ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಭತ್ತಕ್ಕೆ ಬೇಕು ಸತುವಿನ ಸತ್ವ

ಡಾ. ಬಿ. ಆರ್. ಜಗದೀಶ್
೮೭೬೨೯೯೪೪೪೩
1

ಭತ್ತದ ಬೆಳೆಯಲ್ಲಿ ಸತುವಿನ ಉಪಯೋಗಗಳು

ಸತುವು ಎಲೆಗಳಲ್ಲಿ ಹರಿತ್ತನ್ನು ಉತ್ಪತ್ತಿ ಮಾಡುವ ಗುಣ ಹೊಂದಿದ್ದು, ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಸಸ್ಯದಲ್ಲಿ ಪ್ರೋಟೀನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾರಜನಕವನ್ನು ಮಣ್ಣಿನಿಂದ ಹೆಚ್ಚಿನ ಪ್ರಮಾಣದಲ್ಲಿ ಹೀರಲು ಸಹಾಯ ಮಾಡುತ್ತದೆ ಮತ್ತು ಸಸಾರಜನಕ ಸಂಶ್ಲೇಷಣೆಯನ್ನು ಹೆಚ್ಚಿಸುತ್ತದೆ. ಹಲವಾರು ಪ್ರಮುಖ ಕಿಣ್ವಗಳ ಕಾರ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತದೆ. ಇಂಡೋಲ್ ಅಸಿಟಿಕ್ ಆಮ್ಲ ಎಂಬ ಸಸ್ಯ ಹಾರ್ಮೋನ್ ಉತ್ಪತ್ತಿ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಹೂಬಿಡುವ ಕಾರ್ಯದಲ್ಲಿ ಸಹಾಯ ಮಾಡುತ್ತದೆ. ಬೀಜ ಮತ್ತು ಕಾಳು ಬಲಿಯುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

ಸತುವಿನ ಕೊರತೆಯ ಲಕ್ಷಣಗಳು

  • ಸತುವಿನ ಕೊರತೆಯು ನಾಟಿ ಮಾಡಿದ ಒಂದು ವಾರದ ನಂತರದಿಂದ ೪-೫ ವಾರಗಳವರೆಗೂ ಹೆಚ್ಚಾಗಿ ಕಂಡು ಬರುತ್ತದೆ
  • ಸಾಮಾನ್ಯವಾಗಿ ಕೆಳಭಾಗದ ಹಳೆಯ ಎಲೆಗಳ ಮಧ್ಯ ಭಾಗದಲ್ಲಿ ತಿಳಿ ಬೆಳ್ಳನೆಯ ಗೀರುಗಳು ಕಾಣಿಸಿಕೊಳ್ಳುತ್ತವೆ, ನಂತರ ಕಂದು ಬಣ್ಣದ ಚುಕ್ಕಿಗಳು ಬಲಿತ ಎಲೆಗಳ ಮೇಲ್ಬಾಗದಲ್ಲಿ ಕಾಣಿಸಿಕೊಂಡು ದೊಡ್ಡದಾಗುತ್ತಾ ಪೂರ್ತಿ ಎಲೆಯನ್ನೆ ಆವರಿಸುತ್ತದೆ
  • ಕಪ್ಪು ಮಣ್ಣಿನಲ್ಲಿ ಬಲಿತ ಎಲೆಗಳು ಹಳದಿಯಾಗಿ ಕಂಡರೆ, ಕೆಂಪು ಮಣ್ಣಿನಲ್ಲಿ ಕೊರತೆಯ ಲಕ್ಷಣಗಳು ತುಕ್ಕು ಹಿಡಿದ ಹಾಗೆ ಕಾಣುತ್ತವೆ. ಎಲೆಗಳನ್ನು ಕಿತ್ತರೆ ಸುಲಭವಾಗಿ ಮುರಿಯುತ್ತವೆ. ಹೊಸದಾಗಿ ಚಿಗುರಿದ ಎಲೆಗಳು ಬಹಳ ಸಣ್ಣದಾಗಿದ್ದು ತೆಂಡೆ ಒಡೆಯುವುದು ಬಹಳ ಕ್ಷೀಣಿಸುತ್ತದೆ
  • ಬೆಳೆಯ ಬೆಳವಣಿಗೆ ಕುಂಠಿತಗೊಳ್ಳುವುದು. ಭತ್ತದ ಬೆಳವಣಿಗೆ ಸಮನಾಗಿರದೆ, ಗೊನೆಯು ಒಂದೇ ಸಮಯಕ್ಕೆ ಮಾಗದಿರುವುದು
  • ಭತ್ತದ ಇಳುವರಿಯಲ್ಲಿ ಕನಿಷ್ಠ ಶೇಕಡ ೨೦-೩೦ರಷ್ಟು ಕುಂಠಿತಗೊಳ್ಳುವುದು
  • ಸತುವಿನ ಕೊರತೆಯ ನಿವಾರಣೆ

    ಸಾಕಷ್ಟು ಪ್ರಮಾಣದಲ್ಲಿ ಸಾವಯವ / ಹಸಿರೆಲೆ ಗೊಬ್ಬರಗಳ ಬಳಕೆ: ನಾಟಿ ಸಮಯದಲ್ಲಿ ನಾಟಿಗೆ ಮುಂಚಿತವಾಗಿ ಸಾಧಾರಣ ಮಣ್ಣಾಗಿದ್ದಲ್ಲಿ ಎಕರೆಗೆ ೮ ಕೆ.ಜಿ. ಹಾಗೂ ಚೌಳು ಮಣ್ಣಾಗಿದ್ದಲ್ಲಿ ಎಕರೆಗೆ ೧೬ ಕೆ.ಜಿ. ಸತುವಿನ ಸಲ್ಫೇಟ್ನ್ನು ಮಣ್ಣಿನಲ್ಲಿ ಸೇರಿಸುವುದು. ನಾಟಿ ಮಾಡಿದ ನಂತರ ಸತುವಿನ ಕೊರತೆಯ ಲಕ್ಷಣಗಳು ಕಂಡುಬಂದಲ್ಲಿ ಶೇ.೦.೫ರ (೧೦೦ ಲೀಟರ್ ಗೆ ೫೦೦ ಗ್ರಾಂ.) ಸತುವಿನ ಸಲ್ಫೇಟನ್ನು ಬೆಳೆಯ ಮೇಲೆ ಎಕರೆಗೆ ಸುಮಾರು ೨೫೦-೩೦೦ ಲೀ ದ್ರಾವಣ ಸಿಂಪಡಿಸುವುದು. ಸಿಂಪರಣಾ ದ್ರಾವಣ ತಯಾರಿಸುವಾಗ ಅಷ್ಟೇ ಪ್ರಮಾಣದಲ್ಲಿ ಸುಣ್ಣವನ್ನು ಸಿಂಪರಣಾ ದ್ರಾವಣದಲ್ಲಿ ಮಿಶ್ರಣ ಮಾಡಿ ನಂತರ ಸಿಂಪಡಿಸುವುದು. ಸತ್ವಭರಿತ ಸತುವಿನ ಸಲ್ಫೇಟ್ ಕಾಂಪೋಸ್ಟ್ ಬಳಕೆ: ಸತುವಿನ ಸತ್ವಭರಿತ ಕಾಂಪೋಸ್ಟ್ನ್ನು (೧೦೦ ಕೆ.ಜಿ./ಎಕರೆಗೆ) ಬಳಸುವುದರಿಂದ ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಕ್ರಿಯೆಗಳನ್ನು ವೃದ್ಧಿಗೊಳಿಸುವುದಲ್ಲದೆ, ಶೇಕಡ ೨೦-೨೫ರಷ್ಟು ಅಧಿಕ ಇಳುವರಿ ಪಡೆಯುವುದರ ಜೊತೆಗೆ ನಿವ್ವಳ ಲಾಭವಾಗಿ ಎಕರೆಗೆ ಸುಮಾರು ರೂ.೨೫೦೦ಗಳನ್ನು ಗಳಿಸಬಹುದು

    ಸತುವಿನ ಸತ್ವಭರಿತ ಕಾಂಪೋಸ್ಟ್ ತಯಾರಿಕೆಯ ವಿಧಾನ: ಶೇಕಡ ೧ರ ಅಂದರೆ ೧ ಕೆ.ಜಿ. ಸತುವಿನ ಸಲ್ಫೇಟ್ನ್ನು ಚೆನ್ನಾಗಿ ಕಳಿತ ೧೦೦ ಕೆ.ಜಿ. ಕೊಟ್ಟಿಗೆ ಗೊಬ್ಬರದ ಜೊತೆ ಮಿಶ್ರಣ ಮಾಡಿ ೧ ತಿಂಗಳವರೆಗೆ ನೆರಳಿನಲ್ಲಿಟ್ಟು ಆಗಾಗ್ಗೆ ನೀರು ಚಿಮುಕಿಸಿ ಹದ ಮಾಡುವುದು. ಈ ರೀತಿ ಹದ ಮಾಡಿದ ೧೦೦ ಕೆ.ಜಿ. ಸತ್ವಭರಿತ ಸತುವಿನ ಕಾಂಪೋಸ್ಟನ್ನು ಭತ್ತ ನಾಟಿ ಮಾಡಿದ ೮ ರಿಂದ ೧೦ ದಿವಸಗಳಲ್ಲಿ ಒಂದು ಎಕರೆಗೆ ಪ್ರದೇಶಕ್ಕೆ ಸಮನಾಗಿ ಎರಚುವುದು. ಎರಚುವಾಗ ಗದ್ದೆಯಲ್ಲಿನ ನೀರನ್ನು ಹೊರತೆಗೆದು ಎರಚಿದ ೨೪ ಗಂಟೆಗಳ ನಂತರ ಪುನಃ ಗದ್ದೆಗೆ ನೀರು ಹಾಯಿಸುವುದು. ಈ ರೀತಿ ಅನುಸರಿಸುವುದರಿಂದ ಕಡಿಮೆ ಖರ್ಚಿನ ಸತುವಿನ ಕೊರತೆ ಸರಿದೂಗಿಸಿ ಹೆಚ್ಚಿನ ಇಳುವರಿ ಪಡೆಯ ಬಹುದೆಂದು ಸಂಶೋಧನೆಯಿಂದ ತಿಳಿದುಬಂದಿದೆ