ನೇಗಿಲ ಮಿಡಿತ  ಸಂಪುಟ ೩ ಸಂಚಿಕೆ ೧೨

ಭೂ ಕಾಳಜಿ ಮತ್ತು ಸುಸ್ಥಿರ ಜೀವನಕ್ಕೆ ವಿಶ್ವ ಮಣ್ಣು ದಿನ.ಏಕೆ-ಹೇಗೆ

ಕಾಂತರಾಜ್, ಟಿ
8971392252
1

ನಾಗರೀಕತೆಯ ಬಳಿಕ ಮಾನವರು ಆಹಾರ ಪೂರೈಕೆಗೆ ಸಸ್ಯಗಳನ್ನು ಅವಲಂಬಿಸಿಕೊಂಡು ಸಾವಯವ ಕೃಷಿಯನ್ನು ಅನುಸರಿಸುತ್ತಿದ್ದುದರಿಂದ ಮಣ್ಣಿನ ಜೀವಸಂಕುಲಕ್ಕೆ ತೊಡಕುಂಟಾಗದೇ ಆರೋಗ್ಯಕರ ಸಹಜೀವನವನ್ನು ಮುಂದಿನ ಪೀಳಿಗೆಯವರೆಗೆ ಕಾಪಾಡಿಕೊಂಡು ಪರಸ್ಪರ ಪೂರಕ ಜೀವಾನುಕ್ರಮಗಳನ್ನು ಪೋಷಿಸುತ್ತಾ ಬಂದಿದ್ದರು. ಮಾನವನ ವಿಕಾಸ ವೃದ್ಧಿಯಾಗಿ, ಕ್ರಮೇಣ ಜನಸಂಖ್ಯಾ ಬೆಳವಣಿಗೆ ಹಾಗೂ ಮಾನವನ ಅತಿ ಬುದ್ಧಿವಂತಿಕೆಯ ವಿಸ್ತರಣೆಯೊಂದಿಗೆ ಭವಿಷ್ಯದ ಆಹಾರ ಭದ್ರತೆ ಸಾಧಿಸಲು ಕಷ್ಟ-ಸಾಧ್ಯವಾಗಿದ್ದಲ್ಲದೆ, ಕೃಷಿ ಭೂ-ವಿಸ್ತೀರ್ಣದ ಮೇಲೆ ಅಪಾರ ಪ್ರಭಾವ ಬೀರತೊಡಗಿತು. ಇದರ ಪರಿಣಾಮದ ಫಲವೇ ಹಸಿರು ಕ್ರಾಂತಿ(೧೯೩೦-೬೦), ವಿಶ್ವ ಮಟ್ಟದಲ್ಲಿಯೇ ಆಹಾರ ಭದ್ರತೆಯನ್ನು ಹೆಚ್ಚಿಸಿತು. ಕಾರಣ ಹೊಸ ಬಗೆಯ ಅತಿ ಹೆಚ್ಚು ಇಳುವರಿ ನೀಡುವ ಭತ್ತ ಹಾಗೂ ಗೋಧಿ ತಳಿಗಳ ಪರಿಚಯ, ರಾಸಾಯನಿಕ ಗೊಬ್ಬರಗಳ ಬಳಕೆ ಮತ್ತು ನೀರಾವರಿ ಯೋಜನೆಗಳು, ತೀವ್ರವಾದ ಕೃಷಿ ಪದ್ಧತಿಗಳು, ಅತೀವ ಏಕರೂಪ ಬೆಳೆಗಳಿಗೆ ಮಹತ್ವ ನೀಡತೊಡಗಿದರು. ಆಹಾರ ಉತ್ಪಾದಕತೆ ಹೆಚ್ಚಿಸಿಯಾದರೂ ಕೃಷಿ ರಾಸಾಯನಿಕ ಪದಾರ್ಥಗಳ ಅಧಿಕ ಪೂರೈಕೆ ಮಣ್ಣಿನ ಆರೋಗ್ಯದ ಮೇಲೆ ವ್ಯತಿರಿಕ್ತ ದುಷ್ಪರಿಣಾಮಗಳು ಉಂಟಾದವು. ಕ್ರಮೇಣ ಆರೋಗ್ಯಕರ ಮಣ್ಣಿನ ಸಾವಯವ ಪದಾರ್ಥಗಳು ಕ್ಷೀಣಿಸಿ ಒಟ್ಟು ಇಂಗಾಲ ಪ್ರಮಾಣದ ಅಭಾವದಿಂದಾಗಿ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆ ಸಂಪೂರ್ಣ ಕುಂಠಿತಗೊಂಡಿತು. ನಂತರದ ದಿನಗಳಲ್ಲಿ ಹಸಿರುಕ್ರಾಂತಿಯ ಪ್ರಭಾವ ಹೆಚ್ಚಾಗಿ ಮಣ್ಣಿನ ಸವಕಳಿ ಆಮ್ಲೀಕರಣ, ಸಂಕೋಚನ, ಸವಳು, ಜವಳು ಮತ್ತು ಕ್ಷಾರೀಕರಣ ಪ್ರಕ್ರಿಯೆಗಳು ಬೆಳೆ ಇಳುವರಿಯನ್ನು ಕಡಿಮೆ ಮಾಡುವುದಲ್ಲದೆ ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿ ಮಣ್ಣಿನ ಆರೋಗ್ಯದ ವಿನಾಶಕ್ಕೆ ಕಾರಣವಾಯಿತು. ಹಾಗಾಗಿ ಮಣ್ಣು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದು ಶೋಚನೀಯ.ಮಣ್ಣಿನ ವಿನಾಶಕ್ಕೆ ಕಾರಣಗಳು: ೧. ಕೃಷಿ ಮತ್ತು ಅರಣ್ಯ ಸೇರಿದಂತೆ ಕೈಗಾರೀಕರಣ, ಅಭಿವೃದ್ಧಿ ನೀರಾವರಿ ಯೋಜನೆಗಳು ಹಾಗೂ ನೀತಿಗಳು ವ್ಯಾಪಕವಾಗಿ ಆರೋಗ್ಯಕರ ಭೂಸುಧಾರಣೆಯ ಮಾರ್ಗೋಪಾಯಗಳಿಗೆ ಗಮನಾರ್ಹ ಹಾನಿಯುಂಟು ಮಾಡುತ್ತಿವೆ. ೨. ಪ್ರಪಂಚದ ಶೇ. ೨೯.೧ರಷ್ಟು ಭೂ-ಪ್ರದೇಶವು ವರ್ಷಕ್ಕೆ ಸುಮಾರು ೬,೦೦೦ ಮಿಲಿಯನ್ ಟನ್ ಮಣ್ಣು ಸವಕಳಿಯಾಗುತ್ತಿರುವುದು ಸೋಜಿಗದ ಸಂಗತಿ. ಪ್ರತಿಯಾಗಿ ೫ ಬಿಲಿಯನ್ ಹೆಕ್ಟೇರ್(೪೩%) ಭೂ-ಪ್ರದೇಶವು ಅವನತಿ ಹೊಂದುತ್ತಿದ್ದು, ಮಣ್ಣಿನ ಫಲವತ್ತತೆ, ಪೋಷಕಾಂಶಗಳ ಪೂರೈಕಾ ಸಾಮರ್ಥ್ಯ ಹಾಗೂ ಸಾವಯವ ಇಂಗಾಲದ ಅಂಶವು ಸಂಪೂರ್ಣ ನಶಿಸಿ ಹೋಗಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ೩. ಆಧುನಿಕ ಜೀವನ ಶೈಲಿಯಲ್ಲಿ ಕೃಷಿಯ ರಾಸಾಯನಿಕ ವಸ್ತುಗಳ ಮೇಲೆ ಅಧಿಕ ನಂಬಿಕೆ ಮತ್ತು ಆಧಾರವಾಗಿರುವುದರಿಂದ ಮಾನವ ಸೇರಿದಂತೆ ಜೀವ-ವೈವಿಧ್ಯತೆಗೆ ಅಪಾರ ಆಪತ್ತು ಕಾಯ್ದಿಟ್ಟ ಬುತ್ತಿಯಂತೆ. ೪. ದುರ್ಬಲ ಮಣ್ಣಿನಲ್ಲಿ ಸಾವಯವ ಅಂಶವು ಅವನತಿ ಹೊಂದಿ ಇಂಗಾಲದ ಪ್ರಮಾಣವು ನಷ್ಟಕ್ಕೆ ಗುರಿಯಾಗತೊಡಗಿದೆ. ಹಾಗಾಗಿ ವಾತಾವರಣದಲ್ಲಿ ’ಹಸಿರು ಮನೆ ಪರಿಣಾಮದ’ಕಾವು ಹೆಚ್ಚಾಗಿ ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆಗಳು ಜೀವಸಂಕುಲಕ್ಕೆ ಮಹಾಮಾರಿಯಂತೆ ಕಾಡುತ್ತಿದೆ. ೫. ಕಳೆದ ನೂರು ವರ್ಷಗಳ ಇತಿಹಾಸವನ್ನು ಮೆಲುಕು ಹಾಕಿದಲ್ಲಿ ಆರೋಗ್ಯಯುಕ್ತ ಮಣ್ಣಿನ ಗುಣಧರ್ಮಗಳನ್ನು ನಿರ್ಲಕ್ಷಿಸಿ ಬೆಳೆ ಇಳುವರಿ ಲಾಭದ ಆಸೆಗೆ ಮೊರೆ ಹೋಗಿದ್ದೇವೆ. (ಪರಿಣಾಮ ಶೇ.೭೫ರಷ್ಟು ಅರಣ್ಯ ಭೂ-ಪ್ರದೇಶಗಳನ್ನು ನಾಶಪಡಿಸಲಾಗಿದೆ. ಸರಿಸುಮಾರು ಎಂಟು ಬಿಲಿಯನ್ ಹೆಕ್ಟೇರ್ ಆಳವಾದ ಸಾವಯವ ಭೂ-ಪ್ರದೇಶವನ್ನು ಖಾಲಿ ಮಾಡಲಾಗಿದೆ. ಸುಮಾರು ನಾಲ್ಕು ಬಿಲಿಯನ್ ಹೆಕ್ಟೇರ್ಗೂ ಹೆಚ್ಚು ಮರಳುಗಾಡು ಭೂ-ಪ್ರದೇಶವಾಗಿ ಮಾರ್ಪಡಿಲಾಗಿದೆ. ಈಗಾಗಲೇ ಭೂಮಿಯ ಶೇ. ೧೫೦ರಷ್ಟು ನೈಸರ್ಗಿಕ ಸಂಪನ್ಮೂಲಗಳನ್ನು ಅಸಮರ್ಥವಾಗಿ ಬಳಸಲ್ಪಟ್ಟಿದೆ. ಅಂದರೆ ನೀರು, ಗಾಳಿ, ಮಣ್ಣು ಮುಂತಾದ ನೈಸರ್ಗಿಕ ಸಂಪನ್ಮೂಲಗಳು ಮಾಲಿನ್ಯಕ್ಕೆ ತುತ್ತಾಗಿ ಅಳಿವಿನಂಚಿನೆಡೆಗೆ ಬಂದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ) ೬. ಅಸಮಂಜಸ ಕೃಷಿ ವಿಧಾನ ಕ್ರಮಗಳು ನವೀಕರಿಸಲಾಗದ ನೈಸರ್ಗಿಕ ಸಂಪನ್ಮೂಲಗಳನ್ನು ಯಥೇಚ್ಛವಾಗಿ ಬಳಸಿದಲ್ಲಿ ಮುಂದಿನ ಪೀಳಿಗೆಯ ಆಗು-ಹೋಗುಗಳಿಗೆ ಮಾನವರು ಮಾತ್ರವಲ್ಲದೆ ಇಡೀ ಜೀವ-ವೈವಿಧ್ಯತೆಯನ್ನು ಬಲಿ ಕೊಡಬೇಕಾಗುತ್ತದೆ.

ಆರೋಗ್ಯಯುಕ್ತ ಮಣ್ಣಿನ ಪ್ರಾಮುಖ್ಯತೆ: ೧. ಸಾವಯವ ಇಂಗಾಲವು ಆರೋಗ್ಯಕರ ಮಣ್ಣಿನ ಬಹುಮುಖ್ಯವಾದ ಅಂಶವಾಗಿದ್ದು, ಪ್ರತಿಶತ ೫ರಷ್ಟು ಸಾವಯವ ವಸ್ತುಗಳು, ಇಂಗಾಲದ ಸಂಕೀರ್ಣ ರೂಪಗಳಲ್ಲಿ ಸೂಕ್ಷಾಣು ಜೀವಿಗಳ ಆಹಾರ ಪ್ರಕ್ರಿಯೆಗಳಿಗೆ ಸಕ್ರಿಯವಾಗಿ ಪೂರೈಸಿ ಮಣ್ಣಿನ ಭೌತಿಕ, ರಾಸಾಯನಿಕ, ಜೈವಿಕ ಗುಣಲಕ್ಷಣಗಳನ್ನು ವೃದ್ಧಿಸಿ, ಅವಶ್ಯಕ ಸಸ್ಯ ಪೋಷಕಾಂಶಗಳ ಪೂರೈಕೆ ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ೨. ಸಾವಯವಯುಕ್ತ ಆರೋಗ್ಯಕರ ಮಣ್ಣು ಭೂ-ಮೇಲ್ಮೈ ವಾತಾವರಣವನ್ನು ನಿಯಂತ್ರಿಸಲು ಸಹಾಯ ಮಾಡುವುದಲ್ಲದೆ, ಪ್ರಪಂಚದ ಎಲ್ಲಾ ಕಾಡುಗಳಿಗಿಂತಲೂ ಅತಿ ಹೆಚ್ಚಿನ ಇಂಗಾಲವನ್ನು(೦.೨೫-೦.೩೦%) ಮಣ್ಣಿನಲ್ಲಿ ಸಂಗ್ರಹಿಸಿ ಸ್ಥಿರೀಕರಿಸಲ್ಪಡುತ್ತದೆ. ೩. ಆರೋಗ್ಯಕರ ಮಣ್ಣು ನೆಲ, ಜಲ ಸಂರಕ್ಷಣೆ ಮಾಡುವುದಲ್ಲದೆ ಸಸ್ಯ ಪ್ರಭೇದಗಳ ಬೆಳವಣಿಗೆಗೆ, ಮಾನವರ ಪೋಷಣೆಗೆ, ಪರಿಸರ ಸುವ್ಯವಸ್ಥೆಗೆ ಮತ್ತು ನೈಸರ್ಗಿಕ ವಿಪತ್ತುಗಳ ಪರಿಣಾಮಗಳನ್ನು ಗಣನೀಯವಾಗಿ ಚೇತರಿಸಿಕೊಳ್ಳುವ ಸಾಮರ್ಥ್ಯ ನೀಡುತ್ತದೆ. ೪. ಸಸ್ಯಗಳ ದ್ಯುತಿ-ಸಂಶ್ಲೇಷಣೆ ಮತ್ತು ಸೂಕ್ಷ್ಮಾಣು ಜೀವಿಗಳ ಉಸಿರಾಟ ವ್ಯವಸ್ಥೆಗಳು ವಾತಾವರಣದಲ್ಲಿರುವ ಶೇ. ೧೦ರಷ್ಟು ಇಂಗಾಲದ ಡೈ ಆಕ್ಸೈಡ್ (ಅಔ೨) ಮಣ್ಣಿನಲ್ಲಿ ಸ್ಥಿರೀಕರಿಸಲ್ಪಡುತ್ತದೆ. ೫. ಒಂದು ಹಿಡಿ ಸಾವಯವ ಮಣ್ಣಿನಲ್ಲಿ ಜಗತ್ತಿನ ಒಟ್ಟಾರೆ ಜನಸಂಖ್ಯೆಗಿಂತ ಹೆಚ್ಚಿನ ಏಕ ಪ್ರಭೇದ ಸೂಕ್ಷ್ಮಾಣು ಜೀವಿಗಳನ್ನು ಒಳಗೊಂಡಿದೆ. ಆದ್ದರಿಂದ ಮಣ್ಣು ಎನ್ನುವುದು ನಮ್ಮ ಗ್ರಹದಲ್ಲಿಯೇ ಒಂದು ಸೂಕ್ಷ್ಮ ಸಂಕೀರ್ಣ ಜೈವಿಕ ಸಂಪನ್ಮೂಲವಾಗಿದೆ. ೬. ಒಂದು ಗ್ರಾಂ ಸಾವಯವ ಇಂಗಾಲವು ಎಂಟು ಗ್ರಾಂ ನೀರನ್ನು ಹಿಡಿದಿಡುವ ಸಾಮರ್ಥ್ಯ ಹೊಂದಿದೆ. ೭. ಶೇಕಡಾ ೯೫ ರಷ್ಟು ನಮ್ಮ ಆಹಾರ ಪದಾರ್ಥಗಳು ಮಣ್ಣಿನಿಂದಲೇ ದೊರಕುತ್ತಿದೆ. ಆದುದರಿಂದ, ಆರೋಗ್ಯಕರ ಮಣ್ಣಿನ ಜಾಗೃತಿ ಮತ್ತು ಮಣ್ಣಿನ ಮಹತ್ವವನ್ನು ಪ್ರತಿಪಾದಿಸಲು ೨೦೦೨ರಲ್ಲಿ ಅಂತರರಾಷ್ಟ್ರೀಯ ಮಣ್ಣು ವಿಜ್ಞಾನಗಳ ಒಕ್ಕೂಟ(ಇಂಟರ್ನ್ಯಾಷನಲ್ ಯೂನಿಯನ್ ಆಫ್ ಸಾಯಿಲ್ ಸೈನ್ಸಸ್-IUSS)ವು ಡಿಸೆಂಬರ್ ೫ ರಂದು ವಿಶ್ವ ಮಣ್ಣು ದಿನವನ್ನಾಗಿ ನಿರ್ಣಯಿಸಿತು. ವಿಶೇಷವೇನೆಂದರೆ ಸುಮಾರು ೭೦ ವರ್ಷಗಳ ರಾಜಾಡಳಿತ ನಡೆಸಿದ ಥೈಲ್ಯಾಂಡ್ನ ರಾಜ-ಹೆಚ್.ಎಂ. ಭೂಮಿಬಲ ಅತ್ಯುಲತೇಜ(H.M. Bhomibol Adulyadej)ರವರು ಪ್ರಪ್ರಥಮವಾಗಿ ಅವರ ಹುಟ್ಟುಹಬ್ಬದ ನಿಮಿತ್ತ ವಿಶ್ವ ಮಣ್ಣು ದಿನವನ್ನು ಆಚರಿಸಿಕೊಂಡರು. ನಂತರ ೨೦೧೩ ಜೂನ್ನಲ್ಲಿ ಜಾಗತಿಕ ಮಣ್ಣು ಪಾಲುದಾರಿಕೆ(Global Soil Partnership-GSP) ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಯ ಒಕ್ಕೂಟ ರಾಷ್ಟ್ರಗಳು(United Nations - Food and Agricultural Organization-UN-FAO, Rome, Italy) ನಡೆಸಿದ ೬೮ನೇ ಸಮ್ಮೇಳನ ಸಭೆಯಲ್ಲಿ ಪ್ರತಿವರ್ಷ ಡಿಸೆಂಬರ್ ೫ರಂದು ವಿಶ್ವ ಮಣ್ಣು ದಿನವನ್ನಾಗಿ ಆಚರಿಸಲು ಅಧಿಕೃತವಾಗಿ ಘೋಷಣೆ ಹೊರಡಿಸಲಾಯಿತು. ಅದೇ ವರ್ಷ ಡಿಸೆಂಬರ್ ಕೊನೆಯಲ್ಲಿ ಅಂತರರಾಷ್ಟ್ರೀಯ ಮಣ್ಣು ವಿಜ್ಞಾನಗಳ ಒಕ್ಕೂಟ(IUSS), ಆಹಾರ ಮತ್ತು ಕೃಷಿ ಸಂಸ್ಥೆಯ ಒಕ್ಕೂಟ ರಾಷ್ಟ್ರಗಳು(UN-FAO) ಹಾಗೂ ಜಾಗತಿಕ ಮಣ್ಣು ಪಾಲುದಾರಿಕೆ(GSP)ಗಳ ಸಮ್ಮುಖದಲ್ಲಿ ೨೦೧೫ನೇ ಇಸವಿಯನ್ನು ಅಂತರರಾಷ್ಟ್ರೀಯ ಮಣ್ಣಿನ ವರ್ಷಾಚರಣೆಯಾಗಿ ಅನುಮೋದಿಸಲ್ಪಟ್ಟಿತು. ’ಆರೋಗ್ಯಕರ ಜೀವನಕ್ಕೆ: ಆರೋಗ್ಯಯುಕ್ತ ಮಣ್ಣು’ ಎಂಬ ಸಂದೇಶ ಕೂಡ ಸಾರಿತು. ಹಾಗಾಗಿ ಜಾಗತಿಕ ಸಮುದಾಯ ವ್ಯವಸ್ಥೆಯು ೨೦೧೭ರ ವಿಶ್ವ ಮಣ್ಣು ದಿನದ ಸಂದರ್ಭದಲ್ಲಿ ’ಆರೋಗ್ಯಕರ ಮಣ್ಣು: ಪೃಥ್ವಿಯ ಕಾಳಜಿ’ ಎಂಬ ವಿಷಯವನ್ನಾಧರಿಸಿ ಸುಮಾರು ೬೦,೦೦೦ಕ್ಕೂ ಅಧಿಕ ಸಂಖ್ಯೆಯ ಮಣ್ಣು ವಿಜ್ಞಾನಿಗಳು ಗಾಳಿ, ನೀರು, ಸಸ್ಯವರ್ಗ, ಕೃಷಿ ಉತ್ಪಾದನೆ ಹಾಗೂ ಜೀವ-ವೈವಿಧ್ಯತೆಯ ಸಮಗ್ರ ನಿರ್ವಹಣೆ ಕುರಿತು ಪುನರುತ್ಪಾದಕ ಭೂ-ದೃಶ್ಯಾವಳಿಗಳನ್ನು ಉತ್ತೇಜಿಸುವುದು ಸಮಸ್ತ ನಾಗರಿಕರ ದಿನನಿತ್ಯದ ಆರೋಗ್ಯಕರ ಜೀವನಕ್ಕೆ ಮುನ್ನುಡಿ ಬರೆಯಲಿದೆ. ವಿಶ್ವಸಂಸ್ಥೆಯ ಕಾರ್ಯದರ್ಶಿ ಬಾನ್-ಕಿ-ಮೂನ್ ಹೇಳಿದ ಪ್ರಕಾರ ಆರೋಗ್ಯಕರ ಮಣ್ಣು ಇಲ್ಲದಿದ್ದರೆ, ಭೂಮಿಯ ಮೇಲಿನ ಜೀವನ ಅಸಮರ್ಥನೀಯ. ಏಕೆಂದರೆ, ಭೂಮಿಯ ವಾತಾವರಣದಲ್ಲಿರುವ ನೀರು, ಗಾಳಿ, ಸಸ್ಯ ವರ್ಗಗಳು ಸೂರ್ಯನ ಕಿರಣಗಳೊಂದಿಗೆ ದ್ಯುತಿ-ಸಂಶ್ಲೇಷಣೆ ಕ್ರಿಯೆಯ ಮೂಲಕ ಸಮರ್ಪಕವಾದ ಪರಿಸರ ಸುವ್ಯವಸ್ಥೆ ಹಾಗೂ ಜೀವ-ವೈವಿಧ್ಯತೆಯ ಸ್ವರೂಪಗಳನ್ನು ಕೊಡುಗೆಯಾಗಿ ನೀಡಿದೆ. ಜೀವಿಯ ಜೀವನ ಚಕ್ರಗಳನ್ನು ಸೂಕ್ತ ರೀತಿಯಲ್ಲಿ ಮುನ್ನಡೆಸಲು ನಮ್ಮ ಪೃಥ್ವಿ ಬಿಟ್ಟರೆ ಇನ್ನ್ಯಾವ ಗ್ರಹಗಳಲ್ಲಿ ಸಾಧ್ಯವಿಲ್ಲ. ಆದರೆ ಈ ದಿನಗಳಲ್ಲಿ ಮಾನವರ ಜಿಜ್ಞಾಸೆಗೆ ಜೀವ-ವೈವಿಧ್ಯತೆ ಹಾಗೂ ಪರಿಸರ ವ್ಯವಸ್ಥೆಯು ನಷ್ಟಕ್ಕೆ ಗುರಿಯಾಗಿದೆ. ಈ ನಷ್ಟಗಳನ್ನೆಲ್ಲ ತಗ್ಗಿಸುವ ಪ್ರಯತ್ನಗಳು ಆರೋಗ್ಯಯುಕ್ತ ಸಾವಯವ ಮಣ್ಣಿನಿಂದ ಮಾತ್ರ ಸಾಧ್ಯ ಎಂದು ಹೇಳಲು ಇಚ್ಛೆ ಪಡುತ್ತೇನೆ