ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಇಂಡಿಯ ನಿಂಬೆಗೆ ಡಿಮ್ಯಾಂಡ್ಯೊ...ಡಿಮ್ಯಾಂಡ್

ವಿಜಯಮಹಾಂತೇಶ
೮೨೭೭೦೫೯೩೯೨
1

ಲಿಂಬೆಯು ಆಮ್ಲಯುಕ್ತ ನಿಂಬೆ ಜಾತಿ ಹಣ್ಣುಗಳಲ್ಲಿ ಒಂದು ಪ್ರಮುಖ ಹಣ್ಣಾಗಿವೆ. ಈ ಗುಂಪಿನಲ್ಲಿಯ ಇತರೆ ಪ್ರಮುಖ ಹಣ್ಣುಗಳೆಂದರೆ ಮೊಸಂಬಿ ಮತ್ತು ಕಿತ್ತಳೆ ಹಣ್ಣುಗಳು. ಲಿಂಬೆ ಹಣ್ಣು ’ಸಿ’ ಜೀವಸತ್ವದ ಆಗರವಾಗಿದೆಯಲ್ಲದೆ, ಆಕರ್ಷಕ ಹಳದಿ ಬಣ್ಣ ಮತ್ತು ಆಕಾರವನ್ನು ಹೊಂದಿದ್ದು, ಬೇಸಿಗೆ ಕಾಲದಲ್ಲಿ ತಂಪು ಪಾನಿಯ ತಯಾರಿಸಲು ಉಪಯೋಗಿಸುತ್ತಾರೆ. ಅಲ್ಲದೇ, ಈ ಹಣ್ಣನ್ನು ಉಪ್ಪಿನಕಾಯಿ ತಯಾರಿಸಲು, ಔಷಧಿ ತಯಾರಿಸಲು ಮತ್ತು ಸೌಂದರ್ಯವರ್ಧಕಗಳ ವಸ್ತುಗಳ ತಯಾರಿಕೆಯಲ್ಲಿಯೂ ಕೂಡ ಉಪಯೋಗಿಸುತ್ತಾರೆ. ಭಾರತ ಈ ಹಣ್ಣಿನ ತವರಾಗಿದ್ದು, ಲಿಂಬೆ ಹಣ್ಣಿನ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಮುಖ್ಯವಾಗಿ ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಉತ್ತರಖಂಡ, ಬಿಹಾರ, ಅಸ್ಸಾಂ ಮತ್ತು ಮಧ್ಯಪ್ರದೇಶಗಳಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತದೆ. ಅದರಲ್ಲೂ ಕರ್ನಾಟಕದ ವಿಜಯಪುರ ಜಿಲ್ಲೆಯ ಇಂಡಿ ಮತ್ತು ಸಿಂದಗಿ ತಾಲೂಕಿನಲ್ಲಿ ಬೆಳೆಯುವ ಲಿಂಬೆಗೆ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಇಲ್ಲಿನ ಹವಾಗುಣಕ್ಕೆ ಬರುವ ಲಿಂಬೆಯ ಗುಣಮಟ್ಟ ಉತ್ತಮವಾಗಿದ್ದು. ಇಲ್ಲಿನ ಲಿಂಬೆಯನ್ನು ಉಪ್ಪಿನಕಾಯಿ ತಯಾರಿಸಲು ಮತ್ತು ತಂಪು ಪಾನಿಯಗಳನ್ನು ತಯಾರಿಸಲು ಹೆಚ್ಚು ಉಪಯೋಗಿಸುತ್ತಾರೆ. ಇಂಡಿಯು ವಿಜಯಪುರದಲ್ಲಿಯ ಒಂದು ಒಣ ಹವಾ ಪ್ರದೇಶವಾಗಿದ್ದು, ಲಿಂಬೆ ಬೆಳೆಗೆ ಮೊದಲಿನಿಂದಲೂ ಹೆಸರುವಾಸಿಯಾಗಿದೆ. ಈ ಇಂಡಿಯ ಹಾಗೂ ಸುತ್ತಮುತ್ತಲಿನ ಪ್ರದೇಶದ ತುಂಬೆಲ್ಲಾ ಬೆಳೆಯುವ ಲಿಂಬೆಯು ಇಂಡಿಯಾದ (ಭಾರತ) ತುಂಬೆಲ್ಲಾ ಹೆಸರು ಮಾಡುತ್ತಿದೆ. ಈ ಭಾಗದಲ್ಲಿ ಬೆಳೆದ ಲಿಂಬೆ ಹಣ್ಣುಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ರಸಭರಿತ ಉತ್ತಮ ಉತ್ಕೃಷ್ಠವಾದ ಗುಣಮಟ್ಟವನ್ನು ಹೊಂದಿವೆ. ಲಿಂಬೆಯು ಬೇಸಿಗೆಕಾಲದಲ್ಲಿ ಅತೀ ಹೆಚ್ಚು ಬೇಡಿಕೆ ಹೊಂದಿದ್ದು, ಬೆಲೆಯು ಗಗನಕ್ಕೇರಿದ ನಿದರ್ಶನಗಳುಂಟು. ಲಿಂಬೆಯು ಆರೋಗ್ಯ ದೃಷ್ಠಿಯಿಂದಲೂ ಅತೀ ಪ್ರಾಮುಖ್ಯತೆಯನ್ನು ಪಡೆದ ಹಣ್ಣಾಗಿದೆ. ಈ ಹಣ್ಣು ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಕೂಡ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.

ಲಿಂಬೆಯ ವಿವಿಧ ತಳಿಗಳು: ೧. ಕಾಗಜಿ ಲಿಂಬೆ: ಈ ತಳಿಯ ಹಣ್ಣುಗಳು ದುಂಡಾಗಿದ್ದು ಹಣ್ಣಿನ ಸಿಪ್ಪೆ ತೆಳುವಾಗಿರುತ್ತದೆಯಲ್ಲದೇ, ಹಣ್ಣಿಗೆ ಗಟ್ಟಿಯಾಗಿ ಅಂಟಿಕೊಂಡಿರುತ್ತದೆ. ಪ್ರತಿ ಹಣ್ಣಿನಲ್ಲಿ ೧೦-೧೨ ಭಾಗಗಳಿರುತ್ತದೆ. ಹಣ್ಣಿನ ರಸ ಹುಳಿಯಾಗಿದ್ದು ವಿಶಿಷ್ಟ ಸುವಾಸನೆ ಹೊಂದಿರುತ್ತದೆ. ೨. ಚಕ್ರವಾರ: ಇದು ಕಾಗಜಿ ಲಿಂಬೆ ತಳಿಯ ಆಯ್ಕೆ, ಈ ತಳಿಯ ಗಿಡದಲ್ಲಿ ಮುಳ್ಳುಗಳು ಮತ್ತು ಹಣ್ಣಿನಲ್ಲಿ ಬೀಜಗಳಿರುವುದಿಲ್ಲ. ವಿಟಮಿನ್ ’ಸಿ’ ಅಂಶ ಪ್ರತಿ ೧೦೦ ಗ್ರಾಂ ಹಣ್ಣಿನಲ್ಲಿ ೧೧೮.೨ ರಿಂದ ೧೪೦.೮ ಮಿ.ಗ್ರಾಂನಷ್ಟಿದ್ದು ಹುಳಿಯ ಅಂಶ ಶೇ. ೮.೦೮ ರಿಂದ ೯.೦೮ ರಷ್ಟಿರುತ್ತದೆ. ೩. ಜಯದೇವಿ: ಈ ತಳಿಯನ್ನು ತಮಿಳುನಾಡಿನ ಪೆರಿಯಾಕುಲಮ್ನಿಂದ ಆಯ್ಕೆ ಮಾಡಲಾಗಿದ್ದು. ಉತ್ತಮ ಗುಣಮಟ್ಟದ ರಸ ಮತ್ತು ಹೆಚ್ಚಿನ ಇಳುವರಿ (೧೫೦೦ ಹಣ್ಣು/ಗಿಡಕ್ಕೆ) ನೀಡುತ್ತದೆ. ಹಣ್ಣುಗಳು ತತ್ತಿಯಾಕಾರದಲ್ಲಿದ್ದು, ಹಣ್ಣಿನ ಸಿಪ್ಪೆ ತೆಳುವಾಗಿರುತ್ತದೆ. ಬಣ್ಣ ಆಕರ್ಷಕ ಹಳದಿಯಾಗಿದ್ದು, ಎಲೆ ಸುರಂಗ ಹುಳು ಮತ್ತು ನಿಂಬೆ ಪತಂಗಕ್ಕೆ ಸಹಿಷ್ಣುತೆ ಹೊಂದಿದೆ. ೪. ಪ್ರಮಾಲಿನಿ: ಈ ತಳಿಯು ಹೆಚ್ಚಿನ ಇಳುವರಿ ನೀಡುವುದಲ್ಲದೇ ಲಿಂಬೆಯ ಕಜ್ಜಿರೋಗಕ್ಕೆ ಸಹಿಷ್ಣುತೆಯನ್ನು ಹೊಂದಿದೆ. ಈ ತಳಿಯು ಗಿಡಗಳಲ್ಲಿ ೩ರಿಂದ ೭ ಹಣ್ಣುಗಳ ಗೊಂಚಲಿನಲ್ಲಿ ಹಣ್ಣು ಬಿಡುತ್ತವೆ ಮತ್ತು ಹಣ್ಣಿನಲ್ಲಿ ರಸ ಕೂಡ ಹೆಚ್ಚಾಗಿರುತ್ತದೆ. ೫. ಸಾಯಿ ಶರಬತಿ: ಇದು ಕೂಡ ಕಾಗಜಿ ಲಿಂಬೆಯ ಆಯ್ಕೆಯಾಗಿದ್ದು, ಹೆಚ್ಚಿನ ಇಳುವರಿ ನೀಡುವ ತಳಿಯಾಗಿದೆ. ಈ ತಳಿಯು ಕೂಡ ಲಿಂಬೆಯ ಕಜ್ಜಿರೋಗಕ್ಕೆ ಸಹಿಷ್ಣುತೆ ಹೊಂದಿದೆ. ಸರಾಸರಿ ಇಳುವರಿ ಪ್ರತಿ ಗಿಡಕ್ಕೆ ೧೨೦೦ ಹಣ್ಣುಗಳಷ್ಟಿದೆ. ೬. ಫುಲೆ ಶರಬತಿ: ಇದು ಕೂಡಾ ಕಾಗಜಿ ಲಿಂಬೆಯಿಂದ ಆಯ್ಕೆ ಮಾಡಿದ ತಳಿಯಾಗಿದ್ದು. ಸಾಯಿ ಶರಬತಿ ತಳಿಗಿಂತ ಶೇ. ೧೫ ರಷ್ಟು ಹೆಚ್ಚಿನ ಇಳುವರಿ ನೀಡುತ್ತದೆ. ಅಲ್ಲದೇ ಲಿಂಬೆಯ ಕಜ್ಜಿ ರೋಗಕ್ಕೆ ಸಹಿಷ್ಣುತೆ ಹೊಂದಿವೆ. ೭. ವಿಕ್ರಮ್ : ಇದು ಕೂಡ ಕಾಗಜಿ ಲಿಂಬೆಯ ಆಯ್ಕೆಯಾಗಿದ್ದು, ೫ ರಿಂದ ೧೦ ಹಣ್ಣುಗಳುಳ್ಳ ಗೊಂಚಲಿನಲ್ಲಿ ಹಣ್ಣು ಬಿಡುತ್ತದೆ. ಇದು ಕಾಗಜಿ ಲಿಂಬೆಗಿಂತ ಶೇ. ೩೦-೩೨ರಷ್ಟು ಹೆಚ್ಚು ಇಳುವರಿ ನೀಡುತ್ತದೆ. ೮. ಬಾಲಾಜಿ: ಇದು ಆಂಧ್ರಪ್ರದೇಶ ತೋಟಗಾರಿಕೆ ವಿಶ್ವವಿದ್ಯಾಲಯದ ಒಂದು ಸಂಶೋಧನಾ ಕೇಂದ್ರದಿಂದ ಬಿಡುಗಡೆಯಾದ ತಳಿ. ಇದು ತೆನಾಲಿ ತಳಿಯ ಆಯ್ಕೆಯಾಗಿದ್ದು, ಹಣ್ಣುಗಳ ಗಾತ್ರ ಮಧ್ಯಮವಾಗಿದ್ದು, ಆಕರ್ಷಕ ಬಣ್ಣ ಹೊಂದಿದ್ದು. ಕಜ್ಜಿ ರೋಗಕ್ಕೆ ಪ್ರತಿ ನಿರೋಧಕ ಶಕ್ತಿಯನ್ನು ಹೊಂದಿದೆ.

ಸಸ್ಯಾಭಿವೃದ್ಧಿ: ಲಿಂಬೆಯಲ್ಲಿ ಸಾಮಾನ್ಯವಾಗಿ ಬೀಜಗಳನ್ನು ಉಪಯೋಗಿಸಿ ಸಸಿಗಳನ್ನು ತಯಾರಿಸಲಾಗುತ್ತದೆ. ಇದೊಂದು ಸರಳವಾದ ಮತ್ತು ಕಡಿಮೆ ಖರ್ಚಿನ ಸಸ್ಯಾಭಿವೃದ್ಧಿಯ ವಿಧಾನವಾಗಿದೆ. ಬೀಜಗಳಿಗಾಗಿ ಆರಿಸಿಕೊಳ್ಳುವ ಹಣ್ಣುಗಳು ರೋಗಮುಕ್ತ ಗಿಡಗಳಿಂದಾಗಿರಬೇಕು, ಏಕೆಂದರೆ, ಇಳುವರಿ ಹಣ್ಣಿನ ಗುಣಮಟ್ಟ ಹಾಗೂ ಸಸಿಗಳ ಆರೋಗ್ಯ ಇದರ ಮೇಲೆ ಅವಲಂಬಿತವಾಗಿರುತ್ತದೆ. ರೋಗದ ಬಾಧೆಗೆ ಒಳಗಾಗಿ ಉದುರಿದ ಹಣ್ಣುಗಳು ಕೊಳೆರೋಗಕ್ಕೆ ಒಳಗಾಗಿರುವ ಸಾಧ್ಯತೆ ಇರುತ್ತದೆ. ಉತ್ತಮ ಗುಣಮಟ್ಟದ ಚೆನ್ನಾಗಿ ಮಾಗಿದ ಹಣ್ಣುಗಳನ್ನು ಬೀಜಕ್ಕಾಗಿ ಉಪಯೋಗಿಸಬೇಕು. ಚಾಕುವಿನಿಂದ ಹಣ್ಣಿನ ಮಧ್ಯ ಭಾಗದಲ್ಲಿ ಕತ್ತರಿಸಿ ಎರಡೂ ಹೋಳುಗಳನ್ನು ತಿರುಗಿಸಿ ಬೀಜಗಳನ್ನು ಬೆರ್ಪಡಿಸಬೇಕು. ನಂತರ ಹಣ್ಣಿನ ತಿರುಳನ್ನು ನೀರಿನಲ್ಲಿ ತೊಳೆದು ನೆರಳಿನಲ್ಲಿ ಒಣಗಿಸಬೇಕು. ಒಣಗಿದ ಬೀಜಗಳನ್ನು ಆದಷ್ಟು ಬೇಗನೆ ಕಾರ್ಬನ್ಡೈಜಿಮ ಶಿಲೀಂದ್ರನಾಶಕದೊಂದಿಗೆ ಉಪಚರಿಸಿ ಏರು ಸಸಿಮಡಿಗಳಲ್ಲಿ ಉಪಯೋಗ. ಬಿತ್ತನೆಗಾಗಿ ೮ ಮೀ. ಉದ್ದ ೧ ಮೀ. ಅಗಲ ಮತ್ತು ೧೦ ಸೆಂ.ಮೀ. ಎತ್ತರದ ಏರು ಸಸಿಮಡಿಗಳನ್ನು ಸಿದ್ದಪಡಿಸಿ ಪ್ರತಿ ಮಡಿಗೆ ಆರು ಬುಟ್ಟಿಗಳಷ್ಟು ಕಾಂಪೋಸ್ಟನ್ನು ಮಣ್ಣಿನಲ್ಲಿ ಚೆನ್ನಾಗಿ ಬೆರೆಸಬೇಕು. ಈ ಸಸಿ ಮಡಿಗಳ ಮೇಲೆ ೨ ಸೆಂ.ಮೀ. ದಪ್ಪವಾಗಿ ಮರಳನ್ನು ಹರಡಬೇಕು ನಂತರ ಬೀಜಗಳನ್ನು ೧೦ ಸೆಂ.ಮೀ. ಅಂತರದ ಸಾಲುಗಳಲ್ಲಿ ೫ ಸೆಂ.ಮೀ. ಹಂತಕ್ಕೆ ಬಂದಾಗ, ಅವುಗಳನ್ನು ಎರಡನೇ ಸಸಿ ಮಡಿಗೆ ವರ್ಗಾಯಿಸಿ ೬೦ ಸೆಂ.ಮೀ. ಅಂತರದ ಸಾಲುಗಳಲ್ಲಿ ೨೨ ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ನಾಟಿ ಮಾಡುವ ಮೊದಲು ಅಶಕ್ತ ಗಿಡಗಳಿದ್ದಲ್ಲಿ ಅವುಗಳನ್ನು ತೆಗೆದು ಹಾಕಬೇಕು. ಈ ಲಿಂಬೆಯ ಹಣ್ಣುಗಳು ವರ್ಷ ಪೂರ್ತಿ ಬೆಳೆಯುತ್ತಿದ್ದು ಸಕಾಲದಲ್ಲಿ ಸಾಗಾಣಿಕೆ ಮಾಡಿ ಮಾರಾಟ ಮಾಡದಿದ್ದರೆ ಬಹಳ ಬೇಗನೆ ಕೊಳೆತು ಹಾಳಾಗುತ್ತವೆ. ಅಲ್ಲಿನ ರೈತರಿಗೆ ಸೂಕ್ತ ಬೆಲೆ ಕೂಡ ಸಿಗುವುದಿಲ್ಲ. ಹಣ್ಣುಗಳಿಂದ ಹಲವು ತರಹದ ಪದಾರ್ಥಗಳನ್ನು ತಯಾರಿಸುವುದರಿಂದ ಸಂಸ್ಕರಣೆಯ ಕಾರ್ಖಾನೆಗಳಲ್ಲಿ ಈ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದ್ದು ರಫ್ತು ಮಾಡಿ ದೇಶ ವಿದೇಶ ಮಾರುಕಟ್ಟೆಯಲ್ಲಿ ಸಾಕಷ್ಟು ಲಾಭ ಗಳಿಸುವ ರೈತರು ಕೂಡ ಈ ಭಾಗದಲ್ಲಿದ್ದಾರೆ. ಲಿಂಬೆಯ ಸಂಸ್ಕರಣೆಯ ಪದಾರ್ಥಗಳಲ್ಲಿ ಲಿಂಬೆಯ ಉಪ್ಪಿನಕಾಯಿ ಅತೀ ಪ್ರಮುಖವಾಗಿದ್ದು ದಿನನಿತ್ಯದ ಊಟದಲ್ಲಿ ಬಳಸುವಂತದ್ದಾಗಿದೆ. ಈ ಭಾಗದಲ್ಲಿ ಬೆಳೆಯುವಂತಹ ಲಿಂಬೆ ಹಣ್ಣು ಗಾತ್ರದಲ್ಲಿ ಮಧ್ಯಮ ಗಾತ್ರದಿಂದ ದೊಡ್ಡದಾಗಿದ್ದು, ಇಲ್ಲಿನ ಹವಾಗುಣದ ಅನುಕೂಲದಿಂದ ಹೆಚ್ಚು ರಸಭರಿತವಾಗಿದ್ದು ವಿಶೇಷ ರುಚಿಯನ್ನು ಹೊಂದಿರುತ್ತದೆ. ಲಿಂಬೆಯ ಬೆಳೆಗಾರರ ಪ್ರಕಾರ, ಮಾರುಕಟ್ಟೆಯಲ್ಲಿ ಸಾರ್ವಜನಿಕರು ಹಣ್ಣುಗಳನ್ನು ಲಿಂಬೆಯ ಉಪ್ಪಿನಕಾಯಿ ತಯಾರಿಸಲು ಹೆಚ್ಚು ಖರೀದಿಸುತ್ತಾರೆ

ಲಿಂಬೆಯಿಂದ ತಯಾರಿಸಬಹುದಾದ ಉಪ್ಪಿನಕಾಯಿ: ೧. ಲಿಂಬೆ ಮಸಾಲ ಉಪ್ಪಿನಕಾಯಿ ಸಾಮಗ್ರಿಗಳು: ಲಿಂಬೆ ಹಣ್ಣು: ೧ ಕೆ.ಜಿ, ಉಪ್ಪು: ೨೦೦ ಗ್ರಾಂ, ಕೆಂಪು ಮೆಣಸಿನ ಪುಡಿ: ೧೦೦ ಗ್ರಾಂ, ಮೆಂತೆ: ೧೦ ಗ್ರಾಂ, ಸಾಸಿವೆ: ೧೦ ಗ್ರಾಂ ಮಾಡುವ ವಿಧಾನ: ಒಳ್ಳೆಯ ನಿಂಬೆ ಹಣ್ಣುಗಳನ್ನು ತೆಗೆದುಕೊಂಡು ಶುಚಿಗೊಳಿಸುವುದು, ನಂತರ ನಾಲ್ಕು ಭಾಗಗಳಾಗಿ ಕತ್ತರಿಸುವುದು. ನಂತರ ಮಸಾಲ ಪದಾರ್ಥ ಮತ್ತು ಉಪ್ಪಿನೊಂದಿಗೆ ಕಲೆಸುವುದು. ಗಾಜಿನ/ಪಿಂಗಾಣಿ ಜಾರಗಳಲ್ಲಿ ತುಂಬಿ ಸಂಗ್ರಹಿಸಿಡಬೇಕು. ೨. ಇಡಿ ನಿಂಬೆಯ ಉಪ್ಪಿನಕಾಯಿ ಸಾಮಗ್ರಿಗಳು: ಸಣ್ಣ ಗಾತ್ರದ ನಿಂಬೆ ಹಣ್ಣು: ೧ ಕೆಜಿ, ಉಪ್ಪು: ೨೦೦ ಗ್ರಾಂ, ಕೆಂಪು ಖಾರ: ೩೦ ಗ್ರಾಂ, ಹಸಿಮೆಣಸಿನಕಾಯಿ: ೨೫, ಬೆಳ್ಳುಳ್ಳಿ: ೩೦ ಗ್ರಾಂ, ಸಾಸಿವೆ: ೧೦ ಗ್ರಾಂ, ಮೆಂತೆ: ೩೦ ಗ್ರಾಂ, ಸಾಸಿವೆ ಎಣ್ಣೆ: ೨೫೦ ಮಿ.ಲೀ., ವೆನಿಗರ್: ೧-೨ ಚಹ ಚಮಚ ಮಾಡುವ ವಿಧಾನ: ನಿಂಬೆ ಹಣ್ಣುಗಳನ್ನು ನಾಲ್ಕು ಕಡೆಯಿಂದ ಸೀಳಿ, ಮಸಾಲೆ ಪದಾರ್ಥ ಎಲ್ಲವನ್ನು ಪುಡಿ ಮಾಡಿ ನಿಂಬೆ ಹಣ್ಣುಗಳಲ್ಲಿ ತುಂಬಿ ಒಣಗಿಸಿ ಸಿಪ್ಪೆ ಕಳಿತ ಮೇಲೆ ರುಚಿಗೆ ತಕ್ಕಷ್ಟು ಸಕ್ಕರೆ ಬೆರೆಸಿ ಬಾಟಲಿಗಳಲ್ಲಿ ಎರಡು ದಿನ ಇಡಬೇಕು.