ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ದಾರಿದೀಪ- ಸಮಗ್ರ ಕೃಷಿ ಪದ್ಧತಿಯಿಂದ ಅಧಿಕ ಲಾಭ

ಡಾ. ಅರುಣ್ ಕುಮಾರ್, ಪಿ
೭೩೩೮೧೧೦೨೦೯
1

ಹೆಸರು ಗುರುಮೂರ್ತಿ, ವಯಸ್ಸು ೩೩ ವರ್ಷ, ಹೊಸನಗರ ತಾಲ್ಲೂಕಿಗೆ ಸೇರಿದ ನಂಜವಳ್ಳಿ ಎಂಬ ಸಣ್ಣ ಹಳ್ಳಿಯಲ್ಲಿ ವಾಸ. ಇವರು ಪಿಯುಸಿ ಮುಗಿಸಿದ ನಂತರ ಹಣದ ಕೊರತೆಯಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು. ನಂತರ ಇವರ ಸ್ನೇಹಿತರು ಪಟ್ಟಣಕ್ಕೆ ಹೋಗಲು ಪ್ರೇರೇಪಿಸಿದರು. ಆದರೆ, ಈ ಯುವಕ ಕೃಷಿಯಲ್ಲಿ ಏನಾದರು ಸಾಧನೆ ಮಾಡಲು ತೀರ್ಮಾನಿಸಿ ಹಳ್ಳಿಯಲ್ಲೇ ಉಳಿದರು. ಆಗ ಅವರ ಮಾವ ಬೆನ್ನೆಲುಬಾಗಿ ನಿಂತು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿ ಆರ್ಥಿಕವಾಗಿ ಸಹಾಯ ಮಾಡಿದರು. ಇವರು ೫ ಎಕರೆ ೩೫ ಗುಂಟೆ ಜಮೀನನ್ನು ಹೊಂದಿದ್ದು ಇವರ ಜಮೀನು ಸಮಗ್ರ ಕೃಷಿ ಪದ್ದತಿಗೆ ಒಂದು ಮಾದರಿಯಾಗಿದೆ. ಇದರಲ್ಲಿ ೩ ಎಕರೆಯನ್ನು ಸಂಪೂರ್ಣವಾಗಿ ತೋಟಗಾರಿಕೆ ಬೆಳೆಗೆ ಮೀಸಲಿಟ್ಟಿದ್ದು ಅಡಿಕೆಯಲ್ಲಿ ಮಿಶ್ರ ಬೆಳೆಯಾಗಿ ಕೋಕೊ, ಕಾಳುಮೆಣಸು, ಬಾಳೆ, ಅಗಾರ್ವುಡ್, ಜಾಯಿಕಾಯಿ, ಲವಂಗ ಮತ್ತು ಕಾಫಿಯನ್ನು ಬೆಳೆದಿದ್ದಾರೆ. ೧೦ ಗುಂಟೆ ಬಂಜರು ಭೂಮಿಯಲ್ಲಿ ನೀಲಗಿರಿಯನ್ನು, ೧೦ ಗುಂಟೆಯಲ್ಲಿ ಕಬ್ಬನ್ನು ಮತ್ತು ೧೦ ಗುಂಟೆಯಲ್ಲಿ ಶುಂಠಿಯನ್ನು ಬೆಳೆದಿದ್ದಾರೆ. ೧.೫ ಎಕರೆ ಜಮೀನಿನಲ್ಲಿ ಸಾವಯವ ಕೃಷಿಯಲ್ಲಿ ಭತ್ತವನ್ನು ಬೆಳೆಯುತ್ತಿದ್ದಾರೆ. ಈ ಭತ್ತಕ್ಕೆ ಭಾರೀ ಬೇಡಿಕೆ ಇದ್ದು ಉತ್ತಮ ದರದಲ್ಲಿ ಸ್ಥಳೀಯ ಸರ್ಕಾರಿ ನೌಕರರಿಗೆ ಮಾರಾಟ ಮಾಡುತ್ತಿದ್ದಾರೆ. ಹಾಗೆಯೇ, ಜಮೀನಿನ ಬದುಗಳಲ್ಲಿ ಮಾವು, ಹಲಸು, ತೇಗ ಮತ್ತು ಸಿಲ್ವರ್ ಮರಗಳನ್ನು ಬೆಳೆದಿದ್ದಾರೆ. ಸ್ಥಳೀಯ ೫ ಮಲೆನಾಡು ಗಿಡ್ಡ ಹಸುಗಳನ್ನು ಸಾಕಿದ್ದು, ಒಂದು ದಿನಕ್ಕೆ ೧೦-೧೨ ಲೀಟರ್ ಹಾಲನ್ನು ಡೈರಿಗೆ ಮಾರಾಟ ಮಾಡುತ್ತಾರೆ. ಸ್ಥಳೀಯ ಆಕಳುಗಳ ಹಾಲಿಗೆ, ಮಾಮೂಲಿ ಹಸುವಿನ ಹಾಲಿಗಿಂತ ಹೆಚ್ಚಿನ ದರವನ್ನು ಪಡೆಯುತ್ತಿದ್ದಾರೆ. ಮೇವಿಗಾಗಿ ೧೦ ಗುಂಟೆಯಲ್ಲಿ ಮೇವಿನ ಜೋಳ ಮತ್ತು ನೇಪಿಯರ್ ಹುಲ್ಲನ್ನು ಬೆಳೆಯುತ್ತಾರೆ. ರಸಾವರಿ ಮೂಲಕ ತೋಟಗಾರಿಕಾ ಬೆಳೆಗಳಿಗೆ ಪೋಷಕಾಂಶಗಳನ್ನು ಕೊಡುತ್ತಿದ್ದಾರೆ ಮತ್ತು ೩ ಜೇನು ಪೆಟ್ಟಿಗೆಯನ್ನು ಹೊಂದಿದ್ದು, ಜೇನು ಕೃಷಿಯನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಜೇನು ಸಾಕಾಣಿಕೆಯ ಮೂಲ ಉದ್ದೇಶ ಪರಾಗಸ್ಪರ್ಶ ಎಂದು ತಿಳಿಸುವ ಇವರು ೩ ತಿಂಗಳಿಗೊಮ್ಮೆ ೨ ಕೆ.ಜಿ. ತುಪ್ಪವನ್ನು ತೆಗೆದು ಮಾರಾಟ ಮಾಡುತ್ತಾರೆ. ಇವರು ಅಡಿಕೆ ನರ್ಸರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸುತ್ತಿದ್ದು ರೈತರಿಂದ ಹೆಚ್ಚು ಬೇಡಿಕೆಯಲ್ಲಿರುವ ಹೊಸನಗರ ಮತ್ತು ತೀರ್ಥಹಳ್ಳಿ ತಳಿಗಳನ್ನು ಒಂದು ವರ್ಷಕ್ಕೆ ಹತ್ತು ಸಾವಿರ ಸಸಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

3

ಜೈವಿಕ ಅನಿಲ ಘಟಕವನ್ನು ಹೊಂದಿದ್ದು ಇದರಲ್ಲಿ ಕೊಳೆಯುವ ಎಲ್ಲಾ ಪದಾರ್ಥಗಳನ್ನು ಅಂದರೆ, ಸೊಪ್ಪು, ತರಗು ಹಾಗೂ ಮನೆಯ ತ್ಯಾಜ್ಯಗಳನ್ನು ನಿರಂತರವಾಗಿ ಹಾಕುತ್ತಾರೆ. ಇದರಿಂದ ಒಂದು ದಿನಕ್ಕೆ ಸುಮಾರು ೫೦೦ ರಿಂದ ೧೦೦೦ ಲೀಟರ್ ಜೈವಿಕ ದ್ರವ ಸಿಗುತ್ತದೆ. ಇದನ್ನು ಶೇಖರಣೆ ಮಾಡಿಕೊಂಡು ವಾರಕ್ಕೆ ಒಂದು ಬಾರಿ ಜಮೀನಿಗೆ ಕೊಡುತ್ತಾರೆ. ಮಳೆಗಾಲದಲ್ಲಿ ಭತ್ತಕ್ಕೆ ಮತ್ತು ಬೇಸಿಗೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ಕೊಡುತ್ತಾರೆ. ಡಯಾಂಚ ಮತ್ತು ಸೆಣಬನ್ನು ಭತ್ತ ನಾಟಿ ಮಾಡುವ ಮುಂಚೆ ಬೆಳೆದು ಮಣ್ಣಿನಲ್ಲಿ ಸೇರಿಸಿದರೆ ಪೋಷಕಾಂಶಗಳ ಜೊತೆಗೆ ಮಣ್ಣಿನ ಭೌತಿಕ ಗುಣಮಟ್ಟವನ್ನು ಹೆಚ್ಚಿಸಬಹುದು ಎಂದು ಇವರ ಸುತ್ತಮುತ್ತಲಿನ ರೈತರಿಗೆ ತಿಳಿಸಿದ್ದಾರೆ ಮತ್ತು ಕೃಷಿ ಹೊಂಡವನ್ನು ಅಳವಡಿಸಿಕೊಂಡಿದ್ದು, ನೀರನ್ನು ಶೇಖರಿಸುವ ಜೊತೆಗೆ ಹೊಂಡದಲ್ಲಿ ಗೌರಿ ಮತ್ತು ಕಾಟ್ಲಾ ಮೀನುಗಳನ್ನು ಸಾಕಿ ಅದರಿಂದ ಲಾಭವನ್ನು ಪಡೆಯುತ್ತಿದ್ದಾರೆ. ಇವುಗಳ ಜೊತೆಗೆ ನಾಟಿ ಕೋಳಿಗಳನ್ನು ಸಾಕಿ ಹಣವನ್ನು ಸಂಪಾದಿಸುತ್ತಿದ್ದಾರೆ. ಇವರು ಕೈಗೊಂಡಿರುವ ಇನ್ನೊಂದು ವಿಶೇಷ ಕೆಲಸವೆಂದರೆ ಕೊಳವೆ ಬಾವಿಯನ್ನು ಪುನಃಭರ್ತಿ ಮಾಡುತ್ತಿರುವುದು. ೨೦೦೫ರಲ್ಲಿ ಕೊಳವೆ ಬಾವಿಯನ್ನು ತೆಗೆಸಿದ್ದರು. ಆದರೆ, ೨೦೦೭ರಲ್ಲಿ ನೀರು ಕಡಿಮೆಯಾಗಿತ್ತು. ಆಗ ಧರ್ಮಸ್ಥಳ ಸಂಘದಿಂದ ಮಾಹಿತಿ ಜೊತೆಗೆ ಅನುದಾನವನ್ನು ಪಡೆದು ಅಂದಿನಿಂದ ಕೊಳವೆ ಬಾವಿಯನ್ನು ರಿಚಾರ್ಜ್ ಮಾಡುತ್ತಿದ್ದಾರೆ. ಇದರಿಂದ ಮಳೆಗಾಲದಲ್ಲಿ ಬಾವಿಯನ್ನು ತುಂಬಿಸಿ ಬೇಸಿಗೆಯಲ್ಲೂ ಕೂಡ ನೀರನ್ನು ಬಳಸಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ, ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ಜೊತೆ ನಿರಂತರ ಸಂಪರ್ಕ ಹೊಂದಿರುವ ಇವರು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಒಂದು ವರ್ಷಕ್ಕೆ ೬-೭ ಲಕ್ಷ ಆದಾಯವನ್ನು ಪಡೆಯುತ್ತಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದು ಅದರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ತಾಲ್ಲೂಕು ಮಟ್ಟದ ಯುವ ಪ್ರಗತಿಪರ ರೈತ ಪ್ರಶಸ್ತಿ, ಆತ್ಮ ಯೋಜನೆಯಡಿ ಸಾವಯವ ಕೃಷಿಕ ಪ್ರಶಸ್ತಿ, ಧರ್ಮಸ್ಥಳ ಸಂಘದಿಂದ ಉತ್ತಮ ಕೃಷಿಕ ಪ್ರಶಸ್ತಿಗಳು ಲಭಿಸಿವೆ. ಇವರು ಸುಮಾರು ೨೦-೨೫ ರಾಜ್ಯ ಮತ್ತು ಅಂತರರಾಜ್ಯ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತರಬೇತಿಗಳನ್ನು ಪಡೆದುಕೊಂಡು ಅವುಗಳಲ್ಲಿ ಸಿಗುವ ಮಾಹಿತಿಗಳನ್ನು ಜಮೀನಿನಲ್ಲಿ ಅಳವಡಿಸಿಕೊಂಡಿದ್ದಾರೆ. ಇವರ ಜಮೀನಿಗೆ ಅನೇಕ ರೈತರು ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಹೊಸ ತಂತ್ರಜ್ಞಾನಗಳು ಮತ್ತು ಯಂತ್ರೋಪಕರಣಗಳನ್ನು ನಿರಂತರವಾಗಿ ಕೃಷಿಯಲ್ಲಿ ಬಳಸಿ ಕೃಷಿಯಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದಾರೆ.

5

ಅನಿಸಿಕೆ: ಕೃಷಿಯಲ್ಲಿ ರೈತರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಆಸಕ್ತಿ ಹೊಂದಿರಬೇಕು. ರೈತರು ಏಕ ಬೆಳೆ ಬದಲಾಗಿ ಸಮಗ್ರ ಕೃಷಿ ಪದ್ದತಿ ಅನುಸರಿಸಿದಲ್ಲಿ ಹೆಚ್ಚು ಆದಾಯವನ್ನು ಪಡೆಯುವುದರ ಜೊತೆಗೆ ಅವರ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬಹುದು. ಯುವಕರು ನಿಷ್ಠೆಯಿಂದ ಕೃಷಿಯಲ್ಲಿ ತೊಡಗಿಸಿ ಕೊಂಡಲ್ಲಿ ಹೆಚ್ಚು ಆದಾಯದ ಜೊತೆಗೆ ಸ್ವಾವಲಂಬನೆಯನ್ನು ಹೊಂದಬಹುದು. ರೈತರ ಸಂಪರ್ಕ ವಿಳಾಸ: ಗುರುರಾಜ್, ೯೩೪೧೫೬೬೬೬೪, ನಂಜವಳ್ಳಿ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ