ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಸಂಪಾದಕೀಯ-ಕೆರೆ ಹಬ್ಬ

image_
ಕೆ.ಸಿ.ಶಶಿಧರ
1

ನಮ್ಮಲ್ಲಿ ಹಬ್ಬಗಳಿಗೇನು ಕೊರತೆಯಿಲ್ಲ ಅಂತಹುದರಲ್ಲಿ ಇದ್ಯಾವುದು ಹೊಸ ಹಬ್ಬ ಹುಟ್ಟಿದೆಯಲ್ಲ ಅನ್ನುವಿರೊ? ಹೌದು ಇದೊಂದು ಹೊಸ ಹಬ್ಬ. ಎಲ್ಲಾ ಹಬ್ಬಗಳಿಗಿಂತ ದೊಡ್ಡ ಹಬ್ಬವಾಗಬೇಕಾದ ಕೆರೆ ಹಬ್ಬ ಬಹಳಷ್ಟು ಜನ ಯೋಚಿಸಿಯೇ ಇರಲಿಲ್ಲ. ಇಂತಹ ಹಬ್ಬವೊಂದನ್ನು ಕಟ್ಟಿ ಗ್ರಾಮವನ್ನೇ ಒಂದು ಮನೆಯಾಗಿಸಿ ಹಬ್ಬ ಮಾಡಿದ ಕೀರ್ತಿ ನೀಚಡಿ ಗ್ರಾಮಸ್ಥರಿಗೆ ಸೇರುತ್ತದೆ. ಅಕ್ಟೋಬರ್ ೨೨, ೨೦೧೭ ರಂದು ಅಂದ್ರೆ ವರ್ಷದೊಡಕಿನಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ನೀಚಡಿ ಗ್ರಾಮದಲ್ಲಿ ಗ್ರಾಮದ ಯುವಕರು, ಮಹಿಳೆಯರು, ಗ್ರಾಮಾಭಿವೃದ್ಧಿಯ ಕುರಿತು ಚಿಂತಿಸುವ ಎಲ್ಲರೂ ಸೇರಿ ಕೆರೆ ಹಬ್ಬ ಆಚರಿಸಿದರು. ಹಬ್ಬಕ್ಕೆ ಕಾರಣವೇನು ಗೊತ್ತೆ ಆ ಊರಿನ ಜೀವನಾಡಿ ಕೆರೆ ಸೊರಗಿ ಹೋಗಿದ್ದ ಕಂಡು ಸರ್ಕಾರದ ನೆರವಿಲ್ಲದೆ ಗ್ರಾಮಸ್ಥರೆ ವರಾಡ ಎತ್ತಿ ಕೆರೆ ಪುನಃಶ್ಚೇತನಗೊಳಿಸಿದ್ದರ ಸಿಹಿ ನೆನಪು. ಇಂತಹ ಹಬ್ಬ ಎಲ್ಲಾ ಗ್ರಾಮಗಳಲ್ಲಿ ಪ್ರತಿ ವರ್ಷ ನಡೆಯಬೇಕು. ಆಗ ಕೆರೆ ನಮ್ಮದು ಅದನ್ನು ಜೋಪಾನ ಮಾಡುವುದು ನಮ್ಮದೆಂಬ ಭಾವನೆ ಎಚ್ಚರಗೊಳ್ಳುತ್ತದೆ. ಹಬ್ಬದ ಹೆಸರಲ್ಲಿ ಪ್ರತಿ ವರ್ಷ ಕೆರೆ ಸ್ವಚ್ಛವಾಗಿಡುವ ಒಂದಷ್ಟು ಕಾರ್ಯ ಆಗುತ್ತದೆ. ಜೊತೆಗೆ ಹಿಂದೆ ಎಲ್ಲದಕ್ಕೂ ಕೆರೆ ಅವಲಂಬಿಸಿದ್ದ ನಾವು ಅದರ ಸ್ವಚ್ಛತೆ ಉಳಿವಿಗೆ ಹೋರಾಡುತ್ತಿದ್ದೆವು. ಇಂದು ಕೆರೆಗೂ ನಿತ್ಯದ ಚಟುವಟಿಕೆಗಳಿಗೂ ಸಂಬಂಧ ಕಡಿದು ಹೋಗಿದೆ. ಇದನ್ನು ಪುನಃ ಹೊಸ ರೂಪದಲ್ಲಿ ಕಟ್ಟಿಕೊಡಲು ಚಿಂತಿಸಿ ಊರ ಮಹಿಳೆಯರು, ಯುವಕರು, ಮಕ್ಕಳಿಗೆ ಅಲ್ಲಿ ಈಜು ಕಲಿಸಿ, ಅದನ್ನೊಂದು ಮನೋರಂಜನೆ ಹಾಗೂ ಪ್ರವಾಸಿ ತಾಣದಂತೆ ಸೃಷ್ಠಿಸಲಾಗಿದೆ. ಇಂತಹ ಹೊಸ ಹಬ್ಬ ಕಟ್ಟಿಕೊಟ್ಟು, ಕೆರೆಯ ಜೊತೆ ಸಂಬಂಧ ಕಟ್ಟಿಕೊಂಡು ಗ್ರಾಮದವರೆಲ್ಲಾ ನನ್ನ ಕೆರೆ ಉಳಿಸಿ ಬೆಳೆಸಬೇಕೆಂಬ ಆಶಯಗಳನ್ನು ಎತ್ತಿಹಿಡಿದ ನೀಚಡಿ ಗ್ರಾಮಸ್ಥರೆಲ್ಲರಿಗೂ ನಮ್ಮ ಅಭಿನಂದನೆಗಳು. ಎಲ್ಲಾ ಗ್ರಾಮಗಳಲ್ಲೂ ಪ್ರತಿ ವರ್ಷ ಒಂದು ದಿನ ಕೆರೆ ಹಬ್ಬ ಆಚರಿಸುವಂತಾಗಲಿ ಎಂದು ಆಶಿಸುತ್ತೇನೆ.