆ

8