ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಚಿತ್ರ ಲೇಖನ

ಎಲೆಕೋಸಿನಲ್ಲಿ ವಜ್ರಬೆನ್ನಿನ ಪತಂಗದ ನಿರ್ವಹಣೆ

image_
ಡಾ. ಎಸ್. ಟಿ. ಪ್ರಭು,
9448182225
1

ಬೆನ್ನಿನ ಮೇಲೆ ವಜ್ರಾಕೃತಿ ಚಿನ್ಹೆಗಳನ್ನು ಹೊಂದಿರುವ ಈ ಚಿಕ್ಕ ಪತಂಗವನ್ನು ವೈಜ್ಞಾನಿಕವಾಗಿ ಪ್ಲುಟೆಲ್ಲಾ ಕ್ಸೈಲೋಸ್ಟೆಲ್ಲಾ (Plutella xylostella) ಎಂದು ಕರೆಯುತ್ತಾರೆ. ಈ ಕೀಟವು ಪ್ರಪಂಚದಾದ್ಯಂತ ಕೋಸಿನ ಜಾತಿಗೆ ಸೇರಿದ ಬೆಳೆಗಳಾದ ಎಲೆಕೋಸು, ಹೂಕೋಸು, ನವಿಲು ಕೋಸು, ಮತ್ತು ಸಾಸಿವೆ ಬೆಳೆಯನ್ನು ಆಕ್ರಮಣ ಮಾಡುತ್ತದೆ. ಕೀಟವು ಮೊಟ್ಟೆ (೭ ದಿನಗಳು), ಮರಿಹುಳು (೧೪ ದಿನಗಳು), ಕೋಶಾವಸ್ಥೆಯ (೭ ದಿನಗಳು) ವಿವಿಧ ಹಂತಗಳನ್ನು ಪೂರೈಸಿ ೩೦ ದಿನಗಳಲ್ಲಿ ಪತಂಗವಾಗಿ ಪ್ರೌಢಾವಸ್ಥೆಗೆ ಬರುತ್ತದೆ. ತಾಯಿ ಕೀಟವು ೫೦ ರಿಂದ ೬೦ ಮೊಟ್ಟೆಗಳನ್ನು ಒಂದೊಂದಾಗಿ ಎಲೆಯ ಕೆಳಭಾಗದಲ್ಲಿ ಇಡುತ್ತದೆ. ಮೊದಲ ಹಂತದ ಮರಿಹುಳುಗಳು ಎಲೆಗಳ ಮೇಲ್ಪದರವನ್ನು ಕೆರೆದು ಹಸಿರು ಪದಾರ್ಥವನ್ನು ತಿನ್ನುತ್ತವೆ. ಇದರಿಂದ ಎಲೆಗಳ ಮೇಲೆ ಅಲ್ಲಲ್ಲಿ ಬಿಳಿ ಬಿಳಿ ತೆಳುವಾದ ಪದರುಗಳಂತೆ ಕಾಣುತ್ತದೆ. ನಂತರ ಬೆಳೆದ ಕೀಟಗಳು ಗೆಡ್ಡೆಗಳನ್ನು ಕೊರೆದು ರಂಧ್ರ ಮಾಡಿ ತಿನ್ನುತ್ತವೆ. ಇದರಿಂದ ಗೆಡ್ಡೆಗಳು ಹಿಕ್ಕೆಗಳಿಂದ ತುಂಬಿ ಹಾಳಾಗುತ್ತವೆ. ಪೂರ್ಣ ಬೆಳೆದ ಮರಿಹುಳು ಸುಮಾರು ೧೨ ಮಿ. ಮೀ. ಉದ್ದವಿರುತ್ತದೆ ಮತ್ತು ದೇಹವು ಎರಡೂ ಕಡೆ ಚೂಪಾಗಿದ್ದು ಹಸಿರು ಬಣ್ಣದಿಂದ ಕೂಡಿರುತ್ತದೆ. ಈ ಕೀಟವು ಎಲೆಗಳ ಮೇಲೆ ಪರದೆಯಾಕಾರದ ಗೂಡಿನೊಳಗೆ ಕೋಶಾವಸ್ಥೆಯನ್ನು ಹೊಂದುತ್ತದೆ.

3

ಕೀಟದ ನಿರ್ವಹಣೆ

ಈ ಕೀಟದ ನಿರ್ವಹಣೆಗೆ ಅನೇಕ ಕೃತಕ ಕೀಟನಾಶಕಗಳನ್ನು ವಿಪರೀತವಾಗಿ ಬಳಸುವುದು ರೂಢಿಯಲ್ಲಿದೆ. ಇದರಿಂದ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಪರಿಸರ ಸ್ನೇಹಿ ಪದ್ದತಿಗಳನ್ನು ಅನುಸರಿಸಬೇಕು. ಹುಳುಗಳ ಸಂಖ್ಯೆ ಅಥವಾ ಹಾನಿಯ ಪ್ರಮಾಣವನ್ನು ಆಧರಿಸಿ ಔಷಧಿಗಳನ್ನು ಸಿಂಪರಿಸಬೇಕು

  • ಬೆಳೆ ಕಟಾವಿನ ನಂತರ, ಹೊಲದಲ್ಲಿ ಉಳಿದ ಬೆಳೆಯ ಅವಶೇಷಗಳನ್ನು ಆರಿಸಿ ತೆಗೆದು ನಾಶಮಾಡಬೇಕು ಮತ್ತು ನೇಗಿಲು ಹೊಡೆಯಬೇಕು
  • ಕೋಸು ಜಾತಿಯ ತರಕಾರಿಗಳನ್ನು ಮೂರು ವರ್ಷದಲ್ಲಿ ಒಂದು ಸಾರಿ ಮಾತ್ರ ಬೆಳೆಯಬೇಕು
  • ಎಲೆಕೋಸು ನಾಟಿ ಮಾಡುವ ೧೫ ದಿನ ಮೊದಲು ಪ್ರತಿ ೨೫ ಸಾಲಿಗೆ ಒಂದು ಸಾಲು ಸಾಸಿವೆ ಮತ್ತು ನಾಟಿ ಮಾಡಿದ ೧೫ ರಿಂದ ೨೫ ದಿನ ನಂತರ ಇನ್ನೊಂದು ಸಾಲು ಸಾಸಿವೆಯನ್ನು ಬಿತ್ತನೆ ಮಾಡಬೇಕು
  • ಪಕ್ಷಿಗಳು ಕೂಡಲು ಹೆಕ್ಟೇರಿಗೆ ೨೫ ರಂತೆ ಕವಲೊಡೆದ ಕಟ್ಟಿಗೆಗಳನ್ನು ಗಟ್ಟಿಯಾಗಿ ನೆಡಬೇಕು. ಸಾಸಿವೆಯ ಮೇಲೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಹುಳುಗಳು ಕಂಡುಬಂದಾಗ ಪ್ರತೀ ಲೀಟರ್ ನೀರಿಗೆ ೦.೫ ಮಿ.ಲೀ. ಡೈಕ್ಲೋರೊವಾಸ್ ಸೇರಿಸಿ ಸಾಸಿವೆಗೆ ಮಾತ್ರ ಸಿಂಪರಣೆ ಮಾಡಬೇಕು
  • ಗೆಡ್ಡೆ ಆಗುವ ಸಮಯದಲ್ಲಿ ಹುಳುವಿನ ಬಾಧೆ ಕಂಡುಬಂದರೆ ಎಲೆಕೋಸು ಬೆಳೆಗೆ ಶೇ. ೫ ರ ಬೇವಿನ ಬೀಜದ ಕಷಾಯ ಸಿಂಪರಣೆ ಮಾಡಬೇಕು. ಹುಳುವಿನ ಬಾಧೆ ಮುಂದುವರೆದರೆ ಪುನಃ ಇದೇ ಸಿಂಪರಣೆಯನ್ನು ೧೫ ದಿನಗಳ ಅಂತರದಲ್ಲಿ ಮಾಡಬಹುದು
  • ಬ್ಯಾಕ್ಟೀರಿಯಾದ ಕೀಟನಾಶಕವಾದ ಬಿ.ಟಿ. (ಬ್ಯಾಸಿಲಸ್ ತುರಿಂಜಿಯೆನ್ಸಿಸ್) ಔಷಧಿಯನ್ನು ಪ್ರತಿ ಲೀ. ನೀರಿಗೆ ೧ ಗ್ರಾಂ ಬೆರೆಸಿ ಬೆಳೆಯು ೩೦ ಮತ್ತು ೪೫ ದಿನಗಳಿದ್ದಾಗ ಸಿಂಪರಿಸಬೇಕ
  • ವಿಪರೀತ ಹಾನಿ ಕಂಡುಬಂದಾಗ ಸ್ಪೈನೋಸ್ಯಾಡ್ ಕೀಟನಾಶಕ ಪ್ರತಿ ಲೀ. ನೀರಿಗೆ ೦.೩ ಮಿ.ಲೀ. ಬೆರೆಸಿ ಸಿಂಪರಿಸಬಹುದು. ಕಡೆಯ ಸಿಂಪರಣೆ ಬೆಳೆ ಕಟಾವಿನ ೧೫ ದಿನಗಳ ಮುಂಚೆ ಮಾತ್ರ ಮಾಡಬೇಕು
  • 13