ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಮಣ್ಣ ಮಡಿಲಲ್ಲಿ- ಲೆಕ್ಕಾಚಾರದ ಕೃಷಿಕ

image_
ಕೆ.ಸಿ.ಶಶಿಧರ
1

ಯಾರ್ರಿ ಹೇಳ್ತಾರೆ ಕೃಷಿ ಲಾಭದಾಯಕವಲ್ಲ ಅಂತ. ಯಾರು ನಿತ್ಯ ಹೊಲಕ್ಕೆ ಗದ್ದೆಗೆ ಹೋಗಿ ಕೆಲಸ ಮಾಡ್ತಾರೋ ಅವರಿಗೆ ಕೃಷಿ ಚೆನ್ನಾಗಿಯೇ ಇರುತ್ತೆ. ಯಾರು ಬರಿ ಮ್ಯಾನೇಜ್ಮೆಂಟ್ ಮಾಡ್ತಾರೋ ಅವರ ಕೃಷಿ, ಜೀವನ ಮ್ಯಾನೇಜ್ ಮಾಡಲು ಸಾಕಾಗುತ್ತೆ ಅಷ್ಟೆ. ಇದು ಕಟ್ಟಿನಕೆರೆ ಸೀತಾರಾಮಯ್ಯನವರ ೬ ದಶಕಗಳ ಅನುಭವದ ಮಾತು. ಬರಿ ಅನುಭವದ ಮಾತಲ್ಲ. ಲೆಕ್ಕಾಚಾರ ದಾಖಲಿಸಿಟ್ಟು ವಿಶ್ಲೇಷಣೆ ಮಾಡಿ ಹೊರತೆಗೆದ ಹೂರಣ. ಕೃಷಿ ಅಂದ್ರೆ ಲೆಕ್ಕ ಇಡದ ವ್ಯವಹಾರ ಅನ್ನೋದನ್ನ ನಮ್ಮ ರೈತರನ್ನ ನೋಡಿದರೆ ಗೊತ್ತಾಗುತ್ತೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿ ನಿರ್ವಹಣೆ ಎಂಬ ವಿಷಯವೊಂದನ್ನ ಕಲಿಸುತ್ತಾರೆ. ಅದರಲ್ಲಿ ಯಾವ ದಾಖಲೆಗಳನ್ನು ಇಡಬೇಕು. ಖರ್ಚು ವೆಚ್ಚಗಳನ್ನು ದಾಖಲಿಸುವ ವಿವರ ಎಲ್ಲಾ ಕಲಿಸುತ್ತಾರೆ ಇದು ಅಗತ್ಯ ಎಂದು ರೈತರಿಗೆ ತಿಳಿ ಹೇಳುತ್ತಾರೆ. ಇಷ್ಟೆಲ್ಲಾ ಇದ್ದರೂ ಲೆಕ್ಕ ಇಡುವವರು ಅತೀ ವಿರಳ. ಲೆಕ್ಕ ಇಟ್ಟರೂ ಅದನ್ನ ವಿಶ್ಲೇಷಿಸಿ ನಿರ್ಧಾರ ತೆಗೆದುಕೊಂಡು ಕೃಷಿ ಮಾಡುವವರು ವಿರಳರಲ್ಲಿ ವಿರಳ. ಅಂತಹ ವಿಶೇಷ, ವಿರಳರಲ್ಲಿ ವಿರಳರೂ ಕಟ್ಟಿನಕೆರೆ ಸೀತಾರಾಮಯ್ಯ. ಐದು ದಶಕಗಳಿಂದ ಕೃಷಿ ಖರ್ಚು ವೆಚ್ಚಗಳು ಕುಟುಂಬ ನಿರ್ವಹಣೆ ವೆಚ್ಚ ಆಸ್ತಿ, ಸಾಲ ಎಲ್ಲವನ್ನು ಬರೆದಿಟ್ಟಿದ್ದಾರೆ. ಬರೀ ಬರೆಯುವುದಲ್ಲ ಲೆಕ್ಕ ಬರವಣಿಗೆಯ ಪದ್ಧತಿಗಳನ್ನು ಸತತ ಸುಧಾರಣೆ ಮಾಡಿಕೊಂಡಿದ್ದಾರೆ. ೨೦೧೨ ರಿಂದ ಇತ್ತೀಚಿನ ಲೆಕ್ಕ ನೋಡಿದರೆ ಹಾಗೂ ಅವರ ವಿಶ್ಲೇಷಣೆ ಕೇಳಿದರೆ ಯಾವುದೇ ಕಾರ್ಪೋರೇಟ್ ಸಿಇಒ ಜೊತೆ ಮಾತನಾಡಿದಂತೆ ಅನಿಸುತ್ತದೆ. ಬರೆದ ವಾರ್ಷಿಕ ಲೆಕ್ಕದ ವಿಶ್ಲೇಷಣೆ ಮಾಡಿ ಸಾರಾಂಶ ಬರೆಯುವುದು ಜೊತೆಗೆ ಎಲ್ಲಿ ಎಡವಿದೆ ಎಲ್ಲಿ ಹೆಚ್ಚು ಹೂಡಿಕೆ ಮಾಡಬಹುದು. ಯಾವ ಬೆಳೆ ಬದಲಾವಣೆ ಮಾಡಬೇಕು ಎನ್ನುವ ವಿವರ ಸಹ ಬರೆದಿದ್ದಾರೆ.

3

ಪ್ರಾರಂಭದಲ್ಲಿ ಆದಾಯ ಮಾತ್ರ ದಾಖಲಿಸುತ್ತಿದ್ದರು. ೧೯೫೬ ರಿಂದ ಈ ಲೆಕ್ಕ ಅವರಲ್ಲಿದೆ ಅಂದ್ರೆ ಅವರ ತಂದೆ ಕಾಲದಿಂದ ದಾಖಲೆ ಮಾಡಿದ್ದಾರೆ. ೨೦೦೨ ರಿಂದ ನಿತ್ಯ ಡೈರಿ ಬರೆಯಲು ಪ್ರಾರಂಭಿಸಿದ್ದು ಎರಡನೇ ಹಂತದ ಲೆಕ್ಕ ಬರೆಯೋ ಸುಧಾರಣೆ ನಂತರ ಡೈರಿಯಿಂದ ತಿಂಗಳ ಲೆಕ್ಕ ಮಾಡಿ ಬರೆದಿಡಲು ಪ್ರಾರಂಭಿಸಿದರು. ೨೦೧೨ರಿಂದ ವಾರ್ಷಿಕ ಲೆಕ್ಕ, ವಾರ್ಷಿಕ ವಿಶ್ಲೇಷಣಾ ವರದಿ ಹೀಗೆ ಲೆಕ್ಕ ಬರೆಯುವುದರಲ್ಲೂ ಸತತ ಸುಧಾರಣೆ ಮಾಡುತ್ತಾ ಬಂದಿದ್ದಾರೆ. ಸುಧಾರಣೆ-ಬದಲಾವಣೆ ಎಲ್ಲಾ ರಂಗದಲ್ಲಿದೆ ಕೃಷಿಯಲ್ಲೂ ಇದು ಬೇಕು. ನನ್ನ ಲೆಕ್ಕ ನೋಡಿ ಅದು ಲಾಭದಾಯಕವಲ್ಲ ಎಂದು ತಿಳಿದಾಗ ದೀರ್ಘಾವದಿ ಬೆಳೆಯಾದರೂ ಅದನ್ನು ಬದಲಾಯಿಸಿದ್ದೇವೆ. ಒಳ್ಳೆ ಆದಾಯ ಸಪೋಟ ಬೆಳೆ ನನಗೆ ಕೊಟ್ಟಿತ್ತು ೮ ವರ್ಷದ ನಂತರ ನನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಅನಿಸಿತು. ಕಿತ್ತು ಅಡಿಕೆ ಹಾಕುವ ತೀರ್ಮಾನ ಮಾಡಿದೆ. ನನ್ನ ಖರ್ಚು ಇಲ್ಲದೆ ಅಡಿಕೆ ತೋಟ ಸಿದ್ಧ ಆಗುತ್ತಿದೆ. ಪೈನಾಪಲ್ ಬೆಳೆಯೋಕೆ ಕೊಟ್ಟಿದ್ದೇನೆ. ಅವರು ಅಡಿಕೆ ನೆಟ್ಟು ನಾಲ್ಕು ವರ್ಷ ಬೆಳೆಸಿ ಕೊಡುತ್ತಾರೆ. ಹೀಗೆ ೧೯೯೩ ರಲ್ಲಿ ಶುಂಠಿ ಗುತ್ತಿಗೆ ಕೊಟ್ಟು ರಬ್ಬರ್ ತೋಟ ಕಟ್ಟಿದೆ. ದುಡ್ಡಿಲ್ಲದೆ ಒಣಭೂಮಿ ಅಭಿವೃದ್ಧಿ ಮಾಡುವುದು ಹೀಗೆ ನೋಡಿ ಎಂದು ಹೆಮ್ಮೆಯಿಂದ ಹೇಳ್ತಾರೆ. ಇವರಿಗೆ ಹಾಲಿ ೩೦ ಎಕರೆ ತೋಟ ಇದೆ. ಅದರಲ್ಲಿ ೧೦ ಎಕರೆ ರಬ್ಬರ್, ೩ ಎಕರೆ ಫಸಲು ಬರುತ್ತಿರುವ ಅಡಿಕೆ, ೧೨ ಎಕರೆ ಅಡಿಕೆ, ಪೈನಾಪಲ್, ೩ ಎಕರೆ ನೀಲಗಿರಿ ಅಕೇಶಿಯಾ ಅಡಿಕೆಯಲ್ಲಿ ಬಾಳೆ ಸ್ವಲ್ಪ ಮೆಣಸು ಇದೆ. ಎರಡು ಎಕರೆ ವೈವಿಧ್ಯಮಯ ಹಣ್ಣಿನ ತೋಟ ಇದೆ. ಒಂದೇ ಹಣ್ಣಿನಲ್ಲಿರುವ ವೈವಿಧ್ಯ ತಳಿಗಳು ಹಾಗೂ ವಿವಿಧ ಹಣ್ಣಿನ ಗಿಡ ನೆಟ್ಟು ಬೆಳೆದಿರುವ ಈ ತೋಟದ ಹಣ್ಣನ್ನು ಮಾರುವುದಿಲ್ಲ. ಮನೆಗೆ ಬಂದವರಿಗೆ, ಮನೆ ಆಳುಗಳಿಗೆ ಬಳಸಲು ಮಾತ್ರ ಮೀಸಲು. ಇಷ್ಟೆಲ್ಲಾ ಜಮೀನು ಇದೆ ಬಹಳಷ್ಟು ಯಂತ್ರೋಪಕರಣಗಳಿವೆ. ಉಳುಮೆಗೆ ಟ್ರ್ಯಾಕ್ಟರ್ ಕಾಣೊಲ್ಲ ಅಂದ್ರೆ ಅದಕ್ಕೊಂದು ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಡ್ರೈವರ್ ಒಬ್ಬರಿಗೆ ಇವರು ಬಂಡವಾಳ ಹೂಡಿ ಟ್ರ್ಯಾಕ್ಟರ್ ಕೊಡಿಸಿದ್ದಾರೆ. ಇವರು ಕರೆದಾಗ ಅವ ಬರ್ತಾನೆ ಅದಕ್ಕೆ ಕೂಲಿ ಕೊಡ್ತಾರೆ.

5

ಸೀತಾರಾಮಯ್ಯನವರೆ ಈಗಿನ ಕಾಲದಲ್ಲಿ ಕೂಲಿಯವರದ್ದೇ ಸಮಸ್ಯೆ ಅಂತಾರೆ ನಿಮಗೆ ಈ ಸಮಸ್ಯೆ ಇಲ್ಲವೆ? ಎಂದಾಗ ಅಲ್ರೀ ಸರಿಯಾಗಿ ನೋಡಿಕೊಂಡಿಲ್ಲ ಅಂದ್ರೆ ಹೆಂಡ್ತಿ ಮಕ್ಕಳೇ ಬಿಟ್ಟು ಹೋಗ್ತಾರೆ ಸರಿಯಾಗಿ ನೋಡಿಕೊಂಡ್ರೆ ಯಾಕ್ರಿ ಸಮಸ್ಯೆ. ನಮ್ಮ ಕೂಲಿಯವರು ಅಂದ್ರೆ ಮನೆಯವರಿದ್ದ ಹಾಗೆ. ಅವರೆಲ್ಲರ ಕಷ್ಟ, ಸುಖ ನಮ್ಮವು ಅವರ ಔಷಧೋಪಚಾರ, ಹಬ್ಬ ಹರಿದಿನಗಳ ಖರ್ಚು ಬಟ್ಟೆ ಬರೆ ಎಲ್ಲಾ ನನ್ನದೇ ಆದಾಗ ಅವರು ನಮ್ಮ ಮನೆ ಮಕ್ಕಳಂತೆ ಆಗಿರುತ್ತಾರೆ. ಅವರಿಗೆ ವರ್ಷಪೂರ್ತಿ ಕೆಲಸ ಸಿಗುವಂತಾಗಲು ಪ್ರತಿವರ್ಷ ಒಂದು ಹೊಸ ಕೆಲಸ ಪ್ರಾರಂಭಿಸುತ್ತೀನಿ. ಒಂದು ರೀತಿ ಕಂಪನಿಯಲ್ಲಿ ನೌಕರರನ್ನ ನೋಡಿಕೊಳ್ಳೋದಕ್ಕಿಂತ ಚೆನ್ನಾಗಿ ನಾನು ನೋಡಿಕೊಳ್ಳುತ್ತೇನೆ. ಕಾಲಕ್ಕೆ ತಕ್ಕ ಹಾಗೆ ನಾವೂ ಬದಲಾದರೆ ಸಮಸ್ಯೆ ನಿರ್ವಹಣೆ ಮಾಡಬಹುದು ಎಂಬುದೇ ನನ್ನ ಬಲವಾದ ನಂಬಿಕೆ ಎನ್ನುತ್ತಾರೆ. ಸಮಾಜದಿಂದ ಬಹಳಷ್ಟು ಪಡೆಯುತ್ತೇವೆ. ಸಮಾಜಕ್ಕೂ ಏನನ್ನಾದರೂ ಕೊಡಬೇಕು ಎನ್ನುವ ಇವರು ಊರಿನಲ್ಲಿ ಚೆನ್ನಾಗಿ ಬೆಳೆ ಬೆಳೆಯುವವರಿಗೆ ಪ್ರೋತ್ಸಾಹ ಧನ ನೀಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ರಸ್ತೆ ಬದಿಗೆ ಮಾವಿನ ಮರ ನೆಟ್ಟು ಬೆಳೆಸಿದ್ದಾರೆ. ಜಾನುವಾರುಗಳಿಗೆ ನೀರು ತೊಟ್ಟಿ ಸೇವೆ ಒದಗಿಸುತ್ತಾರೆ. ಇವರ ನಿರ್ವಹಣೆ ನೋಡಿ ಒಬ್ಬ ರೈತ ಎಷ್ಟು ಜಮೀನು ನಿರ್ವಹಿಸಬಹುದು ಎನ್ನುವ ಚರ್ಚೆಗೆ ಅವರು ಸ್ವಂತ ಕೃಷಿ ಮಾಡಿದ್ರೆ ೧-೨ ಎಕರೆ ಸ್ವಂತ ಮಾಡುವುದರ ಜೊತೆ ಕೂಲಿ ನಿರ್ವಹಣೆ ಮಾಡಿದರೆ ೬-೧೦ ಎಕರೆ ನನ್ನ ಹಾಗೆ ಬರೀ ನಿರ್ವಹಣೆಯನ್ನೇ ಮಾಡಿದರೆ ೧೦೦ ಎಕರೆವರೆಗೆ ಮಾಡಬಹುದು ಎನ್ನುತ್ತಾರೆ

7

ನಾನಿಲ್ಲಿ ಸೀತಾರಾಮಯ್ಯನವರ ಆದಾಯ ಪಟ್ಟಿ ಮಾಡಲು ಇಚ್ಛಿಸುವುದಿಲ್ಲ. ಆದಾಯ ಅವರ ಜೀವನಕ್ಕೆ ಅವರು ಕೊಡುವ ಉದಾಹರಣೆಗಳನ್ನು ಮಾತ್ರ ಓದುಗರ ಮುಂದೆ ಇಡುತ್ತೇನೆ. ಸಮಾಜದಲ್ಲಿ ಅತ್ಯುನ್ನತ ಹುದ್ದೆಯಲ್ಲಿರುವ ವಿದ್ಯಾವಂತ ಅಧಿಕಾರಿಗೆ ಸರಿಸಮಾನಾಗಿ ಒಬ್ಬ ಕೃಷಿಕ ಬದುಕಬಹುದು ಎನ್ನುವುದಕ್ಕೆ ನಾನೇ ಮಾದರಿ ಎನ್ನುತ್ತಾರೆ. ನನ್ನ ಆದಾಯದಲ್ಲಿ ೧೦-೧೫ ಕುಟುಂಬಗಳ ನಿರ್ವಹಣೆ ಮಾಡಬಹುದು ಎನ್ನುತ್ತಾರೆ. ನನ್ನ ಮನೆಯಲ್ಲಿ ಇಷ್ಟು ವರ್ಷದಲ್ಲಿ ಯಾವತ್ತೂ ಹಣಕಾಸಿನ ತೊಂದರೆ ಆಗಿಲ್ಲ. ಯಾವುದಕ್ಕೂ ಕೊರತೆ ಇಲ್ಲದ ನೆಮ್ಮದಿಯ ಬದುಕು ನಮ್ಮದು. ಆತ್ಮವಿಶ್ವಾಸದ ಬದುಕನ್ನು ಕೃಷಿ ಕಟ್ಟಿಕೊಡಬಲ್ಲದು ಎನ್ನುವ ಇವರ ನುಡಿಗಳಲ್ಲಿ ಕಾಣುವ ಆತ್ಮವಿಶ್ವಾಸ ಅವರ ಎಲ್ಲ ಲಾಭ-ನಷ್ಟಗಳನ್ನು ನಮ್ಮ ಮುಂದೆ ಬಿಂಬಿಸುತ್ತದೆ. ಅವರನ್ನ ಭೇಟಿ ಮಾಡಿ ಅವರ ಆತಿಥ್ಯ ಹಾಗೂ ಅವರ ಜೀವನ ಅನುಭವ ಕೇಳಿದರೆ ನಮ್ಮ ಜೀವನ ಸಾರ್ಥಕವಾಯಿತು ಎನಿಸುತ್ತದೆ. ಇಂತಹುದರಲ್ಲಿ ಅವರ ಲಾಭ-ನಷ್ಟಗಳ ಅಂಕಿ-ಸಂಖಿಗಳು ನಿಜಕ್ಕೂ ಗೌಣ ಅನಿಸದಿರದು. ರೈತರ ಸಂಪರ್ಕ ವಿಳಾಸ: ಸೀತಾರಾಮಣ್ಣ, ಬಿನ್ ಮಹಾಬಲಯ್ಯ, ಕಟ್ಟಿನಕೆರೆ ಗ್ರಾಮ, ಇಂಡುವಳ್ಳಿ ಪೋಸ್ಟ್, ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ೭೬೭೬೮೮೦೭೦೦/೮೦೮೮೨೮೦೭೦೦