ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಚಿಂತನೆ

ಹವಾಮಾನ ಮುನ್ಸೂಚನೆಯ ಕೌತುಕಮಯ ಗೊಂದಲಕ್ಕೆ ಕೊನೆಯೆಂದು?

image_
ಡಾ.ಎ.ಎಸ್.ಕುಮಾರ ಸ್ವಾಮಿ
9448943990

ಹವಾಮಾನ ಮುನ್ಸೂಚನಾ ವ್ಯವಸ್ಥೆಯು ದೇಶದ ಒಂದು ಅತಿ ಮುಖ್ಯ ಕಾರ್ಯಕ್ರಮಗಳಲ್ಲಿ ಒಂದು. ಭಾರತದಲ್ಲಿ ಅಧಿಕೃತವಾಗಿ ಹವಾಮಾನ ಮುನ್ಸೂಚನೆ ನೀಡುವ ಸಂಸ್ಥೆಯೆಂದರೆ ’ಭಾರತೀಯ ಹವಾಮಾನ ಸಂಸ್ಥೆ. ಇದಕ್ಕೆ ದೇಶದ ಇನ್ನೊಂದು ಹೆಮ್ಮೆಯ ಸಂಸ್ಥೆಯಾದ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ತನ್ನ ಅದ್ವಿತೀಯ ಹಾಗೂ ಅಪ್ರತಿಮ ಸಾಧನೆಗಳ ಮೂಲಕ ಸಂಪೂರ್ಣ ಸ್ವಾವಲಂಬಿಯಾಗಿರುವ ಉಪಗ್ರಹಗಳ ಜಾಲವನ್ನು ಬಳಸಿಕೊಂಡು ನಿಜ ಸಮಯದಲ್ಲಿ ಅನೇಕ ಉಪಯುಕ್ತ ಮಾಹಿತಿಗಳನ್ನು ನೀಡುತ್ತದೆ ಈ ಉದ್ದೇಶಕ್ಕಾಗಿ ವಾತಾವರಣದಲ್ಲಿರುವ ಮೋಡಗಳನ್ನೂ, ಅವುಗಳ ಲಕ್ಷಣಗಳನ್ನೂ, ಅವುಗಳಲ್ಲಿ ವಿವಿಧ ಎತ್ತರಗಳಲ್ಲಿರುವ ಉಷ್ಣತೆ, ತೇವಾಂಶ ಹಾಗೂ ವಾತಾವರಣದ ಒತ್ತಡಗಳ ಪ್ರಾದೇಶಿಕ ಹಂಚಿಕೆಯನ್ನು ತಿಳಿಯಲು ಅತ್ಯಂತ ನಿಖರವಾಗಿ ಛಾಯೆಗಳನ್ನು ನೀಡುವ ’ಇನ್ಸಾಟ್’ ಸರಣಿಯ ಉಪಗ್ರಹಗಳನ್ನು ಬಳಸಿಕೊಂಡು ’ದೃಗ್ಗೋಚರ’ (ಸಾಮಾನ್ಯ ಬೆಳಕು) ಹಾಗೂ ’ಅವಕೆಂಪು’ (ಇನ್ಫ್ರಾ ರೆಡ್) ತರಂಗಗಳ ಮೂಲಕ ಅವಿರತವಾಗಿ ತೆಗೆದ ಛಾಯೆಗಳನ್ನು ಒದಗಿಸುತ್ತದೆ. ಈ ಛಾಯೆಗಳನ್ನು ಬಳಸಿಕೊಂಡು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ತಜ್ಞರು ಮುಂದಿನ ಐದು ದಿನಗಳಲ್ಲಿ ಆಗಬಹುದಾದ ಹವಾಮಾನದ (ಮಳೆ, ಗಾಳಿಯ ತಾಪಮಾನ, ಗಾಳಿಯ ವೇಗ, ಬಿರುಗಾಳಿ, ಚಂಡಮಾರುತ, ಹಿಮಪಾತ, ಭೂಕುಸಿತ ಇತ್ಯಾದಿ) ಸಂಭವನೀಯ ಘಟನೆಗಳ ಬಗ್ಗೆ ನಿಖರವಾಗಿ ಮಾಹಿತಿ ಕೊಡಬಲ್ಲರು. ಕಳೆದ ಒಂದೆರಡು ದಶಕಗಳಲ್ಲಿ ಭಾರತದಲ್ಲಿ ಪ್ರಾಕೃತಿಕ ವಿಕೋಪಗಳ, ವಿಶೇಷವಾಗಿ ಚಂಡಮಾರುತಗಳು ಬೀಸಿದ ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾದ ಮುನ್ಸೂಚನೆ ನೀಡಿದ ಕಾರಣದಿಂದ ಸಮುದ್ರ ತೀರದ ಸಹಸ್ರಾರು ಜನರ ಜೀವ ಹಾಗೂ ಅಪಾರ ಆಸ್ತಿ ಪಾಸ್ತಿಗಳ ರಕ್ಷಣೆಯಾಗಿರುವುದು ಎಲ್ಲರ ಮೆಚ್ಚುಗೆ ಗಳಿಸಿರುವ ವಿಚಾರ.

ಭಾರತವು ಕೃಷಿಯಾಧಾರಿತ ದೇಶ. ಭಾರತದ ಕೃಷಿ ಆಧಾರಿತ ಕೈಗಾರಿಕೆಗಳು, ಇತರೆ ಕೈಗಾರಿಕಾ ಉತ್ಪನ್ನಗಳಿಗೆ ಬೇಡಿಕೆ, ನಿತ್ಯ ಜೀವನ ಹಾಗೂ ಒಟ್ಟಾರೆ ಆರ್ಥಿಕ ಪರಿಸ್ಥಿತಿ ಇವುಗಳು ಕೃಷಿಯ ಮೇಲೆ ಆಧಾರಿತವಾಗಿವೆ. ಭಾರತದ ಕೃಷಿಯು ಹೆಚ್ಚೂ ಕಡಿಮೆ ಸಂಪೂರ್ಣವಾಗಿ ಮಳೆಯ ಮೇಲೆ ಅವಲಂಬಿಸಿದೆ. ನೀರಾವರಿ ಪ್ರದೇಶದ ಕೃಷಿಯೂ ಸಹ ಮುಖ್ಯವಾಗಿ ಮಳೆಗಳಿಂದ ತುಂಬುವ ಜಲಾಶಯಗಳ ಮೇಲೆ ಅವಲಂಬಿಸಿದೆ. ಭಾರತದ ಶೇ. ೭೦ ರಷ್ಟು ಪ್ರದೇಶದ ಕೃಷಿಯ ಮೇಲೆ ಜೂನ್ನಿಂದ ಸೆಪ್ಟೆಂಬರ್ ತಿಂಗಳುಗಳಲ್ಲಿ ಬೀಳುವ ನೈಋತ್ಯ ಮುಂಗಾರು ಮಳೆಯು ವಿಶೇಷವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಇದರ ಜೊತೆಯಲ್ಲಿ ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಬರುವ ಈಶಾನ್ಯ ಮಾರುತಗಳು, ನಂತರದ ತಡ ಹಿಂಗಾರು ಮಳೆಗಳು ಹಾಗೂ ಬೇಸಿಗೆಯಲ್ಲಿ ಬರುವ ಪೂರ್ವ ಮುಂಗಾರು ಮಳೆಗಳೂ ಸಹ ಭಾರತೀಯ ಕೃಷಿಯಲ್ಲಿ ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ. ಆದರೆ, ಒಟ್ಟು ವಾರ್ಷಿಕ ಮಳೆಯ ಪ್ರಮಾಣ, ಅದರಲ್ಲಿಯೂ ನೈಋತ್ಯ ಮುಂಗಾರು ಮಳೆಗಳ ಆರಂಭ, ಮುಂದುವರೆಯುವಿಕೆ, ಮಳೆಯ ಪ್ರಮಾಣ ಹಾಗೂ ಹಂಚಿಕೆಗಳು ವಿಪರೀತ ಹಾಗೂ ಊಹಿಸಲಸಾಧ್ಯ ಏರಿಳಿತಗಳಿಗೊಳಗಾಗಿರುವುದರಿಂದ ಭಾರತದ ಕೃಷಿಯನ್ನು ’ಮಾನ್ಸೂನ್ ಮಾರುತಗಳೊಂದಿಗಿನ ಜೂಜಾಟ’ ಎನ್ನಲಾಗಿದೆ. ನೈಋತ್ಯ ಮಾನ್ಸೂನ್ ಮಳೆಗಳ ನಡವಳಿಕೆಯನ್ನು ಅರ್ಥ ಮಾಡಿಕೊಂಡು ಆ ಮೂಲಕ ಅವುಗಳ ನಿಖರವಾದ ಮುನ್ಸೂಚನೆ ಕೊಡುವ ಪ್ರಯತ್ನಗಳು ಭಾರತೀಯ ಹವಾಮಾನ ಇಲಾಖೆಯೂ ಸೇರಿದಂತೆ ಅನೇಕ ದೇಶಗಳಲ್ಲಿ ನಡೆಯುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ಪ್ರತಿ ವರ್ಷ ಏಪ್ರಿಲ್ ಮಧ್ಯ ಭಾಗದಲ್ಲಿ ಹಾಗೂ ಜೂನ್ ಪ್ರಾರಂಭದಲ್ಲಿ ನೈಋತ್ಯ ಮಾನ್ಸೂನ್ ಯಾವ ರೀತಿಯಲ್ಲಿರಬಹುದು ಎಂದು ತಿಳಿಸುತ್ತಾರೆ.

ಈ ಉದ್ದೇಶಕ್ಕೆ ಪ್ರತಿ ವರ್ಷವೂ ಜಗತ್ತಿನಾದ್ಯಂಥ ನಡೆಯುವ ಅನೇಕ ಹವಾಮಾನ ಪ್ರಕ್ರಿಯೆಗಳೊಡನೆ ಸಂಬಂಧ ಜೋಡಿಸಿ ಮಾನ್ಸೂನ್ ಮಾರುತದ ಏರಿಳಿತಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ’ಎಲ್-ನಿನೋ’, ’ಲಾ-ನಿನೋ’ ಹಿಂದೂ ಮಹಾಸಾಗರದ ದಕ್ಷಿಣದಲ್ಲಿನ ತಾಪಮಾನದ ತೂಗುಯ್ಯಾಲೆ, ಆಫ್ರಿಕಾ, ಯೂರೋಪ್ನ ಭೂ ಪ್ರದೇಶಗಳಲ್ಲಿನ ತಾಪಮಾನದ ಏರಿಳಿತ, ಪಶ್ಚಿಮ ಏಷ್ಯಾ ಭಾಗಗಳಲ್ಲಿನ ವಾತಾವರಣದಲ್ಲಿನ ಉಷ್ಣತೆ ಮುಂತಾದ ಅನೇಕ ಸಂಗತಿಗಳನ್ನಾಧರಿಸಿ ಅಧ್ಯಯನ ಮಾಡಲಾಗುತ್ತಿದೆ. ಇನ್ನೇನು ಮಾನ್ಸೂನ್ ನಡವಳಿಕೆ ಅರ್ಥವಾಗಿದೆ, ನಂಬಲರ್ಹವಾದ ಮುನ್ಸೂಚನೆ ನೀಡಬಹುದು ಎಂದುಕೊಳ್ಳುವುದರಲ್ಲಿಯೇ ಚಿತ್ರವು ಸಂಪೂರ್ಣ ಬದಲಾಗುತ್ತದೆ. ಬಹುಶಃ ಈ ರೀತಿಯ ಅನಿರೀಕ್ಷಿತ ಬದಲಾವಣೆಗಳಿಗೆ ಜಾಗತಿಕ ತಾಪಮಾನದ ಏರಿಕೆಯೂ ಒಂದು ಕಾರಣವಿರಬಹುದು. ಏನೇ ಆದರೂ, ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಪರಿಣತಿಯನ್ನು ಹೊಂದಿದ ಹವಾಮಾನ ವಿಜ್ಞಾನಿಗಳು ಅತ್ಯಧಿಕ ಸಾಮರ್ಥ್ಯಗಳನ್ನುಳ್ಳ ಸೂಪರ್ ಕಂಪ್ಯೂಟರ್ಗಳನ್ನು ಬಳಸಿ ಈ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳುವ ತಮ್ಮ ಪ್ರಯತ್ನಗಳನ್ನು ಮುಂದುವರೆಸಿರುವರು. ಅವರ ಪ್ರಯತ್ನಕ್ಕೆ ಜಯ ದೊರಕಲಿ. ಕಳೆದ ಒಂದೆರಡು ವರ್ಷಗಳಲ್ಲಿ ಭಾರತ ದೇಶದ ನೈಋತ್ಯ ಮುಂಗಾರುಸಾಧಾರಣವಾಗಿರುವುದೆನ್ನುವ ಮುನ್ಸೂಚನೆಯು ಭಾಗಶಃ ಸತ್ಯವಾಗಿರುವುದನ್ನು ಗಮನಿಸಬೇಕು. ಹವಾಮಾನ ತಜ್ಞರು ತಿಳಿಸಿದಂತೆ ದೇಶದ ಹೆಚ್ಚಿನ ಭಾಗಗಳಲ್ಲಿ ದೇಶದ ದೀರ್ಘಾವಧಿಯ ಸರಾಸರಿ ಮಳೆಗೆ ಹೋಲಿಸಿದರೆ ಸಾಮಾನ್ಯ ಮಳೆ ಬಂದಿದೆಯಾದರೂ, ದೇಶದ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಯಾರೂ ಊಹಿಸಿರದಷ್ಟು ಅತೀವವಾದ ತೀವ್ರತೆಯಲ್ಲಿ ಮಳೆಯ ಕೊರತೆ ಕಂಡುಬಂದಿತು. ಈ ವರ್ಷವೂ (೨೦೧೭) ಸಹ ಸಾಮಾನ್ಯ ಮಾನ್ಸೂನ್ ಬರುತ್ತದೆಯೆಂದು ಮುನ್ಸೂಚನೆಯನ್ನು ನೀಡಿದ್ದರೂ, ನಿರೀಕ್ಷೆಯಂತೆ ಆರಂಭವಾದರೂ, ಸಹ ಕರ್ನಾಟಕದ ಕರಾವಳಿ ಪ್ರದೇಶವನ್ನು ಹೊರತುಪಡಿಸಿ ಇತರೆಡೆಗಳಲ್ಲಿ ಜೂನ್, ಜುಲೈ ತಿಂಗಳುಗಳಲ್ಲಿ ತೀವ್ರವಾದ ಕೊರತೆಯು ಕಂಡುಬರುತ್ತಿದೆ. ಎತ್ತರದ ತೆಳು ಮೋಡಗಳು ಕಾಣಿಸಿಕೊಳ್ಳುತ್ತಿದ್ದರೂ ಮಳೆ ಬರುವ ದಟ್ಟ ಮೋಡಗಳು ಕಾಣುತ್ತಿಲ್ಲ. ಕಳೆದ ಎರಡು ಮೂರು ವರ್ಷಗಳ ಬರಗಾಲದ ಬೆನ್ನಲ್ಲಿಯೇ ಮತ್ತೊಮ್ಮೆ ಭೀಕರ ಬರಗಾಲದ ಛಾಯೆ ಕಾಣಿಸುತ್ತಿದೆ.

ಇಡೀ ದೇಶದ ಸರಾಸರಿ ಮಳೆಯನ್ನು ನಂಬಿಕೊಂಡು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕೃಷಿಯನ್ನು ಮಾಡುವುದೆಂದರೆ, ನದಿಯ ಸರಾಸರಿ ಆಳವನ್ನು ಮಾತ್ರ ಪರಿಗಣಿಸಿ ನದಿಯನ್ನು ದಾಟಲು ಪ್ರಯತ್ನಿಸಿದಂತೆ. ಈ ದಿಶೆಯಲ್ಲಿ ಈಗ ಮಾಡುತ್ತಿರುವ ಪ್ರಯತ್ನಗಳು ಕಡಿಮೆಯೆನ್ನಿಸುತ್ತದೆ. ಈ ಉದ್ದೇಶಕ್ಕೆ ಜಾಗತಿಕ ಮಟ್ಟದ ಹವಾಮಾನ ಪ್ರಕ್ರಿಯೆಗಳ ಜೊತೆಯಲ್ಲಿ ಸ್ಥಳೀಯ ಸನ್ನಿವೇಶಗಳ ಅಧ್ಯಯನವೂ ಸಹ ಮುಖ್ಯವಾಗಬಹುದು. ಇದರ ಜೊತೆಯಲ್ಲಿ ಸ್ಥಳೀಯವಾಗಿ ಹಲವು ವರ್ಷಗಳ ಕಾಲ ದಾಖಲಾಗಿರುವ ಮಳೆಯ ವಿವರಗಳು ದೊರೆತರೆ ಅವುಗಳ ಸಾಂಖ್ಯಿಕ ವರ್ತನೆಯನ್ನು, ವಿಶೇಷವಾಗಿ, ವಿವಿಧ ಸಮಯಗಳಲ್ಲಿ ಬಿದ್ದ ಸರಾಸರಿ ಮಳೆ, ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ಪ್ರಮಾಣದ ಮಳೆ ಬೀಳುವ ಸಾಂಖ್ಯಿಕ ಸಂಭವನೀಯತೆ, ಗುರುತಿಸಬಹುದಾದ ಆವರ್ತನಗಳು, ಏರಿಳಿತದಲ್ಲಿ ಕಾಣಬಹುದಾದ ಚಕ್ರಗಳು, ಮುಂತಾದವುಗಳನ್ನು ಅಭ್ಯಾಸ ಮಾಡಬೇಕು. ಈ ದಿಶೆಯಲ್ಲಿ ಸ್ಥಳೀಯ ವಿಶ್ವವಿದ್ಯಾಲಯಗಳಲ್ಲಿ ಹವಾಮಾನ ಶಾಸ್ತ್ರದ ಅಧ್ಯಯನವು ಸಂಪೂರ್ಣವಾಗಿ ಇಲ್ಲದಿರುವುದನ್ನು ಗಮನಿಸಿ ಅಭಿವೃದ್ಧಿಪಡಿಸುವ ಕೆಲಸಗಳಾಗಬೇಕು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹವಾಮಾನ ಮುನ್ಸೂಚನೆಯ ವಿಷಯಗಳನ್ನು ನಮ್ಮ ರೈತರಿಗೆ ಪರಿಣಾಮಕಾರಿಯಾಗಿ ಮುಟ್ಟಿಸಬಹುದಾದ ಇನ್ನೊಂದು ಮಾರ್ಗವೆಂದರೆ, ಅವರಿಗೆ ಈಗಾಗಲೇ ಚೆನ್ನಾಗಿ ಪರಿಚಯವಿರುವ ಮಳೆ ನಕ್ಷತ್ರಗಳ ಹೆಸರಿನಲ್ಲಿ ಹೇಳುವುದು. ಮಳೆ ನಕ್ಷತ್ರಗಳು ಸೌರಮಾನ ದಿನಮಾನದ (ಪ್ರತಿಯೊಂದೂ ೧೩.೫ ದಿನ) ಮೇಲೆ ನಿಗದಿತವಾಗಿರುವುದರಿಂದ ವರ್ಷದಿಂದ ವರ್ಷಕ್ಕೆ ಸೌರಮಾನ ಕ್ಯಾಲೆಂಡರ್ ಪ್ರಕಾರವೇ ಸ್ಥಿರವಾಗಿರುತ್ತವೆ ಹಾಗೂ ಈಗ ಮಾಡುತ್ತಿರುವ ಎಲ್ಲಾ ವೈಜ್ಞಾನಿಕ ವಿಶ್ಲೇಷಣೆಗಳಿಗೂ ಹೊಂದಿಕೊಳ್ಳುತ್ತವೆ ಎನ್ನುವುದನ್ನು ಮರೆಯಬಾರದು.

ಉತ್ತಮ ಕೃಷಿಯ ದೃಷ್ಟಿಯಿಂದ ವಿಶಾಖ ಮಳೆಯಿಂದ (ನವೆಂಬರ್, ೬) ಆರಂಭಿಸಿ ಮುಂದಿನ ವರ್ಷದ ಅಶ್ವಿನಿ ಮಳೆಯವರೆಗಿನ (ಏಪ್ರಿಲ್ ೧೫) ಮಧ್ಯದಲ್ಲಿ ಬೀಳುವ ಮಳೆಗಳು ಭೂಮಿ ತಯಾರಿಕೆಗೆ ಅನುಕೂಲ ಮಾಡಿಕೊಡುತ್ತವೆ. ಅಲ್ಲದೇ ಬಹುವಾರ್ಷಿಕ ಮಳೆಯಾಶ್ರಿತ ತೋಟಗಾರಿಕೆ ಬೆಳೆಗಳಿಗೆ ನೀರನ್ನೊದಗಿಸುವ ಜೊತೆಗೆ ಕೆರೆ ಕಟ್ಟೆಗಳಿಗೆ ನೀರು ತುಂಬಲು ಸಹಕಾರಿಯಾಗಿವೆ. ಈ ಮಧ್ಯೆ ಉತ್ತರಭಾದ್ರ, ರೇವತಿ ಮಳೆಗಳು ಕಾಫಿ ಬೆಳೆಯು ಹೂವಾಗಲಿಕ್ಕೆ ಅನುಕೂಲ ಮಾಡಿಕೊಡುತ್ತವೆ. ಭರಣಿ ಮತ್ತು ಕೃತ್ತಿಕ ಮಳೆಗಳು ಕೆಲವು ಪ್ರದೇಶಗಳಲ್ಲಿ ಮೊದಲ ಅಲ್ಪಾವಧಿ ಬೆಳೆಯನ್ನು ಬಿತ್ತನೆ ಮಾಡಲು ಅವಕಾಶ ಮಾಡಿಕೊಟ್ಟರೆ, ಹೆಚ್ಚಿನ ಪ್ರದೇಶಗಳಲ್ಲಿ ಭೂಮಿ ತಯಾರಿಗೆ ಸಹಕಾರಿಯಾಗಿವೆ. ಹಿಂಗಾರಿನಲ್ಲಿ ಮಾಡುವ ಮಾಗಿ ಉಳುಮೆ ಅಥವಾ ಬೇಸಿಗೆಯಲ್ಲಿ ಮಾಡುವ ಉಳುಮೆಗಳು ಸಫಲ ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭಾರತದ ಕೃಷಿಗೆ ಅತ್ಯಂತ ಹೆಚ್ಚು ಮಹತ್ವದ ಮಳೆಗಳೆಂದರೆ ರೋಹಿಣಿ, ಮೃಗಶಿರಾ ಮತ್ತು ಆರಿದ್ರ (ಮೇ ೨೫ ರಿಂದ ಜುಲೈ ೫). ಅನೇಕ ಪ್ರಮುಖ ಬೆಳೆಗಳಿಗೆ ಅತ್ಯುತ್ತಮ ಬಿತ್ತನೆಯ ಸಮಯ. ಬಿತ್ತನೆಗೆ ಹದವಾದ ಸನ್ನಿವೇಶವನ್ನು ಒದಗಿಸುವಂತೆ ಈ ನಕ್ಷತ್ರದ ಮಳೆಗಳು ಪ್ರತಿಯೊಂದೂ ಸಹ ೧೦೦ ಮಿ.ಮೀ.ನಿಂದ ೨೦೦ ಮಿ.ಮೀ.ನೊಳಗೆ ಬಿದ್ದರೆ, ಕೃಷಿಯು ಶೇ. ೫೦ ರಷ್ಟು ಸಫಲವಾದಂತೆಯೇ. ಇದಕ್ಕಿಂತ ಅಧಿಕವಾದರೂ ಸಹ ಅಪಾಯಕಾರಿ.

ಎಳೆಯ ಪೈರಿನ ಉತ್ತಮ ಬೆಳವಣಿಗೆಗೆ ಹಾಗೂ ಮಧ್ಯಂತರ ಬೇಸಾಯ ಮಾಡಿ ಉತ್ತಮವಾಗಿ ಬೆಳೆ ನಿರ್ವಹಣೆ ಮಾಡಲು ಪುನರ್ವಸು, ಪುಷ್ಯ ಮತ್ತು ಆಶ್ಲೇಷ (ಜುಲೈ ೬ ರಿಂದ ಆಗಸ್ಟ್ ೧೬) ಮಳೆಗಳು ಮಹತ್ವವಾದವುಗಳು. ಬಯಲು ಸೀಮೆಯ ಒಣ ಪ್ರದೇಶಗಳಲ್ಲಿ ಇವುಗಳು ಬಿತ್ತನೆಗೆ ಅನುವು ಮಾಡಿಕೊಡುತ್ತವೆ. ಇವುಗಳಲ್ಲಿ ಪ್ರತಿಯೊಂದು ನಕ್ಷತ್ರದ ಮಳೆಯೂ ೧೦೦ ರಿಂದ ೨೦೦ ಮಿ.ಮೀ.ನೊಳಗೆ ಬಿದ್ದರೆ ಮುಕ್ಕಾಲು ಭಾಗ ಬೆಳೆಯು ಕೈಗೆ ಬಂದಂತೆಯೇ. ಮುಂದಿನ ಮಖ, ಹುಬ್ಬೆ, ಮತ್ತು ಉತ್ತರೆ (ಆಗಸ್ಟ್ ೧೭ ರಿಂದ ಸೆಪ್ಟೆಂಬರ್ ೨೬) ಮಳೆಗಳ ಸಮಯದಲ್ಲಿ ಹೆಚ್ಚಿನ ಬೆಳೆಗಳು ಸಾಮಾನ್ಯವಾಗಿ ಸಂದಿಗ್ಧ ಹಂತದಲ್ಲಿರುತ್ತವೆ. ಈ ಹಂತದಲ್ಲಿ ಬೆಳೆಗಳ ನೀರಿನ ಬೇಡಿಕೆಯೂ ಸಹ ಹೆಚ್ಚಾಗಿರುತ್ತದೆ.ಅದರ ಮುಂದಿನ ಮಳೆಗಳಾದ ಹಸ್ತ, ಚಿತ್ತ ಮತ್ತು ಸ್ವಾತಿ ಮಳೆಗಳ ಸಮಯದಲ್ಲಿ (ಸೆಪ್ಟೆಂಬರ್ ೨೭ ರಿಂದ ನವೆಂಬರ್ ೫) ಹೆಚ್ಚಿನ ಬೆಳೆಗಳಲ್ಲಿ ಕಾಳು ಬಲಿತು ಕಟಾವಿಗೆ ಸಿದ್ಧವಾಗುತ್ತವೆ. ಈ ಹಂತದಲ್ಲಿ ಕಡಿಮೆಯೂ ಅಲ್ಲದ, ಹೆಚ್ಚೂ ಅಲ್ಲದ ಹದವಾದ ಮಳೆಯಿರಬೇಕು. ಸ್ವಲ್ಪ ಒಣೆ ಇದ್ದರೂ ಪರವಾಗಿಲ್ಲ ಆದರೆ, ಅತಿವೃಷ್ಟಿಯಾಗಿ ಕಟಾವಿಗೆ ಅಡ್ಡ ಬರಬಾರದು. ಈ ಮಳೆಗಳು ಕರ್ನಾಟಕದ ಹಿಂಗಾರು ಬೆಳೆಗಳ ಪ್ರದೇಶಗಳಲ್ಲಿ ಬಿತ್ತನೆಗೆ ಸೂಕ್ತವಾದ ಮಳೆಗಳು. ಈ ಸಮಯದಲ್ಲಿ ಆದಷ್ಟು ಬೇಗನೆ ಬಿತ್ತನೆ ಮಾಡಿ ಉತ್ತಮ ಬೆಳೆಯ ನಿಲುವನ್ನು ಪಡೆದರೆ, ಮುಂದೆ ಮಣ್ಣಿನಲ್ಲಿ ಉಳಿಕೆ ತೇವಾಂಶದಲ್ಲಿಯೇ ಬೆಳೆಯುತ್ತವೆ.

ಕೃಷಿ ಕ್ಷೇತ್ರಕ್ಕೆ ಈ ರೀತಿಯಲ್ಲಿ ಅವಶ್ಯಕವಾದ ಮೇಲೆ ತಿಳಿಸಿದ ವಿವಿಧ ಮಳೆ ನಕ್ಷತ್ರಗಳ ಗುಂಪುಗಳ ಸಮಯದಲ್ಲಿ ಹದವಾದ ಪ್ರಮಾಣದ ಮಳೆ ಬೀಳಬಹುದಾದ ಸಂಭಾವ್ಯತೆಯನ್ನು, ನಿರ್ದಿಷ್ಟ ಕೃಷಿ-ಹವಾಮಾನ ವಲಯಕ್ಕೆ ಅನ್ವಯವಾಗುವಂತೆ ಹವಾಮಾನ ಮುನ್ಸೂಚನೆಯಲ್ಲಿ ನೀಡುವುದಾದರೆ ಅದೊಂದು ಅತ್ಯುತ್ತಮ ಸೇವೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದರ ಬದಲಿಗೆ ಇಡೀ ವರ್ಷಕ್ಕೆ, ಹಂಗಾಮಿಗೆ ಅಥವಾ ತಿಂಗಳಿಗೆ ಮಳೆಯ ಸಂಭಾವ್ಯತೆಯನ್ನು ತಿಳಿಸುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗುವುದಿಲ್ಲ.ಈ ರೀತಿ ಮುನ್ಸೂಚನೆ ನೀಡುವ ಹೊಣೆಯನ್ನು ಭಾರತೀಯ ಹವಾಮಾನ ಇಲಾಖೆಯೇ ಹೊರಬೇಕೆಂದಿಲ್ಲ. ಅವರು ರಾಷ್ಟ್ರಮಟ್ಟಕ್ಕೆ ನೀಡುವ ವಾರ್ಷಿಕ ಮುನ್ಸೂಚನೆಯನ್ನು ಆಧರಿಸಿ, ಜೊತೆಯಲ್ಲಿ ವಿವಿಧ ಪ್ರದೇಶಗಳ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಹಾಗೂ ರಾಜ್ಯದ ಸಾಂಖ್ಯಿಕ ಇಲಾಖೆಯಲ್ಲಿ ಲಭ್ಯವಿರುವ ೪-೫ ದಶಕಗಳ ದೈನಂದಿನ ಮಳೆಯ ದಾಖಲಾತಿಗಳನ್ನು ಸಾಂಖ್ಯಿಕವಾಗಿ ವಿಶ್ಲೇಷಣೆ ಮಾಡಿ ಮೇಲೆ ತಿಳಿಸಿದಂತೆ ಕೃಷಿಗೆ ಅನುಕೂಲವಾಗುವಂತೆ ವಿವಿಧ ಬೆಳೆಯ ಹಂತಗಳಿಗೆ ಸೂಕ್ತವಾಗುವಂತೆ ಮಳೆಗಳ ಸಂಭಾವ್ಯತೆಯನ್ನು ತಿಳಿಸುವ ಪ್ರಯತ್ನಗಳಾಗಬೇಕು. ಈ ವಿಷಯದಲ್ಲಿ ಇದುವರೆಗೂ ಯಾವುದೇ ಗಂಭೀರ ಪ್ರಯತ್ನಗಳಾಗದೇ ಇರುವುದರಿಂದ ಮೊದಲ ಕೆಲವು ವರ್ಷಗಳಲ್ಲಿ ಈ ಕಾರ್ಯವನ್ನು ಪ್ರಯೋಗಾತ್ಮಕವಾಗಿ ಕೈಗೊಂಡು ಎಷ್ಟರಮಟ್ಟಿಗೆ ಸಫಲತೆಯನ್ನು ಕಂಡುಕೊಳ್ಳಬಹುದು ಎನ್ನುವುದನ್ನು ಪರಿಶೀಲಿಸಬೇಕಿದೆ. ಈ ಕಾರ್ಯದಲ್ಲಿ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಸ್ಥಳೀಯ ಸಂಶೋಧನಾ ಕೇಂದ್ರಗಳು ತೊಡಗಿಸಿಕೊಳ್ಳಬೇಕಾಗಿದೆ. ಹವಾಮಾನ ಮುನ್ಸೂಚನೆಯಲ್ಲಿರುವ ಹಲವಾರು ಕೌತುಕಮಯ ಗೊಂದಲಗಳನ್ನು ಸ್ವಲ್ಪಮಟ್ಟಿಗಾದರೂ ಕೊನೆಗೊಳಿಸಲು ರಾಜ್ಯದ ಹವಾಮಾನ ತಜ್ಞರು, ಕೃಷಿ ತಜ್ಞರು ಹಾಗೂ ಸಂಖ್ಯಾಶಾಸ್ತ್ರಜ್ಞರು ಪ್ರಯತ್ನ ಪಡುತ್ತಾರೆಂದು ಆಶಿಸುತ್ತೇನೆ.