ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಜಾಯಿಕಾಯಿಯಲ್ಲಿಕಣ್ಣುಕಸಿ(ಬಡ್ಡಿಂಗ್)

ವಿಕ್ರಮ್ ಹೆಚ್. ಸಿ
೦೯೭೪೪೭೯೧೬೦೮
1

ಸಾಂಬಾರು ಬೆಳೆಯಲ್ಲಿ ಜಾಯಿಕಾಯಿಯನ್ನು ಮರಗಳಲ್ಲಿ ದೊರಕುವ ಬೆಳೆಯಾಗಿ ವಿಂಗಡಿಸಲಾಗಿದೆ. ಜಾಯಿಕಾಯಿ ಮರದ ಒಂದು ವಿಶೇಷತೆಯೆಂದರೆ, ಒಂದೇ ಮರದಲ್ಲಿ ಎರಡು ತರಹದ ಪರಿಮಳಯುಕ್ತ ಮಸಾಲ ಪದಾರ್ಥವನ್ನು ಕೊಡುತ್ತದೆ. ಒಣಗಿಸಿರುವ ಬೀಜವನ್ನು (ಜಾಯಿಕಾಯಿ) ಮತ್ತು ಜಾಪತ್ರೆಯನ್ನು ಅಡುಗೆಯಲ್ಲಿ ಮಸಾಲ ವಸ್ತುವಾಗಿ ಹಾಗೂ ಸುವಾಸನೆ ಕೊಡುವ ವಸ್ತುವಾಗಿ ಉಪಯೋಗಿಸುತ್ತಾರೆ. ಜಾಯಿಕಾಯಿ ಬೆಳೆಯನ್ನು ರಾಜ್ಯದ ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಅಡಿಕೆ ಮತ್ತು ತೆಂಗುಗಳ ನಡುವೆ ಮಿಶ್ರ ಬೆಳೆಯಾಗಿ ಬೆಳೆಸುತ್ತಾರೆ. ಜಾಯಿಕಾಯಿಯಲ್ಲಿ ಸಸ್ಯಾಭಿವೃದ್ಧಿಯನ್ನು ಎರಡು ವಿಧಾನದಲ್ಲಿ ಮಾಡುತ್ತಾರೆ, ಅವುಗಳೆಂದರೆ, ಬೀಜದಿಂದ ಹಾಗೂ ಕಸಿವಿಧಾನದಿಂದ. ಬೀಜಗಳನ್ನು ಸಸ್ಯಾಭಿವೃದ್ಧಿಗೆ ಉಪಯೋಗಿಸು ವುದರಿಂದ ಹುಟ್ಟಿದ ಗಿಡವನ್ನು ಗಂಡು ಮತ್ತು ಹೆಣ್ಣು ಗಿಡವೆಂದು ಗುರುತಿಸಲು ಮೊದಲ ಹಂತದಲ್ಲಿ ಸಾಧ್ಯವಿಲ್ಲ. ಈ ಅನಾನುಕೂಲವನ್ನು ತಪ್ಪಿಸಲು, ಇತ್ತೀಚಿನ ದಿನಗಳಲ್ಲಿ ಕಸಿ ವಿಧಾನವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಹಲವು ಸಸ್ಯಾಭಿವೃದ್ಧಿ ವಿಧಾನದಲ್ಲಿ, ಬಹುಮುಖ್ಯವಾಗಿ ಜಾಯಿಕಾಯಿಯಲ್ಲಿ ವಾಣಿಜ್ಯವಾಗಿ ಕಣ್ಣು ಕಸಿ (ಬಡ್ಡಿಂಗ್) ಯನ್ನು ಮಾತ್ರ ಬಳಸುತ್ತಾರೆ, ಯಾಕೆಂದರೆ ಇದರಿಂದ ಹೆಚ್ಚಿನ ಯಶಸ್ಸು ಸಿಗುತ್ತದೆ. ಜಾಯಿಕಾಯಿಯ ಕಣ್ಣು ಕಸಿಯಲ್ಲಿ ಎರಡು ವಿಧಾನಗಳಿವೆ. ೧. ಹಸಿರು ಕಣ್ಣುಕಸಿ, ೨. ಕಂದು ಕಣ್ಣುಕಸಿ. ಈ ಎರಡು ವಿಧಾನಗಳು ಕೇವಲ ವಯಸ್ಸಿನ ವ್ಯತ್ಯಾಸ ಹೊಂದಿರುತ್ತದೆ. ಕಣ್ಣು ಕಸಿಯಲ್ಲಿ ಎರಡು ಹಂತಗಳು ಮುಖ್ಯವಾಗಿ, ಒಂದನೇಯದಾಗಿ ರೂಟ್ ಸ್ಟಾಕ್ ತಯಾರಿಸುವುದು ಮತ್ತು ಆಯ್ದ ಮರಗಳಿಂದ ಸಯಾನ್ ಕೊಂಬುಗಳನ್ನು ಪಡೆಯುವುದು

3

1. ಹಸಿರು ಕಣ್ಣು ಕಸಿ: ರೂಟ್ ಸ್ಟಾಕ್ಗಳನ್ನು ತಯಾರಿ ಮಾಡುವುದು: ರೂಟ್ ಸ್ಟಾಕ್ಗಳನ್ನು ಜಾಯಿಕಾಯಿಯ ಬೀಜದಿಂದ ಬೆಳೆಸುತ್ತಾರೆ. ಇದರಿಂದ ಬಲವಾದ ಮತ್ತು ಆಳವಾದ ಬೇರು ಹೊಂದಿರುವ ರೂಟ್ ಸ್ಟಾಕ್ಗಳನ್ನು ಪಡೆಯಲು ಸಾಧ್ಯ. ಜಾಯಿಕಾಯಿಯಲ್ಲಿ ತೇಪೆ ಪದ್ದತಿಯ (ಪ್ಯಾಚ್ ಬಡ್ಡಿಂಗ್) ವಿಧಾನದಲ್ಲಿ ಕಣ್ಣು ಕಸಿಯನ್ನು ಹೆಚ್ಚಾಗಿ ಅನುಸರಿಸುತ್ತಾರೆ. ಸುಮಾರು ೬ ರಿಂದ ೮ ತಿಂಗಳ ಬೇರು ಸಸ್ಯದಲ್ಲಿ ೨.೫ ಸೆಂ. ಮೀ. (೧ ೧/೪ ಇಂಚು) ಉದ್ದ ಹಾಗೂ ೨.೦ ಸೆಂ. ಮೀ. (೧ ಇಂಚು) ಅಗಲ ಆಯತಾಕಾರದಲ್ಲಿ ಕಚ್ಚು ಕೊಟ್ಟು, ಚಾಕುವಿನ ತುದಿಯಿಂದ ತೊಗಟೆಯನ್ನು ಬಿಡಿಸಬೇಕು. ಕಸಿ ಕಣ್ಣು ಆಯ್ಕೆ:. ಮರಗಳ ವಯಸ್ಸು ಸುಮಾರು ೧೫ ರಿಂದ ೨೦ ರ ಮೇಲ್ಪಟ್ಟಿರಬೇಕು, ರೋಗ ಮತ್ತು ಕೀಟ ಭಾದೆಗಳಿಂದ ಮುಕ್ತ ಹಾಗೂ ಅಧಿಕ ಇಳುವರಿ ಕೊಡುವ ಆಯ್ದ ಮರಗಳಿಂದ ಕಸಿಕಣ್ಣನ್ನು ಆರಿಸಿಕೊಳ್ಳಬೇಕು. ಜಾಯಿಕಾಯಿ ಮರದ ಕಾಂಡ ಮತ್ತು ರೆಂಬೆಗಳಲ್ಲಿ ಮೂಡುವ, ೧ ರಿಂದ ೨ ತಿಂಗಳ ವಯಸ್ಸಿನ ಹಸಿರು ಬಣ್ಣದ, ನೇರವಾಗಿ ಬೆಳೆಯುವ ಕೊಂಬು/ಟೊಂಗೆಗಳಿಂದ, ಸೂಕ್ತ ಉದ್ದಗಲದ ಕಸಿಕಣ್ಣನ್ನು ತೊಗಟೆಯೊಂದಿಗೆ ತೆಗೆದು ಬೇರು ಸಸ್ಯದಲ್ಲಿನ ಆಯತಾಕಾರವಾಗಿ ತೊಗಟೆಯನ್ನು ತೆಗೆದ ಜಾಗದಲ್ಲಿಟ್ಟು ಪ್ಲಾಸ್ಟಿಕ್ ಪಟ್ಟಿಯಿಂದ ಬಿಗಿದು ಕಟ್ಟಬೇಕು (ಚಿತ್ರ). ಸುಮಾರು ಎರಡು ತಿಂಗಳಿನಲ್ಲಿ ಬೇರು ಸಸ್ಯದೊಂದಿಗೆ ಕಸಿಕಣ್ಣು ಬೆಸೆದುಕೊಳ್ಳುತ್ತದೆ, ನಂತರ ಬೇರು ಸಸ್ಯದ ತಲೆಭಾಗವನ್ನು ಹಸಿರು ಗಂಟಿನಿಂದ ೫ ಸೆಂ. ಮೀ. ಮೇಲ್ಪಟ್ಟು ಕತ್ತರಿಸಿ ತೆಗೆಯಬೇಕು. ಈ ರೀತಿಯಾಗಿ ಹಸಿರು ಕಣ್ಣು ಕಸಿ ಕಟ್ಟಿದ ಗಿಡವನ್ನು ೮ ರಿಂದ ೧೨ ತಿಂಗಳ ನಂತರ ನರ್ಸರಿಯಿಂದ ಮುಖ್ಯ ಕ್ಷೇತ್ರದಲ್ಲಿ ನಾಟಿ ಮಾಡಬಹುದು. ಈ ರೀತಿಯಾಗಿ ಹಸಿರು ಕಣ್ಣು ಕಸಿ ಕಟ್ಟಲು ಜಾಯಿಕಾಯಿಯಲ್ಲಿ ವಿವಿಧ ಜಾತಿಗೆ ಸೇರಿದ ಬೇರು ಸಸ್ಯಗಳನ್ನು ಉಪಯೋಗಿಸಲಾಗುತ್ತದೆ. ಅವುಗಳೆಂದರೆ, ಮಿರಿಸ್ಸಿಕ ಫ್ರಾಗ್ರನ್ಸ್ (ಸಾಮಾನ್ಯ ಜಾಯಿಕಾಯಿ) ಅನ್ನು ಉಪಯೋಗಿಸುವುದರಿಂದ ಹೆಚ್ಚು ಯಶಸ್ಸನ್ನು ಪಡೆಯಬಹುದು ಹಾಗೂ ಹಸಿರು ಕಣ್ಣುಕಸಿಯನ್ನು ಮಳೆಗಾಲ ಮತ್ತು ಚಳಿಗಾಲದಲ್ಲಿ ಮಾಡುವುದರಿಂದ ಪರಿಣಾಮಕಾರಿಯಾದ ಯಶಸ್ಸು ದೊರೆಯುತ್ತದೆ.೨. ಕಂದು ಕಣ್ಣುಕಸಿ: ಕಂದು ಕಣ್ಣುಕಸಿಯನ್ನು ಸಹ, ಹಸಿರು ಕಣ್ಣುಕಸಿಯ ವಿಧಾನದಲ್ಲೆ ಮಾಡಲಾಗುತ್ತದೆ. ಆದರೆ ಕಂದು ಕಸಿಯಲ್ಲಿನ ವ್ಯತ್ಯಾಸವೆಂದರೆ, ರೂಟ್ ಸ್ಟಾಕ್ ಮತ್ತು ಸಯಾನ್ನ ವಯಸ್ಸು ಅಧಿಕವಾಗಿರುತ್ತದೆ. ಒಂದು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟು ವಯಸ್ಸಾಗಿರುವ ರೂಟ್ ಸ್ಟಾಕ್ ಅನ್ನು ಕಂದು ಕಣ್ಣುಕಸಿ ಮಾಡಲು ಬಳಸಲಾಗುತ್ತದೆ. ಸಯಾನ್ ಅನ್ನು ಮೂರು ವರ್ಷ ವಯಸ್ಸಿನ ಕೊಂಬುಗಳಿಂದ ಪಡೆಯಲಾಗುತ್ತದೆ. ಸಾಮಾನ್ಯವಾಗಿ ಬೇರು ಸಸ್ಯದೊಂದಿಗೆ ಕಂದು ಕಣ್ಣುಕಸಿಯು ಬೆಸೆದುಕೊಳ್ಳಲು ಸುಮಾರು ೩ ತಿಂಗಳುಗಳ ಕಾಲ ಬೇಕಾಗುತ್ತದೆ. ಕಂದು ಕಣ್ಣುಕಸಿಯು ಮುಖ್ಯ ಕ್ಷೇತ್ರದಲ್ಲಿ ನಾಟಿ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಹಸಿರು ಕಣ್ಣುಕಸಿಗೆ ಹೋಲಿಸಿದರೆ ಕಂದು ಕಣ್ಣುಕಸಿ ವಿಧಾನವು ಅತಿ ಕಡಿಮೆ ಯಶಸ್ಸನ್ನು ನೀಡುತ್ತದೆ. ಕಸಿ ಗಿಡಗಳ ಆರೈಕೆ: ಕಸಿ ಗಿಡಗಳನ್ನುತಯಾರಿಸಲು ಮುಖ್ಯವಾದದ್ದು ಅವುಗಳ ಆರೈಕೆ. ಈ ಕೆಳಗಿನ ಆರೈಕೆ ವಿಧಾನಗಳನ್ನು ಅನುಸರಿಸುವುದರಿಂದ ಉತ್ತಮ ಕಸಿ ಗಿಡವನ್ನು ಪಡೆಯಬಹುದು.

5

೧. ಕಸಿಕಣ್ಣು ರೂಟ್ ಸ್ಟಾಕ್ ನೊಂದಿಗೆ ಬೆಸೆದುಕೊಂಡ ನಂತರ ಕಸಿಗಂಟಿನ ಮೇಲೆ ಕಟ್ಟಿರುವ ಪ್ಲಾಸ್ಟಿಕ್ ಕಟ್ಟನ್ನು ಬಿಚ್ಚಬೇಕು. ೨. ಕಸಿಗಂಟಿನ ಕೆಳಗೆ ರೂಟ್ ಸ್ಟಾಕ್ನಲ್ಲಿ ಅನೇಕ ಚಿಗುರುಗಳು ಬೆಳೆಯುತ್ತದೆ, ಅವುಗಳನ್ನು ಕಾಲಕಾಲಕ್ಕೆ ಚಿವುಟಿ ಹಾಕಬೇಕು. ೩. ಕಸಿಗಿಡಗಳಿಗೆ ಸರಿಯಾದ ಸಮಯ ಮತ್ತು ಪ್ರಮಾಣದಲ್ಲಿ ನೀರು ಕೊಡಬೇಕು ಮತ್ತು ನೀರನ್ನು ಕಸಿಮಾಡಿದ ಭಾಗದ ಮೇಲೆ ಬೀಳದಂತೆ ನೋಡಿಕೊಳ್ಳಬೇಕು. ೪. ಕಸಿಗಿಡಗಳ ಶೀಘ್ರ ಬೆಳವಣಿಗೆಗೆ ಸಹಕರಿಸುವಂತೆ ಅಗತ್ಯ ಪೋಷಕಾಂಶಗಳನ್ನು ಒದಗಿಸಬೇಕು. ಕಾಲಕಾಲಕ್ಕೆ ಗೊಬ್ಬರ ಮತ್ತು ಮಣ್ಣಿನ ಮಿಶ್ರಣವನ್ನು ಕೊಡಬೇಕು ಅಥವಾ ರಾಸಾಯನಿಕ ಗೊಬ್ಬರವನ್ನು (ಶೇ. ೨ ರಂತೆ) ನೀರಿನಲ್ಲಿ ಕರಗಿಸಿ ಸಿಂಪರಿಸಬಹುದು. ೫. ಕಸಿಗಿಡಗಳು ತುಂಬಾ ಸೂಕ್ಷ್ಮ ವಾಗಿರುವುದರಿಂದ ಅವುಗಳನ್ನು ಸಾಮಾನ್ಯವಾಗಿ ನೆರಳಿನ ಜಾಗದಲ್ಲಿಟ್ಟು ಪೋಷಿಸಬೇಕು.

7