ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಕೃಷಿಯೊಂದು ಕಲೆ

image_
ಡಾ. ಬಿ. ಎಂ. ಚಿತ್ತಾಪೂರ
9535623232
1

ಕೃಷಿ ಪ್ರಾರಂಭದಲ್ಲಿ ನಿಸರ್ಗದ ಸರಳ ಅನುಕರಣೆಯ ಉತ್ಪಾದನಾ ಕ್ರಮವಾಗಿ ಆರಂಭಗೊಂಡು ನಂತರದಲ್ಲಿ ವಿಜ್ಞಾನ ಮತ್ತು ಅನುಭವಗಳ ಅಳವಡಿಕೆಯಿಂದಾಗಿ ಬೃಹತ್ ಉದ್ಯಮವಾಗಿ ಬೆಳೆಯುತ್ತಲಿದೆ. ಈ ಬೆಳವಣಿಗೆಯಲ್ಲಿ ಬೇಸಾಯ ಕಲೆಯ ಪಾತ್ರ ಪ್ರಮುಖವಾಗಿದೆ. ಇದು ಕೃಷಿ ಉದ್ಯಮಕ್ಕೆ ಹವ್ಯಾಸಿ ಮತ್ತು ಕೌತುಕ ರೈತರ ನೇರ ಕಾಣಿಕೆಯೆಂದೇ ಹೇಳಬಹುದು. ಸಸ್ಯಗಳ ಆಯ್ಕೆ, ಭೂ ಸಾಗುವಳಿ, ಬಿತ್ತನೆ ತಿಥಿ, ಬೀಜ/ಸಸಿ/ಸಸ್ಯದ ಭಾಗದ ಆಯ್ಕೆ, ಬಿತ್ತನೆ / ನಾಟಿ. ಒಂದೇ ಬೆಳೆಯನ್ನೆ ಬೇರೆ ಬೇರೆ ಸಂದರ್ಭಗಳಲ್ಲಿ ಬಿತ್ತನೆ ಅಥವಾ ನಾಟಿ, ಗೂಟಿ ಕಟ್ಟುವುದು, ಏರು ಮಡಿ, ಪರದೆ ಮನೆ, ಪ್ಲಾಸ್ಟಿಕ್ ಮನೆ, ಹನಿ ನಿರಾವರಿ, ಪ್ಲಾಸ್ಟಿಕ್ ಹೊದಿಕೆ, ಸಾವಯವ ಪರಿಕರಗಳು, ಮಿಶ್ರ ಬೆಳೆ/ಉದ್ಯಮ ಯೋಜನೆ,.. ಒಂದೆ ಎರಡೆ ಪ್ರತಿ ಕ್ರಮದ ಹಿಂದೂ ಒಂದೊಂದು ಕಥೆ, ಒಂದೊಂದು ಇತಿಹಾಸ.ಅಂದು ಲಿಂಗಸೂರಿನ ಶ್ರೀ ಬಸವರಾಜರವರು ಮಾತನಾಡುತ್ತಾ ಹೇಳಿದರು ’ದಾಳಿಂಬೆಯಲ್ಲಿ ಪ್ರೂನಿಂಗ್ (ಚಾಟಣಿ) ಬಹಳ ಮಹತ್ವದ ಕ್ರಮ ನೋಡ್ರಿ. ನಮಗೂ ಮೊದಲು ತಿಳಿದಿರಲಿಲ್ಲ. ಮೊದಮೊದಲು ನಾವು ಸುಮ್ಮನ ಟೊಂಗೆಗಳನ್ನು ಕಟ್ (ಕತ್ತರಿಸುವುದು) ಮಾಡುತ್ತಿದ್ದೆವು. ಆದ್ರ ಈಗ ಗೊತ್ತಾಗ್ಯದ, ಟೊಂಗಿಯಲ್ಲಿ ಮುಳ್ಳ ಇದ್ದಲ್ಲಿ ಕಟಿಂಗ ಮಾಡಿದರ ಅಲ್ಲೆ ಹೂ ಬಂದು ಕಾಯಿ ಕಟ್ಟುವುದು ಗ್ಯಾರಂಟಿ ನೋಡ್ರಿ.’. ಮಾತನ್ನು ಮುಂದುವರಿಸುತ್ತ ಹೇಳಿದರು ’ಇದನ್ನ ಯಾರು ಹೇಳಿಲ್ಲರಿ ನಮ್ಮದ ಅನುಭವ. ಹೀಗಾಗಿ ಹೆಚ್ಚು ಲೇಬರ (ಕೆಲಸಗಾರರು) ಹತ್ತಿದರೂ ಸಹಿತ ನಾನ ಮುಂದ ನಿಂತ ಮಾಡಸ್ತೀನ್ರೀ, ಇಲ್ಲಿ ನೋಡ್ರಿ ಗಿಡ ಸಣ್ಣದಿದ್ದರೂ ಕಾಯಿ ಹ್ಯಾಂಗ ಹಿಡದದ. ಒಂದುವರಿ ವರ್ಷದ ಗಿಡಾ ಆದರೂ ಕಾಯಿ ಹಿಡಿದಿದ್ದು ಕಾಯಿ ತೂಕಕ್ಕ ಗಿಡ ನೆಲಕ್ಕ ಬೀಳಾಕತ್ಯಾವ’ಅಂತ ಹೇಳಿದರು. ನಾವೂ ಬೆಳೆ ನೋಡಿ ದಂಗಾದೆವು.