ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಪಾರ್ಥೇನಿಯಂನಿಂದ ಪಾರಾಗಲು - ಜಾಗೃತಿ ಅಭಿಯಾನ

ಡಾ. ಟಿ. ಎಂ. ಸೌಮ್ಯ
೯೯೮೬೦೪೫೭೧೨
1

ಪಾರ್ಥೇನಿಯಂ ಹಿಸ್ಟೆರೋಫೋರಸ್ ಎಂಬ ವೈಜ್ಞಾನಿಕ ನಾಮಧೇಯವನ್ನು ಹೊಂದಿರುವ ಕಾಂಗ್ರೆಸ್ ಗಿಡವು ಒಂದು ಅತ್ಯಂತ ವಿನಾಶಕಾರಿ ಕಳೆಯಾಗಿದ್ದು, ರಾಷ್ಟ್ರೀಯ ಕಳೆ ಎಂದು ಘೋಷಿಸಲ್ಪಟ್ಟಿದೆ. ಈ ಕಳೆಯು ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲಿ ವರ್ಷ ಪೂರ್ತಿ ಕಂಡು ಬರುವಂತಹದ್ದಾಗಿದ್ದು, ಕ್ಯಾರೆಟ್ ಕಳೆ, ನಕ್ಷತ್ರ ಕಳೆ, ಪಾರ್ಥೇನಿಯಂ ಕಳೆ, ಬಿಳಿ ಟೋಪಿ ಎಂಬ ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತದೆ. ಈ ಕಳೆಯ ತವರು ಮೆಕ್ಸಿಕೋ ಎಂದು ತಿಳಿದು ಬಂದಿದೆ. ಅಪಾಯಕಾರಿ ಪಾರ್ಥೇನಿಯಂ ಕಳೆಯು ೧೯೫೫ರಲ್ಲಿ ಪಿ.ಎಲ್-೪೮೦ ಗೋಧಿಯೊಂದಿಗೆ ಆಕಸ್ಮಿಕವಾಗಿ ಭಾರತ ದೇಶಕ್ಕೆ ಪ್ರವೇಶ ಪಡೆದು ಮೊಟ್ಟ ಮೊದಲ ಬಾರಿಗೆ ಮಹಾರಾಷ್ಟ್ರದ ಪುಣೆಯಲ್ಲಿ ಕಾಣಿಸಿಕೊಂಡಿತು. ಪ್ರಾರಂಭದಲ್ಲಿ ಕೇವಲ ರಸ್ತೆ ಬದಿಗಳಲ್ಲಿ ಹಾಗೂ ಖಾಲಿ ನಿವೇಶನಗಳ ಬಳಿ ಕಂಡುಬರುತ್ತಿದ್ದ ಪಾರ್ಥೇನಿಯಂ ಇಂದು ಸಮುದ್ರಮಟ್ಟಕ್ಕಿಂತ ೨೨೦೦ ಮೀಟರ್ ಎತ್ತರವಿರುವ ಗುಡ್ಡಗಾಡುಗಳಲ್ಲಿಯೂ ಕಂಡುಬರುವ ಕಳೆಯಾಗಿದೆ. ೬೦ ರ ದಶಕದ ಮಧ್ಯಭಾಗದಲ್ಲಿ ಕಳೆಯು ಕಾಶ್ಮೀರವನ್ನು ತಲುಪಿರುವ ಮಾಹಿತಿಗಳಿವೆ. ಪ್ರಸ್ತುತ ದೇಶದ ಮೂಲೆ ಮೂಲೆಗೂ ಪಸರಿಸಿರುವ ಪಾರ್ಥೇನಿಯಂ ಕಳೆಯು ಅಂದಾಜು ೩೫ ದಶಲಕ್ಷ ಹೆಕ್ಟೇರ್ ಸಾಗುವಳಿ, ಸಾಗುವಳಿಯಲ್ಲದ ಕ್ಷೇತ್ರ, ರಸ್ತೆ ಬದಿ, ರೈಲ್ವೆ ಹಳಿಗಳ ಬದಿ, ನೀರಾವರಿ ಕಾಲುವೆಗಳ ಅಂಚು ಮತ್ತು ಖಾಲಿ ನಿವೇಶನಗಳಲ್ಲಿ ಆಕ್ರಮಿಸಿದೆ. ಕೆಂಪು ಜಂಬಿಟ್ಟಿಗೆ ಮಣ್ಣಿನಲ್ಲಿ ಹೆಚ್ಚು ಕಂಡುಬರದೆ ಕಪ್ಪು ಭೂಮಿಯಲ್ಲಿ ಹೇರಳವಾಗಿ ಬೆಳೆಯುವ ಈ ಕಳೆಯು ಈಗ ರೈತರಿಗೆ ಹಾಗೂ ಸಾರ್ವಜನಿಕರಿಗೆ ಒಂದು ವಿನಾಶಕಾರಿ ಕಳೆಯಾಗಿ ಪರಿಣಮಿಸಿದೆ

ಪಾರ್ಥೇನಿಯಂ ಕಳೆಯಲ್ಲಿ ಪ್ರಮುಖವಾಗಿ ಪಾರ್ಥಿನ್ ಎಂಬ ಲ್ಯಾಕ್ಟೋನ್ ಇರುವುದರಿಂದ ಇತರೆ ಗಿಡಗಳಿಗೆ, ಮಾನವರಿಗೆ ಮತ್ತು ಪ್ರಾಣಿಗಳಿಗೆ ತೊಂದರೆಯನ್ನುಂಟು ಮಾಡುವುದಲ್ಲದೇ, ಬೆಳೆಯ ಉತ್ಪಾದಕತೆ ಹಾಗೂ ಜೀವ ವೈವಿಧ್ಯತೆಗೆ ಮಾರಕವಾಗಿದೆ. ಅಲ್ಲದೇ, ಹುಲ್ಲು ಬೆಳೆಯುವ ಪ್ರದೇಶವನ್ನು ಆಕ್ರಮಿಸಿಕೊಂಡಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆಯನ್ನುಂಟು ಮಾಡುತ್ತದೆ. ಈ ಕಳೆಯು ಮಾನವರಲ್ಲಿ ಸಂಪರ್ಕ ಅಲರ್ಜಿ, ತುರಿಕೆ, ಅಸ್ತಮ, ಗೊರಲು ಹಾಗೂ ಕೆಲವರಲ್ಲಿ ಚರ್ಮವ್ಯಾದಿಯನ್ನು ಉಂಟು ಮಾಡುತ್ತದೆ. ಇನ್ನೂ ಕೆಲವರಲ್ಲಿ ತಿಕ್ಷ್ಣವಾದ ಇಸುಬುಯುತ ಚರ್ಮವ್ಯಾದಿಯನ್ನು ಉಂಟು ಮಾಡುತ್ತದೆ. ಕಳೆಯು ಹೆಚ್ಚು ಪ್ರಮಾಣದಲ್ಲಿ ಪರಾಗವನ್ನು ಉತ್ಪಾದಿಸುವುದರಿಂದ ಅವು ಗಾಳಿಯಲ್ಲಿ ಬೆರೆತಾಗ ಅನೇಕ ಉಸಿರಾಟದ ತೊಂದರೆಗಳು ಉಂಟಾಗುತ್ತದೆ. ಪಾರ್ಥೇನಿಯಂ ಅತೀ ಶೀಘ್ರವಾಗಿ ಬೆಳೆಯುವ ವಾರ್ಷಿಕ ಕಳೆಯಾಗಿದ್ದು, ಮಣ್ಣಿನಲ್ಲಿ ತೇವಾಂಶವಿದ್ದರೆ ವರ್ಷದ ಮೂರು ಹಂಗಾಮುಗಳಲ್ಲಿಯೂ ಮೊಳಕೆಯೊಡೆದು ವಿವಿಧ ಬೆಳವಣಿಗೆ ಹಂತಗಳಲ್ಲಿ ಕಾಣಸಿಗುತ್ತದೆ. ಒಂದೊಂದು ಗಿಡವು ಸಾವಿರಾರು ಬೀಜಗಳನ್ನು (೫೦೦೦-೨೫೦೦೦) ಉತ್ಪಾದಿಸುತ್ತದೆ. ಬೀಜಗಳು ಅತೀ ಹಗುರವಾಗಿರುವುದರಿಂದ ಗಾಳಿ ಹಾಗೂ ನೀರಿನ ಮೂಲಕ ಸುಲಭವಾಗಿ ಪ್ರಸಾರವಾಗುತ್ತದೆ

ಪಾರ್ಥೇನಿಯಂ ಕಳೆಯಿಂದ ಆಗುವ ನಷ್ಟಗಳನ್ನು ಹಾಗೂ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಇದರ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮಧ್ಯ ಪ್ರದೇಶದ ಜಬಲ್ಪುರ್ನಲ್ಲಿರುವ ಕಳೆ ವಿಜ್ಞಾನ ಸಂಶೋಧನಾ ನಿರ್ದೇಶನಾಲಯವು ೨೦೦೪ ರಿಂದ ಪ್ರತಿವರ್ಷ ಆಗಸ್ಟ್ ತಿಂಗಳ ೧೬-೨೨ ನೇ ತಾರೀಖಿನವರೆಗೆ ಒಂದು ವಾರದ ಪಾರ್ಥೇನಿಯಂ ನಿರ್ಮೂಲನಾ ತಿಳುವಳಿಕಾ ಸಪ್ತಾಹವೆಂಬ ಜಾಗೃತಿ ಅಭಿಯಾನವನ್ನು ನಗರ ಸಭೆ ಹಾಗೂ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಹಮ್ಮಿಕೊಳ್ಳುವಂತೆ ಕೃಷಿ ವಿಶ್ವವಿದ್ಯಾನಿಲಯಗಳು, ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು, ಸರ್ಕಾರೇತರ ಸಂಸ್ಥೆಗಳಿಗೆ ಕರೆ ನೀಡಿದೆ. ಈ ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ಪಾರ್ಥೇನಿಯಂ ಕೀಳುವುದು, ವಿಚಾರ ಸಂಕಿರಣ, ಕಿಸಾನ್ ಗೋಷ್ಠಿ, ಕಿರುಚಿತ್ರ ಪ್ರದರ್ಶನ, ಸಸ್ಯನಿಯೋಗಿಗಳ ಹಾಗೂ ಮೆಕ್ಸಿಕನ್ ದುಂಬಿಯ ಪರಿಚಯ ಮಾಡುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ

ಸಮಗ್ರ ನಿರ್ವಹಣೆ ಕ್ರಮಗಳು

 • ಪಾರ್ಥೇನಿಯಂ ಕಳೆಯು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಪ್ರಸಾರವಾಗುವುದನ್ನು ತಡೆಯಬೇಕು
 • ಚೆನ್ನಾಗಿ ಕಳಿತ ಗೊಬ್ಬರವನ್ನು ಉಪಯೋಗಿಸುವುದರಿಂದ ಈ ಕಳೆಯು ಜಮೀನಿನಲ್ಲಿ ಮೊಳಕೆಯೊಡೆಯುವುದು ಕಡಿಮೆಯಾಗುತ್ತದೆ
 • ಕಳೆಯನ್ನು ಹೂ ಬಿಡುವ ಮುಂಚೆಯೇ ಕಿತ್ತುಹಾಕುವುದರಿಂದ ಬೀಜೋತ್ಪಾದನೆ ಕಡಿಮೆಯಾಗಿ ಕಳೆಯು ವೃದ್ಧಿಯಾಗುವುದಿಲ್ಲ
 • ಮಳೆಯ ಪ್ರಾರಂಭದಲ್ಲಿ ಕಳೆಯನ್ನು ಕೈಚೀಲ ಹಾಕಿಕೊಂಡು ಕಿತ್ತು ಹಾಕಬೇಕು. ಕಿತ್ತು ಹಾಕುವಾಗ ದೇಹವನ್ನು ಚೆನ್ನಾಗಿ ಮುಚ್ಚಿಕೊಂಡಿರಬೇಕು ಮತ್ತು ಪಾರ್ಥೇನಿಯಂ ಕಳೆಗೆ ಅಲರ್ಜಿಯಿಲ್ಲದವರನ್ನು ಮಾತ್ರ ಕಳೆಯನ್ನು ಕೀಳಲು ನಿಯೋಜಿಸಬೇಕು
 • ಕುಡುಗೋಲಿನಲ್ಲಿ ಗಿಡವನ್ನು ಬುಡದ ಹತ್ತಿರ ಕುಯಿದು ಹಾಕಿದಲ್ಲಿ ಮತ್ತೆ ಚಿಗುರುತ್ತದೆ. ಆದ್ದರಿಂದ ಗುದ್ದಲಿಯಿಂದ ಗಿಡವನ್ನು ಬುಡ ಸಮೇತ ಕಿತ್ತು ಹಾಕಬೇಕು
 • ಬಂಜರು ಪ್ರದೇಶಗಳಲ್ಲಿ ಮುಂಗಾರಿನಲ್ಲಿ ಪಾರ್ಥೇನಿಯಂ ಗಿಡಗಳ ನಡುವೆ ಇತರೆ ಉಪಯುಕ್ತ ಸಸ್ಯ ನಿಯೋಗಿಗಳಾದ ಹೆಸರು ತಗಚೆ, ಗಂಡು ತಗಚೆ, ದೊಡ್ಡ ತಗಚೆ, ಗಂಗ ತುಳಸಿ, ವಿಲಾಯಿತಿ ತೊಗರಿ ಗಿಡ, ಅಡವಿ ನೀಲಿ ಗಿಡ, ಆವರಿಕೆ / ತಂಗಡಿ ಗಿಡ, ಮಧ್ಯಾಹ್ನ ಮಲ್ಲಿಗೆ ಗಿಡಗಳ ಬೀಜಗಳನ್ನು ಎರಚಿದಲ್ಲಿ ಕ್ರಮೇಣ ಅಂತಹ ಗಿಡಗಳು ಮೊಳಕೆಯೊಡೆದು ಸ್ಪರ್ಧೆ ಮಾಡಿ ಪಾರ್ಥೇನಿಯಂ ಗಿಡಗಳನ್ನು ೪ ರಿಂದ ೫ ವರ್ಷಗಳಲ್ಲಿ ಕಡಿಮೆ ಮಾಡುತ್ತವೆ

  ಮಳೆಗಾಲದಲ್ಲಿ ಮೆಕ್ಸಿಕನ್ ದುಂಬಿ (ಜೈಗೊಗ್ರಾಮ ಬೈಕೊಲೊರೇಟ)ಗಳನ್ನು ಕಳೆ ಬೆಳೆದಿರುವ ಜಾಗಗಳಲ್ಲಿ ಬಿಡುವುದರಿಂದ ಈ ದುಂಬಿಗಳು ಕಳೆಯ ಎಲೆ ಹಾಗೂ ಗಿಡದ ಇತರ ಭಾಗಗಳನ್ನು ತಿಂದು ಅದರ ಬೆಳವಣಿಗೆ ಹಾಗೂ ಬೀಜೋತ್ಪಾದನೆಯನ್ನು ನಿಯಂತ್ರಣ ಮಾಡುತ್ತವೆ. ಪ್ರತಿ ವರ್ಷ ಮಳೆಗಾಲದಲ್ಲಿ ದುಂಬಿಗಳು ತಾವೇ ವೃದ್ಧಿಯಾಗಿ ಪಾರ್ಥೇನಿಯಂ ಗಿಡಗಳನ್ನು ಕಡಿಮೆ ಮಾಡುತ್ತವೆ

  ವ್ಯವಸಾಯದ ಜಮೀನಿನಲ್ಲಿ ಕಳೆಯು ಕಂಡಾಗ, ಬೆಳೆಗೆ ಶಿಫಾರಸ್ಸು ಮಾಡಿರುವ ಕಳೆನಾಶಕಗಳನ್ನು ಉಪಯೋಗಿಸುವುದರಿಂದ ಬೇರೆ ಕಳೆ ಜೊತೆಯಲ್ಲಿ ಪಾರ್ಥೇನಿಯಂ ಕಳೆಯನ್ನೂ ನಿಯಂತ್ರಿಸುತ್ತವೆ. ಬಂಜರು ಪ್ರದೇಶದಲ್ಲಿ ಒಂದು ವೇಳೆ ಸಿಂಪರಣೆ ಮಾಡುವುದಾದರೆ, ಕಳೆಯು ಹಸಿರಾಗಿದ್ದಾಗ ಅದರ ಮೇಲೆ ಬೀಳುವ ತರಹ ಗ್ಲೈಪೋಸೇಟ್ ೮ ರಿಂದ ೧೦ ಮಿ.ಲೀ. ಅಥವಾ ೩ ಗ್ರಾಂ ಮೆಟ್ರಿಬ್ಯುಜಿನ್ ಅಥವಾ ೨ ರಿಂದ ೩ ಗ್ರಾಂ ೨,೪-ಡಿ (ಸೋಡಿಯಂ ಲವಣ) ಯನ್ನು ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣಮಾಡಿ ಸಿಂಪರಣೆ ಮಾಡಬೇಕು. ಮತ್ತೆ ಹೊಸ ಚಿಗುರು ಬಂದಾಗ ಕಳೆನಾಶಕವನ್ನು ಪುನಃ ಸಿಂಪರಣೆ ಮಾಡಬೇಕಾಗುತ್ತದೆ

  ಕಳೆಯು ಚಿಕ್ಕದಿರುವಾಗ ನಿಯಂತ್ರಣ ಸುಲಭ ಹಾಗೂ ಖರ್ಚು ಕಡಿಮೆ. ಇದರಿಂದ ನಮ್ಮ ಪರಿಸರವನ್ನು ಪಾರ್ಥೇನಿಯಂ ತರಹ ವಿನಾಶಕಾರಿ ಕಳೆಗಳಿಂದ ಕಾಪಾಡಲು ಸಾಧ್ಯವಾಗುತ್ತದೆ

  ಪಾರ್ಥೇನಿಯಂ ಕಳೆ ಹತೋಟಿಯಡೆ ಸಾಮಾಜಿಕ ಕಳಕಳಿ: ಸಾರ್ವಜನಿಕರು ತಮ್ಮ ಮನೆಯ ಸುತ್ತ-ಮುತ್ತ ಈ ಕಳೆಯು ಬೆಳೆಯದಂತೆ ನೋಡಿಕೊಳ್ಳಬೇಕು, ಖಾಲಿ ನಿವೇಶನಗಳಲ್ಲಿಯೂ ಕೂಡ ಈ ಕಳೆ ಇರದಂತೆ ನೋಡಿಕೊಳ್ಳುವುದು ಸೂಕ್ತ, ರೈತರು ತಮ್ಮ ಹೊಲದ ಬದುಗಳ ಮೇಲೆ, ನೀರಾವರಿ ಕಾಲುವೆಗಳಲ್ಲಿ, ತಿಪ್ಪೆ ಗುಂಡಿಗಳಲ್ಲಿ, ಈ ಕಳೆ ಇರದಂತೆ ನೋಡಿಕೊಳ್ಳುವುದು ಸೂಕ್ತ, ಪಾರ್ಥೇನಿಯಂ ಹತೋಟಿಗೆ ಸಾಮೂಹಿಕ ಪ್ರಯತ್ನ ನಿರಂತರವಾಗಿ ಬೇಕಾಗುತ್ತದೆ, ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ, ಶೈಕ್ಷಣಿಕೆ ಸಂಸ್ಥೆಗಳು, ನಗರ ಸಭೆ, ಕಂದಾಯ ಇಲಾಖೆಯವರು ಹಾಗೂ ರೈತರು ಈ ಕಳೆಯ ಹಾನಿಕಾರಕ ಗುಣಗಳ ಬಗ್ಗೆ ಹಾಗೂ ನಿಯಂತ್ರಣ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯ ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಈ ಕಳೆಯನ್ನು ಹತೋಟಿ ಮಾಡುವಲ್ಲಿ ಆಸಕ್ತಿ ತೋರಬೇಕು