ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಎಚ್ಚರ!!! ಸುಂದರ ಮಲೆನಾಡಿಗೂ ದಾಳಿ ಮಾಡಲಿದೆ ಪಾರ್ಥೇನಿಯಂ ಮಹಾಮಾರಿ

ಸುಮಂತ ಹೊಳ್ಳ ಕೆ. ಎಂ
೯೯೦೦೮೯೧೭೧೮
1

ಕರ್ನಾಟಕದ ಬಹುತೇಕ ಎಲ್ಲಾ ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದರೂ ಮಲೆನಾಡಿಗೆ ಇನ್ನೂ ಪ್ರವೇಶಿಸಿರದ ಈ ಸಸ್ಯ ಇದೀಗ ಮಲೆನಾಡಿನ ಸುಂದರ ಹಚ್ಚ ಹಸಿರ ಪರಿಸರದ ಮಧ್ಯೆ ಸದ್ದಿಲ್ಲದೆ ಬೇರೂರಲು ಆರಂಭಿಸತೊಡಗಿದೆ. ಮುಂದೆ ಮಹಾ ವಿನಾಶವನ್ನೇ ತಂದೊಡ್ಡಬಲ್ಲ ಈ ಕಳೆಯು ಮಲೆನಾಡನ್ನು ಆಕ್ರಮಿಸಿಕೊಳ್ಳುವ ಮುಂಚೆಯೇ ಹತೋಟಿಗೆ ತರುವ ಕೆಲಸ ಆಗಬೇಕಿದೆ. ಭಾರತ ದೇಶದಲ್ಲಿನ ಎಂದೂ ಕುಗ್ಗದ ಸಂಪತ್ತಿನ ನಿಜವಾದ ರಹಸ್ಯವಿರುವುದು ನಮ್ಮ ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳ ನೈಸರ್ಗಿಕ ಸಂಪನ್ಮೂಲಗಳಲ್ಲಿ. ಬಹುತೇಕ ಔಷಧಿಯುಕ್ತ ಗಿಡಮೂಲಿಕೆಗಳಿಗೆ ಆಗರವಾಗಿರುವ ಮಲೆನಾಡು ಹಲವಾರು ಔಷಧೀಯ ಕಂಪನಿಗಳ ಬೆಳವಣಿಗೆಗೆ ಉತ್ತೇಜಿಸುತ್ತಿದೆ. ಹಾಗೆಯೇ ಆಕಾಶದಲ್ಲಿ ಸಾಗುವ ಮೋಡಗಳ ವೇಗಕ್ಕೆ ತಡೆಯೊಡೆದು ಅವುಗಳನ್ನು ನಿಲ್ಲಿಸಿ ನಮ್ಮ ರಾಜ್ಯಕ್ಕೆ ಮಳೆ ತಂದು ಕೊಡುವುದರಿಂದಲೇ ರಾಜ್ಯದ ಹಲವಾರು ಜಿಲ್ಲೆಯಲ್ಲಿ ಕೃಷಿ ಸಾಧ್ಯವಾಗಿರುವುದು. ಹೀಗೆ ದೇಶದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಯ ಬೆನ್ನುಲುಬಾಗಿ ಮಲೆನಾಡು ನಿಂತಿದೆ. ಪ್ರಪಂಚದ ಜೀವ ವೈವಿಧ್ಯತಾ ಮೌಲ್ಯದ ಪಟ್ಟಿಯಲ್ಲಿ ಪಶ್ಚಿಮ ಘಟ್ಟಗಳಿಗೆ ೫ನೇ ಸ್ಥಾನ (ಈ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಪ್ರದೇಶ). ಕರ್ನಾಟಕದಲ್ಲಿರುವ ಸುಂದರ ಮಲೆನಾಡು ಇದೇ ಪಶ್ಚಿಮ ಘಟ್ಟಗಳ ಒಂದು ಭಾಗವಾಗಿದೆ. ಇಂತಹ ಅತ್ಯಮೂಲ್ಯ ಸಂಪತ್ತಿನ ರಕ್ಷಣೆ ನಮ್ಮೆಲ್ಲರ ಹೊಣೆ

ನಾನು ಹುಟ್ಟಿ ಬೆಳದಿದ್ದು ಇದೇ ಮಲೆನಾಡ ಮಡಿಲಲ್ಲಿ. ಬಾಲ್ಯದಲ್ಲಿ ಪಾರ್ಥೇನಿಯಂ ನಿರ್ಮೂಲನಾ ದಿನದಂದು ಮಲೆನಾಡಿನಲ್ಲಿ ಹೆಚ್ಚಾಗಿ ಕಂಡು ಬರುವ ಕಮ್ಯುನಿಸ್ಟ್ ಕಳೆಯನ್ನೇ (ಜನತಾ ಗಿಡ)ಪಾರ್ಥೇನಿಯಂ ಎಂದು ತಿಳಿದು ಬೇರು ಸಮೇತ ಕಿತ್ತು ಹಾಕಿ ಜನ್ಮ ಸಾರ್ಥಕವೆಂಬಂತೆ ಬೀಗುತ್ತಿದ್ದ ನನಗೆ ಪಾರ್ಥೇನಿಯಂ ದರ್ಶನವಾಗಿದ್ದೆ ಬಿ.ಎಸ್ಸಿ.(ಅಗ್ರಿ) ಮಾಡಲು ಬೆಂಗಳೂರಿಗೆ ತೆರಳಿದಾಗ. ಇತ್ತೀಚಿಗೆ ಚಿಟಪಟ ಮಳೆಯಲಿ ದೇವರ ದರ್ಶನಕ್ಕೆಂದು ಗೆಳೆಯರೊಂದಿಗೆ ಪಯಣ ಬೆಳೆಸಿದಾಗ ಶೃಂಗೇರಿಯ ಗಾಂಧೀ ಮೈದಾನದಲ್ಲಿ ಸ್ವಚ್ಚಂದವಾಗಿ ಬೆಳೆದು ನಿಂತಿದ್ದ ಈ ಪಾರ್ಥೇನಿಯಂ ಸಸ್ಯಗಳನ್ನು ನೋಡಿ ನಿಜಕ್ಕೂ ಬೇಸರವೆನಿಸಿತು. ಇದುವರೆಗೂ ಪಾರ್ಥೇನಿಯಂ ಮಲೆನಾಡಿನಲ್ಲಿ ಎಲ್ಲೂ ಕಾಣಸಿಗುವುದಿಲ್ಲ ಎಂದು ಗೆಳೆಯರೊಂದಿಗೆ ಬೀಗುತ್ತಿದ್ದ ನನಗೆ ಆಘಾತವಾಗಿತ್ತು. ಈ ಪಯಣದಲ್ಲೇ ಮಲೆನಾಡಿನ ಹಲವೆಡೆ ಹುಡುಕಿದರೂ ಅಲ್ಲೆಲ್ಲೂ ಕಾಣಸಿಗದ ಪಾರ್ಥೇನಿಯಂ ಇಲ್ಲಿ ಮಾತ್ರ ಬೆಳೆದು ನಿಂತಿತ್ತು

ಹೇಗೆ ಶುರುವಾಗಿರಬಹುದು? ಮಲೆನಾಡಿನ ಆಮ್ಲೀಯ ಮಣ್ಣು, ಅಲ್ಲಿನ ಆರ್ದ್ರತೆ ಹಾಗೂ ಉಷ್ಣಾಂಶಗಳು ಪಾರ್ಥೇನಿಯಂನ ಬೆಳವಣಿಗೆಗೆ ಹೆಚ್ಚೇನೂ ಉತ್ತೇಜನ ನೀಡುವುದಿಲ್ಲ. ಆದ್ದರಿಂದ ಇಲ್ಲಿಯ ತನಕ ಪಾರ್ಥೇನಿಯಂ ಮಲೆನಾಡಿಗೆ ಪ್ರವೇಶಿಸಿರಲಿಲ್ಲ. ಶೃಂಗೇರಿ ಮಠದಲ್ಲಿ ವರ್ಷದಿಂದ ವರ್ಷಕ್ಕೆ ಯಾತ್ರಿಕರ ಸಂಖ್ಯೆ ಹೆಚ್ಚತೊಡಗಿದ್ದರಿಂದ ಮುಂಚೆ ಮೈದಾನವಾಗಿ ಬಳಸಲಾಗುತ್ತಿದ್ದ ತುಂಗೆಯ ತಟದಲ್ಲಿರುವ ಗಾಂಧೀ ಮೈದಾನವನ್ನು ವಾಹನ ನಿಲುಗಡೆಗೆ ಬಳಕೆ ಮಾಡಲು ಆರಂಭಿಸಲಾಯಿತು. ಪಾರ್ಥೇನಿಯಂ ಬೀಜ ಪ್ರಸರಣಾ ವಿಧಾನಗಳಲ್ಲಿ ವಾಹನಗಳ ಮೂಲಕ ಪ್ರಸರಣೆಯು ಒಂದು ಮುಖ್ಯ ವಿಧಾನವಾಗಿದೆ. ಹೀಗಾಗಿ ಬಹುಶಃ ಗಾಂಧಿ ಮೈದಾನದಲ್ಲಿ ಬಂದು ನಿಲ್ಲುತ್ತಿದ್ದ ವಾಹನಗಳಲ್ಲಿದ್ದ ಬೀಜಗಳು ಅಲ್ಲೇ ಉದುರಿ ತುಂಗೆ ಉಕ್ಕಿ ಹರಿದಾಗ ತಂದು ಹಾಕಿದ ಫಲವತ್ತಾದ ಮಣ್ಣು ಸಿಕ್ಕಿದ್ದರಿಂದ ಬೀಜ ಮೊಳಕೆಯೊಡೆದು ಗಿಡವಾಗಿರಬಹುದು. ಅಥವಾ ಮುಂಚೆಯೇ ಇಲ್ಲಿಗೆ ಬಂದಿದ್ದರೂ ಮಲೆನಾಡಿನ ಪರಿಸರಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಂಡ ಈ ಸಸ್ಯ ನಂತರ ಶೃಂಗೇರಿ ಯಿಂದಲೇ ದಂಡಯಾತ್ರೆ ಆರಂಭಿಸಿರಲೂಬಹುದು. ಇದು ಪಾರ್ಥೇನಿಯಂನ ಭಾರತ ಪ್ರವೇಶದಂತೆಯೇ ಗೊಂದಲಗಳಿದ್ದರೂ ಸಹಾ ಸಮಸ್ಯೆಯನ್ನು ತಿಳಿದುಕೊಳ್ಳಲು ಮಾಡಿಕೊಳ್ಳುವ ಸಿದ್ಧಾಂತಗಳಷ್ಟೆ

ಪಾರ್ಥೇನಿಯಂ ಕಳೆಯು ಕೇವಲ ಮಲೆನಾಡಿನಲ್ಲಿ ಮಾತ್ರ ಕಂಡುಬರುವ ವಿರಳವಾದ, ಅತೀ ಬೆಲೆ ಬಾಳುವ, ವಿನಾಶದ ಅಂಚಿನಲ್ಲಿರುವ, ಔಷಧೀಯ ಗುಣವುಳ್ಳ ಸಸ್ಯಗಳ ಹಾಗೂ ಸುಗಂಧಯುಕ್ತ ಸಸ್ಯಗಳ ಬೆಳವಣಿಗೆಯ ಮೇಲೆ ಅಗಾಧ ಪರಿಣಾಮ ಉಂಟುಮಾಡುತ್ತದೆ. ಇಂತಹ ಸಸ್ಯಗಳ ಕುಂಠಿತ ಬೆಳವಣಿಗೆ ಅಥವಾ ನಾಶದಿಂದಾಗಿ ಆರ್ಥಿಕವಾಗಿ ಹಿನ್ನಡೆ ಆಗುವುದಷ್ಟೇ ಅಲ್ಲದೆ ಮಲೆನಾಡಿನ ಈ ಜೈವಿಕ ಸಂಪನ್ಮೂಲಗಳ ನಷ್ಟದಿಂದಾಗಿ ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆರ್ಥಿಕ ನಷ್ಟಕ್ಕಿಂತಲೂ ಜೀವ ವೈವಿಧ್ಯತೆಯ ನಷ್ಟವು ಬೆಲೆ ಕಟ್ಟಲಾಗದ್ದು. ಒಮ್ಮೆ ಭೂಮಿಯಿಂದ ನಾಶವಾದ ಒಂದು ಸಸ್ಯ ಜಾತಿಯ ಮರು ಸೃಷ್ಟಿ ಅಸಾಧ್ಯ ಹಾಗೂ ಅದರಿಂದಾಗುವ ನಷ್ಟ ಅಗಣ್ಯ

ನಿಯಂತ್ರಣ ಹೇಗೆ?-ಶೃಂಗೇರಿಯಂತಹ ಪಟ್ಟಣದ ವಿಧ್ಯಾರ್ಥಿಗಳೆಲ್ಲರೂ ಟೊಂಕಕಟ್ಟಿ ನಿಂತರೆ ಅಲ್ಲಿರುವ ಪಾರ್ಥೇನಿಯಂನ ನಿರ್ಮೂಲನೆಗೆ ಒಂದು ದಿನವೂ ಬೇಡ. ಗಾಯವು ಬೆಳೆದು ಹುಣ್ಣಾಗುವ ಮೊದಲೇ ಚಿಕಿತ್ಸೆ ತೆಗೆದು ಕೊಳ್ಳುವ ಹಾಗೆ ಮಲೆನಾಡಿನಲ್ಲಿ ಪಾರ್ಥೇನಿಯಂ ದೊಡ್ಡ ಹೆಮ್ಮಾರಿಯಾಗಿ ಬೆಳೆದು ನಿಲ್ಲುವ ಮೊದಲೇ ಅದರ ನಿರ್ಮೂಲನೆ ಮಾಡುವುದೇ ಉತ್ತಮ. ಬೇರೆಲ್ಲಾ ತೊಂದರೆಗಳಿಂದ ನಮ್ಮನ್ನು ರಕ್ಷಿಸಿ ಪ್ರತಿ ವರ್ಷವೂ ಮಲೆನಾಡಿಗೆ ಅಗಾಧವಾಗಿ ಮಳೆ ಸುರಿಸಿ ಹೆಚ್ಚು-ಕಡಿಮೆ ಅರ್ಧ ಕರ್ನಾಟಕಕ್ಕೇ ನೀರು ಒದಗಿಸುತ್ತಿರುವ ಈ ಪಶ್ಚಿಮ ಘಟ್ಟಗಳ ಸಾಲಿನ ಜೀವ ಸಂಕುಲದ ರಕ್ಷಣೆ ನಮ್ಮೆಲ್ಲರ ಹೊಣೆ. ಸೌಂದರ್ಯದ ಆಗರವಾದ ಮಲೆನಾಡ ಸೌಂದರ್ಯವನ್ನೇ ಕಿತ್ತುಕೊಳ್ಳಲು ಈ ಪಾರ್ಥೇನಿಯಂ ಎನ್ನುವ ಮಾರಿ ಸದ್ದಿಲ್ಲದೆ ಹೊಂಚು ಹಾಕಿ ಕುಳಿತಿದೆ. ಯಕಶ್ಚಿತ್ ಒಂದು ಸಸ್ಯದಿಂದಾಗಿ ಉಂಟಾಗುವ ಹಲವಾರು ದುಷ್ಪರಿಣಾಮಗಳನ್ನು ತಡೆಯಲು ಹೆಚ್ಚೇನೂ ಮಾಡಬೇಕಿಲ್ಲ, ಕೇವಲ ಒಂದು ದಿನ ವ್ಯಯಿಸಿದರೆ ಸಾಕು. ಮಲೆನಾಡು ಮತ್ತೊಮ್ಮೆ ಪಾರ್ಥೇನಿಯಂ ಮುಕ್ತ ಪ್ರದೇಶವಾಗಿ ಹಸಿರಿಂದ ಕಂಗೊಳಿಸುವಲ್ಲಿ ಯಾವುದೇ ಸಂಶಯವಿಲ್ಲ