ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೮

ಸಾವಯವ ಸರದಾರರು

ಅರುಣಕುಮಾರ್ ವಿ. ಕೆ
೯೪೪೯೬೨೩೨೭೫
1

ನೀವು ಶಿವಮೊಗ್ಗ ಜಿಲ್ಲೆಯಿಂದ ತೀರ್ಥಹಳ್ಳಿ ತಲುಪಿ ಅಲ್ಲಿಂದ ಐದು ಕಿಲೋ ಮೀಟರ್ ದೂರ ತಳವೆ ಮೂಲಕ ಕ್ರಮಿಸಿದರೆ ಮಜ್ಜಿಗೆಸರ ಎಂಬ ಪುಟ್ಟ ಗ್ರಾಮವನ್ನು ತಲುಪಬಹುದು. ಆ ಪುಟ್ಟ ಊರಿನಲ್ಲಿ ಸುಬ್ಬಣ್ಣನವರ ಕೃಷಿಕಾಶಿ ಎದ್ದು ಕಾಣುತ್ತದೆ. ಸುಬ್ರಹ್ಮಣ್ಯ ಎಂಬ ಹೆಸರಿನವರಾದ ಇವರು ತೀರ್ಥಹಳ್ಳಿಯ ಸುತ್ತಮುತ್ತಲಿನ ಜನರಿಗೆ ಸುಬ್ಬಣ್ಣನವರೆಂದೇ ಚಿರಪರಿಚಿತ. ಇವರು ಕೃಷಿಯಲ್ಲಿ ಕೈಗೊಳ್ಳುವ ಪ್ರಯೋಗಶೀಲತೆ, ವೈವಿಧ್ಯಮಯ ತಳಿಗಳ ಬಳಕೆ, ಸಾವಯವ ಪದ್ಧತಿಯ ಅನುಸರಣೆ ಎಲ್ಲ ರೈತರ ಗಮನ ಸೆಳೆಯುವಂತೆ ಮಾಡಿದೆ.

3

ಕೃಷಿ, ಕೃಷಿಕನೊಬ್ಬನ ಸಾಧನೆಯಲ್ಲ, ಅದೊಂದು ರೀತಿಯ ಟೀಂ ವರ್ಕ್ ಇದ್ದ ಹಾಗೆ. ಹೀಗಾಗಿ ನಮ್ಮ ಸಹೋದರರಾದ ಜಗದೀಶ್, ಸತ್ಯನಾರಾಯಣ, ರಾಘವೇಂದ್ರ ಇವರುಗಳ ಶ್ರಮವಿದೆ ಎಂಬುದನ್ನು ಮರೆಯದೆ ಸುಬ್ಬಣ್ಣ ನೆನಪಿಸಿಕೊಳ್ಳುತ್ತಾರೆ. ಈಗಲೂ ಅವಿಭಕ್ತ ಕುಟುಂಬದಲ್ಲಿದ್ದುಕೊಂಡು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿಕೊಂಡು ಬರುತ್ತಿರುವವರಲ್ಲಿ ಇವರು ವೈಶಿಷ್ಟ್ಯಪೂರ್ಣವಾಗಿ ಕಾಣುತ್ತಾರೆ. ಬೆಳೆ ವೈವಿಧ್ಯತೆಗೆ ಹೆಸರಾಗಿರುವ ಇವರು ತಮ್ಮ ಮೂರುವರೆ ಎಕರೆ ಅಡಿಕೆ ತೋಟದಲ್ಲಿ ಮಿಶ್ರಬೆಳೆಯಾಗಿ ವೀಳ್ಯದೆಲೆ(೮ ತಳಿಗಳು), ಏಲಕ್ಕಿ, ಜಾಯಿಕಾಯಿ. ಲವಂಗ, ಕಾಳುಮೆಣಸು, ಬಾಳೆ, ಕಾಫಿ, ಗಳಂಗ, ಅಗರ್ವುಡ್, ತೆಂಗು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರ ಜೊತೆಗೆ ಹೈನುಗಾರಿಕೆಯನ್ನು ರೂಢಿಸಿಕೊಂಡು, ಒಂಭತ್ತು ದೇಸಿ ಗೋತಳಿಗಳನ್ನು ಸಾಕುತ್ತಿದ್ದಾರೆ. ಗೋಮೂತ್ರ ಬಳಸಿಕೊಂಡು ಪಂಚಗವ್ಯ ತಯಾರಿಸಿ ಜಮೀನಿಗೆ ಬಳಸುತ್ತಿದ್ದಾರೆ. ಇದಲ್ಲದೆ ಕೃಷಿತ್ಯಾಜ್ಯಗಳಿಂದ ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಎರೆಗೊಬ್ಬರ, ಕೊಟ್ಟಿಗೆ ಗೊಬ್ಬರಗಳನ್ನು ಸಿದ್ಧಪಡಿಸಿಕೊಂಡು ತಮ್ಮ ಜಮೀನಿಗೆ ಉತ್ತಮ ಪೋಷಕಾಂಶಗಳನ್ನು ಕೊಡುತ್ತಿದ್ದಾರೆ. ಹೀಗಾಗಿ ಇವರ ಎಲ್ಲಾ ಬೆಳೆಗಳು ಹಚ್ಚಹಸುರಾಗಿ ನಳನಳಿಸುತ್ತಿವೆ. ಸುಬ್ಬಣ್ಣನವರ ಮನಸ್ಸು ಕೃಷಿಯಲ್ಲಿನ ಪ್ರಯೋಗಶೀಲತೆಯತ್ತ ಸದಾ ತುಡಿಯುತ್ತಿರುತ್ತದೆ. ಇದಕ್ಕೆ ಅವರ ಕಾರ್ಯವೈಖರಿಯೇ ಸಾಕ್ಷಿಯಾಗಿ ನಿಲ್ಲುತ್ತದೆ. ಇವರು ತಮ್ಮ ಜಮೀನಿನಲ್ಲಿ ಆರು ತರಹದ ಕೋಲುಗೆಣಸು, ಆರು ತರಹದ ಬಳ್ಳಿ ಗೆಣಸು ಮತ್ತು ಏಳು ವಿಧದ ಕೆಸುವಿನ ಗೆಡ್ಡೆಗಳನ್ನು ಬೆಳೆಯುತ್ತಿದ್ದಾರೆ. ಜಮೀನಿನ ಬೇಲಿಯಂಚಿನಲ್ಲಿ ೨೨ ಜಾತಿಯ ಬಿದಿರನ್ನು ಬೆಳೆದಿದ್ದಾರೆ.

ಔಷಧಿ ಹಾಗೂ ಕಾಡುಜಾತಿ ತಳಿಗಳ ಸಂರಕ್ಷಕ: ಇಂದು ನಮ್ಮ ಕಾಡು ವಿನಾಶದಂಚಿಗೆ ಬಂದು ನಿಂತಿದೆ. ಈ ಅಳಿವಿನಂಚಿನಲ್ಲಿರುವ ಔಷಧಿ ಸಸ್ಯ ಪ್ರಭೇದಗಳ ಹಾಗೂ ಹಣ್ಣಿನ ಗಿಡಗಳ ಮಹತ್ವವನ್ನು ಅರಿತಿರುವ ಸುಬ್ಬಣ್ಣನವರು, ಈ ಸಸ್ಯ ಪ್ರಭೇದಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ. ಕಾಡು ಜಾತಿಯ ಹಣ್ಣುಗಳಾದ ಹುಲಿಗೆ ಹಣ್ಣು, ಕಲ್ಸಂಪೆ ಹಣ್ಣು, ಬ್ರಹ್ಮಾರಲು, ನೇರಳೆ ಹಣ್ಣು, ಬಿಳಿ ಮೀನಂಗಿ ಹಣ್ಣು, ಕೆಂಪು ಮೀನಂಗಿ ಹಣ್ಣು, ಹೊಳೆ ನೇರಳೆ, ಹೆಬ್ಬಲಸು, ಬಲಿಗೆ ಹಣ್ಣು, ರೆಂಜದ ಹಣ್ಣು ಹತ್ತು ಬಗೆಯ ಹಲಸಿನ ತಳಿಗಳನ್ನು ತಮ್ಮ ಜಮೀನಿನಲ್ಲಿ ಪೋಷಿಸುತ್ತಿದ್ದಾರೆ. ಇದಲ್ಲದೆ ಏಳು ಬಗೆಯ ವಿವಿಧ ತಳಿಗಳ ಮೇವಿನ ಹುಲ್ಲನ್ನು ಹೈನುಗಾರಿಕೆಗಾಗಿ ಬೆಳೆಯುತ್ತಿದ್ದಾರೆ. ಇವರ ತೋಟದಲ್ಲಿ ಅಡಿಕೆ ಪ್ರಮುಖ ಬೆಳೆಯಾಗಿದ್ದು, ಪ್ರತಿ ವರ್ಷ ೩೦ ಕ್ವಿಂಟಾಲ್ ಸಿದ್ಧ ಅಡಿಕೆಯನ್ನು ಪಡೆಯುತ್ತಿದ್ದಾರೆ. ಅಪರೂಪದ ಸಸ್ಯತಳಿಗಳು ಕಂಡರೆ ಎಲ್ಲೇ ಇರಲಿ, ಇವರ ವಿಶೇಷತೆ ಎಂದರೆ ಅಲ್ಲಿಗೆ ಭೇಟಿಕೊಟ್ಟು ಅದರ ಮಾಹಿತಿ, ಬೆಳೆಯುವ ವಿಧಾನ ಎಲ್ಲವನ್ನೂ ತಿಳಿದು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳುವ ಪ್ರವೃತ್ತಿ ಇವರಲ್ಲಿ ಕಾಣಬಹುದಾಗಿದೆ. ಹೀಗಾಗಿ ಇವರನ್ನು ತೀರ್ಥಹಳ್ಳಿ ತಾಲ್ಲೂಕಿನ ಸಂಚಾರಿ ಕೃಷಿ ಮಾಹಿತಿಗಾರ ಎಂಥಲೇ ಕರೆಯಬಹುದು. ಇವರ ತೋಟಕ್ಕೆ ಸಾಕಷ್ಟು ರೈತರು ಭೇಟಿಕೊಟ್ಟು ಮಾಹಿತಿ ಪಡೆಯುತ್ತಿದ್ದಾರೆ. ಬೆಳೆ ವಿಧಾನ, ಬೆಳೆ ವೈವಿಧ್ಯತೆ ಕುರಿತು ಯಾವುದೇ ವಿಷಯವೇ ಇರಲಿ, ಎಷ್ಟೇ ದೂರವಿರಲಿ ಅಲ್ಲಿಗೆ ಭೇಟಿ ಕೊಟ್ಟು ಮಾಹಿತಿ ಪಡೆಯುವ ಆಸಕ್ತಿ ಇವರಲ್ಲಿದೆ. ಕೃಷಿ ಕುರಿತಾಗಿ ಅನೇಕ ಸಮ್ಮೇಳನ, ವಿಚಾರ ಸಂಕಿರಣ, ಕಮ್ಮಟಗಳಿಗೆ ತಪ್ಪದೇ ಭಾಗವಹಿಸುತ್ತಾರೆ. ಇವರೊಬ್ಬ ಸಾವಯವ ಕೃಷಿಯ ಕಾಯಕಯೋಗಿ ಎಂದರೆ ಅತಿಶಯೋಕ್ತಿಯಾಗಲಾರದು. ಇಂತಹ ಅಪರೂಪದ ಸಾವಯವ ಸರದಾರರನ್ನು ನೋಡಲು ಮಜ್ಜಿಗೆಸರಕ್ಕೆ ಒಮ್ಮೆ ಭೇಟಿ ಕೊಡಲೇಬೇಕು.