ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಬೆಳೆ ವೈವಿಧ್ಯತೆ ನೀಡಿತು ಕೃಷಿಗೆ ಸ್ಥಿರತೆ

ಪ್ರದೀಪ ಬಿರಾದರ್
೯೭೪೩೦೬೪೪೦೫
1

ಮಳೆ ಬರಲಿ ಬಿಡಲಿ, ನೋಡಿದಲ್ಲೆಲ್ಲಾ ಬರಿ ಮುಸುಕಿನ ಜೋಳ ಇಂದು ಮುಂಗಾರಿ ಜೋಳವನ್ನು ಕೂಡ ಮರೆಸಿದೆ. ಸರಳ ಬಿತ್ತನೆ, ಕಡಿಮೆ ರೋಗಗಳ ಬಾಧೆ, ಕೇವಲ ರಾಸಾಯನಿಕ ಗೊಬ್ಬರಗಳ ಬಳಕೆ ಮಾತ್ರದಿಂದಲೆ ಎಕರೆಗೆ ೨೦-೨೫ ಕ್ವಿಂಟಾಲ್ ಮೆಕ್ಕೆಜೋಳ ಉತ್ಪಾದನೆ. ಇದು ಬಹುತೇಕ ಭಾಗಗಳಲ್ಲಿನ ಸಾಮಾನ್ಯ ದೃಶ್ಯ. ಕೊಪ್ಪಳದ ತರಬೇತಿಯೊಂದರಲ್ಲಿ ರೈತರೊಬ್ಬರು ಕಳೆದ ವರ್ಷ ತಾವು ಎಕರೆಗೆ ೩೩ ಕ್ವಿಂಟಲ್ವರೆಗೆ ಉತ್ಪಾದನೆ ಮಾಡಿರುವೆನೆಂದು. ಇಷ್ಟಾಗಿಯೂ, ಎಷ್ಟು ದಿನ ಈ ಉತ್ಪಾದನೆ ಸಾಧ್ಯ? ಭೂಮಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೀರುವುದರಿಂದ ಸತತವಾಗಿ ಬೆಳೆ ಬೆಳೆದಾಗ ಭೂಮಿಯು ಬರಡಾಗಲಾರದೆ? ಈ ಬಾರಿಯಂತೂ ಸೊರಗು ರೋಗ ಹೆಚ್ಚಿನ ಪ್ರಮಾಣದಲ್ಲಿ ಗೋಚರಿಸಿದೆ. ಸರ್ಕಾರ ಕೂಡ ಬೆಳೆ ಉತ್ಪಾದನೆಯನ್ನು ನಿಭಾಯಿಸಲಾಗದ್ದಕ್ಕೆ ಬೆಳೆಗೆ ಉತ್ತೇಜನ ನೀಡುವುದನ್ನು ಬಿಟ್ಟಿದೆ. ಹೀಗಾದರೆ ರೈತರ ಆದಾಯದಲ್ಲಿ ಸ್ಥಿರತೆ ಎಲ್ಲಿಂದ ಬಂದೀತು? ಇದಕ್ಕೆ ವಿರುದ್ಧವಾಗಿ ಇನ್ನೊಂದು ಚಿತ್ರಣವು ಕೃಷಿಯಲ್ಲಿ ಕಂಡುಬರುತ್ತದೆ. ಬೆಳೆ ವೈವಿಧ್ಯತೆಯನ್ನು ಅಳವಡಿಸಿಕೊಂಡು, ಹವಾಮಾನ ಏರುಪೇರಿನಲ್ಲೂ, ಮಳೆಯ ಆಗುಹೋಗುವಿಕೆ ಯಲ್ಲಿಯೂ ಸ್ಥಿರ ಆದಾಯದ ಸಾಧ್ಯತೆ. ಕಳೆದ ವರ್ಷ ರಾಜ್ಯ ಮಟ್ಟದ ಕೃಷಿ ಪಂಡಿತ ಬೆಳಗಾವಿಯ ಶ್ರೀ ಮಹಾದೇವಪ್ಪ ಜೋಡಟ್ಟಿ, ಕೊಪ್ಪಳದ ಚಿಕ್ಕಸಿಂಧೋಗಿಯ ಇಂದ್ರಗೌಡ, ಬಸವರಾಜ ಬಂಡಾರಿ, ಬಸಪ್ಪಾ ವೆಂಕಲಕುಂಟ ಹೀಗೆ ಹಲವಾರು ಪ್ರಗತಿ ಪರ ರೈತರು ಒಂದೇ ಬೆಳೆಯ ಹಿಂದೆ ಬೀಳದೆ, ಬಹುತೆರನಾದ ಬೆಳೆಗಳನ್ನು ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಂಡು ಆದಾಯದಲ್ಲಿ ಸ್ಥಿರತೆಯನ್ನು ಸಾಧಿಸಿದ್ದಾರೆ ಮತ್ತು ಉತ್ಪಾದನೆಯನ್ನೂ ಕೂಡ ಹೆಚ್ಚಿಸುತ್ತಿದ್ದಾರೆ

ಇವರ ಕೃಷಿಯಲ್ಲಿ ತೋಟಗಾರಿಕೆ ಬೆಳೆಗಳ ಅದರಲ್ಲೂ ತರಕಾರಿ ಮತ್ತು ಹಣ್ಣು ಗಿಡಗಳ ಅಳವಡಿಕೆ ಎದ್ದು ಕಾಣುವ ಅಂಶ. ಕೆಲವರು ಹೂ ಬೇಸಾಯದಲ್ಲೂ ತೊಡಗಿಸಿಕೊಂಡಿದ್ದಾರೆ, ಮತ್ತೆ ಕೆಲವರು ಸ್ವಲ್ಪ ಪ್ರಮಾಣದಲ್ಲಿ ರೇಷ್ಮೆ ಸಂಗೋಪನೆಯನ್ನು ಮಾಡುತ್ತಿದ್ದಾರೆ. ಈ ವೈವಿಧ್ಯತೆ ಇಲ್ಲದಿದ್ದರೆ ಇವರಿಗೆ ಆದಾಯದಲ್ಲಿನ ಏರಿಕೆ ಮತ್ತು ಸ್ಥಿರತೆ ನಿಶ್ಚಯವಾಗಿಯೂ ಮರೀಚಿಕೆಯಾಗುತ್ತಿತ್ತು. ಗಮನ ನೀಡಬೇಕಾದ ಅಂಶ ಇಷ್ಟೇ, ಕೇವಲ ಆಹಾರ ಬೆಳೆಯಲ್ಲದೆ ಜೊತೆಗೆ ತೋಟಗಾರಿಕೆ ಬೆಳೆಯನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಾದುದು ಇಂದಿನ ಅವಶ್ಯಕತೆ ಮತ್ತು ಅನಿವಾರ್ಯತೆ ಕೂಡ. ನೇರಳೆ, ಬೆಟ್ಟದ ನೆಲ್ಲಿ, ಸೀತಾಫಲ, ಚಿಕ್ಕು, ಬಾರೆ, ಪೇರಲ, ಹುಣಸೆ ಇಂತಹ ಹಣ್ಣಿನ ಗಿಡಗಳನ್ನು ಬೆಳೆಸುವುದು ಒಣಬೇಸಾಯದಲ್ಲಿ ಕಷ್ಟವೇನಲ್ಲ. ಅಲ್ಲದೆ, ಇಂತಹ ಬೆಳೆಗಳಿಗೆ ಉತ್ತಮವಾದ ಜಮೀನು ಕೂಡ ಬೇಕಾಗಿಲ್ಲ. ಬಾರೆ ಹಣ್ಣು ಮರುಭೂಮಿಯಂತಹ ಪ್ರದೇಶದಲ್ಲಿ ಬೆಳೆಯುವ ಹಣ್ಣಾಗಿದೆ. ಸೀತಾಫಲ, ನೇರಳೆ, ಬಾರೆ, ಹುಣಸೆಯಂತಹ ಬೆಳೆಗಳಿಗೆ ಸರಿಯಾದ ಸಮಯಕ್ಕೆ ನೀರು ಸಿಗದಿದ್ದರೆ ಬೆಳೆ ಸುಪ್ತಾವಸ್ಥೆಗೆ ಹೋಗುತ್ತವೆ. ಆದರೆ ಮತ್ತೆ ಯಾವಾಗ ಅವಕ್ಕೆ ಸ್ವಲ್ಪ ಪ್ರಮಾಣದ ನೀರು ಸಿಕ್ಕ ತಕ್ಷಣದಲ್ಲಿ ಎಲೆ ಚಿಗುರೊಡೆದು ಹೂವಾಗಿ ಕಾಯಿಬಿಡುತ್ತದೆ. ಹಾಗೆ ಇಂತಹ ಬೆಳೆಗಳಿಗೆ ಕೀಟ ಮತ್ತು ರೋಗಗಳ ಬಾಧೆಯೂ ಸಹ ಕಡಿಮೆ ಮತ್ತು ಗೊಬ್ಬರದ ಬೇಡಿಕೆ ಪ್ರಮಾಣವು ಕಡಿಮೆ. ಇಂತಹ ಬೆಳೆಗಳು ಚೆನ್ನಾಗಿ ಫಲವನ್ನು ಕೊಡುತ್ತವೆ. ಮಳೆ ಆಶ್ರಯದಲ್ಲಿ ನುಗ್ಗೆ ಕಷ್ಟವೇನಲ್ಲ. ಜೊತೆಗೆ ಒಂದು-ಒಂದುವರೆ ಇಂಚು ನೀರಿನ ಸೌಲಭ್ಯವಿದ್ದರೆ ಬದನೆ, ಟೊಮಾಟೋ, ಈರುಳ್ಳಿ, ಮೆಣಸಿನಕಾಯಿ, ಬಳ್ಳಿ ಬೆಳೆಗಳಾದ ಹಾಗಲ, ಸೋರೆಕಾಯಿ, ಪಡವಲ, ಕುಂಬಳ ಇತ್ಯಾದಿ ಬೆಳೆಗಳ ಬೇಸಾಯವೂ ಕಷ್ಟವೇನಲ್ಲ. ಇನ್ನು ಕಾಲು ಅಥವಾ ಅರ್ಧ ಎಕರೆಯಲ್ಲಿ ತರಕಾರಿ ಬೆಳೆಗಳಾದ ಪಾಲಕ್, ಸಬ್ಬಸಗಿ, ಗಜ್ಜರಿ, ಮೆಂತೆ, ಮೂಲಂಗಿ, ರಾಜಗಿರಿ ಖರ್ಚಿಲ್ಲದ ತರಕಾರಿಗಳು. ಸಮೀಪದಲ್ಲೆ ನಗರ-ಪಟ್ಟಣಗಳಿದ್ದರೆ ತರಕಾರಿ ಉತ್ಪಾದನೆ ಇನ್ನೂ ಸಲೀಸು. ಆಸಕ್ತಿ ಇದ್ದವರು ಸ್ವಲ್ಪ ಪ್ರಮಾಣದಲ್ಲಿ ಮಾರುಕಟ್ಟೆಗಾಗಿ ಶೇಂಗಾ, ಹಸಿಕಡಲೆ, ಸ್ವೀಟ್ಕಾರ್ನ್, ಬೇಬಿಕಾರ್ನ್ ಇತ್ಯಾದಿಗಳನ್ನೂ ಪರಿಗಣಿಸಬಹುದು

ನೀರಿನ ಪ್ರಮಾಣ ಹೆಚ್ಚಿದ್ದರೆ ಬಾಳೆ, ದಾಳಿಂಬೆ, ದ್ರಾಕ್ಷಿ, ಪಪ್ಪಾಯ ಇತ್ಯಾದಿಗಳನ್ನು ಎಕರೆ ಗಾತ್ರದ ಪ್ರದೇಶಗಳಲ್ಲಿ ಪ್ರಯತ್ನಿಸಬಹುದು. ಹಂಗಾಮಿಗನುಗುಣವಾಗಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಈ ಹಂತದಲ್ಲಿ ಸರಕಾರದವರು ಅನುಮೋದಿಸುತ್ತಿರುವ ಬೇಳೆಕಾಳು, ಎಣ್ಣೆಕಾಳು ಮತ್ತು ಸಿರಿಧಾನ್ಯಗಳನ್ನು ಜೊತೆಜೊತೆಯಾಗಿ ಬೆಳೆದಲ್ಲಿ ಆದಾಯ, ಪರಿಸರದ ಸದ್ಭಳಕೆ ಮತ್ತು ತಮಗೂ, ಇತರರಿಗೂ ಪೌಷ್ಠಿಕ ಆಹಾರ ಉತ್ಪನ್ನಗಳ ಲಭ್ಯತೆ ಸಾಧ್ಯವಾದೀತು. ಕೊಪ್ಪಳದ ಮಂಜು ಇಂದರಗಿಯವರು ತಮ್ಮಲ್ಲಿರುವ ೩೮ ಗುಂಟೆ ಪ್ರದೇಶದಲ್ಲಿ ೮ ರಿಂದ ೧೦ ಬೆಳೆ ಬೆಳೆಯುವರು. ಇವರು ಸಭೆ ಸಂದರ್ಶನಗಳಿಗೆ ಸಮಯ ಕೇಳಿದರೆ, ಬಿಡುವಿಲ್ಲವೆಂದು ಉತ್ತರಿಸುವರು. ಇದು ಜಮೀನಿನ ಗಾತ್ರಕ್ಕಿಂತ, ಜಮೀನಿನಲ್ಲಿ ತಾನು ಎಷ್ಟು ಸಮಯ ತೊಡಗಿಸಿಕೊಂಡಿದ್ದೆ ಎಂಬುದರ ಮಹತ್ವವನ್ನು ಎತ್ತಿತೋರಿಸುತ್ತದೆ. ಕಾರಣ, ತೋಟಗಾರಿಕೆ ಆಧಾರಿತ ಬಹುಬೆಳೆ ಬೇಸಾಯ ಕೃಷಿಯಲ್ಲಿ ಸ್ಥಿರತೆಯನ್ನು ಮತ್ತು ಕೃಷಿಕನಿಗೆ ಉನ್ನತಿಯನ್ನು ಒದಗಿಸುವುದು.