ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಚಿಂತನೆ - ರೈತರ ಜೀವಕ್ಕೆ ಕುತ್ತಾಗಿ ಬಂದೆರಗುವ ಆಕಸ್ಮಿಕ ಅವಗಢಗಳನ್ನು ತಡೆಯುವ ಮಾರ್ಗಗಳು

image_
ಡಾ.ಎ.ಎಸ್.ಕುಮಾರ ಸ್ವಾಮಿ
9448943990

ಹೊರಾಂಗಣದಲ್ಲಿ ಹೆಚ್ಚಾಗಿ ದುಡಿಯುವ ರೈತರಿಗೆ ತಮ್ಮ ಕಾರ್ಯದಲ್ಲಿ ನಿರತರಾಗಿರುವಾಗ ವಿವಿಧ ಅವಗಢಗಳು ಸಂಭವಿಸಿ ಆ ಮೂಲಕ ಗಾಯಗೊಳ್ಳುವುದರಿಂದ ಹಿಡಿದು ಜೀವ ಹಾನಿಯವರೆಗೂ ಅನೇಕ ತೊಂದರೆಗಳನ್ನು ಅನುಭವಿಸುತ್ತಾರೆ. ರೈತರು ಹೊಲ ಗದ್ದೆ ತೋಟಗಳಲ್ಲಿ ದುಡಿಯುವಾಗ ಪ್ರಮುಖವಾಗಿ ಎದುರಿಸುವ ಅನಾಹುತಗಳೆಂದರೆ; ೧.ಸಿಡಿಲು ಅಪ್ಪಳಿಸುವುದು; ೨. ಸುಂಟರಗಾಳಿಗೆ ಸಿಲುಕುವುದು; ೩.ನೆರೆಯಲ್ಲಿ ಕೊಚ್ಚಿಕೊಂಡು ಹೋಗುವುದು; ೪. ಕೃಷಿ ಹೊಂಡದಲ್ಲಿ ಮುಳುಗುವುದು; ೫. ಕೃಷಿ ಯಂತ್ರಗಳಲ್ಲಿ ಸಿಲುಕಿಕೊಳ್ಳುವುದು; ೬. ಕೀಟನಾಶಕಗಳು ಆಕಸ್ಮಿಕವಾಗಿ ದೇಹವನ್ನು ಸೇರುವುದು; ೭. ಇತರೆ; ಹಾವು ಕಚ್ಚುವುದು, ಮರದಿಂದ ಬೀಳುವುದು, ಕಾಡು ಪ್ರಾಣಿಗಳ ದಾಳಿಗೊಳಗಾಗುವುದು, ಇತ್ಯಾದಿ. ಇವುಗಳಲ್ಲಿ ಹೆಚ್ಚಿನ ಅನಾಹುತಗಳು ಮುನ್ಸೂಚನೆಯನ್ನು ಕೊಡದೇ, ಆಕಸ್ಮಿಕವಾಗಿ ಘಟಿಸುತ್ತವೆ. ಆದರೂ ಸಹ, ಕೆಳಗೆ ಸೂಚಿಸಿರುವ ಕೆಲವು ಮುನ್ನೆಚ್ಚರಿಕೆ ವಹಿಸುವುದರಿಂದ ಇವುಗಳಿಂದಾಗುವ ಹಾನಿಯನ್ನು ಕಡಿಮೆಗೊಳಿಸಬಹುದು.

ಸಿಡಿಲಿನ ಆಘಾತ ತಪ್ಪಿಸಲು: ೧. ಮುನ್ಸೂಚನೆ: ಸಿಡಿಲು ಸಂಪೂರ್ಣ ಆಕಸ್ಮಿಕವಲ್ಲ; ಬಿಸಿಯಾದ ತೇವಭರಿತ ವಾತಾವರಣವಿರುವ ದಿನದ ಮಧ್ಯಾಹ್ನ ಅಥವಾ ಸಾಯಂಕಾಲದ ಹೊತ್ತು ದಟ್ಟವಾಗಿ ಎತ್ತರಕ್ಕೆ ಹೂಕೋಸಿನಾಕಾರದಲ್ಲಿ (ಕ್ಯುಮುಲೋ-ನಿಂಬಸ್) ಮೋಡಗಳ ರಚನೆಯಾಗಿದ್ದಾಗ, ರಭಸದ ಮಳೆ ಬರುವ ಸೂಚನೆಯಿರುವಾಗ ಸಿಡಿಲೂ ಸಹ ಬಂದೆರಗುವ ಸನ್ನಿವೇಶವಿದೆಯೆಂದು ರೈತರು ಸುಲಭವಾಗಿ ಅರ್ಥ ಮಾಡಿಕೊಳ್ಳಬೇಕು. ಸಿಡಿಲು ವರ್ಷದಲ್ಲಿ ಯಾವ ಕಾಲದಲ್ಲಿ ಬರಬಹುದಾದರೂ, ಮುಂಗಾರು ಪೂರ್ವ ಬೇಸಿಗೆ ಮಳೆಗಳ ಸಮಯದಲ್ಲಿ ಹೆಚ್ಚು. ೨. ಕಟ್ಟಡದೊಳಗೆ ಆಶ್ರಯ ಪಡೆಯಿರಿ: ಸಿಡಿಲಿನ ಸಂಭಾವ್ಯತೆಯುದೆ ಎನ್ನಿಸಿದ ತಕ್ಷಣ, ಸುಸಜ್ಜಿತ ಕಟ್ಟಡದೊಳಕ್ಕೆ ಸೇರಿಕೊಳ್ಳಿ ಹಾಗೂ ಕಿಟಕಿ, ಬಾಗಿಲುಗಳನ್ನು ಸಮದು ಬಿಡದಂತೆ ಮುಚ್ಚಿಕೊಳ್ಳಿ. ಅನಿವಾರ್ಯವಾದರೆ, ಲೋಹದ ಕವಚವುಳ್ಳ ಕಾರು ಮತ್ತಿತರೆ ವಾಹನಗಳ ಒಳ ಸೇರಿ, ಕಿಟಕಿ ಬಾಗಿಲುಗಳನ್ನು ಸಂದು ಬಿಡದಂತೆ ಮುಚ್ಚಿಕೊಳ್ಳಿ; ೩. ಲೋಹದ ವಸ್ತುಗಳನ್ನು ಮುಟ್ಟಬೇಡಿ; ಸಿಡಿಲಿನ ಸಂಭಾವ್ಯವಿರುವ ಸಮಯದಲ್ಲಿ ಯಾವುದೇ ಲೋಹದ ವಸ್ತುಗಳನ್ನು ದೇಹಕ್ಕೆ ತಾಗಿಸಿಕೊಳ್ಳಬೇಡಿ; ಲೋಹದ ಹಿಡಿಯುಳ್ಳ ಛತ್ರಿಯನ್ನೂ ಹಿಡಿಯಬೇಡಿ. ೪. ಮರದ ಕೆಳಗೆ ನಿಲ್ಲುವುದು ಬೇಡ: ಸಿಡಿಲಿನಿಂದಾಗುವ ಹೆಚ್ಚಿನ ಅನಾಹುತಗಳು ಮರದಕೆಳಗೆ ರಕ್ಷಣೆ ಪಡೆಯುವಾಗ ಆಗುತ್ತವೆ. ಮರಗಳು ಸುಲಭವಾಗಿ ಸಿಡಿಲನ್ನು ಆಕರ್ಷಿಸುತ್ತವೆ. ಮರದ ಕೆಳಗೆ ನಿಲ್ಲಬೇಡಿ. ೫. ಚಿಕ್ಕ ಪ್ರಾಣಿಗಳ ಮಧ್ಯೆ ನಿಲ್ಲುವುದು ಬೇಡ: ಚಿಕ್ಕ ಪ್ರಾಣಿಗಳಾದ ಕುರಿ, ಮೇಕೆ ಮೊದಲಾದ ಪ್ರಾಣಿಗಳ ಮಧ್ಯೆ ನಿಲ್ಲುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಅವುಗಳ ಮಧ್ಯೆ ಇರುವುದು ಅನಿವಾರ್ಯವಾದರೆ, ಆ ಪ್ರಾಣಿಗಳಿಗಂತಲೂ ಕೆಳಗಿನ ಮಟ್ಟಕ್ಕೆ ಬರುವಂತೆ ತಲೆ ತಗ್ಗಿಸಿ ಕುಳಿತು ಕೊಳ್ಳಿ. ೬. ಎತ್ತರದ ಸ್ಥಳದಲ್ಲಿ ನಿಲ್ಲುವುದು ಬೇಡ: ಗುಡ್ಡ, ಕೋಡುಗಲ್ಲುಗಳ ತುದಿ ಮುಂತಾದ ಎತ್ತರದ ಸ್ಥಳದಲ್ಲಿ ನಿಂತರೆ ಸಿಡಿಲಿನ ಆಘಾತದ ಸಂಭವ ಹೆಚ್ಚು; ಸಿಡಿಲಿನ ಸಾಧ್ಯತೆ ಕಂಡು ಬಂದ ತಕ್ಷಣ ಎತ್ತರದ ಸ್ಥಳದಿಂದ ಕೆಳಕ್ಕೆ ಚಲಿಸಿ; ೭. ಬಯಲಿನಲ್ಲಿ ನಿಲ್ಲುವುದು ಬೇಡ; ಯಾವುದೇ ಆಶ್ರಯವಿಲ್ಲದೇ ಬಯಲಿನಲ್ಲಿರಬೇಕಾದ ಅನಿವಾರ್ಯತೆ ಇದ್ದರೆ, ನಿಂತುಕೊಳ್ಳುವುದರ ಬದಲು ಕುಕ್ಕರಗಾಲಿನಲ್ಲಿ ಕುಳಿತುಕೊಂಡು ತಲೆಯನ್ನು ಮಂಡಿಗಳ ಮಧ್ಯೆ ಹುದುಗಿಸಿಕೊಳ್ಳಿ; ಬಯಲಿನಲ್ಲಿ ಮಲಗುವುದರಿಂದ ಸಿಡಿಲಿನಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ೮. ಒದ್ದೆ ಬಟ್ಟೆಯಿಂದ ತೊಂದರೆಯಿಲ್ಲ: ಮಳೆಯಿಂದ ಬಟ್ಟೆ ಒದ್ದೆಯಾಯಿತೆಂದು ಹೆದರಿಕೆ ಬೇಡ. ಒದ್ದೆ ಬಟ್ಟೆಯು ತನ್ನ ಮೂಲಕ ವಿದ್ಯುತ್ ಹರಿಯಲು ಅವಕಾಶ ಮಾಡಿಕೊಡುವುದರಿಂದ ಸಿಡಿಲಿನ ಹಾನಿ ಕಡಿಮೆಯಾಗುತ್ತದೆ. ೯. ಬಿಡಿ ಬಿಡಿಯಾಗಿ ಕುಳಿತುಕೊಳ್ಳಿ: ಹೆಚ್ಚು ಜನರಿದ್ದಾಗ ಯಾವುದೇ ಕಾರಣಕ್ಕೂ, ಒಬ್ಬರಿಗೊಬ್ಬರು ಅಂಟಿಕೊಂಡಿರಬೇಡಿ. ಎಲ್ಲರಿಗೂ ಒಮ್ಮೆಲೇ ಅನಾಹುತವಾಗಬಹುದು. ಬಿಡಿ ಬಿಡಿಯಾಗಿ ಕುಳಿತುಕೊಳ್ಳಿ; ೧೦. ಸಿಡಿಲಿನ ಆಘಾತಕ್ಕೊಳಗಾದವರನ್ನು ಮುಟ್ಟಿದರೆ ತೊಂದರೆ ಇಲ್ಲ: ಸಿಡಿಲಿನ ಆಘಾತಕ್ಕೊಳಗಾದವರನ್ನು ಮುಟ್ಟುವುದೇ ಬೇಡವೋ ಎನ್ನುವ ಅನುಮಾನ ಬೇಡ. ಅವರನ್ನು ಮುಟ್ಟಿ ಉಪಚರಿಸಿ, ಅದರಿಂದ ಏನೂ ತೊಂದರೆ ಇಲ್ಲ.

೧೧. ರಬ್ಬರ್ ಶೂ ನಿಂದ ಸಿಡಿಲನ್ನು ತಡೆಯಲಾಗುವುದಿಲ್ಲ: ರಬ್ಬರ್ ಶೂ ಧರಿಸುವುದರಿಂದ ಅಥವಾ ರಬ್ಬರ್ ಹಾಳೆಯ ಮೇಲೆ ನಿಲ್ಲುವದರಿಂದ ಸಿಡಿಲಿನ ಆಘಾತವನ್ನು ತಡೆಯಲಾಗುವುದಿಲ್ಲ. ೧೨. ಕೆರೆ, ಕೊಳಗಳಲ್ಲಿ ಇರುವುದು ಬೇಡ; ಸಿಡಿಲಿನ ಸಾಧ್ಯತೆ ಕಂಡುಬಂದರೆ ತಕ್ಷಣ ಕೆರೆ ಕೊಳಗಳಿಂದ ಹೊರಬನ್ನಿ; ೧೩. ಕಿರು ಮಿಂಚನ್ನು ಗಮನಿಸಿ: ಬಲವಾದ ಸಿಡಿಲು ಅಪ್ಪಳಿಸುವುದಕ್ಕಿಂತ ಕೆಲವು ಕ್ಷಣಗಳು ಮೊದಲು ’ಸ್ಟೆಪ್ ಲೀಡರ್’ಎನ್ನುವ ಒಂದು ’ಕಿರು ಮಿಂಚು’ ಮೋಡದಿಂದ ಭೂಮಿಗೆ ಸಂಪರ್ಕ ಸೇತುವನ್ನು ಏರ್ಪಡಿಸುತ್ತದೆ. ಈ ಸಮಯದಲ್ಲಿ ಮನುಷ್ಯರು ಅದರ ಹತ್ತಿರವಿದ್ದರೆ, ಅವರ ಕೂದಲುಗಳು ನಿಮಿರಿ ನಿಲ್ಲಬಹುದು, ಕಿವಿಯಲ್ಲಿ ಗುಂಯ್ಗುಡುವ ಅಥವಾ ಸಿಡಿಯುವ ಶಬ್ದ ಕೇಳಿಸಬಹುದು; ಹತ್ತಿರದಲ್ಲಿರುವ ಎತ್ತರದ ವಸ್ತುಗಳ ಮೇಲ್ತುದಿಗಳಲ್ಲಿ ಹೊಳಪು ಕಾಣಿಸಿಕೊಳ್ಳಬಹುದು ಅಥವಾ ಚಿಕ್ಕ ಕಿಡಿಗಳು ಸಿಡಿಯಬಹುದು. ಈ ಸೂಚನೆಗಳು ದೊರೆತರೆ, ತಕ್ಷಣವೇ ಆ ಸ್ಥಳದಿಂದ ದೂರ ಹೋಗುವುದು ಕ್ಷೇಮಕರ. ೧೪. ವಿದ್ಯುತ್ ಉಪಕರಣಗಳ ಬಗ್ಗೆ ಎಚ್ಚರವಿರಲಿ: ಮನೆಯ ಒಳಗಿರುವಾಗ ಆದಷ್ಟೂ ಎಲ್ಲಾ ವಿದ್ಯುತ್ ಮತ್ತು ವಿದ್ಯುನ್ಮಾನ ಉಪಕರಣಗಳ ಸಂಪರ್ಕವನ್ನು ಕಿತ್ತು ಹಾಕಿ. ವಿಶೇಷವಾಗಿ ದೂರದರ್ಶನ ಉಪಕರಣ, ರೆಫ್ರಿಜಿರೇಟರ್, ಕಂಪ್ಯೂಟರ್ ಇವುಗಳ ಬಗ್ಗೆ ಎಚ್ಚರ ವಹಿಸಿ. ಮೊಬೈಲ್ಗಳನ್ನು ಛಾರ್ಜ್ ಮಾಡಲು ಇಡಬೇಡಿ. ಸಿಡಿಲು ಸಮೇತ ಮಳೆಯಾಗುತ್ತಿರುವ ಸಂದರ್ಭದಲ್ಲಿ ಸ್ಥಿರ ದೂರವಾಣಿ ಉಪಕರಣಗಳನ್ನು ಬಳಸಬೇಡಿ.

ಸುಂಟರಗಾಳಿಯ ಆಘಾತ ತಪ್ಪಿಸಲು: ೧. ನಮ್ಮ ದೇಶದಲ್ಲಿ ಸುಂಟರಗಾಳಿಯಿಂದ ಆಗುವ ಅನಾಹುತಗಳು ಕಡಿಮೆಯೆಂದರೂ ಸಹ ಇಲ್ಲವೆಂದಲ್ಲ. ಸುಂಟರಗಾಳಿಯ ಮುನ್ಸೂಚನೆ ದೊರೆತಾಗ ಹೊರಾಂಗಣದಿಂದ ಮನೆಗೆ ಬಂದು ಸೇರಿಕೊಳ್ಳಿ; ೨. ಸುಂಟರಗಾಳಿಯು ಪದೇ ಪದೇ ಬರುವ ಪ್ರದೇಶಗಳಲ್ಲಿ ಹೆಂಚು, ತಗಡು ಮುಂತಾದ ಮನೆಯ ಮಾಡಿನ ಹೊದಿಕೆಗಳು ಸುಲಭವಾಗಿ ಗಾಳಿಗೆ ಹಾರದಂತೆ ಬಿಗಿಯಾಗಿರುವಂತೆ ನೊಡಿಕೊಳ್ಳಿ; ೩. ಹೊರಾಂಗಣದಲ್ಲಿ ಇರಬಹುದಾದ ಕುರ್ಚಿ, ಮೇಜು, ಹಗುರ ಸಲಕರಣೆಗಳು ಮುಂತಾದವುಗಳು ಅಗಾಧ ಶಕ್ತಿಯ ಸುಂಟರಗಾಳಿಯಲ್ಲಿ ಸುಲಭವಾಗಿ ಹಾರಿ ಹೋಗಿ ಬೇರೆಡೆ ಬಿದ್ದು ಹಾನಿಯನ್ನುಂಟುಮಾಡಬಹುದು; ಆದ್ದರಿಂದ ಅಂತಹ ವಸ್ತುಗಳನ್ನು ಹೊರಾಂಗಣದಲ್ಲಿ ಬಿಡಬೇಡಿ. ಹಳ್ಳ, ತೊರೆಗಳಲ್ಲಿ ನೆರೆಯಿಂದ ಕೊಚ್ಚಿಕೊಂಡು ಹೋಗದಿರಲು; ಹಳ್ಳ ತೊರೆಗಳಲ್ಲಿ ಬರುವ ನೆರೆಯ ಸಾಧ್ಯತೆಯನ್ನು ಸ್ಥಳೀಯವಾಗಿ ಬೀಳುವ ಮಳೆಯ ಆಧಾರದ ಮೇಲೆ ತಿಳಿಯುವುದು ಕಷ್ಟ. ಮೇಲಿನ ಪ್ರದೇಶಗಳಲ್ಲಿ ರಭಸದ ಮಳೆ ಬಿದ್ದಿದ್ದರೆ, ಆಕಸ್ಮಿಕವಾಗಿ ಹಳ್ಳ ತೊರೆಗಳು ತುಂಬಿ ಬರಬಹುದು. ಮಳೆಗಾಲದಲ್ಲಿ ಹಳ್ಳ ತೊರೆಗಳನ್ನು ದಾಟುವಾಗ ಎಚ್ಚರವಿರಲಿ; ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಅಥವಾ ಹಗ್ಗ ಹಿಡಿದು ಎಚ್ಚರಿಕೆಯಿಂದ ದಾಟಬೇಕು. ಕೃಷಿ ಹೊಂಡಗಳಲ್ಲಿ ಮುಳುಗುವುದನ್ನು ತಪ್ಪಿಸಲು; ಬಯಲು ಸೀಮೆಯ ರೈತರಿಗೆ ಕೃಷಿ ಹೊಂಡಗಳಲ್ಲಿ ನೀರು ತುಂಬಿರುವುದು ಒಂದು ಸೌಭಾಗ್ಯ; ಅದನ್ನೇ ಎಲ್ಲದಕ್ಕೂ ಬಳಸಲು ಪ್ರಯತ್ನಿಸುತ್ತಾರೆ. ಅನೇಕ ಮಕ್ಕಳು ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿ ಕಾಲು ಜಾರಿ ಪ್ರಾಣ ಬಿಟ್ಟಿರುವುದು ದಿನೇ ದಿನೇ ವರದಿಯಾಗುತ್ತಿದೆ. ರೈತರು ಎತ್ತುಗಳನ್ನು ತೊಳೆಯಲು ಕೃಷಿ ಹೊಂಡಕ್ಕೆ ಇಳಿದು ಅವಘಡಕ್ಕೊಳಗಾಗಿರುವುದು ವರದಿಯಾಗುತ್ತಿದೆ. ಇದನ್ನು ತಪ್ಪಿಸಲು ಮಕ್ಕಳು ದೊಡ್ಡವರ ಸಹಾಯವಿಲ್ಲದೆ ಕೃಷಿ ಹೊಂಡಕ್ಕೆ ಇಳಿಯಲು ಸಾಧ್ಯವಾಗದಂತೆ ಸುತ್ತಲೂ ತಂತಿ ಬೇಲಿಯ ಅಳವಡಿಕೆಯ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ. ಒಂದು ವೇಳೆ ಆಯತಪ್ಪಿ ಬಿದ್ದರೂ ಸಹ ಒಂದು ಕಡೆಯಿಂದ ಸುಲಭವಾಗಿ ಮೇಲಕ್ಕೇರಿ ಬರುವಂತೆ ಕಲ್ಲು ಚಪ್ಪಡಿಗಳಿಂದ ಮಾಡಿದ ಮೆಟ್ಟಿಲುಗಳನ್ನೋ ಅಥವಾ ಒಂದು ಪಕ್ಕದಲ್ಲಿ ತೀರಾ ಕಡಿಮೆ ಇಳಿಜಾರಿನಲ್ಲಿ ಸರಾಗವಾಗಿ ಮೇಲಕ್ಕೆ ಹತ್ತಬಹುದಾದಂತಹ ದಾರಿಯನ್ನೋ ಮಾಡಬೇಕಿದೆ.

ಕೃಷಿ ಯಂತ್ರಗಳಿಗೆ ಸಿಲುಕುವುದು: ಅನೇಕ ಜನ ರೈತರು ಕೃಷಿ ಯಂತ್ರಗಳಿಗೆ ಸಿಲುಕಿ ಕೈಕಾಲುಗಳನ್ನು ಊನ ಮಾಡಿಕೊಂಡ ವರದಿಗಳು ಪದೇ ಪದೇ ಕೇಳಿ ಬರುತ್ತಿವೆ. ವಿಶೇಷವಾಗಿ ಮೇವು ಕತ್ತರಿಸುವ ಯಂತ್ರ, ಒಕ್ಕಣೆ ಯಂತ್ರ, ಮೊದಲಾದವುಗಳಿಗೆ ಸಿಲುಕುವವರು ಅಧಿಕ. ತರಬೇತಿ ಹೊಂದಿದ ಅನುಭವಿಗಳು, ಯಂತ್ರಗಳನ್ನು ನಡೆಸುವ ಕೌಶಲ್ಯವುಳ್ಳವರು ಮಾತ್ರ ಯಂತ್ರಗಳನ್ನು ಚಲಾಯಿಸಬೇಕು. ಅನನುಭವಿಗಳು ಹಾಗೂ ಕಿರಿಯ ವಯಸ್ಸಿನವರು ಯಂತ್ರ ಚಲಾಯಿಸದಂತೆ ನೋಡಿಕೊಳ್ಳಬೇಕು. ಯಂತ್ರಗಳು ಚಾಲನೆಯಲ್ಲಿರುವ ಸಮಯದಲ್ಲಿ ಯಾರಾದರೂ ಸರ, ಯಂತ್ರಗಳಿಂದ ಕ್ಷೇಮಕರ ದೂರದಲ್ಲಿರಬೇಕು. ಆಕಸ್ಮಿಕಗಳಾದಾಗ ತಕ್ಷಣ ಚಿಕಿತ್ಸೆ ನಿಡಲು ಪ್ರಥಮ ಚಿಕಿತ್ಸಾ ವ್ಯವಸ್ಥೆ ಇರಬೇಕು. ಕೀಟನಾಶಕಗಳು ಆಕಸ್ಮಿಕವಾಗಿ ದೇಹದ ಒಳ ಸೇರುವುದು: ಕೀಟನಾಶಕಗಳನ್ನು ಸಿಂಪರಿಸುವ ಸಮಯದಲ್ಲಿ ಸಾಕಷ್ಟು ಎಚ್ಚರಿಕೆಗಳನ್ನು ವಹಿಸದಿದ್ದರೆ ಆಕಸ್ಮಿಕವಾಗಿ ಚರ್ಮದ ಮೂಲಕ, ಕಣ್ಣುಗಳ ಮೂಲಕ, ಬಾಯಿ ಮೂಗುಗಳ ಮೂಲಕ ಕೀಟನಾಶಕವು ದೇಹವನ್ನು ಸೇರಿ ಅನೇಕ ರೀತಿಯಲ್ಲಿ ತೊಂದರೆಯನ್ನುಂಟು ಮಾಡಬಹುದು. ಅದಕ್ಕೆ ವಹಿಸಬೇಕಾದ ಮುನ್ನೆಚ್ಚರಿಕೆಗಳೆಂದರೆ; ೧.ರಾಸಾಯನಿಕಗಳನ್ನು ನಿಗದಿತ ಪ್ರಮಾಣದಲ್ಲಿ ಮಾತ್ರ, ಕೈಗೆ ತಾಗದಂತೆ ಕಡ್ಡಿ, ಕೋಲುಗಳನ್ನು ಬಳಸಿ ಕಲಸಿಕೊಳ್ಳಿ.೨.ಸಿಂಪರಣೆಗೆ ಮುನ್ನ ಕೈ ಕಾಲುಗಳನ್ನು ಪೂರ್ತಿ ಮುಚ್ಚುವಂತಹ ಬಟ್ಟೆಗಳನ್ನೂ, ಕೈಗೆ ಗವಸುಗಳನ್ನೂ ಧರಿಸಿ. ೩.ಮೂಗು, ಬಾಯಿ ಮುಚ್ಚುವಂತೆ ಕವಚವನ್ನು ಧರಿಸಿ, ಅಥವಾ ಕರವಸ್ತ್ರದಿಂದ ಕಟ್ಟಿಕೊಳ್ಳಿ. ಕಣ್ಣಿಗೆ ಕನ್ನಡಕ ಧರಿಸಿ. ೪. ಗಾಳಿ ಬೀಸುವ ವಿರುದ್ಧ ದಿಕ್ಕಿನಲ್ಲಿ ಸಿಂಪರಣೆ ಬೇಡ. ಸಿಂಪರಣಾ ದ್ರವವು ಮೈ ಮೇಲೆ ಬೀಳದಂತೆ ನೋಡಿಕೊಳ್ಳಿ. ೫.ಸಿಂಪರಣೆ ಮಾಡುವಾಗ ಮಧ್ಯೆ ಮಧ್ಯೆ ನೀರು ಕುಡಿಯುವುದನ್ನಾಗಲೀ, ಎಲೆ ಅಡಿಕೆ ಜಗಿಯುವುದಾಗಲೀ, ಏನನ್ನಾದರೂ ತಿನ್ನುವುದನ್ನಾಗಲೀ, ಬೀಡಿ, ಸಿಗರೇಟು ಸೇದುವುದನ್ನಾಗಲಿ ಮಾಡಬೇಡಿ. ಒಂದು ವೇಳೆ ಅನಿವಾರ್ಯವಾದರೆ, ಮೊದಲು ಕೈ ಕಾಲು ಮುಖಗಳನ್ನು ಸಾಬೂನದಿಂದ ಸ್ವಚ್ಛವಾಗಿ ತೊಳೆದುಕೊಳ್ಳಿ. ೬. ಆದಷ್ಟೂ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಸಿಂಪರಣೆ ಮಾಡದೇ, ಬೆಳಗ್ಗಿನ ಅಥವಾ ಸಾಯಂಕಾಲದ ತಂಪು ಸಮಯದಲ್ಲಿ ಸಿಂಪರಣೆ ಮಾಡಿರಿ. ಸಿಂಪರಣೆ ಮಾಡುವಾಗ ಜೊತೆಗಾರ / ಸಹಾಯಕನಿದ್ದರೆ ಉತ್ತಮ. ೭. ಸಿಂಪರಣೆ ಮಾಡುವಾಗ ಕೈ ಕಾಲು ಕಣ್ಣು ಉರಿ ಬಂದರೆ, ತಲೆ ಸುತ್ತಿ ಬರುವಂತಾದರೆ, ತಾತ್ಸಾರ ಮಾಡದೆಯೇ ತಕ್ಷಣ ಸೂಕ್ತ ಪ್ರಥಮ ಚಿಕಿತ್ಸೆ ಮಾಡಿಕೊಂಡು ಆದಷ್ಟು ಬೇಗ ವೈದ್ಯರಿಂದ ಚಿಕಿತ್ಸೆ ಪಡೆಯಿರಿ. ೮.ಸಿಂಪರಣೆಯ ನಂತರ ಬಿರಟೆಯನ್ನು ಬಲವಾಗಿ ಮುಚ್ಚಿ ಮಕ್ಕಳ ಕೈಗೆ ಸಿಕ್ಕದಂತೆ ಕ್ಷೇಮಕರ ಸ್ಥಳದಲ್ಲಿ ಇಡಿ. ಬಳಸಿದ ಕೀಟನಾಶಕದ ಖಾಲಿ ಡಬ್ಬಿಗಳನ್ನು ಮಣ್ಣಲ್ಲಿ ಹೂತು ಹಾಕಿ. ಹಾವು ಕಚ್ಚುವುದು: ಸಾಮಾನ್ಯವಾಗಿ ಓಡಾಡುವಾಗ ಗೊತ್ತಿಲ್ಲದೇ ಹಾವನ್ನು ತುಳಿದಾಗ ಹಾವುಗಳು ಗಾಬರಿಗೊಂಡು ಸ್ವರಕ್ಷಣೆಗೆ ಕಚ್ಚುತ್ತವೆ. ಹೊಲ ಗದ್ದೆಗಳಲ್ಲಿ ಪದೇ ಪದೇ ಓಡಾಡುವ ದಾರಿಗಳನ್ನು ಕಳೆ ಕಸಗಳಿಲ್ಲದಂತೆ ಸ್ವಚ್ಛವಾಗಿರಿಸಿದರೆ ಹಾವುಗಳು ಆಕಸ್ಮಿಕವಾಗಿ ಕಚ್ಚುವುದನ್ನು ತಪ್ಪಿಸಬಹುದು. ಹೊಲಗಳಲ್ಲಿ ತಿರುಗಾಡುವಾಗ ಪಾದಗಳನ್ನು ಪೂರ್ತಿ ಮುಚ್ಚುವಂತಹ ’ಶೂ’ ಗಳನ್ನು ಧರಿಸುವುದು ಉತ್ತಮ. ಅವಶ್ಯಕವೆನಿಸಿದರೆ ಹುಲ್ಲು, ಕಳೆ ಹೆಚ್ಚಾಗಿ ಬೆಳೆದಿರುವ ಸನ್ನಿವೇಶಗಳಲ್ಲಿ ಮೊಳಕಾಲವರೆಗೆ ಮುಚ್ಚುವ ಪಂಪ್ ಶೂ ಧರಿಸಬೇಕು. ಅಕಸ್ಮಾತ್ ಹಾವು ಕಚ್ಚಿದರೆ, ಗಾಬರಿಯಾಗದೆ, ಪ್ರಥಮ ಚಿಕಿತ್ಸೆ ಮಾಡುವತ್ತ ಹಾಗೂ ತಕ್ಷಣ ವೈದ್ಯರ ಸೇವೆ ಪಡೆಯುವತ್ತ ಗಮನ ಹರಿಸಬೇಕು. ಕಾಡು ಪ್ರಾಣಿಗಳ ಹಾವಳಿ: ಅರಣ್ಯ ನಾಶ ಅಧಿಕವಾಗಿ ಅರಣ್ಯ ಪ್ರಾಣಿಗಳ ಸ್ಥಳವನ್ನು ಮನುಷ್ಯನು ಆಕ್ರಮಿಸತೊಡಗಿದಂತೆಲ್ಲಾ ಕಾಡು ಪ್ರಾಣಿಗಳು ನಾಡಿಗೆ ನುಗ್ಗಿ ಬೆಳೆ ಹಾಳು ಮಾಡುವುದರ ಜೊತೆಯಲ್ಲಿ ರೈತರಿಗೂ ಪ್ರಾಣ ಹಾನಿ ಮಾಡುತ್ತಿವೆ. ಕಾಡು ಪ್ರಾಣಿಗಳು ಹೊಲಗಳಿಗೆ ಬಾರದಂತೆ ಎಲೆಕ್ಟ್ರಾನಿಕ್ ಬೇಲಿ ಅಥವಾ ಕಂದಕವನ್ನು ನಿರ್ಮಿಸಿಕೊಂಡು ಅದನ್ನು ಸುಸ್ಥಿತಿಯಲ್ಲಿ ನಿರ್ವಹಿಸಬೇಕು. ಸಾಧ್ಯವಾದರೆ, ಅನೇಕ ಜನ ರೈತರು ಸೇರಿ ದೊಡ್ಡ ಬಯಲುಗಳಿಗೆ ಸಾಮೂಹಿಕವಾಗಿ ಈ ರೀತಿ ಬೇಲಿ / ಕಂದಕ ನಿರ್ಮಾಣ ಮಾಡುವುದರಿಂದ ಖರ್ಚೂ ಕಡಿಮೆ ಹಾಗೂ ಉತ್ತಮ ಪರಿಣಾಮ ಪಡೆಯಬಹುದು. ಹೊರಾಂಗಣಗಳಲ್ಲಿ ಕಾರ್ಯ ನಿರ್ವಹಿಸುವ ಕೃಷಿಕರಿಗೆ, ಕಾರ್ಮಿಕರಿಗೆ, ದನಗಾಹಿಗಳಿಗೆ, ಪ್ರಾಣಿಗಳಿಗೆ, ಎತ್ತರಕ್ಕೆ ಬೆಳೆದ ಮರಗಳಿಗೆ, ರಾಶಿ ಹಾಕಿದ ಕಾಳು ಕಡಿಗಳಿಗೆ ಅಪಘಾತಗಳಾಗುವುದು ಸಾಮಾನ್ಯ. ಅವುಗಳ ಸಂಭಾವ್ಯತೆಯನ್ನು ಮೊದಲೇ ಊಹಿಸುವುದು ಕಷ್ಟಕರವಾದರೂ, ಇರುವ ಅಲ್ಪ ಅವಕಾಶದಲ್ಲಿಯೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಈ ಅವಗಢಗಳ ಹಾವಳಿಯನ್ನು ಕಡಿಮೆ ಮಾಡಲು ಪ್ರಯತ್ನಿಸಬಹುದು.