ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ನಾಟಿಪಶುವೈದ್ಯ

ರಾಸುಗಳನ್ನು ಕಾಡುವ ಚರ್ಮ ರೋಗಗಳು

ಡಾ. ರವಿಕುಮಾರ್, ಪಿ
೯೦೦೮೫೯೮೮೩೨
1

ನಮ್ಮ ಜಾನುವಾರುಗಳು ಗೋಡೆಗೋ, ಮರಕ್ಕೋ, ಲೈಟುಕಂಬಕ್ಕೋ ಮೈ ಉಜ್ಜುತ್ತಾ ತುರಿಸಿಕೊಳ್ಳುವುದನ್ನು ಹಲವರು ಗಮನಿಸಿರಬಹುದು. ನಾಯಿಗಳಂತೂ ದೇಹದ ಹಲವು ಭಾಗಗಳನ್ನು ಕಚ್ಚಿ ಕಚ್ಚಿ ತೀಟೆ ತೀರಿಸಿಕೊಳ್ಳುವುದು ಸರ್ವೇಸಾಮಾನ್ಯ. ಹಲವು ಜಾತಿಯ ಬ್ಯಾಕ್ಟೀರಿಯಾ, ಶಿಲೀಂಧ್ರ, ಹೊರ ಪರೋಪಜೀವಿಗಳು ರಾಸುಗಳಲ್ಲಿ ನಾನಾ ರೀತಿಯ ಚರ್ಮರೋಗಗಳನ್ನು ಉಂಟು ಮಾಡುತ್ತವೆ. ಇವು ಜಾನುವಾರುಗಳಿಗೆ ಹಲವು ರೀತಿಯ ಉಪಟಳಗಳನ್ನೂ ಕೋಟಲೆಗಳನ್ನು ನೀಡುವುದರ ಜೊತೆಗೆ ಅವುಗಳ ಉತ್ಪಾದಕತೆಯನ್ನು ಗಣನೀಯವಾಗಿ ತಗ್ಗಿಸುತ್ತವೆ. ಕೆಲವೊಂದು ಚರ್ಮರೋಗಗಳು ಪ್ರಾಣಿಗಳಿಂದ ಮಾನವರಿಗೂ ಹರಡುವ ಸಾಧ್ಯತೆಗಳಿರುವುದು ಕಳವಳಕಾರಿ ಸಂಗತಿ

ಪಶುಪಾಲನೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಕಾಲಕಾಲಕ್ಕೆ ರಾಸುಗಳ ಮೈತೊಳೆಯದೇ ಹೋದರೆ ವಾತಾವರಣದಲ್ಲಿರುವ ಹಲವು ಕ್ರಿಮಿಗಳು ಅವುಗಳ ಚರ್ಮದಲ್ಲಿ ಸೇರಿ ಅನೇಕ ತರಹದ ಸೋಂಕುಗಳನ್ನುಂಟು ಮಾಡುತ್ತವೆ. ವಿಶೇಷವಾಗಿ ಹೊರ ಪರಾವಲಂಬಿ ಜೀವಿಗಳು ಜಾನುವಾರುಗಳನ್ನು ಕಾಡದಂತೆ ಎಚ್ಚರ ವಹಿಸಬೇಕು. ಕೊಟ್ಟಿಗೆಯಲ್ಲಿ ಹೇರಳ ಗಾಳಿ ಬೆಳಕಿನ ವ್ಯವಸ್ಥೆ ಇರಬೇಕು. ಯಾವುದೇ ರೋಗಲಕ್ಷಣಗಳು ಕಂಡುಬಂದಲ್ಲಿ ಅಲಕ್ಷ್ಯ ಮಾಡದೇ ಸೂಕ್ತ ಚಿಕಿತ್ಸೆ ನೀಡಬೇಕು. ಚರ್ಮರೋಗದ ಗುಣಲಕ್ಷಣಗಳು: ಮೊದಲೇ ಹೇಳಿದಂತೆ ದೇಹದ ಹಲವು ಭಾಗಗಳಲ್ಲಿ ತುರಿಕೆ; ಸೋಂಕಿನ ಮೂಲವನ್ನಾಧರಿಸಿ ತುರಿಕೆ ಹೆಚ್ಚು ಅಥವಾ ಕಡಿಮೆ ಇರಬಹುದು. ಕೂದಲು ಉದುರತೊಡಗುತ್ತದೆ, ಚರ್ಮ ಹೊಳಪು ಕಳೆದುಕೊಂಡು ಬಿರುಸಾಗತೊಡಗುತ್ತದೆ, ಚರ್ಮದ ಮೇಲೆ ಗುಳ್ಳೆಗಳು, ಕಜ್ಜಿ, ಹುಳುಕಡ್ಡಿಯಂತಹ ಲಕ್ಷಣಗಳು ತಲೆದೋರುತ್ತವೆ. ಪಶುವೈದ್ಯ ವಿಜ್ಞಾನದಲ್ಲಿ ರಾಸುಗಳ ಚರ್ಮರೋಗಗಳಿಗೆ ಪರಿಣಾಮಕಾರಿ ಔಷಧಿಗಳು ಲಭ್ಯವಿದ್ದು ಆರಂಭಿಕ ಹಂತದಲ್ಲಿಯೇ ತಜ್ಞ ಪಶುವೈದ್ಯರಿಗೆ ತೋರಿಸುವ ಮೂಲಕ ರೋಗವನ್ನು ಗುಣಪಡಿಸಬಹುದು. ಹಲವು ರೀತಿಯ ಮನೆಮದ್ದುಗಳನ್ನೂ ಯಶಸ್ವಿಯಾಗಿ ಪ್ರಯೋಗಿಸಬಹುದು

ಬೇವು ಅಥವಾ ಹೊಂಗೆ ಎಣ್ಣೆ: ಹಲವು ಚರ್ಮರೋಗಗಳಿಗೆ ಇದು ದಿವ್ಯೌಷಧಿ. ದಿನಕ್ಕೆರಡು ಬಾರಿ ಸೋಂಕುಪೀಡಿತ ಜಾಗಗಳಿಗೆ ಎಣ್ಣೆಯನ್ನು ಮೇಲ್ಮುಖವಾಗಿ ಸವರುವುದು ಒಳ್ಳೆಯದು. ರೋಗ ಸಂಪೂರ್ಣವಾಗಿ ವಾಸಿಯಾಗುವವರೆಗೂ ಇದನ್ನು ಮುಂದುವರಿಸಬೇಕು

ತಲಾ ಒಂದು ಚಮಚ ಕಾಳುಮೆಣಸು, ಅರಿಶಿನ ಮತ್ತು ಹುಣಸೇ ಹಣ್ಣನ್ನು ಚೆನ್ನಾಗಿ ಅರೆದು ಬೇವಿನೆಣ್ಣೆಯಲ್ಲಿ ಕಲೆಸಿ ರೋಗಪೀಡಿತ ಭಾಗಗಳಿಗೆ ದಿನಕ್ಕೆರಡು ಬಾರಿ ಲೇಪಿಸಬೇಕು

ಕರಿಜೀರಿಗೆಯನ್ನು ಎಳ್ಳೆಣ್ಣೆಯಲ್ಲಿ ಅರೆದು ಲೇಪಿಸಿದರೆ ಚರ್ಮ ರೋಗಗಳು ಬೇಗ ನಿಯಂತ್ರಣಕ್ಕೆ ಬರುತ್ತವೆ

ಎರಡು ಚಮಚ ಅರಿಶಿನ ಪುಡಿ ಹಾಗೂ ಒಂದಿಷ್ಟು ಗರಿಕೆಯನ್ನು ಅರೆದು ಗೋಮೂತ್ರದಲ್ಲಿ ಕಲಸಿ ಕಜ್ಜಿ/ಹುಳುಕಡ್ಡಿಗೆ ದಿನಕ್ಕೆರಡು ಬಾರಿಯಂತೆ ೧೫ ದಿನಗಳ ಕಾಲ ಲೇಪಿಸುವುದು

ಸಮಪ್ರಮಾಣದ ತುಳಸೀ ಎಲೆ, ಬೇವಿನ ಸೊಪ್ಪು ಮತ್ತು ಅರಿಶಿನವನ್ನು ಅರೆದು ದಿನಕ್ಕೆರಡು ಬಾರಿ ಲೇಪಿಸಬೇಕು. (ಹೆಚ್ಚಿನ ಓದು: ಮೂಲಿಕಾ ಪಶುವೈದ್ಯ: ಬೈಫ್ ಸಂಸ್ಥೆಯ ಪ್ರಕಟಣೆ ಹಾಗೂ ಡಾ.ಗಣೇಶ ಹೆಗಡೆ ನೀಲೇಸರರ ಒಗ್ಗರಣೆ ಡಬ್ಬಿಯಲ್ಲಿ ಪಶುವೈದ್ಯ